ಮೋದಿಯ ನೈತಿಕತೆ ಬಗ್ಗೆ ಸಿದ್ರಾಮಯ್ಯ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಮಿಷನ್ ಸರ್ಕಾರ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನರೇಂದ್ರ ಮೋದಿ ಅವರು ಭಾರತ ಪ್ರಧಾನಿಯಾಗಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೋದಿ ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಆರೋಪಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ, ಮೋದಿಯನ್ನು ಪ್ರಶ್ನಿಸಿದ್ದು ಹೀಗೆ…

 ‘ಮೋದಿ ಅವರು ಸಾಲು ಸಾಲು ಸುಳ್ಳು ಆರೋಪ ಮಾಡಿದ್ದಾರೆ. ದೇಶದ ಪ್ರಧಾನಿಯಾಗಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಒಂಭತ್ತು ವರ್ಷ ಮಾಡಬಾರದ್ದನ್ನು ಮಾಡಿ ಈಗ ನಮಗೆ ಪಾಠ ಹೇಳುತ್ತಿದ್ದಾರೆ. ಅವರ ಕಾಲದಲ್ಲಿ ಏಕೆ ಲೋಕಾಯುಕ್ತ ಸಂಸ್ಥೆ ಆರಂಭಿಸಲಿಲ್ಲ? ಜೈಲಿಗೆ ಹೋಗಿದ್ದು ಯಾರು? ಲಂಚ ಪಡೆದು ಜೈಲಿಗೆ ಹೋಗಿಬಂದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ರೀತಿ ಹೇಳುವುದಕ್ಕೆ ಮೋದಿಗೆ ನೈತಿಕ ಹಕ್ಕಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನೂರಕ್ಕೆ ನೂರರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿತ್ತು. ಯಡಿಯೂರಪ್ಪ ಸೇರಿದಂತೆ ಐದಾರು ಮಂದಿ ಜೈಲಿಗೆ ಹೋಗಿ ಬಂದಿದ್ದು ಅದೇ ಕಾರಣಕ್ಕೆ. ಜೈಲಿಗೆ ಹೋದರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿರುವವರು ನಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ.  ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಭ್ರಷ್ಟಾಚಾರ ನಡೆದಿದೆ. ಕಮಿಷನ್ ಸರಕಾರ ಎಂದು ಆರೋಪಿಸುತ್ತಿದ್ದಾರೆ. ಆದರೆ ಇದಕ್ಕೆ ಒಂದು ದಾಖಲೆಯನ್ನು ನೀಡಲಿ. ಕೇವಲ ಬಾಯಿ ಮಾತಿಗೆ ಆರೋಪ ಮಾಡುವ ಮೋದಿ ದಾಖಲೆ ಕೊಟ್ಟಿದ್ದಾರೇನು?

ದೇಶದ ಪ್ರಧಾನಿಯಾಗಿ ಮೋದಿ ಅವರಿಗೆ ಮಾತನಾಡಲು ಅನೇಕ ವಿಷಯಗಳಿವೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ತೊಂದರೆಗಳಿವೆ ಅವುಗಳ ಬಗ್ಗೆ ಮಾತನಾಡಿಲ್ಲ. ರಾಜ್ಯದಲ್ಲಿ ಕಳೆದೆರೆಡು ವರ್ಷದಿಂದ ಬರವಿದೆ. ಮೋದಿ ಅವರು ಕೃಷಿ ವಲಯದಲ್ಲಿ ಬಗ್ಗೆ ಮಾತನಾಡಬಹುದಿತ್ತು ಅಥವಾ ರಾಜ್ಯದ ರೈತರ ಬಹುದಿನದ ಬೇಡಿಕೆಯಾಗಿರುವ ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಏಕೆ ತುಟಿ ಬಿಚ್ಚಿಲ್ಲ? ಇನ್ನು ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಹದಾಯಿ ನೀರು ಹಂಚಿಕೆ ಬಗ್ಗೆಯೂ ಬಾಯಿ ಬಿಟ್ಟಿಲ್ಲ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ  ನೀರವ್ ಮೋದಿ ಹನ್ನೊಂದು ಸಾವಿರ ಕೋಟಿ ರು. ಜತೆ ಪರಾರಿಯಾಗಿದ್ದಾರೆ. ನಾನಾಗಿದ್ದರೆ ನೀರವ್ ಮೋದಿಯನ್ನು ಬಿಡುತ್ತಿರಲಿಲ್ಲ. ಮೋದಿಯವರ ಕುಮ್ಮಕ್ಕು ಅಥವಾ ಅನುಮತಿ ಇಲ್ಲದೆ ಅವರು ಪರಾರಿಯಾಗಲು ಸಾಧ್ಯವೇ? ’

Leave a Reply