ಬಿಜೆಪಿ ದುಡ್ಡಲ್ಲಿ ನಡೆಯುತ್ತಾ ರಜಿನಿ, ಕಮಲ್ ಪಕ್ಷಗಳು?

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ಅಮ್ಮ ಜಯಲಲಿತಾ ಕಳೆದ ಡಿಸೆಂಬರ್ ನಲ್ಲಿ ಸಾವನ್ನಪ್ಪಿದ ಬಳಿಕ ರಾಜಕೀಯ ಚದುರಂಗದಾಟ ಶುರುವಾಗಿದೆ. ನಟ ರಜಿನಿಕಾಂತ್ ಬಳಿಕ ನಟ ಕಮಲ‌ ಹಾಸನ್ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಮಧುರೈನಲ್ಲಿ ನಡೆದ ಪಕ್ಷ ಸ್ಥಾಪನಾ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ‌ ಕೇಜ್ರಿವಾಲ್ ಭಾಗಿಯಾಗಿ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶ ಬೆಂಬಲಿಸಿದ್ರು.

ಭಾರತೀಯ ಚಿತ್ರರಂಗದ ಅದರಲ್ಲೂ ದಕ್ಷಿಣ ಭಾರತದ ಇಬ್ಬರು ಸೂಪರ್ ಸ್ಚಾರ್ ಗಳ ಪಕ್ಷಕ್ಕೆ ಬಿಜೆಪಿ ಬೆಂಬವಿದೆಯೇ? ಎಂಬ ಪ್ರಶ್ನೇ ಮೂಡುತ್ತಿದೆ. ಈ ಪ್ರಶ್ನೆ ಕೇಳ್ತಿದ್ದ ಹಾಗೆ ಕೆಲವರು ಇಲ್ಲ, ಇದೆಲ್ಲಾ ಮೋದಿ ವಿರೋಧಿಗಳ ಕೆಲಸ ಅಂತ ನಿರಾಕರಿಸಬಹುದು ಅಥವಾ ಹೌದಾ ಅಂತ ಹುಬ್ಬೇರಿಸಿ ಆಸಕ್ತಿಯಿಂದ ಕೇಳಲುಬಹುದು. ಜಯಲಲಿತಾ ನಿಧನದ ನಂತರ ಬಿಜೆಪಿ ತಮಿಳುನಾಡಿನ ರಾಜಕಾರಣಕ್ಕೆ ಈ ಇಬ್ಬರು ನಾಯಕ ನಟರನ್ನು ಎಳೆದು ತಂದಿದ್ಯಾ ಎಂಬ ಅನುಮಾನ ಕಾಡುತ್ತದೆ. ಈ ಹಿಂದೆ ರಜಿನಿಕಾಂತ್ ರನ್ನು ಬಿಜೆಪಿಗೆ ಸೆಳೆಯಲು ನಾನಾ ಕಸರತ್ತು ನಡೆದಿತ್ತು. ತಮಿಳುನಾಡಿನಲ್ಲಿ ಕಮಲವನ್ನು ಅರಳಿಸಿಯೇ ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿಯೇ ರಜಿನಿಕಾಂತ್ ನಿವಾಸಕ್ಕೆ ಭೇಡಿ ನೀಡಿ ಮಾತುಕತೆ ನಡೆಸಿದ್ರು. ಆ ಬಳಿಕ ರಜಿನಿ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ, ಡಿಎಂಕೆ ಹೊರತು ಪಡಿಸಿ ರಾಷ್ಟ್ರೀಯ ಪಕ್ಷಗಳನ್ನು ಅಲ್ಲಿನ ಜನ ಬೆಂಬಲಿಸಿಲ್ಲ. ಅದರಲ್ಲೂ ಬಿಜೆಪಿಗಂತು ಅಲ್ಲಿನ ಜನರಿಂದ ಸಕಾರಾತ್ಮಕ ಮಾತುಗಳೇ ಬರುವುದಿಲ್ಲ. ಈ ಕಾರಣದಿಂದಲೇ ರಜನಿಕಾಂತ್ ಬಿಜೆಪಿ ಸೇರಿದರೂ ಮತಗಳು ಬಾರದೇ ಹೋದರೆ ಅವಮಾನ ಅನ್ನೋದನ್ನು ಅರಿತ ಬಿಜೆಪಿ ರಜಿನಿಕಾಂತ್ ಅವರ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಅದರ ಬೆಂಬಲ ಪಡೆಯೋದು ಬಿಜೆಪಿ ತಂತ್ರಗಾರಿಕೆ ಆಗಿದೆ. ಇದೀಗ ಕಮಲ್ ಹಾಸನ್ ನೇತೃತ್ವದಲ್ಲಿ ಮತ್ತೊಂದು ಪಕ್ಷ ಸ್ಥಾಪಿಸಿದ್ರೆ ಧರ್ಮ ಆಧಾರದಲ್ಲಿ ಮತಗಳನ್ನು ಒಡೆಯೋದು ಸುಲಭ ಅನ್ನೋದು ಮತ್ತೊಂದು ಮಾಸ್ಟರ್ ಪ್ಲಾನ್ ಎಂಬ ಮಾತುಗಳು ಕೇಳಿ ಬರುತ್ತಿವೆ. ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಬೇರೆ ಬೇರೆ ಪಕ್ಷ ಸ್ಥಾಪಿಸಿ, ಅಭಿಮಾನ ಹಾಗೂ ಧರ್ಮದ ಆಧಾರದಲ್ಲಿ ಮತಗಳನ್ನು ಸೆಳೆದರೆ ಬಿಜೆಪಿ ತಮಿಳುನಾಡಿನಲ್ಲಿ ಆದಿಪತ್ಯ ಸ್ಥಾಪಿಸಬಹುದು.

ಇಷ್ಟು ದಿನಗಳ ಕಾಲ ಬಲಪಂಥವನ್ನು ವಿರೋಧಿಸಿ, ಎಡಪಂಥದ ಬಗ್ಗೆ ತಮ್ಮ ಒಲವನ್ನು ಬಹಿರಂಗವಾಗಿ ಪ್ರದರ್ಶಿಸಿದ್ದ ಕಮಲ್ ನಿನ್ನೆ ಪಕ್ಷ ಪ್ರಕಟಿಸಿದ ನಂತರ ಮಾತನಾಡಿ, ನಮ್ಮ ಪಕ್ಷ ಎಡ ಹಾಗೂ ಬಲ ಸಿದ್ಧಾಂತಕ್ಕೆ ವಾಲದೇ ತಟಸ್ಥವಾಗಿರಲಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ಇಷ್ಟು ದಿನ ಕಮಲ್ ನಡೆದುಕೊಂಡಿದ್ದು, ಸುಳ್ಳಾ ಅಥವಾ ಕಮಲ್ ಪಕ್ಷ ತಟಸ್ಥ ಸಿದ್ಧಾಂತ ಅನುಸರಿಸಲಿದೆ ಎಂಬುದು ಸುಳ್ಳಾ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಇನ್ನು ಎಐಎಡಿಎಂ ಪಕ್ಷದೊಳಗಿನ ಸಮಸ್ಯೆ ಇಂದ ಬಳಲುತ್ತಿದ್ದು, ಇದೇ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳನ್ನೇ ಹುಟ್ಟುಹಾಕಿ ಬೆಳಸಲು ಯೋಜನೆ ರೂಪಿಸಿದೆ. ಇದರ ಭಾಗವಾಗಿಯೇ ಕಮಲ್ ಹಾಸನ್ ರಜನಿಕಾಂತ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಹೊಂದಾಣಿಕೆ ಮಾತುಗಳು ಕೇಳಿ ಬಂದಿದ್ದು ಎನ್ನುತ್ತಿದ್ದಾರೆ ತಮಿಳುನಾಡಿನ ರಾಜಕೀಯ ಪಂಡಿತರು.

Leave a Reply