ಪರಪ್ಪನ ಅಗ್ರಹಾರದಲ್ಲೂ ನಿಲ್ಲದ ನಲಪಾಡ್ ಅಟ್ಟಹಾಸ!

ಡಿಜಿಟಲ್ ಕನ್ನಡ ಟೀಮ್:

ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಂಬಿ ಎಣಿಸುತ್ತಿರುವ ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮದ್  ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದ್ದಾನೆ. ತನ್ನ ಸಹಚರನ ಮೇಲೆ ಮತ್ತೆ ಹಲ್ಲೆ ನಡೆಸಿ ತನ್ನ ದುರಹಂಕಾರದ ಪರಮಾವಧಿ ಮೆರೆದಿದ್ದಾನೆ.

ತಾನು ಮಾಡಿರುವ ತಪ್ಪಿಗೆ ಪೊಲೀಸರ ಅತಿಥಿಯಾಗಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿ ಉಗಿಸಿಕೊಂಡಿರುವ ನಲಪಾಡ್, ತನ್ನ ತಂದೆ ವಿಧಾನಸೌಧದಿಂದ ಹೀಡಿದು ನಡು ರಸ್ತೆಯಲ್ಲಿ ಮಾಧ್ಯಮದ ಮುಂದೆ ಕ್ಷಮೆ ಕೇಳಿ ತಲೆ ತಗ್ಗಿಸುವಂತೆ ಮಾಡಿದ್ದಾನೆ. ಇಷ್ಟೆಲ್ಲಾ ಆದ್ರೂ ನಲಪಾಡ್ ತಲೆಗೇರಿರುವ ಮದ ಇನ್ನು ಇಳಿದ ಹಾಗೆ ಕಾಣುತ್ತಿಲ್ಲ.

ಜೈಲಿನಲ್ಲಿ ನಲಪಾಡ್ ತನ್ನ ಸಹಚರ ಹಾಗೂ ವಿದ್ವತ್ ಹಲ್ಲೆ ಪ್ರಕರಣದ 5ನೇ ಆರೋಪಿ ಅಬ್ರಾಸ್ ಮೇಲೆ ಕೋಪಗೊಂಡಿದ್ದು, ನಿನ್ನಿಂದಲೇ ನಾನು ಜೈಲು ಸೇರುವಂತಾಗಿದೆ ಎಂದು ದೂರುತ್ತಾ ಹಲ್ಲೆ ಮಾಡಿದ್ದಾನೆ.ನಲಪಾಡ್ ನನ್ನು ಜೈಲಿನಲ್ಲಿ ವಿಚಾರಣಾಧೀನ ಆರೋಪಿಗಳ ಜತೆಗೆ ಇರಿಸಲಾಗಿತ್ತು. ರಾತ್ರಿ ಊಟ ಮಾಡಿದ ನಂತರ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ನಲಪಾಡ್ ಮತ್ತು ಅಬ್ರಾಸ್ ನಡುವೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಅಬ್ರಾಸ್ ನೀನು ನಡೆಸಿದ ಹಲ್ಲೆಯಿಂದ ನಾವೆಲ್ಲ ಜೈಲು ಸೇರುವಂತಾಯಿತು ಎಂದು ಕಿಚಾಯಿಸಿದ್ದ. ಇದರಿಂದ ರೊಚ್ಚಿಗೆದ್ದ ನಲಪಾಡ್ ಅಬ್ರಾಸ್ ಮೇಲೆ ಹಲ್ಲೆ ನಡೆಸಿದ್ದಾನೆ.

ಇಬ್ಬರೂ ಒಂದೇ ಬ್ಯಾರಕ್‌ನಲ್ಲಿ ಇದ್ದ ಕಾರಣ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಜೈಲಾಧಿಕಾರಿಗಳು ಇಬ್ಬರನ್ನೂ ಸಮಾಧಾನಪಡಿಸಿ ಅಬ್ರಾಸ್‌ನನ್ನು ಮತ್ತೊಂದು ಬ್ಯಾರಕ್‌ಗೆ ವರ್ಗಾಯಿಸಿದ್ದಾರೆ.

ಇದರಿಂದ ಒಂದತೂ ಸ್ಪಷ್ಟವಾಗಿದೆ ನಲಪಾಡ್ ಗೆ ಪೊಲೀಸರಿಂದ ವಿಐಪಿ ಆತಿಥ್ಯ ಸಿಗುತ್ತಿದ್ದು, ಪೊಲೀಸರು ಇತರ ಆರೋಪಿಗಳಿಗೆ ವರ್ಕ್ ಔಟ್ ಮಾಡಿದಂತೆ ನಲಪಾಡ್ ಹಾಗೂ ಆತನ ಸಹಚರರಿಗೆ ಮಾಡಿಲ್ಲ. ಪೊಲೀಸರ ಕೈರುಚಿ ನಿಜವಾಗಿಯೂ ತಿಂದಿದ್ದರೆ ನಲಪಾಡ್ ತಲೆಗೇರಿರುವ ಮದ ಸಹಜವಾಗಿಯೇ ಇಳಿಯುತ್ತಿತ್ತು. ಕಾನೂನು ಎಲ್ಲರಿಗೂ ಒಂದೇ ಎಂಬುದು ಕೇವಲ ಸಂವಿಧಾನದ ಪುಸ್ತಕಕ್ಕೆ ಸೀಮಿತವಾಗಿರುವುದರಿಂದ ನಲಪಾಡ್ ಜೈಲಿನಲ್ಲೂ ತನ್ನ ದರ್ಪ ಪ್ರದರ್ಶಿಸುತ್ತಿದ್ದಾನೆ.

Leave a Reply