ಮಕ್ಕಳಿಗೆ ಟಿಕೆಟ್ ಕೊಡಿಸಲು ತಮ್ಮ ಕ್ಷೇತ್ರ ಬಿಟ್ಟುಕೊಟ್ಟ ಕೈ ನಾಯಕರು!

ಡಿಜಿಟಲ್ ಕನ್ನಡ ಟೀಮ್:

ಕುಟುಂಬ ರಾಜಕಾರಣದ ಹಣೆಪಟ್ಟಿ ಕಳಚಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಹಾಗೂ ಅಅನಿತಾ ಕುಮಾರಸ್ವಾಮಿ ಅವರ ಆಸೆಗೆ ತಣ್ಣೀರೆರೆಚುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರುಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಲು ಕೆಪಿಸಿಸಿ ಅರ್ಜಿ ಪಡೆದಿದ್ದು, ಇದರಲ್ಲಿ ಪ್ರಮುಖ ನಾಯಕರುಗಳು ತಮ್ಮ ಹಾಲಿ ಕ್ಷೇತ್ರವನ್ನು ತಮ್ಮ ಮಕ್ಕಳಿಗೆ ಬಿಟ್ಟುಕೊಟ್ಟು ತಾವು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಅರ್ಜಿಗಳ ಮಾಹಿತ್ ಪ್ರಕಾರ ಮುಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ್ ಎಚ್.ಸಿ ಮಹದೇವಪ್ಪ ಅವರು ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬದಲಿಸುವುದು ಪಕ್ಕಾ ಆಗಿದೆ.

ಪುತ್ರ ಯತೀಂದ್ರನಿಗಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾದರೆ, ಸಿಎಂ ಆಪ್ತ ಡಾ.ಎಚ್.ಸಿ.ಮಹದೇವಪ್ಪ, ತಮ್ಮ ಪುತ್ರ ಸುನೀಲ್ ಬೋಸ್ ಅವರಿಗೆ ಟಿ.ನರಸಿಪುರ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಅಥವಾ ವರುಣ ಕ್ಷೇತ್ರದಲ್ಲಿ ಯಾವುದಾದರೂ ಒಂದರಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಈ ಅರ್ಜಿಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಮಹದೇವಪ್ಪ ಅವರು ಬೆಂಗಳೂರಿನ ಸಿ.ವಿ. ರಾಮನ್ ನಗರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ.

ಇವರಿಬ್ಬರು ಮಾತ್ರವಲ್ಲದೇ ಕಾನೂನು ಸಚಿವ ಟಿ.ಬಿ ಜಯಚಂದ್ರ ಪುತ್ರ ಚಿಕ್ಕನಾಯಕನಹಳ್ಳಿಯಿಂದ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಜಯನಗರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದದಲ್ಲಿ ನಾಯಕರು ಹಾಗೂ ಅವರ ಮಕ್ಕಳಿಗೆ ಸಿಂಹಪಾಲು ಟಿಕೆಟ್ ಹಂಚಿಕೆಯಾದರೆ ಯಾವುದೇ ಅಚ್ಚರಿ ಇಲ್ಲ. ಉಳಿದಂತೆ ಸಚಿವ ಕೃಷ್ಣಭೈರೇಗೌಡ- ಬ್ಯಾಟರಾಯನಪುರ, ರೋಷನ್ ಬೇಗ್- ಶಿವಾಜಿನಗರ, ಕೊರಟಗೆರೆಯಿಂದ ಪರಮೇಶ್ವರ ಟಿಕೆಟ್ ಕೇಳಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಿಕೆಟ್ ಆಕಾಂಕ್ಷಿ ಅರ್ಜಿಗೆ ಭಾರಿ ಬೇಡಿಕೆ ಇದ್ದು, ಕಾಂಗ್ರೆಸ್ ಪಕ್ಷವೊಂದರಲ್ಲೇ 2000ಕ್ಕೂ ಹೆಚ್ಚು ಮುಖಂಡರು ಬಿ.ಫಾರಂ ಪಡೆಯಲು ಅರ್ಜಿ ಪಡೆದಿದ್ದಾರೆ. ಪ್ರತಿ ಕ್ಷೇತ್ರದಿಂದ ಐದಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಅರ್ಜಿಯಲ್ಲಿರುವ ಮಾಹಿತಿ ಆಧರಿಸಿ, ಯಾರಿಗೆ ಟಿಕೆಟ್ ನೀಡಬಹುದು ಎನ್ನುವ ಪಟ್ಟಿಯನ್ನು ಕೆಪಿಸಿಸಿ ಸಿದ್ಧಪಡಿಸಲಿದೆ. ನಂತರ ಈ ಪಟ್ಟಿಯನ್ನು ಎಐಸಿಸಿಗೆ ಕಳುಹಿಸಿ, ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಬೇಕೆಂದು ರಾಹುಲ್ ಗಾಂಧಿ ಅವರು ನಿರ್ಧರಿಸಲಿದ್ದಾರೆ.

Leave a Reply