ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿಗೆ ಚಾಕು, ಭದ್ರತಾ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್​ ಶೆಟ್ಟಿಗೆ ಲೋಕಾಯುಕ್ತ ಕಚೇರಿಯಲ್ಲೇ ಚಾಕು ಇರಿಯಲಾಗಿದೆ. ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ ತುಮಕೂರು ಮೂಲದ ತೇಜ್ ರಾಜ್ ಶರ್ಮಾ ಎಂಬಾತ ಚಾಕು ಇರಿದು ಕೊಲೆಗೆ ಯತ್ನ ನಡೆಸಿದ್ದಾನೆ. ಮಧ್ಯಾಹ್ನ 12.30ಕ್ಕೆ ಲೋಕಾಯುಕ್ತ ಕಚೇರಿಗೆ ಬಂದಿದ್ದ ಆರೋಪಿ ತೇಜ್​ರಾಜ್​ ಶರ್ಮಾ, ಲೋಕಾಯುಕ್ತರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾನೆ.. ಆದ್ರೆ ಆ ವೇಳೆಗೆ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಊಟ ಮಾಡ್ತಿದ್ದ ಕಾರಣಕ್ಕೆ ಕಾಯುವಂತೆ ಸೂಚನೆ ಸಿಕ್ಕಿದೆ. ಬಳಿಕ ಲೋಕಾಯುಕ್ತ ದಾಖಲಾತಿಯಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದು ಮಾಡಿ ಒಳಗೆ ಹೋಗಿದ್ದಾನೆ. ಮೆಟಲ್​ ಡಿಟೆಕ್ಟರ್​​ ಕೆಟ್ಟಿದ್ರಿಂದ ಆಯುಧ ತಂದರೂ ಪತ್ತೆಯಾಗ ಕಾರಣಕ್ಕೆ ಚಾಕು ಇರಿತ ಘಟನೆ ನಡೆದಿದೆ..

ಮಧ್ಯಾಹ್ನ 1.30 ರ ವೇಳೆ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿದ ತೇಜ್ ರಾಜ್ ಶರ್ಮಾ, ತಾನು ೮ ಸರ್ಕಾರಿ ಅಧಿಕಾರಿಗಳ ವಿರುದ್ದ ದೂರು ನೀಡಿದ್ದೇನೆ, ಆದರೆ ಒಂದರಲ್ಲೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ವಾಗ್ವಾದ ನಡೆಸಿದ್ದಾನೆ.. ಆದ್ರೆ ಯಾವುದಕ್ಕೂ ಖಚಿತ ಉತ್ತರ ನೀಡದ ನ್ಯಾ. ವಿಶ್ವನಾಥ ಶೆಟ್ಟಿ, ನಗುಮೊಗದಲ್ಲೇ ಕೇಳಿಸಿಕೊಂಡಿದ್ದಾರೆ. ಈ ವೇಳೆ ನ್ಯಾಯ ಕೊಡಿಸಲು ಆಗದ ನೀವು ಇದ್ದರೇನು ಪ್ರಯೋಜನ ಎಂದು ಎದೆಗೆ ಮೂರು ಬಾರಿ, ಕೈಗೆ ಹಾಗೂ ಕಾಲಿಗೆ ಚಾಕುವಿನಿಂದ ಇರಿದಿದ್ದಾನೆ. ತೇಜ್​ರಾಜ್​ ಶರ್ಮಾನನ್ನು ಒಳಕ್ಕೆ ಕಳುಹಿಸಿ ಊಟಕ್ಕೆ ತೆರಳಿದ ಭದ್ರತಾ ಸಿಬ್ಬಂದಿ ಓಡಿ ಬಂದು ಥಳಿಸಿದ್ದಾರೆ. ಬಳಿಕ ನ್ಯಾ. ವಿಶ್ವನಾಥ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಕಪ್ಪು ಬಣ್ಣದ ಬ್ಲೇಸರ್ ಹಾಕಿದ್ರಿಂದ ಹೆಚ್ಚಿನ ಅನಾಹುತ ಆಗಿಲ್ಲ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೂ ಚಾಕು ಇರಿದಿರೋ ಭಾಗದಲ್ಲಿ ಡಾಕ್ಟರ್ ಆಪರೇಷನ್ ಮಾಡಿದ್ದು, ಕೆಲವು ಕಡೆ ಸ್ಟಿಚ್ಚಸ್ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ನಾಯಕರು, ಬಿಬಿಎಂಪಿ ಮೇಯರ್ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಿಧಾನಸೌಧ ಪೊಲೀಸರು ತೇಜ್​ರಾಜ್​ ಶರ್ಮಾನಿಗೆ ಫುಲ್ ಡ್ರಿಲ್ ಮಾಡಿದ್ದು, ಎಲ್ಲಾ ದಾಖಲೆ ಕೊಟ್ಟರೂ ನನಗೆ ನ್ಯಾಯ ಸಿಕ್ಕಿಲ್ಲವೆಂದು ಚಾಕು ಇರಿತ ಮಾಡುವ ನಿರ್ಧಾರ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Leave a Reply