ಡಿಜಿಟಲ್ ಕನ್ನಡ ಟೀಮ್:
‘ಭಯೋತ್ಫಾದನೆ ವಿರುದ್ಧ ಹೋರಾಟದಲ್ಲಿ ಭಾರತ ಬೆಲೆಕಟ್ಟಲಾದ ಪಾಲುದಾರ’ ಇದು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಅಮೆರಿಕ ಭಾರತಕ್ಕೆ ನೀಡಿರುವ ಪ್ರಶಂಸೆ.
ಇಸ್ಲಾಮಿಕ್ ಉಗ್ರ ಸಂಘಟನೆ ಮಟ್ಟಹಾಕುವ ಕುರಿತಾಗಿ ನಿರ್ಧರಿಸಲು ಸೇರಿದ್ದ ಸಭೆ ಬಳಿಕ ಮಾತನಾಡಿದ ಅಮೆರಿಕದ ಭಯೋತ್ಫಾದನೆ ನಿಗ್ರಹ ಪದಾಧಿಕಾರಿ ನಥನ್ ಸೇಲ್ಸ್ ಹೇಳಿದಿಷ್ಟು…
‘ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಸಂಬಂಧ ಗಟ್ಟಿಯಾಗಿದೆ. ಈಗಾಗಲೇ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಭೇಟಿ ವೇಳೆ ಎರಡೂ ದೇಶಗಳ ಮೈತ್ರಿ ಬಲಶಾಲಿಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತ ಒಂದು ಬೆಲೆ ಕಟ್ಟಲಾಗದ ಪಾಲುದಾರನಾಗಿದೆ.’
ಭಾರತ ಭಯೋತ್ಪಾದಕ ಸಮಸ್ಯೆ ಎದುರಿಸುತ್ತಿದ್ದು, ಇದರ ವಿರುದ್ಧ ಹೋರಾಡಲು ಅಮೆರಿಕ ಕೈಜೋಡಿಸಲಿದೆ. ಶಂಕಿತ ಭಯೋತ್ಪಾದಕರಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲು ಅಮೆರಿಕ ಸಿದ್ಧವಿದೆ. ದಕ್ಷಿಣ ಏಷ್ಯಾದಲ್ಲಿ ಐಸಿಸ್ ಬೇರೂರಲು ಯತ್ನಿಸುತ್ತಿದೆ. ಇದಕ್ಕೆ ಬಾಂಗ್ಲಾದೇಶ ಜ್ವಲಂತ ಉದಾಹರಣೆ. ಜುಲೈ 2016ರ ಢಾಕಾ ದಾಳಿ ಇದಕ್ಕೆ ಸಾಕ್ಷಿ. ಜಾಗತಿಕ ಮಟ್ಟದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಲು ಪ್ರಯತ್ನಿಸುತ್ತಿರುವ ಐಸಿಸ್ನ ಖರಾಸನ್ ಮಾದರಿಯನ್ನು ಅಮೆರಿಕ ಹಿಂಬಾಲಿಸುತ್ತಿದೆ. ದಕ್ಷಿಣ ಏಷ್ಯಾದ ನಮ್ಮ ಪಾಲುದಾರ ದೇಶಗಳೊಂದಿಗೆ ಸಹಕಾರ ವೃದ್ಧಿಸಿಕೊಂಡು ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟದ ಬಗ್ಗೆ ಆಲೋಚಿಸುತ್ತಿದ್ದೇವೆ.’
ಭಾರತೀಯ ಸೈನಿಕರ ಭರ್ಜರಿ ಭೇಟೆ!
ಇತ್ತ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬಿಸಿ ಮುಟ್ಟಿಸಿದೆ. ಗುರುವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಇಂಡಿಯನ್ ಮುಜಹಿದೀನ್ ಉಗ್ರರನ್ನು ಹತ್ಯೆ ಮಾಡಿದೆ. ಜತೆಗೆ ಇದೇ ವೇಳೆ ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹೊಡೆದು ಹಾಕಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕ್ ಸೇನೆಗೆ ಪಾಠ ಕಲಿಸಿದೆ.