ಜೆಡಿಎಸ್ – ಬಿಎಸ್ಪಿ ಮೈತ್ರಿಯ ಬಲಕ್ಕೆ ಸಾಕ್ಷಿಯಾದ ವಿಕಾಸ ಪರ್ವ

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಕರ್ನಾಟಕ ರಾಜ್ಯ ಚುನಾವಣೆಗೆ ಜೆಡಿಎಸ್ ಹಿರಿಯ ನಾಯಕ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಒಂದೊಂದೆ ತಂತ್ರಗಾರಿಕೆ ಪ್ರಯೋಗಿಸಲು ಆರಂಭಿಸಿದ್ದಾರೆ. ಅದರ ಮೊದಲ ಪ್ರಯೋಗವೇ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಶನಿವಾರ ಯಲಹಂಕದಲ್ಲಿ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಅಧಿಕೃತಗೊಳಿಸಿದ್ದು.

ವಿಕಾಸ ಪರ್ವ ಬೃಹತ್ ಸಮಾವೇಶದಲ್ಲಿ ಜೆಡಿಎಸ್‌ನ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ಸಮ್ಮುಖದಲ್ಲಿ ಮೈತ್ರಿಯ ಅಧಿಕೃತ ಘೋಷಣೆ ಮಾಡಲಾಯಿತು. ಸಮಾವೇಶದ ವೇದಿಕೆಯನ್ನು ರಾಜ್ಯದಲ್ಲಿರುವ ಕಾಂಗ್ರೆಸ್ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಹರಿಹಾಯಲು ಬಳಸಿಕೊಂಡರು. ಜೆಡಿಎಸ್ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿ, ಮಾಯಾವತಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸಮಾವೇಶದಲ್ಲಿ ಈ ಮೂವರು ಮಾತನಾಡಿ, ರಾಜ್ಯದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಗಬೇಕಾದರೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ದೇವೇಗೌಡರು ಮತದಾರರಲ್ಲಿ ಕೇಳಿಕೊಂಡರು. ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ನಿಮ್ಮ ಕಷ್ಟಗಳನ್ನು ಪರಿಹರಿಸಲು ನನ್ನನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂಬ ಭರವಸೆ ನೀಡಿದರು. ಇನ್ನು ಮಾಯಾವತಿ ಮಾತನಾಡಿ, ಬಿಎಸ್‌ಪಿ ಹಾಗೂ ಜೆಡಿಎಸ್ ಎಲ್ಲ ವರ್ಗಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಈ ಮಹಾಮೈತ್ರಿಯಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಇದು ವಿಧಾನ ಸಭೆ ಚುನಾವಣೆಯಲ್ಲಿ ಬದಲಾವಣೆಗೆ ದಾರಿಯಾಗಲಿದೆ ಎಂದರು.

Leave a Reply