ರಾಜ್ಯಸಭೆಗೆ ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿದೆ ಚನ್ನಾರೆಡ್ಡಿ, ರೋಷನ್ ಬೇಗ್ ಹೆಸರು!

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಮಾರ್ಚ್ 23ಕ್ಕೆ ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ಕು ಸ್ಥಾನಗಳ ಚುನಾವಣೆ ನಡೆಯಲಿದೆ.ರಾಜ್ಯ ವಿಧಾನಸಭೆ ಚುನಾವಣೆ ಹವಾ ಹೆಚ್ಚುತ್ತಿರುವ ಹೊತ್ತಲ್ಲಿ ರಾಜ್ಯ ಸಭೆ ಚುನಾವಣೆ ರಂಗು ಕಳೆಗುಂದಿದೆ. ಈ ಬಾರಿ ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಹಾಲಿ ರಾಜ್ಯಸಭಾ ಸಂಸದರಾದ ರಾಜೀವ್ ಚಂದ್ರಶೇಖರ್, ರೆಹಮಾನ್ ಖಾನ್, ಬಸವರಾಜ ಪಾಟೀಲ್ ಸೇಡಂ ಮತ್ತು ಕೆ.ರಾಮಕೃಷ್ಣ ಅವರ ಅವಧಿ ಏಪ್ರಿಲ್ 2ರಂದು ಮುಕ್ತಾಯವಾಗಲಿದೆ. ಇದರಿಂದ ತೆರವಾಗಲಿರುವ ಸ್ಥಾನಗಳಿಗೆ ಮಾರ್ಚ್ 23ರಂದು ಚುನಾವಣೆ ನಡೆಯಲಿದೆ.

ರಾಜ್ಯದ 224 ಶಾಸಕರ ಸಂಖ್ಯಾಬಲದಲ್ಲಿ ಚಿಕ್ಕಮಾದು, ಪುಟ್ಟಣ್ಣಯ್ಯ ಮತ್ತು ಖಮರುಲ್ ಇಸ್ಲಾಂ ನಿಧನರಾಗಿದ್ದು, ಉಳಿದಂತೆ ಮಾನಪ್ಪ ವಜ್ಜಲ್, ಆನಂದ್ ಸಿಂಗ್, ಶಿವರಾಜ್ ಪಾಟೀಲ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಏಳು ಸ್ಥಾನ ಕಡಿಮೆಯಾಗಲಿವೆ.

ಇದರೊಂದಿಗೆ ಖಾಲಿ ಇರುವ ನಾಲ್ಕು ಸ್ಥಾನಗಳ ಪೈಕಿ 3ರನ್ನು ಕಾಂಗ್ರೆಸ್ ತನ್ನ ಜೇಬಿಗೆ ಇಳಿಸಿಕೊಳ್ಳಲಿದೆ. ಈ ಮೂರು ಸ್ಥಾನಗಳನ್ನು ಯಾರು ತುಂಬಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಚನ್ನಾರೆಡ್ಡಿ, ರೋಷನ್ ಬೇಗ್, ರೆಡ್ಡಿ ವೀರಣ್ಣ, ರಾಣಿ ಸತೀಶ್ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ. ರೆಹಮಾನ್ ಖಾನ್ ಈಗಾಗಗಲೇ ತಲಾ ಮೂರು ಬಾರಿ ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಅವರ ಬದಲಿಗೆ ರೋಷನ್ ಬೇಗ್ ಅವರಿಗೆ ಅವಕಾಶ ನೀಡುವ ಚಿಂತನೆ ನಡೆದಿದೆ. ರೋಷನ್ ಬೇಗ್ ಪುತ್ರ ರೆಹಾನ್ ಅವರನ್ನು ಶಿವಾಜಿನಗರ ವಿಧಾನ ಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಎಲ್ಲಾ ತಯಾರಿ ನಡೆಸುತ್ತಿರುವ ಹೊತ್ತಲ್ಲಿ ರೋಷನ್ ಅವರನ್ನು ರಾಜ್ಯಸಭೆಗೆ ಕಳಿಸುವುದು ಕೈ ನಾಯಕರ ಪ್ಲಾನ್.

Leave a Reply