ಮೋದಿ ಅಲೆ, ಸಿದ್ದು ನೆಲೆಗೆ ಕರ್ನಾಟಕ ‘ಪಣರಂಗ’!

ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಬೇಧವಿಲ್ಲದೆ ದೇಶದ ಹತ್ತೊಂಬತ್ತು ರಾಜ್ಯಗಳನ್ನು ಗೆದ್ದು ಬೀಗಿದ್ದ ಬಿಜೆಪಿ ಇದೀಗ ಈಶಾನ್ಯ ರಾಜ್ಯಗಳಿಗೂ ದಾಂಗುಡಿ ಇಟ್ಟಿದೆ. ತ್ರಿಪುರದಲ್ಲಿ ಇಪ್ಪತ್ತೈದು ವರ್ಷಗಳಿಂದ ಬೇರು ಬಿಟ್ಟಿದ್ದ ಭಾರತೀಯ ಕಮ್ಯೂನಿಸ್‌ಟ್‌ ಪಕ್ಷದ (ಸಿಪಿಎಂ) ‘ಕೆಂಪು ಕೋಟೆ’ಯನ್ನು ಕೆಡವಿ, ನಾಗಾಲೆಂಡ್‌ನಲ್ಲಿ ನಾಗಾಗಳ ಹೆಡೆಮುರಿ ಕಟ್ಟಿ ‘ಕೇಸರಿ ಪತಾಕೆ’ ಹಾರಿಸಿರುವ ಬಿಜೆಪಿ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ನಾಮಾವಶೇಷ ಮಾಡಿದೆ. ಇದೀಗ ದೇಶದ ಇಪ್ಪತ್ತೊಂದು ರಾಜ್ಯಗಳ ಲಗಾಮು ಹಿಡಿದಿರುವ ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತ ಅಭಿಯಾನದ ಸಂಕಲ್ಪ ಅನುಷ್ಠಾನದಲ್ಲಿ ಮತ್ತಷ್ಟು ಮೇಲಕ್ಕೆ ಚಿಮ್ಮಿದೆ. ದೇಶದ ಉದ್ದಗಲಕ್ಕೂ ಮೋಡಿ ಮಾಡುತ್ತಾ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಗೆ ಇದೀಗ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕ ಬಹುದೊಡ್ಡ ಸವಾಲಾಗಿ ನಿಂತಿದೆ.

ಇಲ್ಲಿ ಕರ್ನಾಟಕ ಕೈವಶ ಮಾಡಿಕೊಳ್ಳುವುದು ಬಿಜೆಪಿಗೆ ಹೇಗೆ ದೊಡ್ಡ ಸವಾಲಾಗಿ ಪರಿಣಮಿಸಿದೆಯೋ ಅದೇ ರೀತಿ ಕಾಂಗ್ರೆಸ್ಸಿಗೂ ತನ್ನ ತೆಕ್ಕೆಯಲ್ಲಿರುವ ರಾಜ್ಯವನ್ನು ಉಳಿಸಿಕೊಳ್ಳುವುದು ಕೂಡ. ಒಂದು ರಾಜ್ಯದ ಚುನಾವಣೆಗೆ ಅಲ್ಲಿನ ಆಡಳಿತರೂಢ ಸರಕಾರದ ಸಾಧನೆ- ವೈಫಲ್ಯದ ಜತೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಪ್ರಮುಖ ಅಳತೆಗೋಲಾಗುತ್ತದೆ. ಅದೇ ಕಾಲಕ್ಕೆ ಒಂದು ರಾಜ್ಯದ ಚುನಾವಣೆಗೆ ಮತ್ತೊಂದು ರಾಜ್ಯದ ಪರಿಸ್ಥಿತಿ, ಅಲ್ಲಿನ ಚುನಾವಣೆ ಫಲಿತಾಂಶ ಮಾನದಂಡ ಆಗದಿದ್ದರೂ ಅದು ಬೀರುವ ಪ್ರಭಾವವನ್ನು ತಳ್ಳಿ ಹಾಕಲು ಆಗುವುದಿಲ್ಲ. ಬಿಜೆಪಿ ಒಂದೊಂದೇ ರಾಜ್ಯವನ್ನು ಕಬಳಿಸುತ್ತಿರುವ ರೀತಿ-ರಿವಾಜುಗಳನ್ನು ಪರಾಮರ್ಶಿಸಿದಾಗ ಸ್ಥಳೀಯ ಬೆಳವಣಿಗೆಗಳನ್ನೂ ಮೀರಿದ ‘ರಾಜ ಕಾರಣ’ಗಳಲ್ಲಿ ಈ ಪ್ರಭಾವ ಪ್ರಮುಖ ಅಸ್ತ್ರವಾಗಿ ಚಿಮ್ಮಿರುವುದನ್ನು ಕಾಣಬಹುದು. ಹೀಗಾಗಿಯೇ ಕರ್ನಾಟಕ ಈಗ ಮೋದಿ-ಅಮಿತ್ ಶಾ ಜೋಡಿ ಅಲೆ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರಕಾರದ ನೆಲೆ ನಡುವಣ ‘ಪಣರಂಗ’!

ಪಶ್ಚಿಮ ಬಂಗಾಳದಲ್ಲಿ ಸತತ ಮೂವತ್ನಾಲ್ಕು ವರ್ಷಗಳ ಆಳ್ವಿಕೆ ನಡೆಸಿದ್ದ ಕಮ್ಯುನಿಸ್‌ಟ್‌ ಸರಕಾರವನ್ನು ಕಿತ್ತೊಗೆದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಎಲ್ಲಕ್ಕೂ ಒಂದು ಅಂತ್ಯವಿದೆ ಎಂಬುದನ್ನು ಸಾರಿತ್ತು. ಅಲ್ಲಿಯೂ ಖಾತೆ ತೆಗೆದಿರುವ ಬಿಜೆಪಿ ಸತತ ಇಪ್ಪತ್ತೈದು ವರ್ಷಗಳ ಕಮ್ಯುನಿಸ್‌ಟ್‌ ಆಡಳಿತವಿದ್ದ ತ್ರಿಪುರದಲ್ಲಿ ಇದೀಗ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಈ ಅಂತ್ಯವೆಂಬ ಗೂಟವನ್ನು ಎಲ್ಲಿ ಬೇಕಾದರೂ ನೆಡುವ ಛಾಪು ತನಗಿದೆ ಎಂಬುದನ್ನು ರುಜುವಾತುಪಡಿಸಿದೆ. ಅಷ್ಟೇ ಅಲ್ಲ ನಾಗಾಲೆಂಡ್‌ನಲ್ಲೂ ನಾಗಾ ಪೀಪಲ್ ಫ್ರಂಟ್ (ಪಿಎಫ್‌ಪಿ) ಜತೆ ಸರಕಾರ ರಚಿಸುತ್ತಿರುವ ಬಿಜೆಪಿ ಈಶಾನ್ಯ ಸೇರಿದಂತೆ ದೇಶದ ಯಾವ ಮೂಲೆಯಲ್ಲೂ ತಮ್ಮ ಅಶ್ವಮೇಧ ಯಾಗದ ಕುದುರೆ ಹಿಡಿಯುವವರಿಲ್ಲದೆ ಓಡಬಲ್ಲದು ಎಂಬುದನ್ನು ನಿರೂಪಿಸಿದೆ. ಬರೀ ಅಧಿಕಾರ ಹಿಡಿಯುವುದೊಂದೇ ಆಗಿದ್ದರೆ ಪರವಾಗಿರಲಿಲ್ಲ. ತ್ರಿಪುರ ಮತ್ತು ನಾಗಾಲೆಂಡ್‌ನಲ್ಲಿ ಕಾಂಗ್ರೆಸ್ ಶೂನ್ಯಸಂಪಾದನೆಗೆ ಸೀಮಿತವಾಗುವಂತೆ ನೋಡಿಕೊಂಡಿದೆ. 2013 ರಲ್ಲಿ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಕ್ರಮವಾಗಿ 10 ಮತ್ತು 8 ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಅದೇ ಕಾಲಕ್ಕೆ ಬಿಜೆಪಿ ತ್ರಿಪುರ ಹಾಗೂ ಮೇಘಾಲಯದಲ್ಲಿ ಒಂದೇ ಒಂದು ಸೀಟು ಗೆದ್ದಿರಲಿಲ್ಲ. ನಾಗಾಲೆಂಡ್‌ನಲ್ಲಿ ಒಂದು ಸ್ಥಾನ ಮಾತ್ರ ಗೆದ್ದಿತ್ತು. ತ್ರಿಪುರದಲ್ಲಂತೂ ಸ್ಪರ್ಧಿಸಿದ್ದ ಬಿಜೆಪಿಯ 50 ಅಭ್ಯರ್ಥಿಗಳ ಪೈಕಿ 49 ಮಂದಿ ಠೇವಣಿ ಕಳೆದುಕೊಂಡಿದ್ದರು. ಆದರೆ ಕೇವಲ ಐದೇ ವರ್ಷಗಳಲ್ಲಿ ಅದೆಂಥ ಅಭೂತಪೂರ್ವ ಬದಲಾವಣೆ! ತ್ರಿಪುರದಲ್ಲಿ 43, ನಾಗಾಲೆಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ 32 ಸ್ಥಾನಗಳನ್ನು ಕಬಳಿಸಿ ಕುಳಿತಿದೆ. ಮೇಘಾಲಯದಲ್ಲಿ ಎರಡು ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. 2013 ರಲ್ಲಿ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಗಿದ್ದ ಒಟ್ಟು ಸ್ಥಾನ ಕೇವಲ 1 ಮಾತ್ರ. ಈಗದು 57ಕ್ಕೆ ಜಿಗಿದಿದೆ. ಮೇಘಾಲಯದಲ್ಲೂ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬರುವ ಲಕ್ಷಣಗಳಿವೆ. ಎರಡು ಸ್ಥಾನ ಗೆದ್ದಿರುವ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಎನ್‌ಪಿಪಿ ಒಕ್ಕೂಟದ ಅಂಗವಾಗಲಿದೆ. ಬಿಜೆಪಿ ವಿಸ್ತರಣೆ ಪ್ರಮಾಣ ಎಲ್ಲರ ನಿರೀಕ್ಷೆ-ಸಮೀಕ್ಷೆಗಳನ್ನು ಪಕ್ಕಕ್ಕಿಟ್ಟು ಯಾವ ಮಟ್ಟಿಗೆ ಜಿಗಿದಿದೆ, ಕಾಂಗ್ರೆಸ್ ಅದ್ಯಾವ ರೀತಿ ಮಖಾಡೆ ಮಲಗಿದೆ ಎಂಬುದಕ್ಕೆ ಇದೊಂದು ಬೃಹತ್ ನಿದರ್ಶನ. ಈ ನಿದರ್ಶನವೇ ಕರ್ನಾಟಕ ಚುನಾವಣೆ ರಾಜಕೀಯ ಕುರಿತ ಕುತೂಹಲಕ್ಕೊಂದು ಕಾವು ಕೊಟ್ಟಿದೆ.

ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಏನು ಬೇಕಾದರೂ ವಾದ ಮಾಡಲಿ, ತಮ್ಮ ಪರವಾಗಿ ಎಷ್ಟು ಬೇಕಾದರೂ ಕೊಚ್ಚಿಕೊಳ್ಳಲಿ ಅಂತಿಮವಾಗಿ ಮಾತಾಡುವುದು ಅಂಕಿ-ಅಂಶಗಳೇ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದರೆ ಅದರ ಸೋಲಿನ ಸರಮಾಲೆಗೆ ಕಪ್ಪುಚುಕ್ಕಿಯೆಂಬಂತೆ ಅಲ್ಲೊಂದು ಇಲ್ಲೊಂದು ಗೆಲುವು ಅದರ ಗುಟುಕು ಜೀವ ಹಿಡಿದಿಟ್ಟುಕೊಂಡಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಥಿತಿ ಸುಧಾರಿಸಿದ ಮಾತ್ರಕ್ಕೆ ಅದು ಅಧಿಕಾರಕ್ಕೆ ಬಂದಂತೇನೂ ಅಲ್ಲ. ಕಳೆದುಕೊಂಡ ರಾಜ್ಯಗಳು, ಕಳೆದುಕೊಳ್ಳುತ್ತಿರುವ ರಾಜ್ಯಗಳನ್ನು ನೋಡಿದಾಗ ಕಾಂಗ್ರೆಸ್ ಬಗ್ಗೆ ಕಾಂಗ್ರೆಸ್ಸಿಗೇ ಅನುಕಂಪ, ಜುಗುಪ್ಸೆ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ. ಇನ್ನು ಉಳಿದವರ ವಿಚಾರ ಮಾತಾಡುವುದೇ ಬೇಡ. ಚಂಡಮಾರುತದಂತೆ ಬಿಜೆಪಿ ಗಾಳಿ ಎಲ್ಲೆಂದರಲ್ಲಿ ನುಗ್ಗುತ್ತಿದೆ. ತನ್ನ ಅಸ್ತಿತ್ವ ಇದ್ದ, ಇಲ್ಲದ ಎಲ್ಲ ಕಡೆ. ಅದು ಕರ್ನಾಟಕದಲ್ಲೂ ನುಗ್ಗುವುದೇ ಅಥವಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಈ ಗಾಳಿಯನ್ನು ಬಲೂನಿನಲ್ಲಿ ತುಂಬಿಡುವುದೇ ಅಥವಾ ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆೆಸ್ ಬುಡಕ್ಕೆ ಬಿಸಿನೀರು ಕಾಯಿಸುವುದೇ ಎಂಬ ಪ್ರಶ್ನೆಗಳನ್ನು ಪುಂಖಾನುಪುಂಖವಾಗಿ ಸಿಡಿಸುತ್ತಿದೆ.

ಹಾಗೇ ನೋಡಿದರೆ ಇಡೀ ದೇಶದ ರಾಜಕೀಯವೇ ಒಂದಾದರೆ ಕರ್ನಾಟಕದ ರಾಜಕೀಯವೇ ಒಂದು. ತುರ್ತು ಪರಿಸ್ಥಿತಿ ನಂತರ ಕೇಂದ್ರ ಮತ್ತು ಕರ್ನಾಟಕದಲ್ಲಿ ವಿಭಿನ್ನ ಸರಕಾರಗಳು ಆಳ್ವಿಕೆ ನಡೆಸಿದ್ದೇ ಹೆಚ್ಚು. ತುರ್ತು ಪರಿಸ್ಥಿತಿ ನಂತರ ಇಡೀ ದೇಶದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಆಳ್ವಿಕೆ ಚುಕ್ಕಾಣಿ ಹಿಡಿದಿತ್ತು. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಗೆಲ್ಲಿಸಿ ಕಳುಹಿಸುವ ಮೂಲಕ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮವನ್ನೂ ನೀಡಿತ್ತು. 1989 ರಲ್ಲಿ ವಿ.ಪಿ. ಸಿಂಗ್ ಅವರು ಕೇಂದ್ರದಲ್ಲಿ ಜನತಾ ಪರಿವಾರದ ಪ್ರಧಾನಿ ಆಗಿದ್ದಾಗ ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರಕಾರವಿತ್ತು. 1994 ರಲ್ಲಿ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಕರ್ನಾಟಕದಲ್ಲಿ ದೇವೇಗೌಡ ನೇತೃತ್ವದ ಜನತಾ ದಳ ಸರಕಾರವಿತ್ತು. ಅದೇ ರೀತಿ 1999 ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಕೇಂದ್ರದಲ್ಲಿ ಪ್ರಧಾನಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರಕಾರವಿತ್ತು. 2004 ರಲ್ಲಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಲ್ಪಾಯುಷಿ ಸರಕಾರ ಅಸ್ತಿತ್ವಕ್ಕೆ ಬಂದು, ಇಪ್ಪತ್ತೇ ತಿಂಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ಬಂತು. ಅದೇ ರೀತಿ 2008 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಮತ್ತೊಮ್ಮೆ ಆರಿಸಿ ಬಂದಾಗ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಆಡಳಿತದಲ್ಲಿರುವಾಗ 2014 ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಈಗ ಕೇಂದ್ರದಲ್ಲಿ ಮೋದಿ ಸರಕಾರದ ಆಡಳಿತಾವಧಿ ಇನ್ನೂ ಒಂದು ವರ್ಷ ಬಾಕಿ ಇರುವಾಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈಗ ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆ ನೆರಳಲ್ಲಿ ಬಿಜೆಪಿ ಗೆದ್ದು ಬರುತ್ತದೋ ಅಥವಾ ಹಳೇ ಪ್ರತೀತಿಗೆ ಇಂಬುಗೊಟ್ಟಂತೆ ಕಾಂಗ್ರೆಸ್ ಆರಿಸಿ ಬರುತ್ತದೋ ಎಂಬುದು ಕರ್ನಾಟಕದ ಮುಂದಿರುವ ಕುತೂಹಲಭರಿತ ಪ್ರಶ್ನೆ.

ಪ್ರತೀತಿಗಳು ಮುಂದುವರೆಯಬಹುದು ಅಥವಾ ಮುರಿಯಬಹುದು! ಏಕೆಂದರೆ ಎಲ್ಲದಕ್ಕೂ ಒಂದಲ್ಲ ಒಂದು ದಿನ ಅಂತ್ಯ ಎಂಬುದು ಬಂದೇ ಬರುತ್ತದೆ. ಆದರೆ ಆಗು-ಹೋಗುಗಳ ನಡುವೆ ತಮ್ಮ ಅಸ್ತಿತ್ವ ಸ್ಥಾಪನೆ ಹಾಗೂ ರಕ್ಷಣೆ ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಏಕಾಕಲಕ್ಕೆ ಎದುರಾಗಿರುವ ಸವಾಲು. ಈವರೆಗೂ ನಡೆದಿರುವ ಮಾಧ್ಯಮ ಸಮೀಕ್ಷೆಗಳು ಹಾಗೂ ಕರ್ನಾಟಕದಲ್ಲಿ ಕಾಣಿಸಿಕೊಳ್ಳದ ಆಡಳಿತವಿರೋಧಿ ಅಲೆ ಕಾಂಗ್ರೆಸ್ಸಿಗೆ ಒಂದು ಹಂತದವರೆಗೆ ಸಮಾಧಾನವನ್ನಂತೂ ತಂದಿದೆ. ಇದಕ್ಕೆ ಕಾಂಗ್ರೆಸ್ ಸರಕಾರದ ಸಾಧನೆಗಿಂತ ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿಯ ಕಳಪೆ ಪ್ರದರ್ಶನ ಕಾರಣ ಎನ್ನಲು ಯಾವುದೇ ಅಡ್ಡಿ ಇಲ್ಲ. ಒಂದು ಹೆಜ್ಜೆ ಮುಂದಿಟ್ಟರೆ ಐದು ಹೆಜ್ಜೆ ಹಿಂದಕ್ಕೆ ಸರಿಯುವಂತೆ ಮಾಡಿರುವ ಬಿಜೆಪಿ ರಾಜ್ಯ ನಾಯಕರ ಒಳಜಗಳ, ಗುಂಪುಗಾರಿಕೆ, ನಿರುತ್ಸಾಹ, ನಾಯಕತ್ವದ ಬಗ್ಗೆ ಹೊಮ್ಮದ ಒಲವು ಪರಿವರ್ತನೆಗೆ ವರಿಷ್ಠರು ಮಾಡಿದ ಹಲ ಪ್ರಯತ್ನಗಳು ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತಾಗಿದೆ. ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರೇ ಖುದ್ದು ಬಂದು ಬುದ್ಧಿ ಹೇಳಿದರೂ ತಿದ್ದಿಕೊಳ್ಳುವ ಮನಸ್ಥಿತಿ ನಾಯಕರಲ್ಲಿ ಕಂಡಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ಯಡಿಯೂರಪ್ಪ ರಾಜ್ಯಾದ್ಯಂತ ಸುತ್ತಿದರೂ ಪೂರಕ ನೆರವು ಸಹೋದ್ಯೋಗಿ ನಾಯಕರುಗಳಿಂದ ಸಿಕ್ಕಿಲ್ಲ. ಬಿಜೆಪಿ ಪರಿವರ್ತನಾ ಯಾತ್ರೆ ಆ ಪಕ್ಷಕ್ಕೆ ಒಂದಷ್ಟು ಚೈತನ್ಯ ತುಂಬುವ ಬದಲು ನಾಯಕರ ಭಿನ್ನಮತ ಪ್ರದರ್ಶನಕ್ಕೆ ವೇದಿಕೆ ಆಗಿ ಹೋಯಿತು. ಯಾತ್ರೆ ಉದ್ಛಾಟನಾ ಸಮಾರಂಭದಲ್ಲೇ ಇದನ್ನು ಕಣ್ಣಾರೆ ಕಂಡು ಹಣೆ ಚಚ್ಚಿಕೊಂಡ ಅಮಿತ್ ಶಾ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿದ್ದರು. ರಾಜ್ಯ ನಾಯಕರನ್ನು ನೆಚ್ಚಿಕೊಂಡರೆ ಪ್ರಯೋಜನವಿಲ್ಲ ಎಂಬುದು ಮನವರಿಕೆ ಆದ ನಂತರ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ರಾಷ್ಟ್ರ ನಾಯಕರೇ ಚುನಾವಣೆ ಪ್ರಚಾರದ ಲಗಾಮು ಹಿಡಿದು ನಿಂತಿದ್ದಾರೆ. ಮೂರು ತಿಂಗಳಲ್ಲಿ ಮೂರ್ನಾಲ್ಕು ಬಾರಿ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಚುನಾವಣೆ ಮುಗಿಯುವುದರೊಳಗೆ ಮತ್ತಷ್ಟು ಬಾರಿ ಭೇಟಿಗೆ  ನಿರ್ಣಯಿಸಿದ್ದಾರೆ.

ಇದರ ಮಧ್ಯೆ ಪವಾಡ ಸದೃಶ ರೀತಿಯಲ್ಲಿ ಮುಂದುವರೆದಿರುವ ಮೋದಿ ಅಲೆ, ಅಸ್ತಿತ್ವವೇ ಇಲ್ಲದಿದ್ದ ಈಶಾನ್ಯ ರಾಜ್ಯಗಳಲ್ಲೂ ಆಳ್ವಿಕೆ ಹಿಡಿಯುವ ಮಟ್ಟಕ್ಕೆ ಚಿಮ್ಮಿ ಬೆಳೆದಿರುವ ರೀತಿ ಈಗಾಗಲೇ ಬಿಜೆಪಿ ಅಧಿಕಾರದ ರುಚಿ ನೋಡಿರುವ ಕರ್ನಾಟಕದಲ್ಲೂ ಮರುಕಳಿಸುವುದೆಂಬ ವಿಶ್ವಾಸ ಆ ಪಕ್ಷದ ಕಾರ್ಯಕರ್ತರದ್ದು. ಅವರು ಬಿಜೆಪಿ ಗಾದಿ ಯಾನಕ್ಕೆ ನಂಬಿರುವುದು ರಾಜ್ಯ ನಾಯಕರನ್ನಲ್ಲ, ಬದಲಿಗೆ ರಾಷ್ಟ್ರೀಯ ನಾಯಕರನ್ನು. ರಾಜಕೀಯ ಪರಿಸ್ಥಿತಿ, ಚುನಾವಣೆ ಸಮೀಕ್ಷೆ ಸ್ಥಿತಿಗತಿಗಳು ಹೀಗೇ ಇರುತ್ತವೆ ಎಂದು ಹೇಳುವಂತಿಲ್ಲ. ರಾಜಕೀಯ ನಾನಾ ಆಯಾಮಗಳಿಗೆ ಅನುಗುಣವಾಗಿ ತಿಂಗಳು-ತಿಂಗಳೂ, ವಾರ-ವಾರಕ್ಕೂ ಬದಲಾಗುತ್ತಾ ಹೋಗುತ್ತದೆ. ಇವತ್ತಿದ್ದದ್ದು ನಾಳೆ ಇಲ್ಲ. ಈ ಸ್ಥಿತಿ ಬದಲಾವಣೆಗೂ ಮೋದಿ ಮತ್ತು ಅಮಿತ್ ಶಾ ಮಾಡಬಹುದಾದ ಪವಾಡವನ್ನೇ ಬಿಜೆಪಿ ನೆಚ್ಚಿಕೊಂಡಿದೆ. ಈ ನಾಯಕದ್ವಯರೇ ಬಿಜೆಪಿಗೆ ಶ್ರೀರಕ್ಷೆ. ಇಂಥ ಸನ್ನಿವೇಶದಲ್ಲಿ ಬಂದಿರುವ ಮೋದಿ-ಅಮಿತ್ ಶಾ ಜೋಡಿ ಪ್ರೇಣಿತ ಈಶಾನ್ಯ ರಾಜ್ಯಗಳ ಚುನಾವಣೆ ಗೆಲುವು ಬಿಜೆಪಿ ಆತ್ಮಬಲವನ್ನು ಮತ್ತಷ್ಟು ಹಿಗ್ಗಿಸಿದೆ.

ಇನ್ನೊಂದೆಡೆ ಬಿಜೆಪಿ ರಾಜ್ಯ ನಾಯಕರಷ್ಟೇ ಅಲ್ಲ, ರಾಷ್ಟ್ರೀಯ ನಾಯಕರ ಮೇಲೂ ಅಮರಿಕೊಂಡು ಬಿದ್ದಿರುವ ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ಪ್ರಚಾರದ ದೃಷ್ಟಿಯಿಂದ ‘ತಾರಾಗಿರಿ’ ನಾಯಕ. ಪ್ರಚಾರ ಪ್ರಕಾರಗಳಲ್ಲೂ ಅವರದೇ ಪಾರಮ್ಯ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಂತೂ ಸಿದ್ದರಾಮಯ್ಯ ಅವರನ್ನು ಯದ್ವಾ-ತದ್ವಾ ಹೊಗಳಿದ್ದಾರೆ. ಅಷ್ಟೇ ಅಲ್ಲದೆ ಅವರೊಂದಿಗೆ ಹೋಲಿಸಿ ಪ್ರಧಾನಿ ಮೋದಿ ಅವರನ್ನು ಇನ್ನಿಲ್ಲದಂತೆ ಅಣಕ ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಮೋದಿ ಅವರು ಸಿದ್ದರಾಮಯ್ಯ ಅವರಿಂದ ಕಲಿಯುವುದು ಬೇಕಾದಷ್ಟಿದೆ ಎಂದು ಶ್ಲಾಘಿಸುವ ಮೂಲಕ ಮೋದಿ ಮಟ್ಟಕ್ಕೆ ಸಿದ್ದರಾಮಯ್ಯ ಅವರನ್ನು ಎಟುಕದಷ್ಟು ಮೇಲಕ್ಕೆ ಏರಿಸಿಟ್ಟಿದ್ದಾರೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ, ಅವರೇ ಮುಂದಿನ ಬಾರಿಯೂ ಸಿಎಂ ಅಭ್ಯರ್ಥಿ ಎಂದು ಕಡ್ಡಿತುಂಡು ಮಾಡಿದಂತೆ ಖಡಾಖಂಡಿತವಾಗಿ ಹೇಳಿದ್ದಾರೆ. ಇದರಿಂದ ಸಿದ್ದರಾಮಯ್ಯನವರೂ ಪುಳಕಗೊಂಡಿದ್ದಾರೆ. ಆದರೆ ಪಕ್ಷದ ಇತರೆ ನಾಯಕರ ಈರ್ಷೆಗೆ ಇದು ಕಾರಣವಾಗಿದೆ. ಹೊಟ್ಟೆಯಲ್ಲಿ ಕಳ್ಳಿಹಾಲು ಸುರುವಿತಂದಾಗಿರುವ ಈ ನಾಯಕರು ಮೇಲೆ ಸಿದ್ದರಾಮಯ್ಯ ಅವರನ್ನು ಹೊಗಳುತ್ತಲೇ, ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಲೇ ಒಳಗೊಳಗೇ ಕೆಂಡ ಕಾರುತ್ತಿದ್ದಾರೆ. ಆದರೆ ಇದ್ಯಾವುದೂ ಸಿದ್ದರಾಮಯ್ಯನವರ ಆತ್ಮವಿಶ್ವಾಸವನ್ನು ಕುಗ್ಗಿಸಿಲ್ಲ.

ಆದರೆ ಇಲ್ಲಿ ಒಂದು ಮಾತು ಸತ್ಯ. ಹಿಂದೆ ಎಸ್.ಎಂ. ಕೃಷ್ಣ ಸರಕಾರವಿದ್ದಾಗಲೂ ಕಾಂಗ್ರೆಸ್ಸೇ ಮತ್ತೆ ಅಧಿಕಾರಕ್ಕೆ ಬರುತ್ತದೆ, ಕೃಷ್ಣ ಅವರೇ ಮುಂದಿನ ಬಾರಿಯೂ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಚುನಾವಣೆ ಪೂರ್ವ ಸಮೀಕ್ಷೆಗಳೂ ಅದನ್ನೇ ಹೇಳಿದ್ದವು. ಆದರೆ ಫಲಿತಾಂಶ ಬಂದಾಗ ಆಗಿದ್ದೇ ಬೇರೆ. ನಿರೀಕ್ಷೆಗಳೆಲ್ಲ ಹುಸಿಯಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್ ಶಾಸಕಾಂಗದ ಆಯ್ಕೆಯಾಗಿದ್ದ ಎಸ್.ಎಂ. ಕೃಷ್ಣ ಬದಲು ಮಿತ್ರಪಕ್ಷ ಜೆಡಿಎಸ್ ನಾಯಕ ದೇವೇಗೌಡರ ಅಣತಿಯಂತೆ ಧರ್ಮಸಿಂಗ್ ಮುಖ್ಯಮಂತ್ರಿ ಆದರು. ರಾಜಕೀಯ ಪಗಡೆಯಲ್ಲಿ ಏನೂ ಬೇಕಾದರೂ ಆಗಬಹುದು ಎಂಬುದಕ್ಕೆ ಇಂಥ ಅನೇಕ ನಿದರ್ಶನಗಳಿವೆ. ಅದೇ ಕಾಲಕ್ಕೆ ಇದಕ್ಕೆ ವ್ಯತಿರಿಕ್ತ ಬೆಳವಣಿಗೆಗಳಿಗೂ ಕರ್ನಾಟಕ ರಾಜಕೀಯ ರಂಗ ಸಾಕ್ಷಿಯಾಗಿದೆ. ಸದ್ಯಕ್ಕೆ ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶ ಇಂಥ ನಿರೀಕ್ಷೆಗಳಿಗೆಗೊಂದು ಸವಾಲಾಗಿ ನಮ್ಮ ಕಣ್ಣ ಮುಂದೆ ನಿಂತಿದೆ.

ಲಗೋರಿ : ಅಲೆಯುವ ಅಲೆಗೆ ನಿರೀಕ್ಷೆಗಳೇ ಸವಾಲು!

Leave a Reply