ಕೇಂದ್ರ ಸರ್ಕಾರ ಒಪ್ಪಿಗೆ ಸಿಗೋದು ಡೌಟಾದರೂ ರಾಜ್ಯಕ್ಕೆ ತಿರಂಗಾ ಭಾಗ್ಯ ನೀಡಿದ ಸಿದ್ರಾಮಯ್ಯ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕನ್ನಡ ಧ್ವಜ ವಿಷಯವಾಗಿ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ. ರಾಜ್ಯ ಸರ್ಕಾರ ರಚಿಸಿದ್ದ ಸಮಿತಿ ಶಿಫಾರಸಿನ ಅನ್ವಯ ರೂಪುಗೊಂಡ ಹೊಸ ವಿನ್ಯಾಸದ ನಾಡಧ್ವಜವನ್ನು ಅಧಿಕೃತಗೊಳಿಸಲು ಗುರುವಾರ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ.

ಈ ಹಿಂದೆ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂಬ ಒತ್ತಾಯದ ಮೇರೆಗೆ ಧ್ವಜ ಅಂತಿಮಗೊಳಿಸಲು ಸಮಿತಿ ರಚನೆಯಾದಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಮೊದಲ ಹಂತದ ಸಮರ ನಡೆದಿತ್ತು. ಇದರಲ್ಲಿ ಜನರ ಕಣ್ಣಿಗೆ ಕೇಂದ್ರ ಸರ್ಕಾರವನ್ನು ಕನ್ನಡ ವಿರೋಧಿ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯ ತಮ್ಮ ಜಾಣತನ ಮೆರೆದಿದ್ದರು. ಈಗ ಅದೇ ಅಸ್ತ್ರವನ್ನು ಮತ್ತೊಮ್ಮೆ ಪ್ರಯೋಗಿಸುತ್ತಿದ್ದಾರೆ.

ಗುರುವಾರ ನಾಡಧ್ವಜ ಕುರಿತು ಚರ್ಚಿಸಲು ಕನ್ನಡ ಸಂಘಟನೆ ಮತ್ತು ನಾಡಿನ ಹಿರಿಯ ಸಾಹಿತಿಗಳನ್ನು ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ್ದರು. ಈ ವೇಳೆ ಮೂರು ಹಳದಿ, ಬಿಳಿ ಹಾಗೂ ಕೆಂಪು ಬಣ್ಣದ ತ್ರಿವರ್ಣ ಧ್ವಜದ ನಡುವೆ ರಾಜ್ಯ ಸರ್ಕಾರದ ಚಿಹ್ನೆಯನ್ನು ಇರಿಸಲಾಗಿದೆ. ಸಂಘಟನೆ ಹಾಗೂ ಸಾಹಿತಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿಗಳು ಕಾನೂನು ತೊಡಕುಗಳನ್ನು ಪರಿಗಣಿಸಿ ಧ್ವಜ ರೂಪಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದರು.

ಸಭೆಯ ನಂತರ ಮಾತನಾಡಿದ ಸಿದ್ದರಾಮಯ್ಯನವರು ಹೇಳಿದಿಷ್ಟು…,’ರಾಜ್ಯಕ್ಕೆ ಒಂದು ನಾಡಧ್ವಜ ಬೇಕು ಎಂಬ ಚರ್ಚೆ ಮೊದಲಿನಿಂದ ನಡೆಯುತ್ತಿದೆ.  ಕನ್ನಡಿಗರ ಈ ಅಪೇಕ್ಷೆಗೆ ನಮ್ಮ ಸರಕಾರ ಧ್ವನಿಯಾಗುವ ಜತೆಗೆ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಅಂಗೀಕರಿಸುವ ಐತಿಹಾಸಿಕ ನಿರ್ಣಯ ಕೈ ಗೊಂಡಿದೆ. ಸಮಿತಿ ಶೀಫಾರಿಸಿನಂತೆ ರೂಪಿತವಾಗಿರುವ ಧ್ವಜವನ್ನು ಸಂಪುಟ ಸಭೆಯ ಒಪ್ಪಿಗೆ ಪಡೆದು ಕೇಂದ್ರದ ಒಪ್ಪಿಗೆಗೆ ಕಳುಹಿಸಿಕೊಡಲಾಗುವುದು.’

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಧ್ವಜ ಸಮಿತಿ ಸದಸ್ಯರಾದ ಎಸ್.ಜಿ. ಸಿದ್ದರಾಮಯ್ಯ, ಕಸಾಪ ಅಧ್ಯಕ್ಷ ಮನು ಬಳಿಗಾರ್, ಕನ್ನಡ ಹೋರಾಟಗಾರರಾದ ಸಾ.ರಾ ಗೋವಿಂದು, ಟಿ.ಎ. ನಾರಾಯಣಗೌಡ, ಶಿವರಾಮೇ ಗೌಡ, ಪ್ರವೀಣ್ ಶೆಟ್ಟಿ ಮೊದಲಾದವರು ಇದ್ದರು. ಪ್ರತ್ಯೇಕ ಧ್ವಜವನ್ನು ವಿರೋಧಿಸುತ್ತಲೇ ಬಂದಿದ್ದ ವಾಟಾಳ್ ನಾಗರಾಜ್ ಸಭೆಗೆ ಗೈರಾಗಿದ್ದರು.

ರಾಜ್ಯ ಸರ್ಕಾರ ಇಷ್ಟೆಲ್ಲಾ ಪ್ರಹಸನ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡುವುದೇ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಸಮಿತಿ ಶಿಫಾರಸಿನ ಅನ್ವಯ ಧ್ವಜ ರೂಪಿಸಲು ಒಪ್ಪಿಗೆ ನೀಡಲು ತೀರ್ಮಾನಿಸಿದೆ. ಆದರೆ, ಇದಕ್ಕೆ ಕಾನೂನಿನ ಮಾನ್ಯತೆ ಪಡೆಯಲು ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ಅನಿವಾರ್ಯ. ಪ್ರತ್ಯೇಕ ನಾಡಧ್ವಜ ಹೊಂದುವ ಕುರಿತಂತೆ ಸಂವಿಧಾನದಲ್ಲಿ ಯಾವುದೇ ತೊಡಕುಗಳಿಲ್ಲ. ಆದರೆ, ಕೇಂದ್ರ ಸರಕಾರ ಒಪ್ಪಿಗೆ ಇಲ್ಲದೆ ನಾಡಧ್ವಜ ರೂಪಿಸಲು ಸಾಧ್ಯವಾಗುವುದಿಲ್ಲ.

ಧ್ವಜ ಅಂಗೀಕಾರವಾಗಲು ಕೇಂದ್ರ ಸರಕಾರದ ಒಪ್ಪಿಗೆ ಬೇಕು. ಆದರೆ, ಒಂದು ದೇಶ, ಒಂದು ಧ್ವಜ ಎಂಬ ಸಿದ್ಧಾಂತ ಪ್ರತಿಪಾದಿಸುತ್ತಿರುವ ಬಿಜೆಪಿ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ. ಹೀಗಾಗಿ, ಇದು ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ರಾಜಕೀಯ ಸಮರಕ್ಕೆ ವೇದಿಕೆಯಾಗೋದರಲ್ಲಿ ಅನುಮಾನವೇ ಇಲ್ಲ.

Leave a Reply