ಬಿಜೆಪಿ ಜತೆ ಗುರುತಿಸಿಕೊಳ್ಳೋದು ಉಪೇಂದ್ರರಿಗೆ ಪೂರಕವೋ ಮಾರಕವೋ?

ಡಿಜಿಟಲ್ ಕನ್ನಡ ವಿಶೇಷ:

ರಾಜಕೀಯ ಸಾಕು ಪ್ರಜಾಕೀಯ ಬೇಕು ಎನ್ನುತ್ತಿರೋ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಪೆಟ್ಟು ತಿನ್ನುತ್ತಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೂಲಕ ವ್ಯವಸ್ಥೆ ಬದಲಿಸಲು ಮುಂದಾಗಿದ್ದ ಉಪೇಂದ್ರ ಈಗ ಆ ಪಕ್ಷದಲ್ಲಿ ಹೊಂದಾಣಿಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಪಕ್ಷದಿಂದ ಹೊರ ಬರುವ ಮಾತುಗಳು ದಟ್ಟವಾಗಿವೆ.

ಇದು ರಾಜಕೀಯ ವ್ಯವಸ್ಥೆಯಲ್ಲಿ ಉಪೇಂದ್ರರಿಗೆ ಸಿಗುತ್ತಿರುವ ಮೊದಲ ಕಹಿ ಅನುಭವ. ಅದಕ್ಕಿಂತ ಹೆಚ್ಚಾಗಿ ಹೇಳುವುದಾದರೆ ಮೊದಲ ಪಾಠ! ಈ ಬೆಳವಣಿಗೆಯಿಂದ ಎಷ್ಟು ಪಾಠ ಕಲಿತಾರೆ ಹಾಗೂ ಮುಂದಿನದಿನಗಳಲ್ಲಿ ಅದನ್ನು ಹೇಗೆ ರೂಢಿಸಿಕೊಳ್ಳುತ್ತಾರೆ ಎಂಬುದು ಮುಂದೆ ಕಾದು ನೋಡಬೇಕು. ಕೆಪಿಜೆಪಿಯಲ್ಲಿ ಬಿರುಕು ಉಪೇಂದ್ರರ ಅಸಮಾಧಾನ ಸುದ್ದಿ ಬರುತ್ತಿದ್ದಂತೆ ಒಂದು ವದಂತಿ ಕೂಡ ಕೇಳಿಬರುತ್ತಿದೆ. ಅದು ಉಪೇಂದ್ರ ಬಿಜೆಪಿ ಜತೆ ಕೈಜೋಡಿಸ್ತಾರಂತೆ ಎಂದು.

ಉಪ್ಪಿ ರಾಜಕೀಯ ಪ್ರವೇಶಿಸುವ ಸಂದದರ್ಭದಲ್ಲೇ ಉಪೇಂದ್ರ ಬಿಜೆಪಿ ಸೇರ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಅದು ಸುಳ್ಳಾಯ್ತು ಈಗ ಮತ್ತದೇ ವಿಚಾರ ಸದ್ದು ಮಾಡುತ್ತಿದೆ. ಉಪೇಂದ್ರ ರಾಜಕೀಯಕ್ಕೆ ಬರುವ ಮೊದಲು ಅನೇಕ ಬಾರಿ ಮೋದಿಯನ್ನು ಮುಕ್ತವಾಗಿ ಹೊಗಳಿದ್ದೇ ಈಗ ಪದೇ ಪದೇ ಉಪೇಂದ್ರ ಹಾಗೂ ಬಿಜೆಪಿ ನಡುವೆ ಇಂತಹ ವದಂತಿಗಳು ಕೇಳಿಬರಲು ಕಾರಣ. ಹೀಗೆ ಬಿಜೆಪಿ ಜತೆಗೆ ಚರ್ಚೆಯಾಗುತ್ತಿರೋದು ಉಪೇಂದ್ರರ ಭವಿಷ್ಯದ ಗುರಿ ಸಾಧನೆಗೆ ಪೂರಕವೋ ಅಥವಾ ಮಾರಕವೋ ಎಂಬ ಪ್ರಶ್ನೆ ಉದ್ಭವಿಸಿದೆ.

ಉಪೇಂದ್ರ ಬಿಜೆಪಿ ಜತೆ ಗುರುತಿಸಿಕೊಂಡಿದ್ದೇ ಆದರೆ ಅವರಿಗೆ ಎಷ್ಟು ಅನುಕೂಲವಾಗುತ್ತದೋ ಅದರ ಎರಡು ಪಟ್ಟು ಅನಾನುಕೂಲವಾಗೋದು ಖಂಡಿತ. ಏಕೆಂದರೆ, ಉಪೇಂದ್ರ ಆರಂಭದಿಂದ ಇಲ್ಲಿಯವರೆಗು ಹೇಳಿಕೊಂಡು ಬರುತ್ತಿರೋದು ಒಂದೇ ಮಾತು ಅದುವೇ ರಾಜಕೀಯ ಬೇಡ ಪ್ರಜಾಕೀಯ ಬೇಕು. ಉಪೇಂದ್ರರ ಈ ಪರಿಕಲ್ಪನೆ ಜನರನ್ನು ಆಕರ್ಷಿಸಿದೆ. ಹಾಗೆಂದು ಈ ಆಕರ್ಷಣೆ ಮತತವಾಗಿ ಪರಿವರ್ತನೆಯಾಗೋದು ಕಡಿಮೆ. ಆದರೆ ದೀರ್ಘಾವಧಿಯಲ್ಲಿ ಇದರ ಫಲಿತಾಂಶ ಪರಿಣಾಮಕಾರಿಯಾಗಿ ಬೀರುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಉಪೇಂದ್ರ ಬಿಜೆಪಿ ಜತೆ ಕೈ ಜೋಡಿಸಿದರು ಎಂದಿಟ್ಟುಕೊಳ್ಳಿ, ಮುಂಬರುವ ಚುನಾವಣೆಯಲ್ಲಿ  ಒಂದೆರಡು ಕ್ಷೇತ್ರ ಹೆಚ್ಚಾಗಿ ಪಡೆಯಬಹುದು. ಆದರೆ ಎಲ್ಲರಿಗಿಂತ ವಿಭಿನ್ನವಾಗಿ ಉಪೇಂದ್ರ ಉಳಿಯುವುದಿಲ್ಲ.

ಬಿಜೆಪಿಯೇ ಆಗಲಿ ಅಥವಾ ಇತರೆ ರಾಜಕೀಯ ಪಕ್ಷವನ್ನೇ ಆಗಲಿ ಉಪೇಂದ್ರ ಸೇರಿಕೊಂಡರೆ ಅವರು ರಾಜಕೀಯವನ್ನೇ ಅಪ್ಪಿಕೊಂಡಂತೆ. ಆಗ ಹತ್ತರಲ್ಲಿ ಒಬ್ಬರಂತೆ ಅವರೂ ಕೂಡ ಇತರೆ ರಾಜಕಾರಣಿಗಳ ಗುಂಪಿನೊಳಗೆ ಕಳೆದುಹೋಗುವುದರಲ್ಲಿ ಯಾವುದೇ  ಅನುಮಾನವಿಲ್ಲ. ಅಷ್ಟೇ ಅಲ್ಲ, ತಮ್ಮ ಮೂಲ ಉದ್ದೇಶವನ್ನೇ ಉಪೇಂದ್ರ ಮರೆತಂತಾಗುತ್ತದೆ. ಹೀಗಾಗಿ ರಿಯಲ್ ಸ್ಟಾರ್ ಕೆಪಿಜೆಪಿಯಿಂದ ಹೊರ ಬಂದಿದ್ದೇ ಆದರೆ ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿಕೊಳ್ಳುವುದು ಉತ್ತಮ. ಆಗ ಯಾರ ಹಂಗಿಲ್ಲದೇ ತಮ್ಮ ಗುರಿ ಸಾಧನೆಯತ್ತ ಸಾಗಬಹುದು. ಉಪೇಂದ್ರ ಬುದ್ಧಿವಂತ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಪಾವಧಿಯ ಅಧಿಕಾರಕ್ಕಾಗಿ ದೀರ್ಘಾವಧಿಯ ಗುರಿ ಮರೆಯುವ ದಡ್ಡನಲ್ಲ ಎಂಬುದು ಅವರ ಅಭಿಮಾನಿಗಳ ಮಾತಾಗಿದೆ.

Leave a Reply