ಮೋದಿ, ಯಡಿಯೂರಪ್ಪಂದು 90 ಪರ್ಸೆಟ್ ಕಮಿಷನ್ ಸರಕಾರ ಅಂದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದಲ್ಲಿ ಹಿಂದೆ ಆಳ್ವಿಕೆ ನಡೆಸಿದ ಬಿಜೆಪಿ ಸರಕಾರ ಎರಡೂ 90 ಪರ್ಸೆಂಟ್ ಕಮಿಷನ್ ಆಧಾರದ ಭ್ರಷ್ಟ ಸರಕಾರಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

 ಇತ್ತೀಚೆಗೆ ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಮೋದಿ ಅವರು ಸಿದ್ದರಾಮಯ್ಯ ಸರಕಾರನ್ನು ಹತ್ತು ಪರ್ಸೆಂಟ್ ಕಮಿಷನ್ ಸರಕಾರ ಎಂದು ಟೀಕಿಸಿದ್ದರು. ಇದಕ್ಕೆ ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಕುರಿತ ಚರ್ಚೆಗೆ ಉತ್ತರ ನೀಡುವ ಸಂದರ್ಭ ಬಳಸಿಕೊಂಡ ಸಿದ್ದರಾಮಯ್ಯನವರು, ನೀರವ್ ಮೋದಿ, ಲಲಿತ್ ಮೋದಿ ಅವರಂಥವರು ಬ್ಯಾಂಕ್ ಗಳಿಗೆ ಸಾವಿರಾರೂ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿ ಆಗಲು ಕೇಂದ್ರದ ಬಿಜೆಪಿ ಸರಕಾರದ ನೆರವೇ ಕಾರಣ.

ಕರ್ನಾಟಕದಲ್ಲಿ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತಿತರ ಮಂತ್ರಿ-ಮಹೋದಯರು 90 ಪರ್ಸೆಂಟ್ ಕಮಿಷನ್ ಪಡೆದಿದ್ದರಿಂದಲೇ ಜೈಲು ಪಾಲಾದರು. ಈಗ ಕೆಲವರು ನಾನಾ ನ್ಯಾಯಾಲಯಗಳಲ್ಲಿ ಮೊಕದ್ದಮೆ ಎದುರಿಸುತ್ತಿದ್ದು, ಬೇಲ್, ಪೆರೋಲ್ ಮೇಲೆ ಹೊರಗಿದ್ದಾರೆ ಎಂದು ಟೀಕಿಸಿದರು.

ಮೋದಿ ಮತ್ತಿತರ ಬಿಜೆಪಿ ಮುಖಂಡರ ರಾಜಕೀಯ ಹೇಳಿಕೆಗಳಿಗೆ ಸಾರ್ವಜನಿಕವಾಗಿಯೇ ಉತ್ತರ ನೀಡಬೇಕೆಂದಿದ್ದೆ. ಆದರೆ ಪ್ರತಿಪಕ್ಷ ಮುಖಂಡ ಜಗದೀಶ್ ಶೆಟ್ಟರ್ ಅದನ್ನು ಇಲ್ಲಿಯೂ ಪ್ರಸ್ತಾಪಿಸಿರುವುದರಿಂದ ನಾನು ಇಲ್ಲಿಯೇ ಉತ್ತರ ನೀಡುವುದು ಅನಿವಾರ್ಯವಾಗಿದೆ ಎಂದರು.
ನಾನು ಕೇಂದ್ರಕ್ಕಾಗಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗಾಗಲಿ ಲೆಕ್ಕ ಕೊಡಬೇಕಿಲ್ಲ. ರಾಜ್ಯದ ಜನತೆ ಮತ್ತು ಸದನಕ್ಕೆ ಲೆಕ್ಕ ಕೊಟ್ಟರೆ ಸಾಕು. ನನ್ನ ಸರಕಾರದ ವಿರುದ್ಧ ಪ್ರಭುತ್ವ ವಿರೋಧಿ ಅಲೆ ಇಲ್ಲ. ಸರಕಾರದ ಸಾಧನೆಗೆ ಜನ ಸ್ಪಂದಿಸಿರುವುದಕ್ಕೆ ಇದೇ ದೊಡ್ಡ ಸಾಕ್ಷಿ. ನಮ್ಮದು ದೇಶದ ನಂಬರ್ ಒನ್ ಉತ್ತಮ ರಾಜ್ಯ ಸರಕಾರ ಎಂದರು.

Leave a Reply