ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಸಿದ್ರಾಮಯ್ಯ ಭ್ರಷ್ಟಾಚಾರದ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್:

‘ರಾಜ್ಯ ಅಭಿವೃದ್ಧಿ ಹಾದಿಯಲ್ಲಿ ಮುನ್ನುಗ್ಗುತ್ತಿದ್ದು, ಇತರೆ ರಾಜ್ಯಗಳಿಗಿಂತ ನಂ.1 ಆಗಿದೆ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು ಅದು 90 ಪರ್ಸೆಂಟ್ ಸರ್ಕಾರ…’ ಇದು ಬಜೆಟ್ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಅಬ್ಬರಿಸಿದ ಪರಿ.

ಬಜೆಟ್ ಚರ್ಚೆ ಮೇಲೆ ಮುಖ್ಯಮಂತ್ರಿಗಳು ಉತ್ತರ ನೀಡಲು ಆರಂಭಿಸುತ್ತಿದ್ದಂತೆ ಬಾವಿಗಿಳಿದ ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ರಾಮಯ್ಯ, ಟೀಕಾ ಪ್ರಹಾರ ನಡೆಸಿದ್ದು ಹೀಗೆ…

‘ಬಿಜೆಪಿ ನಾಯಕರಂಥಹ ಪುಂಡರು, ಮತಿಗೆಟ್ಟವರು, ಭ್ರಷ್ಟಾಚಾರಿಗಳು ಬೇರಾರು ಇಲ್ಲ. ಕೇಂದ್ರದಲ್ಲಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ 90 ಪರ್ಸೆಂಟ್ ಸರ್ಕಾರವಾಗಿದೆ. ಮಲ್ಯ, ನೀರವ್ ಮೋದಿ, ಲಲಿತ್ ಮೋದಿ ದೇಶದ ಹಣ ಕೊಳ್ಳೆ ಹೊಡೆದು ಪರಾರಿಯಾಗಲು ಬಿಟ್ಟಿದ್ದಾರೆ. ಇವರೆಲ್ಲರೂ ಪ್ರಧಾನಿ ಮೋದಿಗೆ ಆಪ್ತರು. ನರೇಂದ್ರ ಮೋದಿ ಭ್ರಷ್ಟಾಚಾರದ ಪೋಷಕರಾಗಿದ್ದಾರೆ. ಇನ್ನೂ ಲೋಕಪಾಲ್ ನೇಮಿಸದ ಅವರು ಗುಜರಾತ್ ಸಿಎಂ ಆಗಿದ್ದಾಗ ಲೋಕಾಯುಕ್ತ ನೇಮಕ ಮಾಡಲಿಲ್ಲ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ.

ಇನ್ನು ವಿಧಾನಸಭೆಯಲ್ಲಿ ಶುಕ್ರವಾರದ ಪ್ರಮುಖ ಹೈಲೈಟ್ಸ್ ಗಳು ಹೀಗಿವೆ…

  • ಬಿಜೆಪಿ ಘೋಷಣೆ, ಗದ್ದಲಗಳ ಮಧ್ಯೆ ಸಿದ್ರಾಮಯ್ಯ ಬಜೆಟ್ ಚರ್ಚೆ ಮೇಲೆ ಚುಟುಕು ಉತ್ತರ ನೀಡಿ ಭಾಷಣ ಮೊಟಕುಗೊಳಿಸಿದರು.
  • ಕಾಂಗ್ರೆಸ್ ಶಾಸಕ ರಾಜಣ್ಣ, ಉದ್ಯಮಿ ನೀರವ್ ಮೋದಿ ವಿಷಯ ಪ್ರಸ್ತಾಪಿಸಿದ್ದು ಬಿಜೆಪಿ ಶಾಸಕರ ಕಣ್ಣು ಕೆಂಪಾಗಿಸಿತು.
  • ಸಿಎಂ ಭಾಷಣದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನೀರವ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ನಾಯಕರು ಲೋಕಸಭೆಯಲ್ಲಿ ಪ್ರಶ್ನಿಸಲಿ. ಮುಖ್ಯಮಂತ್ರಿಗಳದ್ದು ಸಂತೆ ಭಾಷಣವಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿ ಕಾರಿದರು.
  • ಬಿಜೆಪಿ ಪ್ರತಿಭಟಿಸಿ ಬಜೆಟ್ ಪ್ರತಿಯ ಹೇಳೆ ಹರಿದು ಹಾಕಿದರು. ಆಗ ಸಿದ್ದರಾಮಯ್ಯ ಇದು ಸಂಸದೀಯ ವ್ಯವಸ್ಥೆಗೆ ಸೂಕ್ತ ವರ್ತನೆಯಲ್ಲ. ಭಾಷಣಕ್ಕೆ ಅ ಡ್ಡಿ ಪಡಿಸಬಾರದು. ನೀವೇ ಬಾವಿಗಿಳಿದು ಗೂಂಡಾಗಿರಿ ಮಾಡುತ್ತಿದ್ದೀರಿ. ನೀವು ಶಾಸಕರಾಗಲು ಅಸಮರ್ಥರು. ಕೊನೆಯ ಅಧಿವೇಶನ ಇಲ್ಲವಾಗಿದ್ದರೆ ನಿಮ್ಮನ್ನು ಸದನದಿಂದ ಎತ್ತಿ ಹೊರಗೆ ಹಾಕಿಸುತ್ತಿದ್ದೆ. ನಿಮ್ಮನ್ನು ಸದನದಿಂದ ಆಚೆ ಹಾಕಿಸಬೇಕಾ? ಎಂದು ಗದರಿದರು.
  • ಉಳಿದಂತೆ ಬಿಜೆಪಿ ಪ್ರತಿಭಟನೆ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ 2018-19 ಸಾಲಿನ ಆಯವ್ಯಯ ಅಂದಾಜು ಮೊತ್ತಕ್ಕೆ ಅನುಮೋದನೆ.
  • 2017-18ನೇ ಸಾಲಿನ ₹ 5,351.49 ಕೋಟಿ ಪೂರಕ ಅಂದಾಜಿಗೆ ಅನುಮೋದನೆ.
  • 2018-19 ಹಣಕಾಸು ಭಾಗ ವರ್ಷ (3 ತಿಂಗಳು) ₹ 71,663.13 ಕೋಟಿ ಖರ್ಚು ವಹಿಸುವುದಕ್ಕೆ ಧನವಿನಿಯೋಗ ವಿಧೇಯಕ ಮಂಡಿಸಿ, ಅಂಗೀಕಾರಗೊಳಿಸಲಾಯಿತು.
  • 2018ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕಕ್ಕೂ ಅನುಮೋದನೆ.

Leave a Reply