ಮೋದಿ ಮಾಡದ್ದನ್ನ ಗೌಡರು ಮಾಡಿ ಸಾರಿದ ಸಂದೇಶವೇನು ?

ಮಣ್ಣಿನಮಗ, ರೈತನ ಮಗ ಹಳ್ಳಿಗಾಡಿನಿಂದ ಬಂದವನು ಎಲ್ಲರ ಕಷ್ಟಗಳು ನನಗೆ ಗೊತ್ತು ಎನ್ನುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಾನು ಶ್ರಮಜೀವಿ ಎನ್ನುವುದನ್ನು  ಎಷ್ಟೋ ಬಾರಿ ಸಾಧಿಸಿ ತೋರಿಸಿದ್ದಾರೆ. ಇಂದೂ ಕೂಡ ಅದನ್ನು ಮತ್ತೊಮ್ಮೆ ಜನರ ಮುಂದೆ ತೆರೆದಿಟ್ಟಿದ್ದಾರೆ. ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ 88ನೇ ಮಹಾಮಸ್ತಕಾಭಿಷೇಕ ಉದ್ಘಾಟನೆಗೆ ಬಂದಿದ್ದ ಗೌಡರು, ಇಂದು ಮತ್ತೆ ಪತ್ನಿ ಚನ್ನಮ್ಮ ಜೊತೆ ಆಗಮಿಸಿದ್ರು. ವಿಂಧ್ಯಗಿರಿ ಪರ್ವತವನ್ನು ಉರಿ ಬಿಸಿಲ ಝಳವನ್ನೂ  ಲೆಕ್ಕಿಸದೇ ಬರಿಗಾಲಲ್ಲೇ ಏರುವ ಮೂಲಕ 85ನೇ ವಯಸ್ಸಿನಲ್ಲೂ ತನ್ನ  ಶಕ್ತಿ ಏನೆಂಬುದನ್ನು ತೋರಿಸಿದ್ದಾರೆ . 50 ನಿಮಿಷಗಳಲ್ಲಿ ಬೆಟ್ಟವೇರಿದ ಗೌಡರು ಅಭಿಷೇಕ ಮುಗಿಸಿ 40 ನಿಮಿಷದಲ್ಲಿ ಬೆಟ್ಟವನ್ನು ಇಳಿದರು..
ವಿಂಧ್ಯಗಿರಿ ಬೆಟ್ಟ ಏರುವ ಮಾರ್ಗಮಧ್ಯೆ 3 ಕಡೆ ನಿಂತು ಸಣ್ಣ ವಿಶ್ರಾಂತಿ ಪಡೆದ ಗೌಡರು, ವೈದ್ಯಕೀಯ ಪರೀಕ್ಷೆಗೂ ಒಳಪಟ್ಟರು. ಬೆಟ್ಟವೇರಿ ಮೊದಲು ಬಾಹುಬಲಿಯ ಪಾದಗಳಿಗೆ ನಮಿಸಿ, ಬಳಿಕ ಅಟ್ಟಣಿಗೆ ಏರಿ ಹಾಲಿನ ಅಭಿಷೇಕ ಮಾಡಿದರು. ಗೌಡರೊಂದಿಗೆ ಪತ್ನಿ ಚನ್ನಮ್ಮ ಹಾಗು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾಥ್ ಕೊಟ್ರು.  ನಗುಮೊಗದಿಂದಲ್ಲೇ ಬೆಟ್ಟ ಇಳಿದ ಗೌಡರು, ಎಳನೀರು ಸೇವನೆ ಮಾಡಿ, ದೇವರ ಪ್ರೇರಣೆಯಿಂದ ನಾನು ಆನಂದವಾಗಿ ಬೆಟ್ಟ ಹತ್ತಿ ಮಹಾನುಭಾವನ ದರ್ಶನ ಮಾಡಿ ಇಳಿದಿದ್ದೇನೆ. ಬಾಹುಬಲಿ ಎಲ್ಲವನ್ನೂ ತೊರೆದು ವಿರಾಗಿಯಾಗಿ ಬೆಟ್ಟದ ಮೇಲೆ ನಿಂತಿದ್ದಾನೆ. ಆದರೆ ಇಂದು ಆಡಳಿತ ನಡೆಸುತ್ತಿರುವವರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಮುಂದೆಯಾದರೂ, ಅಧಿಕಾರ ಸಿಕ್ಕಿರುವುದು ಜನಸೇವೆಗಾಗಿ ಎಂದು ತಿಳಿದು, ಅಹಂ ತೊರೆದು ಜನಪರವಾಗಿ ಕೆಲಸ ಮಾಡಬೇಕು ಎಂದರು.
ಬರಿಗಾಲಲ್ಲೇ ಬೆಟ್ಟವೇರಿದ ದೇವೇಗೌಡರು ರಾಜಕೀಯ ನಾಯಕರಿಗೂ ಉತ್ತರ ಕೊಟ್ಟಿದ್ದಾರೆ. ಕಳೆದ ಫೆಬ್ರವರಿ 17 ರಂದು ಬೆಟ್ಟವೇರಿದ್ದ ಸಿಎಂ ಸಿದ್ದ ರಾಮಯ್ಯ, ಕಾಲಿಗೆ ಸಾಕ್ಸ್ ಬಳಸಿದ್ರು. ಅದೇ ರೀತಿ ಫೆಬ್ರವರಿ 19 ರಂದು ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬೆಟ್ಟ ಹತ್ತಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಮತ್ತೊಂದು ಕಡೆ ಬೆಟ್ಟಹತ್ತುವುದಿಲ್ಲ  ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುತ್ತಾರೆ  ಅನ್ನೋ ಮಾತುಗಳು ಹಾರಾಡಿದ್ದವು.  ಇಷ್ಟಲ್ಲದೆ  ಪ್ರಧಾನಿ ಮೋದಿ ಯಾವಾಗಲೂ ಯಾರೂ ಊಹಿಸದೇ ಇರುವುದನ್ನು ಮಾಡ್ತಾರೆ. ಇಲ್ಲೂ ಕೂಡ ಬೆಟ್ಟ ಏರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರೂ ಅಚ್ಚರಿಯಿಲ್ಲ ಅಂತ  ಕೆಲವು ಬಿಜೆಪಿ ನಾಯಕರೇ ಹೇಳಿಕೊಂಡಿದ್ರು‌. ಆದ್ರೆ ಮೋದಿ ಇದಾವುದನ್ನೂ  ಮಾಡದೆ  ಬಟನ್ ಒತ್ತಿ ಹೊಸ ಮೆಟ್ಟಿಲುಗಳ ಉದ್ಘಾಟನೆ ಮಾಡಿದರಷ್ಟೇ ಹೊರತು ಒಂದೇ ಒಂದು ಮೆಟ್ಟಿಲಿಗೂ ಕಾಲು ಸೋಕಿಸದೆ ಹೆಲಿಕಾಪ್ಟರ್ ಏರಿ ವಾಪಸ್ ಹೊರಟು ಹೋದ್ರು. ಇದೀಗ ಪ್ರಧಾನಿ ಮಾಡದೇ ಇದ್ದುದ್ದನ್ನು  84ನೇ ವಯಸ್ಸಿನಲ್ಲಿ ನಮ್ಮ ನೆಲದ ಮಣ್ಣಿನ ಮಗ ದೇವೇಗೌಡರು ಮಾಡಿ ತೋರಿಸುವ ಮೂಲಕ ನಿಮ್ಮ ಕೈಲಿ ಆಗದೆ ಇದ್ದುದ್ದನ್ನ ನಾನು ಮಾಡಬಲ್ಲೇ ಎಂದು ಸಾರಿ ಹೇಳಿದ್ದಾರೆ . ಅಷ್ಟೇ ಅಲ್ಲ  ಎದುರಾಳಿಗಳಿಗೂ ತಮ್ಮ ಪ್ರಬಲ ಇಚ್ಚಾಶಕ್ತಿಯ ಕಾವು ಎಂಥಾದ್ದು ಎನ್ನುವುದನ್ನು ತೋರಿಸಿದ್ದಾರೆ. ಜೊತೆಗೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ದೇವೇಗೌಡರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಯೇ ತೀರುತ್ತಾರೆ ಎಂಬ ಸಂದೇಶ ರವಾನಿಸಿದ್ದಾರೆ.

 

Leave a Reply