ಕಾಂಗ್ರೆಸ್ ಮಾನ ಕಳೆದ ಹ್ಯಾರಿಸ್ ಪೋಷಿತ ನಲಪಾಡ್ ರೌಡಿಸಂ!

ನಾವು ಇವರನ್ನು ವಿಧಾನಸಭೆಗೆ ಆರಿಸಿ ಕಳುಹಿಸುವುದು ಇವರ ಮಕ್ಕಳಿಂದ ಹಿಗ್ಗಾಮುಗ್ಗಾ ಬಡಿಸಿಕೊಳ್ಳೋಕಾ? ಶಾಸಕರಾದ ಮಾತ್ರಕ್ಕೆ ಕಾನೂನು ಇವರ ಮನೆ ಬಾಗಿಲಲ್ಲಿ ಬಸ್ಕಿ ಹೊಡೆಯಬೇಕಾ? ಅವರ ಮಕ್ಕಳಿಗೊಂದು ನ್ಯಾಯ? ಬೇರೆಯವರ ಮಕ್ಕಳಿಗೊಂದು ನ್ಯಾಯನಾ? ಮಕ್ಕಳನ್ನೇ ಹದ್ದುಬಸ್ತಿನಲ್ಲಿಡಲು ಆಗದಿದ್ದ ಮೇಲೆ ಸಮಾಜನಾ ಹೆಂಗೆ ರಕ್ಷಣೆ ಮಾಡ್ತಾನ್ರೀ? ಇವನ್ಯಾವ ಸೀಮೆ ಶಾಸಕಾನ್ರೀ..?
ಕಳೆದ ವಾರ ಬೆಂಗಳೂರಿನ ಯುಬಿ ಸಿಟಿ ಫರ್ಜಿ ಕೆಫೇಲಿ ಶುರುಮಾಡಿ ಅಲ್ಲಿನ ಪಾರ್ಕಿಂಗ್ ಲಾಟ್, ಕೊನೆಗೆ ಮಲ್ಯ ಆಸ್ಪತ್ರೆಯಲ್ಲೂ ಅಟ್ಟಾಡಿಸಿಕೊಂಡು ಉದ್ಯಮಿ ಪುತ್ರ ವಿದ್ವತ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ತನ್ನ ಗೂಂಡಾಪಡೆಯೊಂದಿಗೆ ಜೈಲು ಸೇರಿರುವ ರೌಡಿ ಮೊಹ್ಮದ್ ನಲಪಾಡ್ ತಂದೆ,  ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಬಗ್ಗೆ ಜನ ಮಾತಾಡಿಕೊಳ್ಳುತ್ತಿರುವುದರ ಸ್ಯಾಾಂಪಲ್ ಇದು. ‘ಮಗ ಮಾಡಿರೋ ತಪ್ಪಿಗೆ ಅಪ್ಪ ಏನು ಮಾಡ್ತಾನ್ರೀ’ ಅನ್ನೋ ಪ್ರಶ್ನೆ ಬರಬಹುದು. ಆದರೆ ಮಗ ತಪ್ಪು ಮಾಡಿದಾಗಲೆಲ್ಲ ಅದನ್ನ ಹೊಟ್ಟೆಗೆ ಹಾಕಿಕೊಂಡು, ಶಾಸಕ ಸ್ಥಾನದ ಅಧಿಕಾರ ಬಳಸಿ ರಕ್ಷಣೆ ಮಾಡುತ್ತಾ ಬಂದಿದ್ದರ ಪರಿಣಾಮವಾಗಿ ನಲಪಾಡ್ ಇವತ್ತು ‘ರೌಡಿಶೀಟರ್’ ಆಗೋ ಎಲ್ಲ ಅರ್ಹತೆ ಸಂಪಾದಿಸಿಕೊಂಡಿದ್ದಾನೆ. ಆ ಅರ್ಹತೆ ದಯಪಾಲಿಸಿದ ಕೀರ್ತಿ ಅವರಪ್ಪ ಹ್ಯಾರಿಸ್‌ಗೇ ಸಲ್ಲುತ್ತದೆ!
ಅನಗತ್ಯ ಹಾಗೂ ಕ್ಷುಲ್ಲಕ ಕಾರಣಕ್ಕೆ ವಿದ್ವತ್ ಮೇಲೆ ಸಾಯೋ ರೀತಿ ಹಲ್ಲೆ ನಡೆಸಿದ ಮಗನ ‘ಪರಾಕ್ರಮ’ ಗೊತ್ತಾದಾಗ ಹ್ಯಾರಿಸ್ ಹೇಳಿದ್ದು, ‘ಯಾವ ತಂದೆ-ತಾಯಿಗೂ ಮಕ್ಕಳು ಇಂಥ ಸ್ಥಿತಿ ತರಬಾರದು. ಅವನು ಮಾಡಿರೋದು ತಪ್ಪು. ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಆತನ ವಿರುದ್ಧ ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿ. ನಾನು ಅಡ್ಡಿಪಡಿಸುವುದಿಲ್ಲ. ನಾನು ಅವನಿಗೆ ಬುದ್ಧಿ ಹೇಳುತ್ತೇನೆ. ಇನ್ನೊಮ್ಮೆ ಹೀಗೆ ಮಾಡದಂತೆ ಅವನನ್ನು ತಿದ್ದುತ್ತೇನೆ’ ಎಂದು. ಕೇಡು ಅದಾಗೆ ಬಂದರೆ ಅದನ್ನು ವಿಧಿ ಹಣೆಗೆ ಕಟ್ಟಬಹುದು. ಆದರೆ ಕೈಯಾರೆ ಮಾಡಿಕೊಂಡರೆ ಅದು ಸ್ವಯಂಕೃತ ಅಪರಾಧವಾಗುತ್ತದೆ. ಇಲ್ಲಿ ಹ್ಯಾರಿಸ್‌ಗೆ ಕ್ಷಮೆ ಸಿಗುವಂಥ ತಪ್ಪನ್ನು ಅವರ ಮಗ ಮಾಡಿಲ್ಲ. ಅದಕ್ಕೂ ಮಿಗಿಲಾಗಿ ಕ್ಷಮೆಗೆ ಹ್ಯಾರಿಸ್ ಅರ್ಹರೂ ಅಲ್ಲ. ಏಕೆಂದರೆ ಅವರ ಮಗ ರೌಡಿಸಂ ಮಾಡಿರೋದು ಇದೇ ಮೊದಲೇನೂ ಇಲ್ಲ. ಹಲವಾರು ಬಾರಿ ಖಳನಾಯಕನ ಪಾತ್ರ ನಿರ್ವಹಿಸಿದ್ದಾನೆ. ಒಂದೆಡೆ ಮಾದಕ ದ್ರವ್ಯಗಳ ವ್ಯಸನದ ನಶೆ, ಮತ್ತೊದೆಡೆ ಅಪ್ಪನ ಶಾಸಕ ಸ್ಥಾನದಿಂದ ಬಳುವಳಿಯಾಗಿ ಬಂದ ಅಮಲು ಎರಡೂ ಸೇರಿ ‘ಇಮ್ಮಡಿ ಅಮಲುದಾರ’ನಾದ ನಲಪಾಡ್ ತನ್ನ ರೌಡಿ ಪಡೆಯೊಂದಿಗೆ ಸೇರಿ ಯುಬಿ ಸಿಟಿಯಲ್ಲೇ ಮೂರ್ನಾಲ್ಕು ಬಡಿದಾಟ ಮಾಡಿದ್ದಾನೆ. ಬೇರೆಡೆಯೂ ಈತನ ಇಂಥದ್ದೇ ‘ಸಾಹಸ’ ನಡೆದಿದೆ. ಎಲ್ಲವೂ ಕೊಲೆಯತ್ನದಂಥ ಪ್ರಕರಣಗಳೇ. ಆದರೆ ಅಪ್ಪನ ಅಧಿಕಾರ ಪೊಲೀಸ್ ಪ್ರಕರಣಗಳಿಂದ ಆತನನ್ನು ಬಚಾವು ಮಾಡಿದೆ.
ಈಗ ಅಗಾಧ ಪಶ್ಚಾತ್ತಾಪದಿಂದ ಪರಿತಪಿಸುತ್ತಿರುವಂತೆ ನಾಟಕ ಆಡುತ್ತಿರುವ ಹ್ಯಾರಿಸ್ ಹಿಂದೆಯೇ ಮಗನಿಗೆ ತಿದ್ದಿ ಬುದ್ಧಿ ಹೇಳಿದ್ದಿದ್ದರೆ ಅವನೂ ಜೈಲು ಪಾಲಾಗುತ್ತಿರಲಿಲ್ಲ. ಹ್ಯಾರಿಸ್ ಮರ್ಯಾದೆಯೂ ಬೀದಿಗೆ ಬೀಳುತ್ತಿರಲಿಲ್ಲ. ಮಗ ತಪ್ಪು ಮಾಡಿದಾಗಲೆಲ್ಲ ಪೊಲೀಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಪ್ರಕರಣ ದಾಖಲಾಗದಂತೆ ನೋಡಿಕೊಂಡದ್ದು ನಲಪಾಡನಲ್ಲೊಬ್ಬ ‘ನರರಾಕ್ಷಸ’ನ ರುದ್ರನರ್ತನಕ್ಕೆ ಇಂಬಾಯ್ತು. ಜತೆಗೆ ತನಗೆ ಬೇಕಾದ ಪೊಲೀಸ್ ಅಧಿಕಾರಿಗಳನ್ನು ತನ್ನ ಕ್ಷೇತ್ರದ ವ್ಯಾಪ್ತಿಗೆ ಬರೋ ಪೊಲೀಸ್ ಠಾಣೆಗಳಲ್ಲೆಲ್ಲ ನಿಯೋಜಿಸಿಕೊಂಡು ಮಗನ ಕುಕೃತ್ಯಕ್ಕೆ ರಕ್ಷಾಕವಚನಾಗಿ ನಿಂತದ್ದು ಹ್ಯಾರಿಸ್ ಮಾಡಿದ ಅಕ್ಷಮ್ಯ ಅಪರಾಧ. ಅದರ ಜತೆಗೆ ತಮಗಿರುವ ಪ್ರಭಾವ ಬೀರಿ ಅವನನ್ನು ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿಸಿದ್ದು ಮತ್ತೊದು ತಪ್ಪು. ಯೋಗ್ಯತೆ ಮತ್ತು ಪ್ರಭಾವದಿಂದ ಬರುವ ಅಧಿಕಾರದ ನಡುವೆ ಸಾಕಷ್ಟು ವ್ಯತ್ಯಾಸವಿರುತ್ತದೆ.
ಮೊದಲನೆಯದು ವಿನಯ ತಂದರೆ ಎರಡನೆಯದು ದರ್ಪ ತೊಡಿಸುತ್ತದೆ. ಮೊದಲೇ ಕ್ರೂರತ್ವ ಮೈಗೂಡಿದ್ದ ನಲಪಾಡ್‌ಗೆ ಅಹಂಕಾರ ನೆತ್ತಿಗೇರಲು ಬೇರೆ ಕಾರಣಗಳೇ ಬೇಕಿರಲಿಲ್ಲ. ‘ಏನು ಮಾಡಿದರೂ ಅಪ್ಪ ಬಿಡಿಸಿಕೊಂಡು ಬರುತ್ತಾನೆ, ಅವನಿರುವಾಗ ನನಗೇನು ಭಯ’ ಎಂಬ ಮದ ಯಾವಾಗ ತಲೆಗೆ ಹೊಕ್ಕಿತೋ ಆಗ ಆತನನ್ನು ಹಿಡಿಯುವವರೇ ಇಲ್ಲದಂತಾಯ್ತು. ಪುಂಡ- ಪೋಕರಿಗಳ ತಂಡ ಕಟ್ಟಿಕೊಂಡು ಮತ್ತಷ್ಟು ಗೂಂಡಾಗಿರಿಗೆ ಇಳಿದ. ಅವನು ಮಾಡುವ ಅನಾಚಾರಗಳ ರಕ್ಷಕನಾಗಿ ನಿಂತು ಈಗ ತನ್ನ ಸ್ಥಿತಿ ಯಾವ ತಂದೆಗೂ ಬರಬಾರದು ಎಂದು ಹಲುಬಿದರೆ ಯಾರು ತಾನೇ ನಂಬುತ್ತಾರೆ. ಕುಲಪಾತಕ ಮಗ ಅಪ್ಪನಿಗೆ ಯಾವ ಹೆಸರು ತರಬಹುದೋ ಅದನ್ನೇ ನಲಪಾಡ್ ತಂದಿದ್ದಾನೆ. ಅದರ ವಾರಸುದಾರರಾಗಲು ಹ್ಯಾರಿಸ್ ಕೂಡ ಅರ್ಹರಾಗಿದ್ದಾಾರೆ!
ಇಲ್ಲಿ ಇನ್ನೊದು ವಿಷಯ. ಹ್ಯಾರಿಸ್ ವಿಧಾನಸಭೆಯ ಒಳಗೆ ಮತ್ತು ಹೊರಗೆ ಕ್ಷಮೆ ಯಾಚಿಸುವಾಗ ಮಗನ ತಪ್ಪಿಗೆ ಕಾನೂನು ತನ್ನ ಕ್ರಮ ಜರುಗಿಸುತ್ತದೆ. ಇದರಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿದ್ದು ಬರೀ ನಾಟಕ, ಅದೊಂದು ಡಬಲ್ ಗೇಮ್ ಎನ್ನುವುದಕ್ಕೆ ಮತ್ತೊದು ನಿದರ್ಶನ ಇಲ್ಲಿದೆ. ಹ್ಯಾರಿಸ್ ಮಗನ ಪುಂಡಾಟಿಕೆ ಬರೀ ಅವರಪ್ಪನಿಗೆ ಮಾತ್ರವಲ್ಲ ಕಾಂಗ್ರೆಸ್ಸಿಗೂ ರಾಜಕೀಯವಾಗಿ ಒಂದಷ್ಟು ಡ್ಯಾಮೇಜ್ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಗಹನತೆ ಮತ್ತು ಬೆಳವಣಿಗೆ ಕುರಿತು ಚರ್ಚಿಸಲು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಳೆದ ಗುರುವಾರ ಕರೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಅಧಿಕಾರವ್ಯಾಪ್ತಿ ಮೀರಿ ಠಳಾಯಿಸಿದ ಹ್ಯಾರಿಸ್, ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಕಿಶೋರ ಚಂದ್ರ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ‘ಅವರು ಯಾಕ್ರೀ ವಿದ್ವತ್ ನೋಡಲು ಮಲ್ಯ ಆಸ್ಪತ್ರೆಗೆ ಹೋಗಬೇಕಿತ್ತು. ಅವರಿಗೂ ವಿದ್ವತ್‌ಗೂ ಏನು ಸಂಬಂಧ? ನನ್ನ ಮಗನ ವಿರುದ್ಧ 307 (ಕೊಲೆ ಯತ್ನ) ಕೇಸ್ ಹಾಕಿಸಿದ್ದಾರಲ್ಲಾ? ಎಷ್ಟು ಧೈರ್ಯ ಅವರಿಗೆ’ ಎಂದು ಪ್ರಶ್ನಿಸಿದ್ದಾರೆ. ಹೊರಗೆ ಹೇಳುವುದೊಂದು, ಒಳಗೆ ಮಾಡುವುದೊಂದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ಪೊಲೀಸ್ ತನಿಖೆಯಲ್ಲಿ ತಲೆ ತೂರಿಸುವುದಿಲ್ಲ ಎಂದು ಹೇಳಿದ್ದು ಬರೀ ಬೂಟಾಟಿಕೆ ಎಂದಂತಾಯಿತು. ಮೊದಲಿಗೆ ಈ ಸಭೆಗೆ ಹೋಗಲು ಹ್ಯಾರಿಸ್‌ಗೆ ಯಾವುದೇ ಅಧಿಕಾರ ಇಲ್ಲ. ಅದರಲ್ಲೂ ಒಬ್ಬ ಆರೋಪಿಯ ತಂದೆಯಾಗಿ ಅಲ್ಲಿ ಕಾಣಿಸಿಕೊಳ್ಳುವಂತೆಯೇ ಇಲ್ಲ. ಅಧಿಕಾರ ವ್ಯಾಪ್ತಿ ಮೀರಿ ಅಲ್ಲಿಗೆ ಬಂದಿದ್ದು ಅಲ್ಲದೇ ಪೊಲೀಸ್ ಅಧಿಕಾರಿಯೊಬ್ಬರ ಬಗ್ಗೆ ಈ ರೀತಿ ಏರು ಧ್ವನಿಯಲ್ಲಿ ಮಾತಾಡಿರುವುದು ಅವರೆಂಥ ಎರಡು ತಲೆಯ ಹಾವು ಎಂಬುದಕ್ಕೆ ಸಾಕ್ಷಿ. ಒಂದೊಮ್ಮೆ ಕಿಶೋರ್ ಚಂದ್ರ ಅವರು ಆ ಸಭೆಯಲ್ಲಿ ಇದ್ದಿದ್ದರೆ ಆಗುತ್ತಿದ್ದುದೇ ಬೇರೆ.
ಇಷ್ಟಕ್ಕೂ ವಿದ್ವತ್ ಅನ್ನು ಸಾಯುವ ಮಟ್ಟಕ್ಕೆ ಬಡಿದು ಹಣ್ಣುಗಾಯಿ-ನೀರುಗಾಯಿ ಮಾಡಿರುವ ರೌಡಿ ನಲಪಾಡ್ ವಿರುದ್ಧ ಕೊಲೆಯತ್ನ ಕೇಸ್ ಹಾಕದೇ ಚಿಲ್ಲರೆ (ಪೆಟ್ಟಿ) ಕೇಸ್ ಹಾಕಬೇಕಿತ್ತೇ? ದಾರಿಯಲ್ಲಿ ಹೋಗುತ್ತಿದ್ದವರ ಜುಟ್ಟೆಳೆದ, ಮಾರ್ಕೆಟ್‌ನಲ್ಲಿ ರಸ್ತೆ ಬದಿ ಮಲಗಿದ್ದ ಭಿಕ್ಷುಕರ ಚಿವುಟಿ ಓಡಿಹೋದ, ಕಾಲೇಜು ಮುಂದೆ ನಿಂತು ಹುಡುಗಿಯರನ್ನು ಚುಡಾಯಿಸುತ್ತಿದ್ದ (ಈವ್ ಟೀಸಿಂಗ್) ಅಂತ ಕೇಸು ಹಾಕಿ, ಐನೂರೋ-ಸಾವಿರ ರುಪಾಯಿಯೋ ದಂಡ ಕಟ್ಟಿ ಬಚಾವಾಗಲು ಸಹಕರಿಸಬೇಕಿತ್ತೇ? ಮೊದಲಿಗೆ ಫರ್ಜಿ ಕೆಫೆಯಲ್ಲಿ ಮುಷ್ಠಿಯಿಂದ ಗುದ್ದಿದ್ದಾರೆ. ಬಿಯರ್ ಬಾಟೆಲ್, ಲಟ್ಟ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ವಿದ್ವತ್‌ಗೆ ಗುಂಡಿಕ್ಕಲು ನಲಪಾಡ್ ಪಿಸ್ತೂಲು ತೆಗೆದಾಗ ಅವನ ಸಹಚರನೇ ಬೇಡ ಎಂದು ತಡೆದಿದ್ದಾನೆ. ಇದನ್ನು ಯಾರಾದರೂ ಅನಿರೀಕ್ಷಿತ ಅಥವಾ ಹಠಾತ್ ಉದ್ವೇಗದಿಂದ ಆದ ಘಟನೆ ಎನ್ನಲು ಸಾಧ್ಯವೇ? ಆ ರೌಡಿಗಳು ಇಷ್ಟಕ್ಕೇ ಸುಮ್ಮನಾಗಿಲ್ಲ. ಕೆಫೆಯಿಂದ ಪಾರ್ಕಿಂಗ್ ಸ್ಥಳಕ್ಕೆ ತೆರಳಿದ ವಿದ್ವತ್‌ನನ್ನು ಅಲ್ಲಿಗೂ ಅಟ್ಟಿಸಿಕೊಂಡು ಹೋಗಿ ಬಡಿದಿದ್ದಾರೆ. ಅಲ್ಲಿಗೆ ಅವರ ಉದ್ದೇಶ ವಿದ್ವತ್‌ನನ್ನು ಕೊಲ್ಲುವುದೇ ಆಗಿತ್ತು. ಹೋಗಲಿ ರೌಡಿಪಡೆ ಅಷ್ಟಕ್ಕೇ ಸುಮ್ಮನಾಯಿತೇ? ಸಾವು-ಬದುಕಿನ ನಡುವೆ ಹೋರಾಡುತ್ತಾ ಹೋಗಿ ಚಿಕಿತ್ಸೆಗೆಂದು ದಾಖಲಾದ ಮಲ್ಯ ಆಸ್ಪತ್ರೆಗೂ ನುಗ್ಗಿ ಥಳಿಸಿದೆ. ರಾಘವೇಂದ್ರ ರಾಜ್‌ಕುಮಾರ್ ಮಗ ತಡೆದಿದ್ದರಿಂದ ವಿದ್ವತ್ ಬಚಾವಾಗಿದ್ದಾನೆ. ಇಲ್ಲದಿದ್ದರೆ ಕೊಂದೇ ಹಾಕುತ್ತಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ಪೊಲೀಸರಿಗೆ ದೂರು ಕೊಟ್ಟರೆ ಕೊಂದು ಬಿಸಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ. ಇಂಥ ಲುಚ್ಚ, ಲಫಂಗರ ವಿರುದ್ಧ ಕೊಲೆಯತ್ನ ಕೇಸು ಹಾಕದೆ ಕಚಗುಳಿ ಇಟ್ಟ ಪ್ರಕರಣ ದಾಖಲಿಸಬೇಕಿತ್ತೇ?
ಸುಮ್ಮನೆ ಈ ಪ್ರಕರಣವನ್ನು ಉಲ್ಟಾ ಮಾಡಿ ನೋಡೋಣ. ಒಂದೊಮ್ಮೆ ವಿದ್ವತ್ ಜಾಗದಲ್ಲಿ ನಲಪಾಡ್ ಇದ್ದರೆ ಏನಾಗುತ್ತಿತ್ತು? ಒಂದೊಮ್ಮೆ ನಲಪಾಡ್‌ಗೆ ವಿದ್ವತ್ ಕಡೆಯವರು ಇದೇ ರೀತಿ ಹಿಗ್ಗಾಮುಗ್ಗಾ ಬಡಿದಿದ್ದರೆ ಆಗಲೂ ಹ್ಯಾರಿಸ್, ‘ ಏನೋ ಕೆಟ್ಟ ಗಳಿಗೆ, ಆಗಬಾರದ್ದು ಆಗಿಹೋಗಿದೆ, ವಿದ್ವತ್ ಕಡೆಯವರನ್ನು ಬಿಟ್ಟುಬಿಡೋಣ ಎಂದು ಹೇಳುತ್ತಿದ್ದರೆ? ವಿದ್ವತ್ ತಂದೆಗೆ ಹಸ್ತಲಾಘವ ಮಾಡಿ, ನೀವೇನೂ ಯೋಚನೆ ಮಾಡಬೇಡಿ, ಹೋಗಿ ಬನ್ನಿ ಎನ್ನುತ್ತಿದ್ದರೆ? ನಲಪಾಡ್‌ಗೆ ಯಾವಾನಾದರೂ ಸುಮ್ಮನೆ ಮುಟ್ಟಿದ್ದರೂ ಸಾಕು, ಮೊದಲಿಗೆ 307 ಕೇಸ್ ಜಡಿದು, ರೌಡಿಶೀಟರ್ ಲೇಬಲ್ ಹಚ್ಚಿ, ಅವನ ಬಟ್ಟೆ ಬಿಚ್ಚಿಸಿ, ಬರೀ ಕಾಚಾದಲ್ಲಿ ಸಿಟಿ ಮಾರುಕಟ್ಟೆಯಲ್ಲಿ ಮೆರವಣಿಗೆ ಮಾಡಿಸಿ ತಮ್ಮ ಪೌರುಷ ಮೆರೆಯುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನ ಬೇಡ.
 ಅಲ್ಲ, ಅಧಿಕಾರ ಇದ್ದವರಿಗೊಂದು ನ್ಯಾಯ? ಅಧಿಕಾರ ಇಲ್ಲದವರಿಗೊಂದು ನ್ಯಾಯವೇ? ಹ್ಯಾರಿಸ್ ಮಗನಿಗೊಂದು ಕಾನೂನು, ಬೇರೆಯವರಿಗೆ ಮತ್ತೊಂದು ಕಾನೂನೇ? ಜನ ಇವರನ್ನು ಆರಿಸಿ, ವಿಧಾನಸಭೆಗೆ ಕಳುಹಿಸಿರುವುದು ಇವರ ಮಕ್ಕಳ ಕೈಯಲ್ಲಿ ಒದೆ ತಿಂದು ಆಸ್ಪತ್ರೆ ಸೇರಲೆಂದೇ?!
ಕಿಶೋರ್ ಚಂದ್ರ ಅವರು ಮಲ್ಯ ಆಸ್ಪತ್ರೆಗೆ ಹೋಗಿ ವಿದ್ವತ್ ಸ್ಥಿತಿ ಪರಿಶೀಲಿಸದೇ ಹೋಗಿದ್ದರೆ ಬಡಿಸಿಕೊಂಡ ವಿದ್ವತ್ ವಿರುದ್ಧವೇ ಗೂಂಡಾಗಿರಿ ಕೇಸು ದಾಖಲಿಸಲು ಎಲ್ಲ ಸಿದ್ಧತೆಗಳು ಆಗಿದ್ದವು. ಆದರೆ ಅಲ್ಲಿಗೆ ಹೋದ ಕಿಶೋರ್ ಚಂದ್ರ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗಟ್ಟಿಯಾಗಿ ಹೇಳಿದ್ದರಿಂದ ನಲಪಾಡ್ ಗ್ಯಾಂಗ್ ವಿರುದ್ಧ ಕೊಲೆಯತ್ನ ಕೇಸು ದಾಖಲಾಗಿದೆ. ಇದೇ ಹ್ಯಾರಿಸ್ ಕಣ್ಣುರಿಗೆ ಕಾರಣ. ತಮ್ಮ ಎಂಜಲು ಕಾಸು ತಿಂದುಕೊಂಡು, ತಮ್ಮ ಹಿಂದೆಯೇ ಬಕೆಟು ಹಿಡಿದುಕೊಂಡು ತಿರುಗುತ್ತಿದ್ದ ಕೆಲವು ಪೊಲೀಸ್ ಅಧಿಕಾರಿಗಳ ರೀತಿಯೇ ಎಲ್ಲರೂ ಇರುತ್ತಾರೆ ಎಂದು ಅವರು ಭಾವಿಸಿದ್ದರೇನೋ. ಆದರೆ ಅವರ ಲೆಕ್ಕಾಚಾರ ಕೆಲಸ ಮಾಡಿಲ್ಲ. ಬಡಿಸಿಕೊಂಡವರ ವಿರುದ್ಧವೇ ಕೇಸು ದಾಖಲಿಸಿ, ಪೊಲೀಸ್ ಇಲಾಖೆ ನಿಯತ್ತನ್ನು ಹ್ಯಾರಿಸ್ ಮತ್ತು ನಲಪಾಡ್ ಕಾಲಡಿ ಹಾಕಿ ಹೊಸಕಿ ಹಾಕಬೇಕೆಂದಿದ್ದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ವಿಜಯ್ ಹಡಗಲಿ ಕರ್ತವ್ಯಲೋಪದ ಮೇಲೆ ಅಮಾನತಾಗಲು ಮತ್ತದೇ ಕಿಶೋರ್ ಚಂದ್ರ ಅವರ ಕಟ್ಟುನಿಟ್ಟಿನ ಸೂಚನೆಯೇ ಕಾರಣ. ಇಂಥ ಅಧಿಕಾರಿಗೆ ಆವಾಜ್ ಹಾಕುವ ಮೂಲಕ ಹ್ಯಾಾರಿಸ್ ಸಂತೆಯಲ್ಲಿ ನಿಂತು ತಮ್ಮ ಬಟ್ಟೆಯನ್ನು ತಾವೇ ಬಿಚ್ಚಿಕೊಂಡಿದ್ದಾಾರೆ. ತಾವು ಆಡಿದ್ದೆಲ್ಲ ನಾಟಕ ಎಂಬುದನ್ನು ತಾವೇ ಸಾಬೀತುಪಡಿಸಿಕೊಂಡಿದ್ದಾಾರೆ.
ಪ್ರಕರಣ ಆದ ತಕ್ಷಣ ಹ್ಯಾರಿಸ್ ಹೇಳಿದ್ದು ನನ್ನ ಮಗನಿಗೆ ಬುದ್ಧಿ ಹೇಳುತ್ತೇನೆ, ಅವನನ್ನು ಸರಿದಾರಿಗೆ ತರುತ್ತೇನೆ ಎಂದು. ಯಾವುದು ಸರಿ ದಾರಿ? ಅವರಪ್ಪ ಹೇಳಿದ ಬುದ್ಧಿ ಮಾತು ಕೇಳಿದ್ದಿದ್ದರೆ ಕೋರ್ಟಲ್ಲಿ ತನ್ನ ವಿರುದ್ಧ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ಅವರನ್ನು ನಲಪಾಡ್ ನುಂಗುವ ಹಾಗೆ ಕೆಕ್ಕರಿಸಿ ನೋಡುತ್ತಿರಲಿಲ್ಲ. ಶ್ಯಾಮ್ ಸುಂದರ್ ಪೊಲೀಸರ ರಕ್ಷಣೆ ಕೋರಿ ನಿನ್ನಿಂದಾಗಿ ಜೈಲಿಗೆ ಬರಬೇಕಾಯಿತು ಎಂದು ದೂರಿದ ಸಹಚರ ಅಬ್ರಾಸ್‌ನನ್ನು ಪರಪ್ಪನ ಅಗ್ರಹಾರದ ಬ್ಯಾರಕ್‌ನಲ್ಲಿ ಹಿಡಿದು ಬಡಿಯುತ್ತಿರಲಿಲ್ಲ. ಪಾಪ, ಇದನ್ನೇ ತಾವು ಹೇಳಿಕೊಟ್ಟ ಬುದ್ಧಿ ಮಾತು ಎಂದು ಹ್ಯಾರಿಸ್ ಬಗೆದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಒಂದೋ ಅಪ್ಪ ಬುದ್ಧಿ ಹೇಳಿರುವುದಿಲ್ಲ, ಇಲ್ಲ ಮಗ ಅದನ್ನು ಕೇಳಿರುವುದಿಲ್ಲ. ಈ ಎರಡರಲ್ಲಿ ಯಾವುದೇ ಒಂದು ನಿಜವಾಗಿದ್ದರೂ ಅಪ್ಪ-ಮಗ ಇಬ್ಬರೂ ಸರಿಯಿಲ್ಲ ಅಂತಲೇ ಅರ್ಥ. ಕಳ್ಳರು, ಕಳ್ಳರು ಒಟ್ಟಿಗೆ ಸೇರಿಕೊಂಡು ಸಂತೆಗೆ ಹೋದಂತಾಗಿದೆ!
ಪುತ್ರವ್ಯಾಮೋಹ ಇರಬೇಕು. ಆದರೆ ಈ ರೇಂಜಿಗೆ ಅಲ್ಲ. ಮಕ್ಕಳು ಮಾಡೋ ಎಲ್ಲ ಹಲ್ಕಟ್ ಕೆಲಸಕ್ಕೆ ಅಪ್ಪಂದಿರು ಅಂಗೀಕಾರದ ಮುದ್ರೆ ಒತ್ತುತ್ತಾ ಹೋದರೆ, ತಾವೇ ರಕ್ಷಣಾ ಕವಚವಾಗಿ ನಿಂತರೆ ಅವರ ಭವಿಷ್ಯವನ್ನು ಅವರೇ ಕೈಯಾರೆ ಹಿಚುಕಿದಂತಾಗುವುದಿಲ್ಲವೇ? ಹ್ಯಾರಿಸ್ ಪುತ್ರವ್ಯಾಮೋಹ ಎಷ್ಟರ ಮಟ್ಟಿಗಿನದೆಂದರೆ, ‘ನಿಮ್ಮ ಮಗನ ಜತೆ 40 ಜನ ಇದ್ದರು. ಅವರು ನಲಪಾಡ್ ಮೇಲೆ ಅಟ್ಯಾಕ್ ಮಾಡೋ ಸಂಭವವಿತ್ತು. ಹೀಗಾಗಿ ನನ್ನ ಮಗನ ಗ್ಯಾಂಗ್ ನವರು ಆತ್ಮರಕ್ಷಣೆಗಾಗಿ ವಿದ್ವತ್ ಮೇಲೆ ಹಲ್ಲೆ ಮಾಡಿದ್ದಾರೆ. ಆಗಿದ್ದಾಗಿ ಹೋಯಿತು.  ಕೇಸು ವಾಪಸು ತೆಗೆದುಕೊಳ್ಳಿ, ನನ್ನ ಮಗನ ಭವಿಷ್ಯ, ನನ್ನ ರಾಜಕೀಯ ಭವಿಷ್ಯ ಎಕ್ಕುಟ್ಹೋಗುತ್ತದೆ’ ಎಂದು ಮಲ್ಯ ಆಸ್ಪತ್ರೆಯಲ್ಲಿ ವಿದ್ವತ್ ತಂದೆ ಕಾಲು ಹಿಡಿದುಕೊಳ್ಳಲು ಹೋಗಿದ್ದಾರೆ. ಸುಳ್ಳು ಹೇಳೋಕೆ ಒಂದು ಇತಿಮಿತಿ ಬೇಡವೇ? ಒಂದೊಮ್ಮೆ ವಿದ್ವತ್ ಜತೆ 40 ಜನ ಇದ್ದಿದ್ದರೆ ನಲಪಾಡ್ ಜತೆ ಇದ್ದ 15 ಮಂದಿಯನ್ನು ಸುಮ್ಮನೆ ಬಿಡುತ್ತಿದ್ದರೆ? ಅವರನ್ನು ಚಟ್ನಿ ಮಾಡುತ್ತಿರಲಿಲ್ಲವೇ? ಲೋಕನಾಥ್ ಇದಕ್ಕೆ ಜಪ್ಪಯ್ಯ ಅನ್ನಲಿಲ್ಲ ಅನ್ನೋದು ಬೇರೆ ಮಾತು. ‘ಏನಿದ್ದರೂ ಕೋರ್ಟ್‌ನಲ್ಲೇ ಬಡಿದಾಡೋಣ. ನನ್ನ ಮಗನನ್ನು ಉಳಿಸಿಕೊಳ್ಳುವ, ನೀನು ಮತ್ತು ನಿನ್ನ ಮಗನ ವಿರುದ್ಧ ಹೋರಾಡುವ ತಾಕತ್ತು ನನಗಿದೆ. ಆದರೆ ನಿನ್ನ ಮಗನಿಂದ ಹೀಗೇಯೆ ಒದೆ ತಿಂದು ನರಳಿರುವ ಹಲವಾರು ಅಮಾಯಕ ಜೀವಗಳ ಬಗ್ಗೆ ಎಂದಾದರೂ ಯೋಚಿಸಿದ್ದೀಯಾ? ಅವರಿಗೆ ಆಗಿರುವ ಅನ್ಯಾಯಕ್ಕೆ ಯಾರು ಹೊಣೆ?’ ಎಂದು ಹಾಕಿದ ಮರುಪ್ರಶ್ನೆಗೆ ಉತ್ತರವಿಲ್ಲದೆ ಹ್ಯಾರಿಸ್ ಮರಳಿದ್ದಾರೆ.
ನಿಜ, ವಿದ್ವತ್ ತಂದೆಗೆ ತಾಕತ್ತಿದೆ. ಹೀಗಾಗಿ ನಲಪಾಡ್ ಜೈಲು ಸೇರಿದ್ದಾನೆ. ನಲಪಾಡ್ ಪಾಪದ ಕೊಡ ತುಂಬಲು ವಿದ್ವತ್ ಪ್ರಕರಣ ಸಾಕ್ಷಿಯಾಗಬೇಕಾಯ್ತು. ಆದರೆ ಹಿಂದೆ ಈತನಿಂದ ಒದೆ ತಿಂದವರು ಏನಾಗಿರಬೇಡ? ನಲಪಾಡ್ ರಾಜಕೀಯ ಮತ್ತು ಪೊಲೀಸ್ ಅಪವಿತ್ರ ಮೈತ್ರಿಯಿಂದಾಗಿ ಅವರೆಲ್ಲ ಒದೆ ತಿಂದದ್ದೇ ಸೀರುಂಡೆ ಎಂದು ಸುಮ್ಮನಾಗಿದ್ದಾರೆ. ಆದರೆ ಎಲ್ಲಕ್ಕೂ ಒಂದು ಅಂತ್ಯ ಅಂತ ಇರಲೇಬೇಕಲ್ಲ. ವಿದ್ವತ್ ಪ್ರಕರಣ ಆ ಅಂತ್ಯಕ್ಕೊಂದು ಆದಿಯಾಗಿದೆ. ಚುನಾವಣೆ ಹೊಸ್ತಿಲಲ್ಲಿ ನಡೆದಿರುವ ಈ ಪ್ರಕರಣ ಬರೀ ಅಪ್ಪ-ಮಗನ ಭವಿಷ್ಯ, ರಾಜಕೀಯ ಭವಿಷ್ಯದ ಮೇಲಷ್ಟೇ ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಮೇಲೂ ಮಸಿ ಎರಚಿದೆ. ಪಕ್ಷದಿಂದ ನಲಪಾಡ್‌ನನ್ನು ಉಚ್ಛಾಟನೆ ಮಾಡುವ ಮೂಲಕ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮರ್ಯಾದೆ ಉಳಿಸಿಕೊಂಡಿದೆ. ಆದರೆ ಆಗಿರುವ ಡ್ಯಾಮೇಜ್ ಆ ಮರ್ಯಾದೆ ಮೀರಿದ್ದು!
ಹ್ಯಾರಿಸ್ ಏನೆಲ್ಲ ಪ್ರಭಾವದ ಮೂಲಕ ತಮ್ಮ ಮಗನನ್ನು ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ಅದರಲ್ಲಿ ಯಶಸ್ವಿಯೂ ಆಗಬಹುದು. ಆದರೆ ಒಂದು ಮಾತು ಮಾತ್ರ ನಿಜ. ತಮ್ಮ ಮಗನಿಗೆ ಮೆತ್ತಿಕೊಂಡಿರುವ ಕೆಸರಿನ ಮೇಲೆ ಅವರೆಂದೂ ಒಳ್ಳೆಯ ಹೆಸರು ಕೆತ್ತಿಕೊಳ್ಳಲು ಸಾಧ್ಯವಿಲ್ಲ!
ಲಗೋರಿ : ಬೀದಿ ಹೆಣವಾದ ರೌಡಿಗಳೆಲ್ಲರೂ ‘ಮದಾಂಧ’ ಇತಿಹಾಸದ ಹೀರೋಗಳೇ!

Leave a Reply