ಲಿಂಗಾಯತ ಪ್ರತ್ಯೇಕ ಧರ್ಮವೆಂಬ ಕಾಂಗ್ರೆಸ್ ಬ್ರಹ್ಮಾಸ್ತ್ರಕ್ಕೆ ತತ್ತರಿಸುತ್ತಾ ಬಿಜೆಪಿ?

ಡಿಜಿಟಲ್ ಕನ್ನಡ ವಿಶೇಷ:

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ರಾಜ್ಯದಲ್ಲಿ ದೊಡ್ಡ ಹೋರಾಟವನ್ನು ನಾವೆಲ್ಲರೂ ನೋಡಿದ್ದೇವೆ. ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ನೀರೆರೆದು ಪೋಷಣೆ ಮಾಡಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಈಗ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಪ್ರಯೋಗಿಸಿರುವ ಈ ಲಿಂಗಾಯತ ಪ್ರತ್ಯೇಕ ಧರ್ಮದ ಬ್ರಹ್ಮಾಸ್ತ್ರಕ್ಕೆ ಬಿಜೆಪಿ ತತ್ತರಿಸುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ಇದಕ್ಕೆ ಬಲವಾದ ಕಾರಣವಿದೆ. ಅದೇನೆಂದರೆ ಪ್ರತ್ಯೇಕ ಧರ್ಮದ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಆಯೋಗದ ಮೂಲಕ ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಇದೀಗ ವರದಿ ನೀಡಿದ್ದು, ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ, ವೀರಶೈವ ಕೂಡ ಧರ್ಮವಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಶಿಫಾರಸು ಮಾಡಿದೆ. ಈ ವರದಿ ಶೀಘ್ರದಲ್ಲೇ ಅಲ್ಪ ಸಂಖ್ಯಾತರ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ತಲುಪಲಿದ್ದು, ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ.

ಲಿಂಗಾಯತ ಪ್ರತ್ಯೇಕ ಧರ್ಮ ವರದಿ ಬಗ್ಗೆ ಈಗಾಗಲೇ ರಾಜಕೀಯ ನಾಯಕರು ಪರ ವಿರೋಧ ವಾದಿಸ ತೊಡಗಿದ್ದಾರೆ. ಬಿಜೆಪಿ ನಾಯಕರು ರಾಜ್ಯ ಸರ್ಕಾರವೇ ಮುಂದೆ ನಿಂತು ಜಾತಿ ಜಾತಿಗಳ ನಡುವೆ ಹುಳಿ ಹಿಂಡುವ ಕೆಲಸ ಮಾಡ್ತಿದೆ ಅಂತಾ ವಾಗ್ದಾಳಿ ಮಾಡಿದ್ರೆ, ಕಾಂಗ್ರೆಸ್ ಶಾಸಕರು, ಮಾಜಿ ಸಚಿವರೂ ಆದ ವೀರಶೈವ ಮಹಾಸಭಾ ಅಧ್ಯಕ್ಣ ಶಾಮನೂರು ಶಿವಶಂಕರಪ್ಪ, ಸರ್ಕಾರ ಸಮಿತಿ ರಚನೆ ಮಾಡಿದ ದಿನವೇ ನಮಗೆ ಗೊತ್ತಿತ್ತು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಆಗುತ್ತೆ ಅಂತ ಎಂದಿದ್ದಾರೆ. ಆದ್ರೆ ರಾಜ್ಯದ ಮುಖ್ಯಮಂತ್ರಿ ಮಾತ್ರ ಸಾವಧಾನದಿಂದ ಉತ್ತರಿಸಿದ್ದು, ಅಲ್ಪಸಂಖ್ಯಾತರ ಆಯೋಗಕ್ಕೆ ವರದಿ ಬಂದಿದೆ. ಸರ್ಕಾರಕ್ಕೆ ವರದಿ ಬಂದ ಬಳಿಕ ಆ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಲಿಂಗಾಯತ ಪ್ರತ್ಯೇಕ ಧರ್ಮದ ರೂವಾರಿಗಳಾದ ಎಂಬಿ ಪಾಟೀಲ್ ಹಾಗೂ ಮೌನ ನಗೆ ಬೀರಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವು ಬಿಜೆಪಿ ಸೇರಿದಂತೆ ಉಳಿದ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜೆಡಿಎಸ್ ಲಿಂಗಾಯತರ ಮತಗಳ ಮೇಲೆ ಅವಲಂಬಿಸಿದ ಕಾರಣಕ್ಕೆ ಹೆಚ್ಚೇನು ತಲೆ ಕೆಡಿಸಿಕೊಂಡಿಲ್ಲ. ಆದ್ರೆ ಬಿಜೆಪಿ ಮತಬ್ಯಾಂಕ್ ಲಿಂಗಾಯತರೇ ಆಗಿದ್ದರಿಂದ ಏನು ಮಾಡಿದರೂ ತೊಂದರೆ ಕಟ್ಟಿಟ್ಟ ಬುತ್ತಿ. ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸುವಂತಿಲ್ಲ. ವಿರೋಧಿಸಿದರೆ ಲಿಂಗಾಯತರಿಗೆ ಸಿಗಬೇಕಿದ್ದ ಸವಲತ್ತುಗಳು ಸಿಗುವುದಿಲ್ಲ, ಹಾಗಾಗಿ ಲಿಂಗಾಯತರು ಬಿಜೆಪಿಯಿಂದ ದೂರು ಉಳಿಯುತ್ತಾರೆ. ಲಿಂಗಾಯತ ಪ್ರತ್ಯೇಕ ಧರ್ಮವನ್ನು ಬೆಂಬಲಿಸಿದರೆ ಅದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ವೀರಶೈವ ಮಠಗಳ ಪ್ರಾಬಲ್ಯ ಇರುವ ಕಾರಣಕ್ಕೆ, ಆ ಮಠಗಳು ಹಾಗೂ ಭಕ್ತರು ವೀರಶೈವ ಪದ ಹೊರಟು ಹೋಗಲಿದೆ ಅನ್ನೋ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಲಿದೆ ಅನ್ನೋದು ಅವರ ಆತಂಕ ಹೀಗಾಗಿ ಬಿಜೆಪಿ ಪಕ್ಷವಂತು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯಿಂದ ದಿಕ್ಕೆಟ್ಟಿರೋದು ಸ್ಪಷ್ಟವಾಗಿದೆ.

Leave a Reply