ಬಿಜೆಪಿಯಿಂದ ರಾಜ್ಯಸಭೆ ಪ್ರವೇಶಕ್ಕೆ ರಾಜೀವ್ ಚಂದ್ರಶೇಖರ್, ವಿಜಯ್ ಸಂಕೇಶ್ವರ್ ಜತೆಗೆ ರುದ್ರೇಗೌಡ್ರ ಪೈಪೋಟಿ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಿಂದ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೇಯ ದಿನವಾಗಿದ್ದು, ರಾಜ್ಯದಲ್ಲಿ ಬಿಜೆಪಿಯಿಂದ ಆಯ್ಕೆಯಾಗಲು ಕಸರತ್ತು ಮುಂದುವರಿದಿದೆ. ಸದ್ಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಉದ್ಯಮಿ ರಾಜೀವ್ ಚಂದ್ರಶೇಖರ್ ಮತ್ತು ವಿಜಯ ಸಂಕೇಶ್ವರ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿರುವ ಬೆನ್ನಲ್ಲೇ ಶಿವಮೊಗ್ಗ ಬಿಜೆಪಿ ನಾಯಕ ರುದ್ರೇಗೌಡರ ಹೆಸರು ಕೇಳಿಬರುತ್ತಿದೆ.

ಇತರೆ ರಾಜ್ಯಗಳಲ್ಲಿ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ನಿರ್ಧರಿಸಿದ್ದು, ಕರ್ನಾಟಕದ ಅಭ್ಯರ್ಥಿ ಆಯ್ಕೆ ಮಾತ್ರ ಸವಾಲಾಗಿದೆ. ಅದಕ್ಕೆ ಕಾರಣ ಸದ್ಯದಲ್ಲೇ ಎದುರಾಗಲಿರುವ ವಿಧಾನಸಭೆ ಚುನಾವಣೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಪಕ್ಷ ಒಂದು ಹುಲ್ಲುಕಡ್ಡಿ ಜರುಗಿಸಬೇಕಾದರೂ ರಾಜಕೀಯದ ಲಾಭ ನಷ್ಟದ ಲೆಕ್ಕಾಚಾರ ಮಾಡುತ್ತದೆ. ಹೀಗಾಗಿ ಬಿಜೆಪಿಯಿಂದ ಆಯ್ಕೆಯಾಗಲಿರುವ ಒಬ್ಬ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲು ಬಿಜೆಪಿ ವರಿಷ್ಠರಿಗೆ ಸವಾಲಾಗಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಮತ್ತು ಎಸ್.ರುದ್ರೇಗೌಡರ ಮಧ್ಯೆ ಪೈಪೋಟಿ ಉಂಟಾಗಿತ್ತು. ಶಿವಮೊಗ್ಗ ಕ್ಷೇತ್ರಕ್ಕೆ ಇಬ್ಬರೂ ಪ್ರಭಾವಿ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದು, ಬಿಜೆಪಿ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿತ್ತು. ಯಡಿಯೂರಪ್ಪ ಆಪ್ತ ರುದ್ರೇಗೌಡರಿಗೆ ಟಿಕೆಟ್ ನೀಡಿದರೆ  ಕೆ.ಎಸ್.ಈಶ್ವರಪ್ಪ ಬಂಡಾಯ ಏಳುವ ಆತಂಕ ಇತ್ತು. ಹೀಗಾಗಿ ಶಿವಮೊಗ್ಗ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪರಿಗೆ ಟಿಕೆಟ್ ನೀಡುವುದು ಅನಿವಾರ್ಯವಾಗಿರುವುದರಿಂದ ಬಿಜೆಪಿ ವರಿಷ್ಠರು, ಎಸ್.ರುದ್ರೇಗೌಡರನ್ನು ರಾಜ್ಯಸಭೆ ಸ್ಪರ್ಧೆಗೆ ಪರಿಗಣಿಸಲು ಮುಂದಾಗಿದ್ದಾರೆ. ಇತ್ತ ಆಕಾಂಕ್ಷಿಿಗಳ ಪಟ್ಟಿಯಲ್ಲಿದ್ದ ಮುರಳೀಧರ ರಾವ್ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದ್ದಾರೆ. ಈ ಎಲ್ಲ ಲೆಕ್ಕಾಚಾರಗಳಿಂದಾಗಿ ಇವರ ಬದಲಾಗಿ ಶಿವಮೊಗ್ಗದ ಪ್ರಬಲ ನಾಯಕ ರುದ್ರೇಗೌಡರ ಹೆಸರನ್ನು ಕಳುಹಿಸಿಕೊಡುವಂತೆ ರಾಜ್ಯ ನಾಯಕರಿಗೆ ಅಮಿತ್ ಶಾ ಸೂಚಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Leave a Reply