ಚುನಾವಣೆ ಸಮಯದಲ್ಲಿ ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಳ್ತಿದ್ದಾರೆ ನಾಯಕರು

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪರಸ್ಪರ ಟೀಕಾ ಪ್ರಹಾರಕ್ಕೆ ಮುಂದಾಗಿದ್ದು, ಇವರ ವಾಕ್ಸಮರ ತಮ್ಮ ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಮಟ್ಟಕ್ಕೆ ಬಂದು ತಲುಪಿದೆ. ಟೀಕೆ ಮಾಡುವ ನೆಪದಲ್ಲಿ ತೀರಾ ವೈಯಕ್ತಿಕ ಆರೋಪಗಳಿಗೆ ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಹೌದು, ಒಂದೆಡೆ ಸಚಿವ ಯು.ಟಿ.ಖಾದರ್ ಮತ್ತು ರಮಾನಾಥ ರೈ ಇಬ್ಬರೂ ಉಗ್ರಗಾಮಿಗಳು ಎಂದು ಬಿಜೆಪಿ ನಾಯಕರು ಹೇಳಿಕೆ ಕೊಟ್ಟರೆ ಮತ್ತೊಂದೆಡೆ ಬಿಜೆಪಿಯವರದ್ದು ಗೋಡ್ಸೆ ಸಂತತಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಾಂಗ್ರೆಸ್ ವಿರುದ್ಧ ತಮ್ಮ ನಾಲಿಗೆ ಹಿರದು ಬಿಟ್ಟಿದ್ದು ಹೀಗೆ…

‘ರಾಜ್ಯ ಸಚಿವರುಗಳಾದ ಯು.ಟಿ.ಖಾದರ್ ಮತ್ತು ರಮಾನಾಥ್ ರೈ ಉಗ್ರಗಾಮಿಗಳಿದ್ದಂತೆ. ಅವರು ಭಯೋತ್ಪಾದಕರಿಗಿಂತ ಕಡಿಮೆ ಇಲ್ಲ. ಸದ್ಯ ಕರ್ನಾಟಕ ಹೇಗಿದೆ ಎಂಬುದು ಗೊತ್ತಾಗಲು ಕೆ.ಜೆ.ಜಾರ್ಜ್ ಅವರನ್ನು ನೋಡಿದರೆ ಸಾಕು. ಡಿವೈಎಸ್‌ಪಿ ಎಂ.ಕೆ. ಗಣಪತಿ ಹತ್ಯೆ ಮಾಡಿದವರು ಕೆ.ಜೆ.ಜಾರ್ಜ್. ಇನ್ನು ಸಚಿವ ವಿನಯ ಕುಲಕರ್ಣಿ ಹೇಗೆ ಗೂಂಡಾಗಿರಿ ಮಾಡುತ್ತಾರೆ ಎಂಬುದನ್ನು ನೋಡಿದರೆ ಸಾಕು ಸದ್ಯದ ಉತ್ತರ ಕರ್ನಾಟಕದ ಪರಿಸ್ಥಿತಿ ಅರ್ಥವಾಗುತ್ತದೆ.’

ಮತ್ತೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ‘ದೇಶದ ಮೊದಲ ಭಯೋತ್ಪಾದಕ ಗೋಡ್ಸೆ ಸಂತತಿಯ ಬಿಜೆಪಿಯವರು. ಅವರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಉತ್ತರ ಪ್ರದೇಶದ ಸಿಎಂ ಮೇಲೆ 21 ಕೇಸ್ ಇವೆ. ಇವರೆಲ್ಲ ಕಾಂಗ್ರೆಸ್‌ಗೆ ಕಾನೂನು ಸುವ್ಯವಸ್ಥೆ ಪಾಠ ಕಲಿಸಲು ಬರುತ್ತಾರೆ. ಬಿಜೆಪಿಯವರು ಎಲ್ಲ ರಾಜ್ಯ ಗಳಲ್ಲೂ ಚುನಾವಣೆ ಗೆಲ್ಲುತ್ತಿಲ್ಲ. ಹಿಂದುತ್ವ ಇಟ್ಟುಕೊಂಡು ಕರ್ನಾಟಕದಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಲೋಕಾಯುಕ್ತರ ಮೇಲೆ ಹಲ್ಲೆ ಮಾಡಿದವನು ಬಿಜೆಪಿ ಅಧಿಕಾರ ಇರುವ ರಾಜಸ್ಥಾನದವನು. ಅಲ್ಲಿ ಅಂತಹ ಮನಸ್ಥಿತಿ ಸೃಷ್ಟಿ ಆಗಿದೆ.’

Leave a Reply