ಕಾರ್ತಿ ಆಯ್ತು, ಸಿಬಿಐನ ಮುಂದಿನ ಶಿಕಾರಿಯಾಗ್ತಾರ ಪಿ.ಚಿದಂಬರಂ?

ಡಿಜಿಟಲ್ ಕನ್ನಡ ಟೀಮ್:

ಐಎನ್ಎಕ್ಸ್ ಮೀಡಿಯಾದ ಹಣ ಅವ್ಯವಹಾರ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯ ಐದು ದಿನಗಳ ಸಿಬಿಐ ವಶಕ್ಕೆ ನೀಡಿದ ಬೆನ್ನಲ್ಲೇ ಸಿಬಿಐನ ಮುಂದಿನ ಶಿಕಾರಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಆಗ್ತಾರಾ ಎಂಬ ಪ್ರಶ್ನೆ ಮೂಡಿದೆ.

ಸದ್ಯದಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ, ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಮಾಧ್ಯಮದವರ ಮುಂದೆ ಮಾತನಾಡಿ, ಶೀಘ್ರದಲ್ಲೇ ಪಿ.ಚಿದಂಬರಂ ಸಹ ಕಾರ್ತಿ ಜತೆ ಸಿಬಿಐ ವಶದಲ್ಲಿರುತ್ತಾರೆ ಎಂಬ ಭವಿಷ್ಯ ನುಡಿದಿದ್ದಾರೆ. ಈಗ ಕಾರ್ತಿ ಅವರ ವಿಚಾರಣೆ ಬೆನ್ನಲ್ಲೇ ಚಿದಂಬರಂ ಅವರ ವಿಚಾರಣೆ ನಡೆಸಲು ಸಿಬಿಐ ಅಧಿಕಾರಿಗಳು ಚಿಂತನೆ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ, ಈ ಪ್ರಕರಣದಲ್ಲಿ ಪಿ.ಚಿದಂಬರಂ ಅವರು ಆರೋಪಿಯಲ್ಲದಿದ್ದರೂ, ಚಿದಂಬರಂ ಅಧಿಕಾರದಲ್ಲಿದ್ದಾಗ ಈ ಅವ್ಯವಹಾರ ನಡೆದಿದೆ. ಅಲ್ಲದೆ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲೂ ಚಿದಂಬರಂ ಅವರ ಹೆಸರು ಪ್ರಸ್ತಾಪವಾಗಿರುವ ಕಾರಣ ಅವರ ವಿಚಾರಣೆ ನಡೆಯಲಿದೆ. ಆದರೆ ಚಿದಂಬರಂ ಅವರನ್ನು ಬಂಧಿಸಿ ವಶಕ್ಕೆ ಪಡೆಯಲು ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿವೆಯೇ ಎಂಬುದು ದೊಡ್ಡ ಪ್ರಶ್ನೆ. ಕಾರ್ತಿ ವಿರುದ್ಧ ಇಂದ್ರಾಣಿ ಮುಖೆರ್ಜಾ ಅವರ ಹೇಳಿಕೆಯನ್ನು ಅಸ್ತ್ರವಾಗಿ ಬಳಸಲಾಗಿದೆ. ಆದರೆ ಚಿದಂಬರಂ ವಿರುದ್ಧ ಯಾವ ಅಸ್ತ್ರ ಬಳಸಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply