‘ಕುಮಾರಸ್ವಾಮಿ ರಾಜಕೀಯಕ್ಕೆ ಬರೋದಕ್ಕೂ ಮುಂಚೆ ಮಂತ್ರಿಯಾಗಿದ್ದೆ’, ಎಚ್ಡಿಕೆ ವಿರುದ್ಧ ಸಿದ್ರಾಮಯ್ಯ ಕಿಡಿ

ಡಿಜಿಟಲ್ ಕನ್ನಡ ಟೀಮ್:

ಕುಮಾರಸ್ವಾಮಿ ಕೇಳಿ ನಾನು ಆಡಳಿತ ಮಾಡ್ಬೇಕಾ? ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಯಾಗಿ ಕೇಳಿದ ಪ್ರಶ್ನೆ.

ಸಿದ್ದರಾಮಯ್ಯ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಹೇಳಿದಿಷ್ಟು…

‘ಕುಮಾರಸ್ವಾಮಿ ರಾಜಕೀಯಕ್ಕೆ ಪ್ರವೇಶಿಸುವ ಮುನ್ನವೇ ನಾನು ಮಂತ್ರಿಯಾಗಿದ್ದೆ. ಅವರನ್ನು ಕೇಳಿ ನಾನು ಆಡಳಿತ ನಡೆಸಬೇಕಾದ ಅಗತ್ಯವಿಲ್ಲ. ಲೋಕಾಯುಕ್ತರ ಕೊಲೆ ಯತ್ನ ಪ್ರಕರಣದಲ್ಲಿ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಯೋಗೇಶ್ ಅವರ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಂಡಿದ್ದಾರೆಯೇ ಹೊರತು ನಾನಲ್ಲ. ರಾಜ್ಯದಲ್ಲಿ ಹೇಗೆ ಆಡಳಿತ ನಡೆಸಬೇಕು ಎಂದು ಕುಮಾರಸ್ವಾಮಿ ಅವರತ್ರ ಕೇಳಿ ಕಲಿಯಬೇಕಾ?’

ಕಾವೇರಿ ವಿಚಾರದಲ್ಲಿ ನಾರಿಮನ್ ಮಾತು ಕೇಳ್ತೇನೆ

ಕಾವೇರಿ ನಿರ್ವಹಣಾ ಮಂಡಳಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಚಾರವನ್ನು ‘ಬೀದಿಯಲ್ಲಿ ನಿಂತು ಮಾತನಾಡುವುದಿಲ್ಲ. ರಾಜ್ಯದ ಪರ ವಕಾಲತು ಮಾಡುವ ನಾರಿಮನ್ ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೇನೆ’ ಎಂದು ಗುಡುಗಿದರು.

ಈ ವಿಚಾರವಾಗಿ ಅವರು ಹೇಳಿದಿಷ್ಟು…

‘ಸುಪ್ರೀಂ ಕೋರ್ಟ್ ಆದೇಶದಂತೆ ಆರು ವಾರದಲ್ಲಿ ಸ್ಕೀಂ ಅನ್ವಯ ಸಮಿತಿ ರಚನೆ ಮಾಡಬೇಕೆಂದು ಕೇಂದ್ರ ಸರಕಾರ ಹೇಳಿದ್ದು, ಈ ವಿಚಾರದಲ್ಲಿ ನಾನು ಮಾಧ್ಯಮಗಳ ಮಾತು ಕೇಳುವುದಿಲ್ಲ. ನಾರಿಮನ್ ಹಾಗೂ ಅವರ ಕಾನೂನು ತಜ್ಞರ ತಂಡ ಏನು ಹೇಳುತ್ತದೋ ಅದನ್ನೇ ಪಾಲಿಸುತ್ತೇನೆ. ಇವೆಲ್ಲ ಆಡಳಿತಾತ್ಮಕ ವಿಚಾರ ಅದನ್ನು ಹಾದಿ ಬೀದಿಯಲ್ಲಿ ನಿಮ್ಮ ಮುಂದೆ ಚರ್ಚೆ ಮಾಡಲು ಸಾಧ್ಯವಿಲ್ಲ’ ಎಂದರು.

Leave a Reply