ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನ ಹಾರಿಸಿ ಇತಿಹಾಸ ಬರೆದ ಅವಾನಿ ಚತುರ್ವೇದಿ!

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಅವಾನಿ ಚತುರ್ವೇದಿ ಹೊಸ ಇತಿಹಾಸ ಬರೆದಿದ್ದಾರೆ. ಅದೇನೆಂದರೆ, ಕಳೆದ ಸೋಮವಾರ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

2016ರ ಜೂನ್ ತಿಂಗಳಲ್ಲಿ ಭಾರತದ ಮೊದಲ ಮೂವರು ಮಹಿಳಾ ಪೈಲೆಟ್ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗಿದ್ದು, ಅದರಲ್ಲಿ ಒಬ್ಬರು ಅವಾನಿ ಚತುರ್ವೇದಿ. ಕಳೆದ ವಾರದವರೆಗೂ ಇಬ್ಬರು ಪೈಲೆಟ್ ಗಳ ತರಬೇತಿ ಯುದ್ಧ ವಿಮಾನ ಹಾರಾಟ ನಡೆಸಿದ್ದರು. ಈ ಯುದ್ಧ ವಿಮಾನದಲ್ಲಿ ನುರಿತ ಮಾರ್ಗದರ್ಶಕರ ಜತೆ ಅವಾನಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಈಗ ಮೊದಲ ಬಾರಿಗೆ ಮಿಗ್-21 ಏಕ ವ್ಯಕ್ತಿ  ಚಾಲಿತ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.

ಸುದೀರ್ಘ 30 ನಿಮಿಷಗಳ ಕಾಲ ಅವಾನಿ ಅವರು ರಷ್ಯಾ ಮೂಲದ ಜೆಟ್ ನಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ. 2016ರಲ್ಲಿ ವಾಯಪಡೆಗೆ ಸೇರಿದ ನಂತರ ಅವಾನಿ ಅವರು ಬೀದರ್ ನಲ್ಲಿರುವ ವಾಯು ನೆಲೆಯಲ್ಲಿ ಸು ದೀರ್ಘ ಒಂದು ವರ್ಷ ತರಬೇತಿ ಪಡೆದಿದ್ದರು. ನಂತರ ಆರು ತಿಂಗಳ ಕಾಲ ಹಕಿಮ್ ಪೇಟ್ ನ ಕಿರಣ ತರಬೇತಿ ಜೆಟ್ ನಲ್ಲಿ ತರಬೇತಿ ಪಡೆದಿದ್ದರು.

ಅವಾನಿ ಅವರ ಈ ಸಾಧನೆಯನ್ನು ಭಾರತೀಯ ವಾಯು ಪಡೆಯಲ್ಲಿ ನಾರಿ ಶಕ್ತಿಯ ಸೇರ್ಪಡೆ ಎಂದೇ ಬಣ್ಣಿಸಲಾಗುತ್ತಿದೆ. ಅವಾನಿ ಅವರ ಸಾಧನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಾಯುಪಡೆ ವಕ್ತಾರರಾದ ವಿಂಗ್ ಕಮಾಂಡರ್ ಅನುಪಮಾ ಬ್ಯಾನರ್ಜಿ ಹೇಳಿದಿಷ್ಟು…’ಮಹಿಳಾ ಪೈಲೆಟ್ ಮೊದಲ ಬಾರಿಗೆ ಏಕಾಂಗಿಯಾಗಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ.ಇದರೊಂದಿಗೆ ವಾಯುಪಡೆಯಲ್ಲಿ ನಾರಿ ಶಕ್ತಿಯ ಕಾಲ ಆರಂಭವಾಗಿದೆ.’

Leave a Reply