‘ಭಾರತದೊಂದಿಗೆ ಯುದ್ಧ ಬೇಡ- ಸ್ನೇಹ ಬೇಕು’, ಚೀನಾದ ಈ ಹೊಸ ರಾಗಕ್ಕೆ ಕಾರಣ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

‘ನಾವಿಬ್ಬರು ಯುದ್ಧ ಮಾಡೋದು ಬೇಡ, ಒಳ್ಳೆ ಸ್ನೇಹಿತರಾಗೋಣ…’ ಇದು ಭಾರತಕ್ಕೆ ಚೀನಾ ನೀಡುತ್ತಿರುವ ಆಮಂತ್ರಣ.

ಪಾಕಿಸ್ತಾನ ಜತೆಗೂಡಿ ಭಾರತದ ವಿರುದ್ಧ ಇನ್ನಿಲ್ಲದ ಪಿತೂರಿ ನಡೆಸುತ್ತಿದ್ದ ಚೀನಾ ಈಗ ಭಾರತದ ಮನವೊಲೈಕೆಗೆ ಮುಂದಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ಬೆಂಬಲ ನೀಡಿ ಮುಖಭಂಗ ಅನುಭವಿಸೋದು ಬೇಕಿರಲಿಲ್ಲ ಎಂದು ಪಶ್ಚಾತಾಪ ಪಟ್ಟಿದ್ದ ಚೀನಾ ಈಗ ಭಾರತದ ಸ್ನೇಹವನ್ನು ಬಯಸಿ ನಿಂತಿದೆ.

ಚೀನಾದ ನಡುವಳಿಕೆಯಲ್ಲಿ  ಬದಲಾವಣೆ ಬರಲು ಕಾರಣ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡೋದು ಸಹಜ. ಅದಕ್ಕೆ ಅನೇಕ ಕಾರಣಗಳಿವೆ. ಒಂದೆಡೆ ಪಾಕಿಸ್ತಾನದ ಗದ್ವಾರ್ ಬಂದರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಲ್ಲಿಗೆ ಸಂಪರ್ಕ ಸಾಧಿಸಲು ಚೀನಾ ಪಾಕ್ ಆರ್ಥಿಕ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಚೀನಾ ಮುಂದಾಗಿತ್ತು. ಈ ಕಾಮಗಾರಿಯಲ್ಲಿ ಪಾಕಿಸ್ತಾನದ ಭ್ರಷ್ಟಾಚಾರ, ಬಲೂಚಿಸ್ತಾನ ತೀವ್ರವಾದಿಗಳ ದಾಳಿ ಸೇರಿದಂತೆ ಅನೇಕ ವಿಘ್ನಗಳು ಎದುರಾಗಿವೆ. ಅಷ್ಟೇ ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದ ಮಾರ್ಗವಾಗಿ ಈ ರಸ್ತೆ ನಿರ್ಮಾಣಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಪಾಕಿಸ್ತಾನದ ಸಹವಾಸ ಮಾಡಿ ಇಲ್ಲಿಯವರೆಗೂ ಚೀನಾಕ್ಕೆ ನಯಾಪೈಸೆ ಪ್ರಯೋಜನವಾಗಿಲ್ಲ.

ಇನ್ನು ಭಾರತದೊಂದಿಗೆ ಚೀನಾ ಎಷ್ಟೇ ಗುದ್ದಾಡುತ್ತಿದ್ದರೂ ಚೀನಾಗೆ ಭಾರತ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಸಹಾಯ ಮಾಡಿದೆ. ಕಳೆದ ವರ್ಷ ದೋಕಲಂ ವಿಚಾರವಾಗಿ ಉಭಯ ದೇಶಗಳ ನಡುವೆ ಎರಡು ತಿಂಗಳು ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಭಾರತ ವ್ಯಾಪಾರ ಯುದ್ಧ ನಡೆಸುವ ಎಚ್ಚರಿಕೆಯನ್ನೂ ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ 2017ರಲ್ಲಿ ಭಾರತ ಹಾಗೂ ಚೀನಾ ನಡುವೆ ದಾಖಲೆಯ 84.4 ಬಿಲಿಯನ್ ಡಾಲರ್ ಪ್ರಮಾಣದಲ್ಲಿ ವ್ಯಾಪಾರವಾಗಿದೆ. ಇದು ಚೀನಾ ಆರ್ಥಿಕತೆಗೆ ದೊಡ್ಡ ಮಟ್ಟದ ಲಾಭವಾಗಿದೆ.

ಹೀಗಾಗಿ ಪಾಕಿಸ್ತಾನದ ಜತೆಗೆ ಕೈ ಜೋಡಿಸಿದರೂ ಕಿಂಚಿತ್ತು ಸಹಾಯವಾಗುತ್ತಿಲ್ಲ. ಆದರೆ ಭಾರತದಿಂದ ಚೀನಾ ಉದ್ಯಮಗಳಿಗೆ ಲಾಭವಾಗುತ್ತಿದೆ. ಹೀಗಾಗಿ ಪಾಕಿಸ್ತಾನಕ್ಕಿಂತ ಭಾರತದ ಸಹವಾಸವೇ ಮೇಲು ಎಂಬುದು ಚೀನಾ ಲೆಕ್ಕಾಚಾರ. ಹೀಗಾಗಿ ಚೀನಾ ಬಾಯಿಂದ ಪಾಕ್ ವಿರೋಧಿ ಹಾಗೂ ಭಾರತ ಮನವೊಲಿಸುವ ಮಾತುಗಳು ಉದುರುತ್ತಿವೆ.

Leave a Reply