ಎನ್ ಡಿಎ ಬಿಟ್ಟರೆ ಕೆಡೋದು ಟಿಡಿಪಿಯೇ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಎನ್ ಡಿಎ ಮೈತ್ರಿಕೂಟದಲ್ಲಿ ಭಿನ್ನರಾಗ ಹೆಚ್ಚಾಗಿಕೇಳುತ್ತಿದೆ. ಈಗಾಗಲೇ ಶಿವ ಸೇನೆ ಬಿಜೆಪಿ ವಿರುದ್ಧ ಕೆಂಪು ಬಾವುಟ ಹಾರಿಸಿ ಕಾಂಗ್ರೆಸ್ ಹೆಗಲ ಮೇಲೆ ಕೈ ಹಾಕಿಕೊಂಡು ನಿಂತಿದೆ. ಅದರ ಬೆನ್ನಲ್ಲೇ ಈಗ ಆಂಧ್ರ ಪ್ರದೇಶ ವಿಶೇಷ ಸ್ಥಾನಮಾನ ವಿಚಾರದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿ ವಿರುದ್ಧ ಬುಸುಗುಡುತ್ತಿದ್ದು, ಎನ್ ಡಿಎ ಮೈತ್ರಿಕೂಟದಿಂದ ಹೊರಬರುವುದಾಗಿ ಹೆದರಿಸುವ ಪ್ರಯತ್ನದಲ್ಲಿದೆ.

ಒಂದುವೇಳೆ ಟಿಡಿಪಿ ಎನ್ ಡಿಎಯಿಂದ ಹೊರ ಬಂದಿದ್ದೇ ಆದಲ್ಲಿ ಅದರಿಂದ ನಷ್ಟವಾಗೋದು ಯಾರಿಗೆ? ಬಿಜೇಪಿಗಾ ಅಥವಾ ಟಿಡಿಪಿಗಾ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇಲ್ಲಿ ಬಿಜೆಪಿಗಿಂತ ಟಿಡಿಪಿಯೇ ಹೆಚ್ಚು ನಷ್ಟ ಅನುಭವಿಸೋದು ಖಚಿತ. ಅದು ಹೇಗೆ ಎಂದರೆ…

  • ಮುಂದಿನ ವರ್ಷ ಲೋಕಸಭೆ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಆಂಧ್ರ ಪ್ರದೇಶದ ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ವೈರತ್ವವನ್ನು ಕಟ್ಟಿಕೊಂಡು ತಮ್ಮ ಗುರಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಈ ಪರಿಸ್ಥಿತಿಯಲ್ಲಿ ಟಿಡಿಪಿ ರಾಷ್ಟ್ರೀಯ ಪಕ್ಷಗಳ ಜತೆ ಕೈ ಜೋಡಿಸಲೇಬೇಕಾದ ಅನಿವಾರ್ಯತೆಯಲ್ಲಿದೆ. ಒಂದು ವೇಳೆ ಟಿಡಿಪಿ ಎನ್ ಡಿಎಯಿಂದ ಹೊರಬಂದರೆ ಅನಾಥವಾಗೋದು ಗ್ಯಾರೆಂಟಿ. ಟಿಡಿಪಿಯನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆಯಾದರೂ, ಕಾಂಗ್ರೆಸ್ ಜತೆ ಕೈ ಜೋಡಿಸಲು ಟಿಡಿಪಿಗೆ ಸಾಧ್ಯವಿಲ್ಲ. ಕಾರಣ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಿಭಜನೆಯಲ್ಲಿ ಯುಪಿಎ ಸರ್ಕಾರದ ಪಾತ್ರ ಎಲ್ಲರಿಗೂ ಗೊತ್ತಿರುವ ವಿಚಾರ. ಟಿಡಿಪಿ ಸಹ ಚುನಾವಣೆ ಸಂದರ್ಭದಲ್ಲಿ ಆಂಧ್ರ ವಿಭಜನೆಗೆ ಕಾಂಗ್ರೆಸ್ ಪಕ್ಷವನ್ನೇ ದೂರಿತ್ತು. ಹೀಗಾಗಿ ಆಂಧ್ರ ಪ್ರದೇಶವನ್ನು ಇಂತಹ ಪರಿಸ್ಥಿತಿಗೆ ತಂದ ಕಾಂಗ್ರೆಸ್ ಜತೆ ಕೈ ಜೋಡಿಸೋದು ಟಿಡಿಪಿಗೆ ಅಸಾಧ್ಯವಾಗಿದೆ.
  • ಇನ್ನು ತೃತಿಯ ರಂಗದ ಬಗ್ಗೆ ಯೋಚಿಸಬಹುದೇ ಎಂಬುದನ್ನು ನೋಡಿದರೆ ಅದೂ ಕೂಡ ಸಾಧ್ಯವಿಲ್ಲ. ಕಾರಣ ತೃತೀಯ ರಂಗದ ಮುಂದಾಳತ್ವದ ಸ್ಥಾನಕ್ಕೆ ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಟವಲ್ ಹಾಕಿದ್ದಾರೆ. ತೆಲಂಗಾಣ ವಿಭಜನೆಯಲ್ಲಿ ಚಂದ್ರಶೇಖರ್ ರಾವ್ ಹೋರಾಟ ಕಾಂಗ್ರೆಸ್ ಗಿಂತಲೂ ಪರಿಣಾಮಕಾರಿಯಾದುದು. ಹೀಗಾಗಿ ಚಂದ್ರಬಾಬು ನಾಯ್ಡು ಪಾಲಿಗೆ ಅದೂ ಕೂಡ ಸಾಧ್ಯವಿಲ್ಲ.
  • ಮತ್ತೊಂದೆಡೆ ಬಿಜೆಪಿಗೆ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗಮೋಹನ್ ರೆಡ್ಡಿ ದಿನೇ ದಿನೆ ಆಪ್ತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎನ್ ಡಿಎಯಿಂದಟಿಡಿಪಿ ಹೊರ ಬಂದರೆ ಅನಾಥವಾಗೋದು ಖಚಿತ. ಮುಂದಿನ ವರ್ಷ ಚುನಾವಣೆ ಮತ್ತೆ ಟಿಡಿಪಿ ಆಯ್ಕೆಯಾಗಿಬಂದಾಗ ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದರ ವಿಶ್ವಾಸ ಗಳಿಸೋಕೆ ಪರದಾಡಬೇಕಾಗುತ್ತದೆ.

ಹೀಗಾಗಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಟಿಡಿಪಿಗೆ ಎಷ್ಟೇ ಅಅಸಮಾಧಾನವಿದ್ದರೂ ಅದನ್ನು ಹಲ್ಲುಗಚ್ಚಿಕೊಂಡು ಸುಮ್ಮನಿರಬೇಕಾಗಿದೆ.  ಹೀಗಾಗಿ ಚಂದ್ರಬಾಬು ನಾಯ್ಡು ನೇರವಾಗಿ  ಎನ್ ಡಿಎ ಮೈತ್ರಿಕೂಟದಿಂದ ಹೊರಬರಲು ಸಾಧ್ಯವಾಗದೇ ಕೇವಲ ಮೋದಿ ಸಚಿವ ಸಂಪುಟದಲ್ಲಿದ್ದ ತನ್ನ ಪಕ್ಷದ ಸಚಿವರಿಂದ ರಾಜಿನಾಮೆ ಕೊಡಿಸಿ ಬೆದರಿಸುವ ತಂತ್ರ ಪ್ರಯೋಗಿಸಿದೆ.

Leave a Reply