ನ್ಯಾಯದ ಕೂಗಿನೊಂದಿಗೆ ಕಮಲ್ ರಾಜಕೀಯ ಆರಂಭ, ಸಿದ್ಧಾಂತಕ್ಕೆ ಜೋತುಬೀಳಲ್ಲ ಎನ್ನುವುದು ಎಷ್ಟು ಸತ್ಯ?

ಡಿಜಿಟಲ್ ಕನ್ನಡ ವಿಶೇಷ:

ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿರುವ ಖ್ಯಾತ ನಟ ಕಮಲ್ ಹಾಸನ್ ನ್ಯಾಯದ ಕೂಗಿನೊಂದಿಗೆ ರಾಜಕೀಯ ಕಹಳೆ ಮೊಳಗಿಸಿದ್ದಾರೆ.

ಬುಧವಾರ ಮಧುರೈನಲ್ಲಿ ಕಮಲ್ ತಮ್ಮ ನೂತನ ಪಕ್ಷ ‘ಮಕ್ಕಲ್ ನೀದಿ ಮೈಯಾಮ್’ (people justice centre) ಅನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಪಕ್ಷದ ಚಿಹ್ನೆಯಲ್ಲಿ ಆರು ಕೈಗಳು ಪರಸ್ಪರ ಒಂದನ್ನೊಂದು ವೃತ್ತಾಕಾರದಲ್ಲಿ ಹಿಡಿದುಕೊಂಡಿದ್ದು, ಮಧ್ಯದಲ್ಲಿ ನಕ್ಷತ್ರವಿರುವುದು ಕಮಲ್ ಪಕ್ಷದ ಚಿಹ್ನೆ. ಅದರೊಂದಿಗೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಕಮಲ್, ತಮ್ಮದು ಎಡ ಹಾಗೂ ಬಲ ಪಂಥಗಳ ಸಿದ್ಧಾಂತಕ್ಕೆ ಸೇರದೇ ತಟಸ್ಥವಾಗಿದೆ ಎಂಬುದನ್ನು ಬಿಂಬಿಸಲು ಹೋರಟಿದ್ದಾರೆ.

ಸದ್ಯ ಅಸ್ಥಿತ್ವದಲ್ಲಿರುವ ಯಾವುದೇ ಪಕ್ಷಗಳ ಜತೆ ನಾನು ಕೈಜೋಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಕಮಲ್ ಹಾಸನ್, ತಾವು ಭ್ರಷ್ಟ ರಾಜಕೀಯ ವ್ಯವಸ್ಥೆ ವಿರುದ್ಧ ಏಕಾಂಗಿಯಾಗಿ ಹೋರಾಡುವ ಸಂದೇಶ ರವಾನಿಸಿದ್ದಾರೆ. ಪಕ್ಷದ ಹೆಸರಿನಲ್ಲಿ ಸೆಂಟರ್ (ತಟಸ್ಥ) ಸಿದ್ಧಾಂತವನ್ನು ಪ್ರತಿಪಾದಿಸುವ ಪ್ರಯತ್ನ ಮಾಡಿರುವ ಕಮಲ್ ತಮ್ಮ ಪಕ್ಷದ ಕುರಿತು ವಿವರಿಸಿದ್ದು… ‘ಇದು ಎಡ ಅಥವಾ ಬಲ ಪಂಥ ಸಿದ್ಧಾಂತಕ್ಕೆ ಸೇರಿಲ್ಲ. ಪಕ್ಷದ ಚಿಹ್ನೆಯಲ್ಲಿರುವ ಆರು ಕೈಗಳು ಆರು ರಾಜ್ಯಗಳನ್ನು ಪ್ರತಿನಿಧಿಸುತ್ತವೆ. ಮಧ್ಯದಲ್ಲಿರುವ ನಕ್ಷತ್ರ ಜನರ ಪ್ರತೀಕವಾಗಿದೆ.’

ಇದಕ್ಕೂ ಮುನ್ನ ತಮ್ಮ ಸ್ಫೂರ್ತಿ ಅಬ್ದುಲ್ ಕಲಾಂ ಅವರ ನಿವಾಸಕ್ಕೆ ಭೇಟಿ ಕೊಟ್ಟು ಅವರ ಸಹೋದರರನ್ನು ಭೇಟಿ ಮಾಡಿದ ಕಮಲ್, ರಾಮೇಶ್ವರದ ಮೀನುಗಾರರೊಂದಿಗೆ ಚರ್ಚಿಸಿ ತಮ್ಮ ರಾಜಕೀಯ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದರು.

ಕಮಲ್ ತಮ್ಮ ರಾಜಕೀಯ ಪಕ್ಷ ಯಾವುದೇ ಸಿದ್ಧಾಂತಕ್ಕೆ ಸೇರದೇ ತಟಸ್ಥವಾಗಿದೆ ಎಂದು ಹೇಳಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಕಾರಣ, ಕಮಲ್ ಈಗಾಗಲೇ ಬಲಪಂಥೀಯ ಸಿದ್ಧಾಂತಗಳನ್ನು ನೇರವಾಗಿ ಟೀಕಿಸುತ್ತಲೇ ಎಡಪಂಥೀಯ ಸಿದ್ಧಾಂತ ವಿಚಾರಧಾರೆ, ಕ್ರಾಂತಿಕಾರಿಗಳು ನನ್ನ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ. ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಂತಹ ಎಡ ಪಕ್ಷಗಳ ನಾಯಕರ ಜತೆ ನಾಯಕರ ಜತೆ ಹೆಚ್ಚು ಕಾಣಿಸಿಕೊಂಡಿರುವ ಕಮಲ್ ಹಾಸನ್, ಹೇಗೆ ತಾವು ತಟಸ್ಥವಾಗಿದ್ದುಕೊಂಡು ಈ ಎರಡು ಸಿದ್ಧಾಂತಗಳನ್ನು ಸರಿದೂಗಿಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಕಮಲ್ ರಾಜಕೀಯಕ್ಕೆ ಪ್ರವೇಶಿಸುವಾಗ ನನ್ನದು ಎಡಪಂಥೀಯ ಸಿದ್ಧಾಂತ. ನನಗೆ ಎಡಪಂಥೀಯ ಕ್ರಾಂತಿಕಾರಿಗಳೇ ಸ್ಫೂರ್ತಿ ಎಂದು ಘೋಷಿಸಿದ್ದು ಇನ್ನು ಕಣ್ಣಿಗೆ ಕಟ್ಟಿದ ಹಾಗೇ  ಇದೆ. ಅಲ್ಲದೆ ಕೆಲ ದಿನಗಳ ಹಿಂದಷ್ಟೇ ರಜನಿಕಾಂತ್ ಕೇಸರಿ ಬಣ್ಣ ಅಪ್ಪಿಕೊಂಡರೆ (ಬಲಪಂಥೀಯ ಸಿದ್ಧಾಂತದಲ್ಲಿ ಗುರುತಿಸಿಕೊಂಡರೆ) ಮೈತ್ರಿ ಸಾಧ್ಯವೇ ಇಲ್ಲ ಎಂದು ಕಡ್ಡಿ ತುಂಡರಿಸಿದಂತೆಹೇಳಿದ್ದಾರೆ. ಹೀಗಾಗಿ ಕಮಲ್ ಅವರ ಈ ತಟಸ್ಥ ನೀತಿ ಶೇ.100ರಷ್ಟು ನಿಜವೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

Leave a Reply