ಸಿದ್ದರಾಮಯ್ಯ ಹಸ್ತಕ್ಕೆ ಮೆತ್ತಿಕೊಂಡ ಮಸಿ!

ಡಿಜಿಟಲ್ ಕನ್ನಡ ವಿಶೇಷ:

ಬೀದರ್ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿದ್ದ ಅಶೋಕ್ ಖೇಣಿ, ಇದೀಗ ತಾವೇ ಸ್ಥಾಪಿಸಿದ್ದ ಕರ್ನಾಟಕ ಮಕ್ಕಳ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸೋಮವಾರ ಬೆಳಗ್ಗೆ 11:30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಪಕ್ಷದಲ್ಲೇ ಸಾಕಷ್ಟು ವಿರೋಧ ಇದ್ದರೂ ಖೇಣಿ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಪಕ್ಷದ ಧ್ವಜ ನೀಡಿ ಖೇಣಿ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.

ಅಶೋಕ್ ಖೇಣಿ ಶಾಸಕರಾಗಿ ಏನು ಸಾಧನೆ ಮಾಡಿದ್ದಾರೆ ಅನ್ನೋದು ನಗಣ್ಯ. ಆದ್ರೆ ನೈಸ್ ಸಂಸ್ಥೆ ಸ್ಥಾಪಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ ಅನ್ನೋದು ಆರೋಪ ಪ್ರಮುಖ. ಈ ಬಗ್ಗೆ ಸರ್ಕಾರವೇ ಸದನ ಸಮಿತಿ ರಚನೆ ಮಾಡಿ ತನಿಖೆ ಕೂಡ ಮಾಡಿಸಿತ್ತು. ಆದರೆ ಸರ್ಕಾರಕ್ಕೆ ಶಿಫಾರಸು ಮಾಡಿರುವ ಸಮಿತಿಯ ವರದಿಯನ್ನು ಬದಿಗಿಟ್ಟು ಕೇವಲ ಪಕ್ಷದ ಫಂಡ್ ಗಾಗಿ ಸೇರ್ಪಡೆ ಮಾಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ‌

ಒಂದು ರೂಪಾಯಿ ಬಂಡವಾಳದಿಂದ ಆರಂಭವಾದ ನೈಸ್ ಸಂಸ್ಥೆ ರೈತರಿಂದ ಕಡಿಮೆ ಹಣಕ್ಕೆ ಭೂಮಿ ಖರೀದಿಸಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಂಡಿದೆ. ಆ ಹಣದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೇಣಿಗೆ ಹೆಚ್ಚಳಕ್ಕೆ ಮುಂದಾಗಿದೆ. ಇದರಿಂದ ಪಕ್ಷದ ಫಂಡ್ ಗೆ ಗಣನೀಯ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಅಕ್ರಮ ಮಾಡಿರುವ ಖೇಣಿಯನ್ನೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಮೇಲೆ ಅದ್ಯಾವ ಮುಖ ಇಟ್ಟುಕೊಂಡು ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತಾನಾಡ್ತಾರೆ ಅನ್ನೋ ಪ್ರಶ್ನೆ ಉದ್ಬವ ಆಗಿದೆ.

ಖೇಣಿ ವಿರುದ್ಧ ಆರೋಪಗಳು ಹೀಗಿವೆ…

  • ನೈಸ್ ಯೋಜನೆ ನಿಗದಿಯಾಗಿದ್ದಕ್ಕಿಂತ ಹೆಚ್ಚುವರಿ ಭೂಮಿ ಪಡೆದ ಆರೋಪ
  • ರಸ್ತೆ ನಿರ್ಮಾಣಕ್ಕೂ ಮುನ್ನವೇ ಟೌನ್ ಶಿಪ್ ಮಾಡಿ ಕೋಟ್ಯಂತರ ಹಣ ಸಂಗ್ರಹ
  • ಕಾಲಮಿತಿಯೊಳಗೆ ನೈಸ್ ಯೋಜನೆಯನ್ನು ಪೂರ್ಣಗೊಳಿಸದ ಆರೋಪ
  • ಸರ್ಕಾರದ ಜೊತೆಗಿನ ಒಪ್ಪಂದದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ ಆರೋಪ
  • ಕಾಂಕ್ರಿಟ್ ರಸ್ತೆ ನಿರ್ಮಾಣದ ಬದಲು ಕಳಪೆ ಗುಣಮಟ್ಟದ ಡಾಂಬಾರ್ ರಸ್ತೆ ನಿರ್ಮಾಣ
  • ರಸ್ತೆ ಯೋಜನೆ ಪೂರ್ಣಗೊಳ್ಳದೇ ಜನರಿಂದ ಟೋಲ್ ಸಂಗ್ರಹ, ಸಾವಿರಾರು ಕೋಟಿ ಅಕ್ರಮ
  • ರೈತರಿಂದ ಪಡೆದ ಭೂಮಿಯನ್ನೇ ಬಳಸಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿದ ಆರೋಪ

ಈ ಎಲ್ಲಾ ಆರೋಪಗಳನ್ನು ಸರ್ಕಾರವೇ ರಚಿಸಿದ್ದ ಸದನ ಸಮಿತಿ ಒಪ್ಪಿಕೊಂಡಿದ್ದು, ಅಕ್ರಮ ನಡೆದಿರೋದು ಸತ್ಯವೆಂದು ಹೇಳಿದೆ. ಅಲ್ಲದೆ,

  • ನೈಸ್ ಸಂಸ್ಥೆ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿಕೊಳ್ಳಬೇಕು.
  • ಇಡೀ ಯೋಜನೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು.
  • ಇದೂವರೆಗೂ ನಡೆದಿರುವ ಅವ್ಯವಹಾರಕ್ಕೆ ನೈಸ್ ಸಂಸ್ಥೆಯಿಂದ ದಂಡ ವಸೂಲಿ ಮಾಡಬೇಕು.

ಎಂದು ಸಮಿತಿ ವರದಿ ನೀಡಿದೆ. ಆದ್ರೆ ವರದಿಯನ್ನು ಸರ್ಕಾರ ಒಪ್ಪಿಕೊಂಡಿಯೂ ಇಲ್ಲ ತಿರಸ್ಕರಿಸಿಯೂ ಇಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಸರ್ಕಾರ ಖೇಣಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವ ಪರಿಣಾಮ ತುಂಬಾ ಹೆಚ್ಚಿದೆ. ಇದನ್ನು ಸಿದ್ದರಾಮಯ್ಯ ನೇತೃತ್ವದ ಪಕ್ಷ ಎದುರಿಸಲೇ ಬೇಕಿದೆ.

ನಮ್ಮ ಸರ್ಕಾರದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಎನ್ನುತ್ತಿದ್ದ ಸಿದ್ದರಾಮಯ್ಯ, ಇದೀಗ ಕಪ್ಪು ಚುಕ್ಕೆಯನ್ನೇ ಅಪ್ಪಿಕೊಂಡಿದ್ದಾರೆ. ನಾನೇನು ರೈತರ ಮಗನಲ್ಲವೇ ಎಂದು ವ್ಯಂಗ್ಯವಾಗಿ ದೇವೇಗೌಡರು ಹಾಗೂ ಬಿಎಸ್ ಯಡಿಯೂರಪ್ಪ ಗೆ ಟಾಂಗ್ ಕೊಡ್ತಿದ್ದ ಸಿಎಂ, ಇದೀಗ ರೈತರನ್ನು ಕೊಳ್ಳೆ ಹೊಡೆದ ಖೇಣಿಯನ್ನು ಸಮರ್ಥನೆ ಮಾಡಿಕೊಳ್ಳಬೇಕಾದ ಸ್ಥಿತಿಗೆ ಬಂದು ನಿಂತಿದ್ದಾರೆ. ಬಂದಲ್ಲಿ ಹೋದಲ್ಲಿ ಮೋದಿ ಆರೋಪಗಳಿಗೆ ಖಡಕ್ ಉತ್ತರ ಕೊಡುತ್ತಾ ರಾಜ್ಯದ ಜನರ ಮನಸ್ಸಲ್ಲಿ ಹೊಸ ಉತ್ಸಾಹ ಮೂಡಿಸಿದ್ದ ಸಿಎಂ ಸಿದ್ದರಾಮಯ್ಯ, ಹಸ್ತಕ್ಕೆ ಮಸಿ ಮೆತ್ತಿಕೊಂಡಿದ್ದು, ಮಸಿ ತೊಳೆದುಕೊಳ್ಳದಿದ್ದರೆ ಮೈಕೈಗೆ ಮಸಿ ಮೆತ್ತಿಕೊಂಡು ಜನ ದೂರ ತಳ್ಳುವ ಸ್ಥಿತಿಗೆ ಬಂದರೆ ಅಚ್ಚರಿಯಿಲ್ಲ.

Leave a Reply