ಹ್ಯಾರಿಸ್ ರಾಜಕೀಯ ಭವಿಷ್ಯಕ್ಕೆ ಸಮಾಧಿ ಕಟ್ಟಿದ ಪುತ್ರ ನಲಪಾಡ್!

ಡಿಜಿಟಲ್ ಕನ್ನಡ ಟೀಮ್:

ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರಿಸ್ ಒತ್ತಡದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಮಗ ನಲಪಾಡ್ ಮಾಡಿದ ಎಡವಟ್ಟಿನಿಂದ ಬಿಡಿಸಿಕೊಳ್ಳಲು ಎಲ್ಲಾ ತಂತ್ರಗಳನ್ನೂ ಬಳಸುತ್ತಿದ್ದು, ಕೊನೆಯದಾಗಿ ಮಲ್ಯ ಆಸ್ಪತ್ರೆಗೂ ಪತ್ನಿ ಸಮೇತ ಭೇಟಿ ನೀಡಿದ್ದಾರೆ. ವಿದ್ವತ್ ತಂದೆ ಲೋಕನಾಥನ್ ಬಳಿ ರಾಜಿಯಾಗೋಣ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ. ಹ್ಯಾರಿಸ್ ಪತ್ನಿ ಕೂಡ ನಮ್ಮದು ತಪ್ಪಾಗಿದೆ. ಈ ಬಾರಿ ಜಾಮೀನು ಸಿಗದಂತೆ ಆಕ್ಷೇಪಣಾ ಅರ್ಜಿ ಹಾಕದಂತೆ ಪರಿಪರಿಯಾಗಿ ಬೇಡಿಕೊಂಡರು. ಆದರೆ ಇದ್ಯಾವುದಕ್ಕೂ ಮನಸ್ಸು ಕರಗಿಸಿಕೊಳ್ಳದ ಲೋಕನಾಥನ್, ಯಾವುದೇ ಭರವಸೆ ನೀಡದೆ ಮೌನಕ್ಕೆ ಶರಣಾಗಿದ್ದರು. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಅನ್ನೋ ಹಾಗೆ ಬರಿಗೈಲಿ ಹ್ಯಾರಿಸ್ ದಂಪತಿ ಮನೆ ಸೇರಿದ್ದಾರೆ.

ಶಾಂತಿನಗರವನ್ನು ಮಹಾರಾಜನ ಹಾಗೆ ಆಳುತ್ತಾ, ನಿರಂತರವಾಗಿ ಗೆಲುವು ಸಾಧಿಸಿದ್ದು ಹ್ಯಾರಿಸ್ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಇದೀಗ ನಡೆದಿರುವ ಅಷ್ಟೂ ವಿಚಾರಗಳಿಗೆ ಅಧಿಕಾರದ ಮದವೇ ಕಾರಣವಾಗಿದ್ದು, ಈ ಬಾರಿ ಅಧಿಕಾರ ಕೈ ತಪ್ಪುವ ಲಕ್ಷಣಗಳು ಗೋಚರಿಸುತ್ತಿವೆ. ತನ್ನ ಮಗನ್ನನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದ ಶಾಸಕನಿಗೆ ಮತ ನೀಡಬೇಕಾ ಎಂದು ಪ್ರಶ್ನಿಸಲು ಬಿಜೆಪಿ, ಜೆಡಿಎಸ್ ಸಜ್ಜಾಗಿದ್ದು, ಈ ಬಾರಿ ಶಾಂತಿ ನಗರ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಿಂದ ಜಾರಿ ಹೋಗುವ ಸಂಭವ ಹೆಚ್ಚಾಗಿದೆ. ಶಾಂತಿನಗರ ಜನ ಹಣ ಕೊಟ್ಟವರಿಗೆ ಮತ ಹಾಕ್ತಾರೆ ಅನ್ನೋ ಮಾತುಗಳಿಗೂ ಈ ಬಾರಿ ಉತ್ತರ ಸಿಗಲಿದೆ ಅನ್ನೋದು ಸ್ಥಳೀಯವಾಗಿ ಕೇಳಿ ಬರುತ್ತಿರುವ ಮಾತು. ಕ್ಷೇತ್ರದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದ ಶಾಸಕ ಹ್ಯಾರಿಸ್ ಹಾಗೂ ಆತನ ಮಗನಿಗೆ ಬುದ್ದಿ ಕಲಿಸಲೇ ಬೇಕು ಅಂತ ಮತದಾರ ಪ್ರಭುಗಳು ನಿರ್ಧಾರ ಮಾಡಿದ್ದಾರೆ. ಈ ಮುನ್ಸೂಚನೆ ಕಾಂಗ್ರೆಸ್ ಕಚೇರಿ ಬಾಗಿಲನ್ನು ಬಡಿದಿದೆ ಎನ್ನಲಾಗಿದ್ದು, ಇದೆಲ್ಲದರಿಂದ ಮುಕ್ತಿ ಪಡೆಯಲು ಕೈ ಪಾಳಯ ರಣತಂತ್ರ ರೂಪಿಸಿದೆ.

ಶಾಸಕ ಹ್ಯಾರಿಸ್ ಗೆ ಟಿಕೆಟ್ ಕೊಟ್ಟರೂ ಗೆಲ್ಲೋದು ಕಷ್ಟ ಅನ್ನೋದು ಕಾಂಗ್ರೆಸ್ ಗೂ ಗೊತ್ತಾಗಿದೆ. ಜೊತೆಗೆ ಟಿಕೆಟ್ ಕೊಟ್ಟರೆ ಬಿಜೆಪಿ, ಜೆಡಿಎಸ್ ಆರೋಪಗಳನ್ನು ಚುನಾವಣೆಯಲ್ಲಿ ಸಮರ್ಥನೆ ಮಾಡಿಕೊಳ್ಳೋ ಜಂಜಾಟ ಬೇಡ ಎಂದು ತೀರ್ಮಾನಿಸಿರುವ ಪಕ್ಷದ ನಾಯಕರು, ಹ್ಯಾರಿಸ್ ಬದಲಾಗಿ ಅದೇ ಸಮುದಾಯಕ್ಕೆ ಸೇರಿದ ರಿಜ್ವಾನ್ ಅರ್ಷದ್ ಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದಾರೆ. ರಿಜ್ವಾನ್ ಅರ್ಷದ್ ಈ ಹಿಂದೆ ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸ್ಪರ್ಧಿಯಾಗಿದ್ದು ಕ್ಷೇತ್ರ ಪರಿಚಯ ಇದೆ ಅನ್ನೋ ಕಾರಣಕ್ಕೆ ರಿಜ್ವಾನ್ ರನ್ನು ಆಯ್ಕೆ ಮಾಡುವುದು, ಹಾಗು ವಿರೋಧ ಪಕ್ಷಗಳ ಪ್ರಖರ ದಾಳಿಯಿಂದ ತಪ್ಪಿಸಿಕೊಳ್ಳುವುದು ಕಾಂಗ್ರೆಸ್ ರಣನೀತಿಯಾಗಿದೆ. ತಪ್ಪು ಮಾಡಿದವರ ರಕ್ಷಣೆ ಮಾಡೋದು ನಮ್ಮ ಸಂಸ್ಕೃತಿಯಲ್ಲ. ಹ್ಯಾರಿಸ್ ಮಗ ತಪ್ಪು ಮಾಡಿದ್ರಿಂದ ಅವರಿಗೆ ಟಿಕೆಟ್ ನೀಡಿಲ್ಲ. ಮಗ ನಲಪಾಡ್ ನನ್ನು ಕಾಂಗ್ರೆಸ್ ಪಕ್ಷದಿಂದಲೇ ಆರು ವರ್ಷಗಳ ಉಚ್ಛಾಟನೆ ಮಾಡಲಾಗಿದೆ ಎನ್ನುತ್ತಾ ಪ್ರಚಾರ ನಡೆಸುವುದು. ಜೊತೆಗೆ ಬಿಜೆಪಿ ತಪ್ಪು ಮಾಡಿ ಜೈಲಿಗೆ ಹೋಗಿ ಬಂದವರನ್ನೇ ಸಿಎಂ ಅಭ್ಯರ್ಥಿ ಮಾಡಿಕೊಂಡಿದ್ದು ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಎದುರೇಟು ನೀಡಲು ಪಕ್ಕಾ ಪ್ಲಾನ್ ರೆಡಿಯಾಗಿದೆ ಅನ್ನೋದು ಬಲ್ಲ ಮೂಲಗಳ ಮಾಹಿತಿ. ಈ ಯೋಜನೆ ನಾಳೆ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸದ ವೇಳೆ ಫೈನಲ್ ಆಗಲಿದೆಯಂತೆ. ಒಟ್ಟಾರೆ ಹ್ಯಾರಿಸ್ ಸಾಮ್ರಾಜ್ಯ ಅಲುಗಾಡುತ್ತಿದ್ದು, ಪಟ್ಟಾಭಿಷೇಕಕ್ಕೆ ರಿಜ್ವಾನ್ ಅರ್ಷದ್ ಸಜ್ಜಾಗುತ್ತಿದ್ದಾರೆ.

Leave a Reply