ವಿಧಾನ ಸಭೆಯಲ್ಲೂ ನಲಪಾಡ್ ಗೂಂಡಾಗಿರಿಯದ್ದೇ ಸದ್ದು

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾ ವರ್ತನೆ ಮಂಗಳವಾರ ವಿಧಾನಸಭೆಯಲ್ಲೂ ಸದ್ದು ಮಾಡಿತು. ವಿರೋಧ ಪಕ್ಷ ನಾಯಕ ಜಗದೀಶ್ ಶೆಟ್ಟರ್ ನಲಪಾಡ್ ಪ್ರಕರಣವನ್ನು ಖಂಡಿಸುತ್ತಲೇ ‘ರಾಜ್ಯದಲ್ಲಿ ಗೂಂಡಾ ರಾಜ್ ಇದ್ದು, ರಾಕ್ಷಸಿ ಪ್ರವೃತ್ತಿ ಹೆಚ್ಚಾಗಿದೆ. ಸರ್ಕಾರ, ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಗೊತ್ತಿಲ್ಲ. ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದು ಹರಿದಾಯ್ದರು.

ಮೊಹಮ್ಮದ್ ನಲಪಾಡ್ ಗೂಂಡಾ ವರ್ತನೆ ಬಗ್ಗೆ ಬಜೆಟ್ ಅಧಿವೇಷನದ ಕಲಾಪದಲ್ಲಿ ನಿಯಮ 69ರಡಿ ನಿಲುವಳಿ ಸೂಚನೆ ಮಂಡಿಸಿ ಮಾತನಾಡಿದ ಶೆಟ್ಟರ್ ‘ಪ್ರಭಾವಿ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ವಿಳಂಬ ನೀತಿ ಅನುಸರಿಸಿದ್ದು, ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ. ಸಂತ್ರಸ್ಥ ವಿದ್ವತ್ ಮೇಲೆ ಬಹುಬೇಗ ಪ್ರಕರಣ ದಾಖಲಾಗಿದೆ. ಆದರೆ ಆರೋಪಿ ನಲಪಾಡ್ ಮೇಲೆ ತಡವಾಗಿ ಪ್ರಕರಣ ದಾಖಲಾಗಿದೆ. ಜಗಳ ನಡೆದಿರುವುದು ಗೊತ್ತಿದ್ದರೂ ಪೊಲೀಸರ ಮಧ್ಯಪ್ರವೇಶ ಆಗುವುದಿಲ್ಲ. ಪೊಲೀಸರು ಪ್ರಭಾವಿಗಳ ರಕ್ಷಕರಾಗಿದ್ದಾರೆ. ಘಟನೆ

ನಡೆದ ರಾತ್ರಿಯೇ ಕ್ರಮ ಕೈಗೊಂಡಿದ್ದರೆ, ಇಷ್ಟೊಂದು ರಾದ್ಧಾಂತ ಆಗುತ್ತಿರಲಿಲ್ಲ. ಈ ಹಿಂದೆ ಇಬ್ಬರು ವ್ಯಕ್ತಿಗಳ ಮೇಲೆ ನಲಪಾಡ್ ಹಲ್ಲೆ ನಡೆಸಿದ್ದ. ಈ ಸಂಬಂಧ ಪೀಟರ್ ಮತ್ತು ಪೂರ್ಣಿಮಾ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾಗ ಪೊಲೀಸರು ದೂರು ಪ್ರತಿಯನ್ನು ಹರಿದು ಹಾಕಿದ್ದಾರೆ. ಜತೆಗೆ ಅವರ ವಿರುದ್ಧ ದೂರು ನೀಡಿದರೆ ಮುಂದೆ ನಿಮಗೆ ಸಮಸ್ಯೆ ಆಗುತ್ತದೆ ಎಂಬುದಾಗಿ ಪೊಲೀಸರೇ ಧಮಕಿ ಹಾಕಿದ್ದಾರೆ. ನೀವು ಪೊಲೀಸರಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಿ. ಶಾಂತಿನಗರ ಕ್ಷೇತ್ರದ ವಿವೇಕ ನಗರ, ಅಶೋಕ್ ನಗರ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲೇ ಇನ್ಸ್‌ಪೆಕ್ಟರ್ ವಿಜಯ್ ಹಡಗಲಿ ಅಡ್ಡಾಡುತ್ತಿರುತ್ತಾರೆ. ಈ ಹಿಂದೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಎರಡು ಬಾರಿ ಸೇವೆಯಿಂದ ಅಮಾನತು ಆಗಿದ್ದಾರೆ. ಆದರೂ ಅವರಿಗೆ ಎಕ್ಸಿಕ್ಯೂಟಿವ್ ಹುದ್ದೆ ನೀಡಲಾಗುತ್ತಿದೆ. ಮುಖ್ಯಮಂತ್ರಿ, ಸಚಿವರು ಸೆಲ್ಯೂಟ್ ಹೊಡೆಯುವವರಿಗೆ ಮಾತ್ರ ಉತ್ತಮ ಹುದ್ದೆ ಕೊಡುತ್ತೀರಿ. ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಕಡೆಗಣಿಸಿದ್ದೀರಿ. ಮಾಧ್ಯಮದವರ ಮೇಲೆ ದಾಳಿ ನಡೆಸಿದಾಗ ಪೊಲೀಸರು ಸುಮ್ಮನೆ ಕೂಳಿತಿದ್ದರು. ಮಾಧ್ಯಮದವರ ಕ್ಯಾಮೆರಾಗಳನ್ನು ಕಸಿದುಕೊಂಡಿದ್ದಾರೆ. ಅಂದರೆ ಪತ್ರಕರ್ತರಿಗೂ ರಕ್ಷಣೆ ಇಲ್ಲದಂತಾಗಿದೆ.

ಇನ್ನು ಕೆ.ಆರ್.ಪುರದಲ್ಲಿ ಜಲಮಂಡಳಿ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತ ನಾರಾಯಣಸ್ವಾಮಿ ಎಂಬಾತ ಪಾಲಿಕೆ ಅಧಿಕಾರಿಗೆ ಬೆದರಿಕೆ ಹಾಕಿ ಪುಂಡಾಟಿಕೆ ನಡೆಸಿದ್ದಾನೆ. ಪಾಲಿಕೆ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದಾನೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ.  ಬ್ಯಾಟರಾಯನಪುರದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತ ಮುನಿರಾಜು ಎಂಬಾತ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾನೆ. ಒಟ್ಟಿನಲ್ಲಿ ಮಾಧ್ಯಮ, ಮಹಿಳೆಯರು, ಸಾರ್ವಜನಿಕರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಬೆಂಗಳೂರು ಅಪರಾಧ ನಗರಿಯಾಗುತ್ತಿದೆ. ಗೂಂಡಾರಾಜ್ ಬೆಳೆಸಲು ಹೋಗಬೇಡಿ, ರಾಕ್ಷಸಿ ಪ್ರವೃತ್ತಿ ನಿಲ್ಲಿಸಿ.’

ಶೆಟ್ಟರ್ ಅವರ ಹೇಳಿಗೆಗೆ ಉತ್ತರಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ‘ಘಟನೆ ನಡೆದ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದು, ಮರುದಿನ ಬೆಳಗ್ಗೆ 8 ಗಂಟೆಯೊಳಗೆ ಬಂಧಿಸುವಂತೆ ತಿಳಿಸಿದ್ದೆ. ಬಂಧನವಾಗದ್ದರಿಂದ ಇನ್‌ಸ್‌‌ಪೆಕ್ಟರ್‌ನ್ನು ಅಮಾನತು ಮತ್ತು ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ. ಆರೋಪಿ ವಿರುದ್ಧ 307 ಪ್ರಕರಣ ದಾಖಲಿಸಿದ್ದೇವೆ. ಕರ್ತವ್ಯಲೋಪ ಎಸಗಿದ ಇನ್‌ಸ್‌‌ಪೆಕ್ಟರ್ ವಿರುದ್ಧ ವರದಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕೆ.ಆರ್.ಪುರದಲ್ಲಿ ಪಾಲಿಕೆ ಕಚೇರಿಯಲ್ಲಿ ಪುಂಡಾಟಿಕೆ ನಡೆಸಿದ ನಾರಾಯಣಸ್ವಾಮಿ ವಿರುದ್ಧ ಸ್ವಯಂ ಪ್ರೇರೇಪಿತ ದೂರು ದಾಖಲಿಸಲು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದರು.

ಈ ಮಧ್ಯೆ ಮಗನ ತಪ್ಪಿಗೆ ವಿಧಾನಸಭೆಯಲ್ಲಿ ಕ್ಷಮೆಯಾಚಿಸಿದ ಶಾಸಕ ಹ್ಯಾರಿಸ್, ನನ್ನ ಮಗನ ವರ್ತನೆಯಿಂದ ಸರಕಾರ, ಸದನದ ಸದಸ್ಯರ ಗೌರವಕ್ಕೆ ಕುಂದುಂಟಾಗಿದ್ದರೆ ಕ್ಷಮಿಸಿ. ಯಾವ ತಂದೆಗೂ ಇಂತಹ ಪರಿಸ್ಥಿತಿ ಬರಬಾರದು. ಈ ಘಟನೆಯಿಂದ ಬಹಳ ನೋವಾಗಿದೆ. ನನ್ನ ಮಗನಿಗೆ ಬುದ್ಧಿ ಹೇಳಿ, ಇನ್ಮುಂದೆ ಸರಿಯಾಗಿ ನಡೆದುಕೊಳ್ಳಲು ಹೇಳುತ್ತೇನೆ. ಕೆಲ ಸಂದರ್ಭ, ಸಮಯಗಳಲ್ಲಿ ಹೀಗೆ ಆಗುತ್ತದೆ. ನನ್ನಿಂದ ಸದನದ ಗೌರವಕ್ಕೆ ಕುಂದುಂಟಾಗಿದ್ದರೆ ಕ್ಷಮಿಸಿ. ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದಕ್ಕೂ ನಾನು ಅವರ ಕ್ಷಮೆ ಕೋರುತ್ತೇನೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದರು.

Leave a Reply