ಕಾಂಗ್ರೆಸ್ ಬುಡ ಕಾಯ್ದ ಸಿದ್ದರಾಮಯ್ಯಗೆ ರಾಹುಲ್ ಫಿದಾ!

‘ಐ ಲವ್ ಯು ಸಿದ್ದರಾಮಯ್ಯ, ನಿಜವಾಗಿಯೂ ನೀವೊಬ್ಬ ಅದ್ಭುತ ನಾಯಕ. ನಿಮ್ಮ ತಾಕತ್ತು ಮೆಚ್ಚಿದ್ದೇನೆ. ಕರ್ನಾಟಕದಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದೀರಿ, ಮುನ್ನಡೆಸುತ್ತಿದ್ದೀರಿ, ಮುಂದೆಯೂ ಮುನ್ನಡೆಸಲಿದ್ದೀರಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಇಲ್ಲಿರೋ ನಾಯಕರ ಸಮ್ಮುಖದಲ್ಲೇ ಹೇಳುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಗೆ ನಿಮ್ಮದೇ ನಾಯಕತ್ವ. ಮುಂದಿನ ಬಾರಿಯೂ ನೀವೇ ಸಿಎಂ. ಈ ವಿಚಾರದಲ್ಲಿ ಯಾರೂ ಅಪಸ್ವರ ತೆಗೆಯುವಂತಿಲ್ಲ.’

ಕರ್ನಾಟಕಕ್ಕೆ ಇತ್ತೀಚೆಗೆ ನಾಲ್ಕು ದಿನಗಳ ದಿನಗಳ ಭೇಟಿ ನೀಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಮಧ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದಾಗ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಡಾ. ಜಿ. ಪರಮೇಶ್ವರ ಸೇರಿದಂತೆ ಅಲ್ಲಿಯೇ ಇದ್ದ ರಾಜ್ಯದ ಹಿರಿಯ ಸಪ್ತ ಮುಖಂಡರು ನಿಬ್ಬೆರಗಾಗಿ ಹೋದರು. ಬಳ್ಳಾರಿ ಮತ್ತು ಕೊಪ್ಪಳದಲ್ಲಿ ನಡೆದ ಎರಡು ದಿನಗಳ ರೋಡ್ ಶೋ, ಜನಾಶೀರ್ವಾದ ಸಮಾವೇಶದಲ್ಲಿ ಸಿಕ್ಕ ಜನಸ್ಪಂದನಕ್ಕೆ ಪ್ರತಿಬಿಂಬವಾಗಿ ರಾಹುಲ್‌ಗಾಂಧಿ ಆಡಿದ ಈ ಮಾತಲ್ಲಿ ಭಾವೋತ್ಕರ್ಷವಿತ್ತು. ಭಾರತದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಲೆಯೆಂಬ ಅಶ್ವಮೇಧಯಾಗದ ಕುದುರೆ ಕಟ್ಟಿಹಾಕುವ ತಾಕತ್ತು ಅಂತೇನಾದರೂ ಇದ್ದರೆ ಅದು ಸಿದ್ದರಾಮಯ್ಯನವರಿಗೆ ಮಾತ್ರ ಎಂಬ ಆತ್ಮವಿಶ್ವಾಸವಿತ್ತು. ದೇಶಾದ್ಯಂತ ಮಕಾಡೆ ಮಲಗಿರುವ ಕಾಂಗ್ರೆಸ್ಸಿಗೆ ಪುನಶ್ಚೇತನ ಸಿಗುವುದಿದ್ದರೆ ಅದು ಕರ್ನಾಟಕದಿಂದಲೇ ಎಂಬ ನಂಬಿಕೆಯಿತ್ತು. ಹೀಗಾಗಿಯೇ ರಾಹುಲ್ ತಮಗಾಗಿದ್ದ ಹರ್ಷ ತಡೆಯಲಾಗದೆ ಶಬ್ದಮಣಿಗಳಿಂದ ಮೆಚ್ಚುಗೆಯ ಹಾರವೆಣೆದು ಸಿದ್ದರಾಮಯ್ಯನವರ ಕೊರಳಿಗೆ ಅರ್ಪಿಸಿದ್ದರು. ಹಾಗೇ ಅರ್ಪಿಸುವಾಗ ಅಲ್ಲಿಯೇ ಇದ್ದ ನಾಯಕರಿಗೆ ಯಾವುದೇ ಮಸಲತ್ತು ಮಾಡದಂತೆ ಕಡ್ಡಿತುಂಡು ಮಾಡಿದಂಥ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದರು!

ನಿಜ, ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಇದ್ದ ದೃಢವಿಶ್ವಾಸ, ನಂಬಿಕೆ ನೂರ್ಮಡಿ ಆಗಿರುವುದು ಈ ನಾಲ್ಕು ದಿನಗಳ ಭೇಟಿ ಸಂದರ್ಭದಲ್ಲಿ ವೇದ್ಯವಾಯಿತು. ಅದಕ್ಕೆ ಕಾರಣಗಳು ಇಲ್ಲದಿಲ್ಲ. ಅವರಿಗೆ ಮೊದಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪರಿವರ್ತನಾ ಯಾತ್ರೆ ಸಮರೋಪ ಸಮಾವೇಶ ಭಾಷಣದ ಬಹುಭಾಗವನ್ನು ಸಿಎಂ ಸಿದ್ದರಾಮಯ್ಯ ಮತ್ತವರ ಸಂಪುಟ ಸಹೋದ್ಯೋಗಿಗಳನ್ನು ಹಳಿಯಲು ಬಳಸಿಕೊಂಡರು. ಟೆನ್ ಪರ್ಸೆಂಟ್ ಕಮಿಷನ್ ಸರಕಾರ ಎಂಬುದು ಸೇರಿದಂತೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಒಂದಷ್ಟು ಆರೋಪಗಳ ಸರಮಾಲೆಯನ್ನೇ ಮಂಡಿಸಿದರು. ಇದೊಂದು ಭ್ರಷ್ಟ ಸರಕಾರ ಎಂದರು. ಸಿದ್ದರಾಮಯ್ಯ ಅವರನ್ನು ತಮ್ಮದೇ ಶೈಲಿಯಲ್ಲಿ ಅಪಹಾಸ್ಯ ಮಾಡಿದರು. ಮಾತಿನ ಕೂರಿಂಬಿನಿಂದ ಇರಿದರು.

ಆದರೆ ಸಿದ್ದರಾಮಯ್ಯ ಇದನ್ನು ಕೇಳಿಕೊಂಡು ಸುಮ್ಮನಾಗಲಿಲ್ಲ. ಮರುದಿನವೇ ಮೋದಿ ಅವರ ಒಂದೊಂದೇ ಆರೋಪಗಳಿಗೆ ಉದಾರಹಣೆ, ದಾಖಲೆ, ಸಾಕ್ಷಿ ಸಮೇತ ಉತ್ತರ ಕೊಟ್ಟರು. ಮೋದಿ ಅವರು ಪ್ರಧಾನಿ ಹುದ್ದೆ ಗೌರವ, ಘನತೆಗೆ ತಕ್ಕಂತೆ ಮಾತಾಡಿಲ್ಲ. ಬದಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ರೀತಿ ತಲೆಬುಡವಿಲ್ಲದೆ ಮಾತಾಡಿದ್ದಾರೆ. ತಮ್ಮ ಬಗ್ಗೆ ಅನಗತ್ಯ, ಲಘುವಾಗಿ ಮಾತಾಡುವ ಮೂಲಕ ಹುದ್ದೆ ಗೌರವವನ್ನು ಕುಂದಿಸಿದ್ದಾರೆ ಎಂದು ಜರಿದರು. ಬೇರೆ ಪಕ್ಷಗಳ ನಾಯಕರು ಒತ್ತಟ್ಟಿಗಿರಲಿ, ಕಾಂಗ್ರೆಸ್ ರಾಷ್ಟ್ರೀಯ ನಾಯಕರೇ ಪ್ರಧಾನಿ ಬಗ್ಗೆ ಮಾತಾಡುವಾಗ ಒಮ್ಮೆ ಯೋಚನೆ ಮಾಡುತ್ತಾರೆ. ಆದರೆ ಸಿದ್ದರಾಮಯ್ಯನವರು ಹಿಂದೆ-ಮುಂದೆ ನೋಡದೆ, ಅವರು ಪ್ರಧಾನಿ ಎಂಬುದನ್ನೂ ಲೆಕ್ಕಿಸದೆ ಮಾತಾಡಿದ್ದಷ್ಟೇ ಅಲ್ಲ, ಜೈಲಿಗೋದ ಯಡಿಯೂರಪ್ಪ ಅವರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡುವ ಮೋದಿ ಯಾವ ಸೀಮೆ ನಾಯಕ ಎಂದು ಪ್ರಶ್ನಿಸಿದ್ದರು. ರಾಜ್ಯಾಡಳಿತ ಶೈಲಿ, ಆಂತರಿಕ ಕಲಹ ಸ್ಫೋಟಕ್ಕೆ ಆಸ್ಪದ ಕೊಡದ ಜಾಣ್ಮೆ, ಕಾಂಗ್ರೆಸ್ ಅಸ್ತಿತ್ವ ಅಲ್ಲಾಡದಂತೆ ಕಾಪಿಟ್ಟ ದಿಟ್ಟತನ ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ ವರಿಷ್ಠರಲ್ಲಿ ಗೌರವ, ವಿಶ್ವಾಸ ಮೂಡಿಸಿದ್ದವು. ಆದರೆ ಅದನ್ನು ನೂರ್ಮಡಿ ಮಾಡಿದ್ದು ಸಿದ್ದರಾಮಯ್ಯನವರು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರೀತಿ.

ಹೀಗಾಗಿಯೇ ರಾಹುಲ್ ಗಾಂಧಿ ಅವರು ಕರ್ನಾಟಕದ ಪ್ರವಾಸದುದ್ದಕ್ಕೂ ಪ್ರಧಾನಿ ಮೋದಿ ಅವರನ್ನು ಸಿದ್ದರಾಮಯ್ಯ ಅವರಿಗೆ ಹೋಲಿಸುತ್ತಾ ಹೋದರು. ಸಿದ್ದರಾಮಯ್ಯ ಆಡಳಿತ ಶೈಲಿಯನ್ನು ಉದಾಹರಿಸುತ್ತಲೇ ನರೇಂದ್ರ ಮೋದಿ ಸರಕಾರದ ರೀತಿ-ನೀತಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಸರಕಾರವನ್ನು ನೋಡಿ ಆಳ್ವಿಕೆ ಹೇಗೆ ನಡೆಸಬೇಕು ಎಂಬುದನ್ನು ಮೋದಿ ಕಲಿಯಬೇಕು ಎಂದರು. ಒಂದೆಡೆ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಯಡಿಯೂರಪ್ಪನವರ ಮಟ್ಟಕ್ಕೆ ಅಂದರೆ ರಾಜ್ಯನಾಯಕರ ಮಟ್ಟಕ್ಕೆ ಇಳಿಸಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಪ್ರಧಾನಿ ಅವರೊಂದಿಗೆ ಹೋಲಿಸುತ್ತಾ ಮೋದಿ ಮಟ್ಟಕ್ಕೆ ಎತ್ತೊಯ್ದರು. ಒಂದು ಕಡೆ ಮೋದಿ ಅವರನ್ನು ತಾವೆಲ್ಲಿಟ್ಟು ನೋಡುತ್ತಿದ್ದೇವೆ ಎಂಬ ಸಂದೇಶ ರವಾನೆ ಮಾಡಿದರೆ, ಇನ್ನೊಂದೆಡೆ ಸಿದ್ದರಾಮಯ್ಯನವರನ್ನು ತಾವೆಷ್ಟು ಎತ್ತರದಲ್ಲಿ ಇಟ್ಟಿದ್ದೇವೆ ಎಂಬ ಎಚ್ಚರಿಕೆಯನ್ನೂ ರಾಜ್ಯದ ಮಟ್ಟದ ನಾಯಕರಿಗೆ ಕೊಟ್ಟಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರೊಬ್ಬ ಅದ್ಭುತ ನಾಯಕ, ಮುಂದಿನ ಬಾರಿಯೂ ಅವರೇ ಸಿಎಂ ಎಂದಾಗ ಅಲ್ಲಿದ್ದ ನಾಯಕರೆಲ್ಲ ಮಾತೇ ಹೊರಡದಂತಾದರು. ಅಷ್ಟೇ ಅಲ್ಲ ಸಿದ್ದರಾಮಯ್ಯನವರ ಸರಕಾರ ಬಂದ ಲಾಗಾಯ್ತಿನಿಂದಲೂ ತಾವೇ ಮುಂದಿನ ಸಿಎಂ ಅಭ್ಯರ್ಥಿ, ಮುಂದಿನ ಬಾರಿ ದಲಿತ ಸಿಎಂ ಎಂಬ ಘೋಷಣೆ ರೂವಾರಿಯಾಗಿದ್ದ ಪರಮೇಶ್ವರ ಅವರು ರಾಹುಲ್ ಈ ಸಂದೇಶ ರವಾನೆ ಮಾಡಿದ ನಂತರ ತಮ್ಮ ನಿಲುವು ಬದಲಿಸಿಕೊಂಡರು. ಮರುದಿನವೇ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಮುಂದಿನ ಚುನಾವಣೆ, ಅವರೇ ಮುಂದಿನ ಸಿಎಂ ಎಂದೂ ಹೇಳಿಕೆ ಕೊಟ್ಟರು. ಸಿದ್ದರಾಮಯ್ಯನವರು ವರಿಷ್ಠರು ಹಾಗೂ ರಾಜ್ಯ ನಾಯಕರ ವಲಯದಲ್ಲಿ ಬೀರಿರುವ ಏಕಕಾಲಿಕ ಪ್ರಭಾವದ ಖದರು ಇದು.

ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೊದಲ ನಾಲ್ಕು ವರ್ಷಗಳಲ್ಲಿ ಗೋಚರಿಸಿದ ಬಗೆಯೇ ಬೇರೆ. ಕಳೆದೊಂದು ವರ್ಷದಿಂದ ಅವರನ್ನು ಅವರೇ ಬಿಂಬಿತರಾಗುತ್ತಿರುವ ರೀತಿಯೇ ಬೇರೆ. ಅಹಿಂದ ಮಂತ್ರ ಪಠಣವನ್ನೇ ತಮ್ಮ ಆಳ್ವಿಕೆಯ ಅಳತೆಗೋಲಾಗಿಸಿಕೊಂಡ ಸಿದ್ದರಾಮಯ್ಯನವರು ಅವರ ಏಳ್ಗೆಗಾಗಿ ಹಲವು ಭಾಗ್ಯ, ಯೋಜನೆಗಳನ್ನು ಕೊಟ್ಟರೂ ಸರ್ವಜನಮಾನಸವನ್ನು ಒರೆಗೆ ಹಚ್ಚಿ ನೋಡಿದಾಗ ಸರಕಾರವೇಕೋ ಸಪ್ಪೆ-ಸಪ್ಪೆಯಾಗಿಯೇ ಕಂಡಿತ್ತು. ನಿರ್ದಿಷ್ಟವಾಗಿ ಏನನ್ನೂ ಹೇಳಲು ಆಗದಿದ್ದರೂ ಏನೋ ಕೊರತೆ ಇದೆ ಎಂಬ ಭಾವ ಕಾಡುತ್ತಿತ್ತು. ಹಾಗೆಂದು ಅಭಿವೃದ್ಧಿ ಕೆಲಸಗಳು ಆಗಲಿಲ್ಲ ಎಂದೇನೂ ಅಲ್ಲ. ಆದರೆ ಧಾಂಧೂಂ ಅಂತ ಹೇಳಿಕೊಳ್ಳುವಂಥದ್ದೇನೂ ವಿಜೃಂಭಿಸಲಿಲ್ಲ. ಜನಕ್ಕೆ ಸರಕಾರದ ಬಗ್ಗೆ ಪ್ರೀತಿ ಉಕ್ಕಿ ಹರಿಯಲಿಲ್ಲವಾದರೂ ಅದೇ ಕಾಲಕ್ಕೆ ವೈರಾಗ್ಯವಾಗಲಿ, ಜುಗುಪ್ಸೆಯಾಗಲಿ ಮೂಡಲಿಲ್ಲ. ಅಲ್ಲಲ್ಲಿ ಕಲ್ಲು ಬಿದ್ದರೂ ಕೆಲಕ್ಷಣದಲ್ಲೇ ಮೂಲಸ್ಥಿತಿಗೆ ಮರಳುವಂಥ ಶಾಂತ ಸರೋವರದ ರೀತಿ. ನಾಲ್ಕು ವರ್ಷಗಳ ಕಾಲ ಇದೇ ಸ್ಥಿತಿ. ಆದರೆ ಇದೆಲ್ಲವನ್ನೂ ಮೀರಿ ಕಾಂಗ್ರೆಸ್ ಸರಕಾರದ ಬಗ್ಗೆ ಸಕಾರಾತ್ಮಕ ಜನಭಾವನೆ ಗುಪ್ತಗಾಮಿನಿಯಂತೆ ಹರಿಯಲು ಕಾರಣವಾದದ್ದು ಸರಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರನ್ನು ಯಾವುದೇ ಭ್ರಷ್ಟಾಚಾರದ ಆಪಾದನೆಗಳು ಕಾಡದೇ ಹೋದದ್ದು, ಅಲ್ಲಾಡಿಸದೇ ಹೋದದ್ದು. ಹ್ಯೂಬ್ಯ್ಲೂ ವಾಚ್ ಉಡುಗೊರೆ, ಡಿವೈಎಸ್ಪಿಿ ಗಣಪತಿ ಆತ್ಮಹತ್ಯೆ, ಬೆಂಗಳೂರು ಸ್ಟೀಲ್ ಬ್ರಿಡ್ಜ್‌ ಯೋಜನೆ, ಸಿಎಂ ಪುತ್ರನ ಡಯಾಗ್ನಸ್ಟಿಕ್ ಸೆಂಟರ್ ಭೂಮಂಜೂರು ಮತ್ತಿತರ ಆಪಾದನೆಗಳು ಸರಕಾರದ ವಿರುದ್ಧ ಬಂದವಾದರೂ ಹಿಂದಿನ ಬಿಜೆಪಿ ಸರಕಾರದಲ್ಲಿ ಸಿಎಂ, ಮಂತ್ರಿಗಳು ಮತ್ತಿತರರನ್ನು ಜೈಲಿಗೆ ಅಟ್ಟಿದ ಆರೋಪಗಳ ಸ್ವರೂಪದ್ದು ಅವುಗಳಲ್ಲವಾದ್ದರಿಂದ ಜನ ಅಷ್ಟೇನೂ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ.

ನಿಜ, ಜನ ಏನೆಲ್ಲವನ್ನೂ ಸಹಿಸಿಕೊಳ್ಳುತ್ತಾರೆ, ಆದರೆ ಭ್ರಷ್ಟಾಚಾರ, ನೈತಿಕತೆಗೆ ಸವಾಲಾಗುವ ಆರೋಪಗಳನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ರಾಜಕೀಯ ಅನುಭವವೇದ್ಯ. ಸಿದ್ದರಾಮಯ್ಯನವರ ಸರಕಾರದ ಬಗ್ಗೆ ಸಹಿಷ್ಣುತೆ, ಒಪ್ಪಿತ ಭಾವನೆ ಜನರಲ್ಲಿ ಒಡಮೂಡಲು ಕಾರಣ ಅದು ಹಗರಣ ಮುಕ್ತ ಎಂಬುದು. ಯಾವುದೇ ಒಂದು ಸರಕಾರದ ಅವಧಿಯ ಅಂತ್ಯದಲ್ಲಿ ಸಹಜ ಆಡಳಿತವಿರೋಧಿ ಅಲೆ ಎಂಬುದು ಸೃಷ್ಟಿಯಾಗುತ್ತದೆ. ಆದರೆ ಸಿದ್ದರಾಮಯ್ಯ ಸರಕಾರದ ವಿಚಾರದಲ್ಲಿ ಇದು ಆಗದೆ ಇರಲು ಕಾರಣ ಹಿಂದಿನ ಬಿಜೆಪಿ ಸರಕಾರವನ್ನು ಅಲ್ಲಾಡಿಸಿದ ಭಾರೀ ಹಗರಣಗಳಾವವೂ ಇಲ್ಲಿ ಮರುಕಳಿಸದೇ ಹೋದದ್ದು. ಮಂತ್ರಿ-ಮಹೋದಯರು ಜೈಲುದರ್ಶನ ಮಾಡದೇ ಹೋದದ್ದು. ಮೂವರು ಮುಖ್ಯಮಂತ್ರಿಗಳನ್ನು ಕಂಡ ಹಿಂದಿನ ಬಿಜೆಪಿ ಸರಕಾರದ ಬಗ್ಗೆ, ಆ ಪಕ್ಷದ ಮುಖಂಡರ ಬಗ್ಗೆ ಜನರಲ್ಲಿ ವಿಶ್ವಾಸ ಮೂಡದೇ ಹೋಗಿರುವುದೇ ಸಿದ್ದರಾಮಯ್ಯ ಸರಕಾರಕ್ಕೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಿದೆ. ಜತೆಗೆ ಆ ಪಕ್ಷವನ್ನು ಬಿಟ್ಟು, ಬಿಡದಂತೆ ಕಾಡುತ್ತಿರುವ ಆಂತರಿಕ ಕಲಹ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ಕರ್ನಾಟಕದ ಮೇಲೆ ದಂಡೆತ್ತಿ ಬಂದರೂ ಅವರದೇ ಪಕ್ಷದ ನಾಯಕರ ಕಪ್ಪುಚುಕ್ಕೆಯನ್ನು ಅಳಿಸಿಹಾಕಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ಆ ಪಕ್ಷಕ್ಕೆ ಕೂಡುಲೆಕ್ಕಾಚಾರಕ್ಕಿಂಥ ಕಳೆವ ಲೆಕ್ಕಾಚಾರವಾಗಿಯೇ ಪರಿಣಮಿಸಿದೆ. ರಾಷ್ಟ್ರೀಯ ನಾಯಕರು ಘೋಷಣೆ ಮಾಡಿದ್ದರೂ ಯಡಿಯೂರಪ್ಪನವರಿಗೆ ತಾವೇ ಸಿಎಂ ಆಗುತ್ತೇವೆ ಎಂಬ ನಂಬಿಕೆ ಇಲ್ಲ. ಇದು ಒಂದು ಕಡೆಯಾದರೆ ಇನ್ನೊಂದೆಡೆ ಉಳಿದ ನಾಯಕರಿಗೆ ಯಡಿಯೂರಪ್ಪನವರನ್ನು ಮತ್ತೊಮ್ಮೆ ಸಿಎಂ ಮಾಡಲು ತಾವೇಕೆ ಶ್ರಮಿಸಬೇಕು ಎಂಬ ಭಾವಶೂನ್ಯ ಅಸಡ್ಡೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುವಲ್ಲಿ ಡಬ್ಬದಲ್ಲಿ ಹಾಕಿದ ಏಡಿಗಳಿಗಿಂತಲೂ ಮೀರಿದ ಪೈಪೋಟಿ. ಹೀಗಾಗಿ ರಾಜ್ಯದಲ್ಲಿ ಆಡಳಿತವಿರೋಧಿ ಅಲೆ ಸೃಷ್ಟಿಯ ರೂವಾರಿಗಳಾಗಿ, ಅದರ ಸವಾರಿ ಮಾಡಬೇಕಿದ್ದ ಬಿಜೆಪಿ ಮುಖಂಡರು ಕಾಲು ಮುರಿದುಕೊಂಡವರಂತೆ ತೆವಳುತ್ತಿದ್ದಾರೆ. ಒಂದೊಮ್ಮೆ ರಾಜ್ಯದಲ್ಲಿ ಪವಾಡವೇನಾದರೂ ಆಗಬೇಕಿದ್ದರೆ ಅದು ಮೋದಿ ಮತ್ತು ಅಮಿತ್ ಶಾ ಜೋಡಿಯ ಮೋಡಿಯಿಂದ. ಆದರೆ ಈವರೆಗೂ ಅದರ ಲಕ್ಷಣಗಳೇನೂ ಕಂಡಿಲ್ಲ. ಮುಂದೇನೋ ಗೊತ್ತಿಲ್ಲ. ಹೀಗಾಗಿ ಸದ್ಯಕ್ಕಂತೂ ಸಿದ್ದರಾಮಯ್ಯನವರು ನಿಶ್ಚಿಂತೆಯಿಂದ ಇದ್ದಾರೆ.

ವರ್ಷದಿಂದ ಈಚೆಗೆ ಸಿದ್ದರಾಮಯ್ಯನವರಲ್ಲಿ ಅತೀವ ಆತ್ಮವಿಶ್ವಾಸ ತಂದಿರುವುದು ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ಫಲಿತಾಂಶ. ಇಲ್ಲಿ ಚುನಾವಣೆ ನಡೆಯುವವರೆಗೂ ಸಿದ್ದರಾಮಯ್ಯನವರು ಸ್ಥಿತಪ್ರಜ್ಞ ಸ್ಥಿತಿಯಲ್ಲಿದ್ದರು. ಫಲಿತಾಂಶ ಕಾಂಗ್ರೆಸ್ ಪರ ಬರುತ್ತಿದ್ದಂತೆ ಹೆಗಲ ಮೇಲಿನ ಟವೆಲ್ಲು ಬೀಸೋಗೆದು ಮುಂದಿನ ಚುನಾವಣೆ ತಮ್ಮದೇ ನೇತೃತ್ವದಲ್ಲಿ ನಡೆಯಲಿದೆ, ಮುಂದಿನ ಬಾರಿಯೂ ತಾವೇ ಸಿಎಂ ಎಂದು ಘೋಷಿಸಿಕೊಂಡರು. ಅಲ್ಲಿಂದಾಚೆಗೆ ಪಕ್ಷದ ಅನ್ಯ ನಾಯಕರು ವರಿಷ್ಠರಿಗೆ ತರಹೇವಾರಿ ಕಿವಿಯೂದಿದರೂ, ಸ್ವತಃ ತಾವೂ ಪೈಪೋಟಿಯಲ್ಲಿರುವುದಾಗಿ ಹೇಳಿಕೊಂಡರೂ, ದಲಿತ ಸಿಎಂ ದಾಳ ಉರುಳಿಸಿದರೂ ಸಿದ್ದರಾಮಯ್ಯನವರ ವಿಶ್ವಾಸವನ್ನು ಅಲ್ಲಾಡಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಟಿವಿ ಚಾನೆಲ್‌ಗಳು, ಮುದ್ರಣ ಮಾಧ್ಯಮಗಳು ಮಾಡಿರುವ ಚುನಾವಣೆಪೂರ್ವ ಸಮೀಕ್ಷೆಯಲ್ಲೂ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಕೆಲವು ಸಮೀಕ್ಷೆಗಳಂತೂ ಸ್ಪಷ್ಟ ಬಹುಮತ ಸಾರಿವೆ. ಮುಖ್ಯಮಂತ್ರಿಗಳ ಸಾಲಿನಲ್ಲೂ ಸಿದ್ದರಾಮಯ್ಯನವರೇ ಮುಂದಿದ್ದಾರೆ. ಸಿದ್ದರಾಮಯ್ಯನವರ ಆತ್ಮವಿಶ್ವಾಸ ಹಿಗ್ಗಲು ಇನ್ನೇನು ಬೇಕು. ಸರಕಾರದ ಯೋಜನೆಗಳ ಪ್ರಚಾರದಲ್ಲಾಗಲಿ, ಚುನಾವಣೆ ಪ್ರಚಾರದಲ್ಲಾಗಲಿ ಸಿದ್ದರಾಮಯ್ಯನವರದೇ ಏಕಾಧಿಪತ್ಯ. ಯೋಜನೆಗಳ ಪ್ರಚಾರದಲ್ಲಿ ಅವರದೇ ಚಿತ್ತ, ಅವರದೇ ಚಿತ್ರ. ವರಿಷ್ಠರ ಭಾವಚಿತ್ರಗಳಿಗೂ ಆಸ್ಪದವಿಲ್ಲ. ಈ ಬಗ್ಗೆಯೂ ವರಿಷ್ಠರ ಬಳಿ ಹೋದ ಅನೇಕ ದೂರಿನ ಅಸ್ತ್ರಗಳು ಮೊನಚುತುದಿ ಮುರಿದುಕೊಂಡು ಮೊಂಡಾಗಿ ಬಿದ್ದಿವೆ. ಅದರೊಟ್ಟಿಗೆ, ದೂರು ಕೊಟ್ಟವರೂ ಸುಸ್ತಾಗಿ ಬಿದ್ದಿದ್ದಾರೆ.

ಮಲ್ಲಿಕಾರ್ಜುವ ಖರ್ಗೆ, ಡಾ. ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್ ಅವರಂಥವರು ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವುದು ಸುಳ್ಳಲ್ಲ. ಆದರೆ ಅದನ್ನು ದಕ್ಕಿಸಿಕೊಳ್ಳುವ ಗಟ್ಟಿತನ ಮೊದಲಿಬ್ಬರು ನಾಯಕರಲ್ಲಿ ಇಲ್ಲ. ತಮ್ಮ ಪರ ಕೈ ಎತ್ತುವ ಒಂದಿಪ್ಪತ್ತೈದು ಮಂದಿ ಶಾಸಕರನ್ನೂ ಅವರು ಸಂಪಾದಿಸಿಕೊಂಡಿಲ್ಲ. ಹೈಕಮಾಂಡ್ ಹೂಂ ಎಂದರೆ ಉಂಟು, ಉಹುಂ ಎಂದರೆ ಇಲ್ಲ. ಅಷ್ಟೇ ಇವರ ತಾಕತ್ತು. ಇದ್ದುದರಲ್ಲಿ ಒಂದಷ್ಟು ದಿಟ್ಟತನ, ಭಂಡತನಕ್ಕೆ ಹೆಸರಾದ ಶಿವಕುಮಾರ್ ಐಟಿ ದಾಳಿ ಏಟಿನಿಂದ ಚೇತರಿಸಿಕೊಳ್ಳಲು ತಿಣುಕಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸ್ವತಃ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯನವರನ್ನು ಮುಕ್ತಕಂಠದಿಂದ ಶ್ಲಾಘಿಸಿ, ‘ಐ ಲವ್ ಯು’ ಎಂದಿದ್ದಾರೆ. ಅದೃಷ್ಟ, ಪರಿಶ್ರಮ, ವರಿಷ್ಠರ ರಕ್ಷೆ, ಪಕ್ಷದ ಅನ್ಯ ನಾಯಕರ ಅಸಹಾಯಕತೆ ಒಗ್ಗೂಡಿರುವಾಗ ಸಿದ್ದರಾಮಯ್ಯ ಅವರನ್ನು ರಾಜ್ಯ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕ ಎನ್ನಲು ಅಡ್ಡಿಯಾದರೂ ಏನು?!

ಲಗೋರಿ: ಅದೃಷ್ಟ ಕೆಲವರ ಕೈ ಹಿಡಿಯುತ್ತದೆ. ಇನ್ನೂ ಕೆಲವರ ತಲೆ ಕೆಡಿಸುತ್ತದೆ.

Leave a Reply