ಲೋಕಾಯುಕ್ತರ ಕೊಲೆ ಯತ್ನ: ಪೊಲೀಸರ ವಶಕ್ಕೆ ಶರ್ಮಾ

ಡಿಜಿಟಲ್ ಕನ್ನಡ ಟೀಮ್:

ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರ ಕೊಲೆಗೆ ಯತ್ನ ನಡೆದಿದ್ದು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಬೆಳಗ್ಗಿನ ಜಾವ 3.30 ಸಮಯದಲ್ಲಿ ಜಡ್ಜ್ ಮುಂದೆ ಆರೋಪಿಯನ್ನು ಹಾಜರುಪಡಿಸಿರುವ ಪೊಲೀಸರು, ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೇಳಿಕೊಂಡಿದ್ದಾರೆ. ಪೊಲೀಸರ ಮನವಿಯನ್ನು ಒಪ್ಪಿಕೊಂಡ ನ್ಯಾಯಾಧೀಶರು 5 ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಇದೀಗ ಲೋಕಾಯುಕ್ತರನ್ನು ಕೊಲೆ ಮಾಡುವಂತ ದ್ವೇಷ ಹುಟ್ಟಲು ಕಾರಣವೇನು ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಮೂಲತಃ ರಾಜಸ್ಥಾನ ಮೂಲದ ತೇಜ್ ರಾಜ್ ಶರ್ಮಾ ಸುಮಾರು 6 ವರ್ಷಗಳಿಂದ ತುಮಕೂರಿನ ತಿಪಟೂರಿನಲ್ಲಿ ವಾಸ ಮಾಡ್ತಿದ್ದಾನೆ. ಪಿಯುಸಿ ವ್ಯಾಸಾಂಗ ಮಾಡಿರುವ ಈತ, ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಹೇಗೂ ಫರ್ನಿಚರ್ ವ್ಯವಹಾರ ಗೊತ್ತಿದ್ರಿಂದ, ಡಿಡಿಪಿಐ ಕಚೇರಿಯಲ್ಲಿ ಕುರ್ಚಿ ಟೇಬಲ್ ಗಳ ಪೂರೈಕೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾನೆ. ಆದ್ರೆ ಈತನಿಗೆ ಸಿಗಬೇಕಿದ್ದ ಟೆಂಡರ್ ಅಕ್ರಮವಾಗಿ

ಬೇರೆಯವರ ಪಾಲಾಗಿದೆ. ಹೀಗಾಗಿ 2017 ರಲ್ಲಿ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದ ತೇಜ್ ರಾಜ್ ಶರ್ಮಾ, ಅದರಲ್ಲಿ ನ್ಯಾಯ ಸಿಕ್ಕಿಲ್ಲ. ಇದಾದ ಬಳಿಕ  ಆರ್ ಟಿ ಐ ಕಾರ್ಯಕರ್ತನಂತೆ ಸಾಕಷ್ಟು ಅವ್ಯವಹಾರ ಪತ್ತೆ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿದ್ರು ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತು ಹೋಗಿದ್ದ ಶರ್ಮಾ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ.

ತೇಜ್ ರಾಜ್ ವಾಸ ಮಾಡ್ತಿದ್ದ ಮನೆ ನಿಜಕ್ಕೂ ದೇವಸ್ಥಾನವಾಗಿದೆ. ಯಾಕಂದ್ರೆ ಮಹಾನ್ ದೈವಭಕ್ತನಾಗಿದ್ದ ತೇಜ್ ರಾಜ್ ಶರ್ಮಾ, ಮನೆಯ ಕೊಠಡಿ ತುಂಬಾ ದೇವರ ಫೋಟೋ ಗಳನ್ನು ಹಾಕಿಕೊಂಡಿದ್ದ. ಕೆಲಸ ಇಲ್ಲದ ವೇಳೆಯಲ್ಲಿ ಪೂಜೆ ಪುನಸ್ಕಾರ ಮಾಡುವುದನ್ನು ರೂಢಿ ಮಾಡಿಕೊಂಡಿದ್ದ ಎನ್ನಲಾಗಿದೆ. ಅಕ್ಕಪಕ್ಕದವರ ಬಳಿಯು ಹೆಚ್ಚಾಗಿ ಮಾತನಾಡದ ತೇಜ್ ರಾಜ್ ಶರ್ಮಾ, ಕಿಟಕಿ ಬಾಗಿಲುಗಳಿಗೆ ಕೆಂಪು ಬಟ್ಟೆ ಹಾಕಿಕೊಂಡು ಶಕ್ತಿದೇವತೆಯನ್ನು ಆರಾಧಿಸುತ್ತಿದ್ದ ಎನ್ನುತ್ತಾರೆ ಸ್ಥಳೀಯರು. ಬುಧವಾರ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ ಎಂದು ದೇವರ ಪ್ರೇರಣೆ ಆಗಿತ್ತಂತೆ. ಹಾಗಾಗಿ ನ್ಯಾ. ವಿಶ್ವನಾಥ್ ಶೆಟ್ಟರ ಮೇಲೆ ಬುಧವಾರವೇ ದಾಳಿ ಮಾಡಿದ್ದಾನೆ ಎನ್ನುತ್ತಿವೆ ಮೂಲಗಳು.

ತೇಜ್ ರಾಜ್ ಶರ್ಮಾ ಯಾರ್ಯಾರ ಮೇಲೆ ದೂರು ಕೊಟ್ಟಿದ್ದ?

  • ಮಂಜುನಾಥ್, ಡಿಡಿಪಿಐ ಶಿಕ್ಷಣ ಇಲಾಖೆ, ತುಮಕೂರು.
  • ಶಿವಕುಮಾರ್, ಎಸ್ ಡಿಎ. ಸಾರ್ವಜನಿಕ ಶಿಕ್ಷಣ ಇಲಾಖೆ.
  • ದೇವರಾಜ್, ಸಹಾಯಕ ನಿರ್ದೇಶಕರು ರೇಷ್ಮೆ ಗೂಡಿನ ಮಾರುಕಟ್ಟೆ, ಕೋಲಾರ.
  • ಮಹಲಿಂಗಪ್ಪ, ಕ್ಲರ್ಕ್, ಖರೀದಿ ವಿಭಾಗ, ಕೆಎಂಎಫ್. ತುಮಕೂರು.
  • ಚಂದ್ರಪ್ಪ, ಮ್ಯಾನೇಜರ್, ಕೆಎಂಎಫ್, ತುಮಕೂರು.
  • ಎ.ಆರ್. ಚಂದ್ರ ಶೇಖರ್, ಎಂಡಿ, ಕೆಎಂಎಫ್, ತುಮಕೂರು.
  • ಪ್ರಭಾಕರ್, ಜಂಟಿ ನಿರ್ದೇಶಕ ರೇಷ್ಮೆ ಇಲಾಖೆ ಬೆಂಗಳೂರು.
  • ಕುಮಾರ್, ಎಸ್ ಡಿಸಿ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ, ತುಮಕೂರು.
    ಸೇರಿದಂತೆ ಇನ್ನು ಹಲವು ಅಧಿಕಾರಿಗಳ ವಿರುದ್ದ ದೂರು ನೀಡಿದ್ದ. ಇವರ ಮೇಲೆ ಯಾವುದೇ ಕ್ರಮ ಆಗದ ಹಿನ್ನಲೆಯಲ್ಲಿ ಕೊಲೆ ಮಾಡುವ ದೃಢ ನಿರ್ಧಾರ ಕೈಗೊಂಡಿದ್ದಾನೆ ಎನ್ನಲಾಗಿದೆ. ಸತ್ಯಾಂಶ ಪೊಲೀಸರ ವಿಚಾರಣೆಯಲ್ಲಿ ಬಯಲಾಗಬೇಕಿದೆ.

Leave a Reply