ಬರೀ ಲೋಕಾಯುಕ್ತರಿಗಲ್ಲ, ಲೋಕಾಯುಕ್ತ ವ್ಯವಸ್ಥೆಗೇ ಚಾಕು!

ಕೆಲವೊಮ್ಮೆ ಒಂದು ಸತ್ಯವನ್ನು ಮತ್ತೊಂದು ಸತ್ಯ ನುಂಗಿ ನೀರು ಕುಡಿದಿರುತ್ತದೆ. ಪ್ರಾಮುಖ್ಯತೆ ಪಡೆಯಬೇಕಿದ್ದ ಸತ್ಯ ಮತ್ತೊಂದರ ವೈಭವೀಕರಣದಲ್ಲಿ ಕರಗಿ ಹೋಗಿರುತ್ತದೆ. ಸತ್ಯಕ್ಕೆ ಸತ್ಯವೇ ಶತ್ರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ ಆರ್‌ಟಿಐ ಕಾರ್ಯಕರ್ತ ತಿಪಟೂರಿನ ತೇಜ್‌ರಾಜ್ ಶರ್ಮಾ ಚಾಕುವಿನಿಂದ ಹಲ್ಲೆ ನಡೆಸಿರುವ ಪ್ರಕರಣ ಕೂಡ ಈ ಸತ್ಯಾಸತ್ಯಗಳ ನಡುವಣ ಹೋರಾಟದಲ್ಲಿ ವ್ಯವಸ್ಥೆಯತ್ತ ಸಾಕಷ್ಟು ಪ್ರಶ್ನೆಗಳನ್ನು ತೂರಿಬಿಟ್ಟಿದೆ.

ತೇಜ್‌ರಾಜ್ ಶರ್ಮಾ ಲೋಕಾಯುಕ್ತರ ಮೇಲೆ ಹಲ್ಲೆ ನಡೆಸಿದ್ದು ಅಕ್ಷಮ್ಯ. ಇದರಲ್ಲಿ ಎರಡು ಮಾತಿಲ್ಲ. ಪೊಲೀಸರ ಸರ್ಪಗಾವಲು (ಹಾವು ಹೆಡೆಮಡಚಿ ಮಲಗಿತ್ತು ಎಂಬುದು ಬೇರೆ ಮಾತು) ಬೇಧಿಸಿ ಶರ್ಮಾ ಲೋಕಾಯುಕ್ತರಿಗೆ ಚಾಕು ಹಾಕಿದ್ದರಲ್ಲಿ ಅಡಗಿರುವ ಭದ್ರತಾ ಲೋಪವನ್ನು ಹಿಡಿದು ಎಲ್ಲರೂ ಎಳೆದಾಡುತ್ತಿದ್ದಾರೆ. ಮೆಟಲ್ ಡಿಟೆಕ್ಟರ್ ಸರಿ ಇರಲಿಲ್ಲ, ತಪಾಸಣೆ ಮಾಡಬೇಕಿದ್ದ ಪೊಲೀಸರ ಮಿದುಳು ಮತ್ತು ಕೈಗಳಲ್ಲಿ ಸ್ವಾಧೀನ ಇರಲಿಲ್ಲ. ಹೀಗಾಗಿ ಲೋಕಾಯುಕ್ತರಿಗೆ ಚಾಕು ಬಿದ್ದಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲಹಿಡಿದು ಮಲಗಿದೆ. ಸರಕಾರಿ ದುಷ್ಟರು ಹಾಗೂ ಭ್ರಷ್ಟರಿಗೆ ಸಿಂಹಸ್ವಪ್ನ ಸ್ವರೂಪರಾದ ಲೋಕಾಯುಕ್ತರಿಗೇ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರ ಪಾಡೇನು? ಅವರಿಗೆಲ್ಲಿದೆ ರಕ್ಷಣೆ ಎಂಬ ಪ್ರಶ್ನಾಸ್ತ್ರಗಳೊಂದಿಗೆ ಆಡಳಿತರೂಢ ಕಾಂಗ್ರೆಸ್ ಸರಕಾರದ ಮೇಲೆ ಪ್ರತಿಪಕ್ಷಗಳು ಅಮರಿಕೊಂಡು ಬಿದ್ದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ ಲೋಕಾಯುಕ್ತ ಬಾಗಿಲಲ್ಲಿ ಮೆಟಲ್ ಡಿಟೆಕ್ಟರ್ ಹಿಡಿದು ಕಾವಲಿಗೆ ನಿಲ್ಲಬೇಕಿತ್ತು. ಕರ್ತವ್ಯಲೋಪಕ್ಕೆ ಕಾರಣರಾಗಿರುವ ಇವರಿಬ್ಬರೂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸುವಷ್ಟರ ಮಟ್ಟಿಗೆ.

ನಿಜ, ಕಾನೂನು ರಕ್ಷಣೆ, ಪಾಲನೆಯಲ್ಲಾದ ಲೋಪ ಲೋಪವೇ. ಲೋಪವಾದಾಗ ಯಾವುದೇ ಪಕ್ಷದ ಸರಕಾರವಿರಲಿ ಅದರ ಹೊಣೆಯನ್ನದು ಹೊರಬೇಕಾದ್ದೇ. ಇಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸರಕಾರ ಎಂಬ ರಿಯಾಯಿತಿ, ವಿನಾಯತಿ ಇರುವುದಿಲ್ಲ. ಏನೋ ಆಗಬಾರದ್ದು ಆಗಿಹೋಯಿತು, ಮಿಂಚಿಹೋದ ಕಾರ್ಯಕ್ಕೆ ಯಾರೇನು ಮಾಡಲಾಗುತ್ತದೆ ಎಂದು ತಲೆ ತೊಳೆದುಕೊಂಡು ಪಲಾಯನ ಮಾಡಲು ಆಗುವುದಿಲ್ಲ. ಈಗ ಸಿದ್ದರಾಮಯ್ಯನವರ ಸರಕಾರ ಆಳ್ವಿಕೆಯಲ್ಲಿದೆ. ಲೋಕಾಯುಕ್ತರ ಮೇಲೆ ದಾಳಿ ಜವಾಬ್ದಾರಿಯನ್ನು ಅದು ತನ್ನ ಕುತ್ತಿಗೆಗೆ ನೇತು ಹಾಕಿಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಈಗೇನಾದರೂ ಬಿಜೆಪಿ ಅಥವಾ ಜೆಡಿಎಸ್ ಸರಕಾರ ಇದ್ದಿದ್ದರೆ ಈ ಲೋಪದ ಫಲಕ ಅವುಗಳ ಕುತ್ತಿಗೆಗೆ ಬೀಳುತ್ತಿತ್ತು. ಇಲ್ಲಿ ಪರಕಾಯ ಪ್ರವೇಶ, ಪರರ ಹೆಗಲಿಗೆ ಹೊಣೆ ವರ್ಗಾವಣೆಗೆ ಆಸ್ಪದ ಇಲ್ಲ.

ಆದರೆ ಯಾವುದೇ ಒಂದು ಅಪರಾಧ ಪ್ರಕರಣ ತಡೆಯವುದರಲ್ಲಿ ಅದರದೇ ಆದ ಇತಿಮಿತಿಗಳಿರುತ್ತವೆ. ಕೆಲವನ್ನು ಊಹಿಸಬಹುದು. ಹಲವನ್ನು ಕಲ್ಪಿಸಿಕೊಳ್ಳಲಾಗದು. ಹಾಗೇನಾದರೂ ಎಲ್ಲವನ್ನೂ ಊಹಿಸುವ ಶಕ್ತಿ ಇದ್ದಿದ್ದರೆ ಯಾವುದೇ ಅಪರಾಧ ಪ್ರಕರಣಗಳು ಈ ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತಿರಲಿಲ್ಲ. ಭಾರತದಲ್ಲಿ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಯಾಗುತ್ತಿರಲಿಲ್ಲ, ಅಮೆರಿಕದಲ್ಲಿ ಉಗ್ರರ ಹೊಡೆತಕ್ಕೆ ವಿಶ್ವ ವಾಣಿಜ್ಯ ಕೇಂದ್ರದ (ಡಬ್ಲ್ಯೂಟಿಸಿ) ಅವಳಿ ಗೋಪುರಗಳು ಧರೆಗುರುಳಿ, ಅಲ್ಲೊಂದು ಸ್ಮಾರಕ ಮೇಲೆದ್ದು, ಮುಂಪೀಳಿಗೆಗೆ ದುರಂತ ಇತಿಹಾಸದ ಸಾಕ್ಷಿಯಾಗಿ ನಿಲ್ಲುತ್ತಿರಲಿಲ್ಲ, ಭಾರತದ ಸಂಸತ್ ಮೇಲೆ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸಲಾಗುತ್ತಿರಲಿಲ್ಲ, ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ, ವೀರಪ್ಪನ್ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಲು ಸಾಧ್ಯವಾಗುತ್ತಿರಲಿಲ್ಲ. ಇವು ಬರೀ ಸಂಕೇತ ಮಾತ್ರ. ಇಂಥ ಸಾವಿರಾರೂ ಪ್ರಕರಣಗಳು ಭದ್ರತಾ ಇತಿಮಿತಿಗಳನ್ನು ಅಣಕಿಸುತ್ತಿವೆ. ನಿತ್ಯಸವಾಲಾಗಿ ನಿಂತಿವೆ. ಆದರೆ ಹಾಗೆಂದು ಜವಾಬ್ದಾರಿಯಿಂದ ಯಾರೂ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರ ಚುಕ್ಕಾಣಿ ಹಿಡಿದ ಸರಕಾರಗಳನ್ನು ಹಿಡಿದು ಅಲ್ಲಾಡಿಸಿ ಪ್ರತಿಪಕ್ಷಗಳು ಸಾಧ್ಯವಾದಷ್ಟು ಮತಗಳನ್ನು ಉದುರಿಸಿಕೊಂಡಿವೆ. ಈಗ ಅದೇ ರೀತಿ ನ್ಯಾ. ವಿಶ್ವನಾಥಶೆಟ್ಟಿ ಅವರ ಮೇಲಿನ ಹಲ್ಲೆ ಪ್ರತಿಪಕ್ಷಗಳ ಕೈಗೊಂದು ಭಲ್ಲೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಬೆನ್ನಲ್ಲೇ ಲೋಕಾಯುಕ್ತರ ಮೇಲೆ ಚಾಕು ಇರಿತ ಪ್ರಕರಣ. ಚುನಾವಣೆ ಹೊಸ್ತಿಲಲ್ಲಿ ಒಂದಾದ ಮೇಲೊಂದರಂತೆ ಸಿಕ್ಕಿರುವ ಈ ಅಸ್ತ್ರವನ್ನು ಬಿಜೆಪಿ ಹಾಗೂ ಜೆಡಿಎಸ್ ಸಿದ್ದರಾಮಯ್ಯ ಸರಕಾರದ ಮೇಲೆ ಮನಸೋ ಇಚ್ಛೆ ಝಳಪಿಸುತ್ತಿವೆ.

ಲೋಕಾಯುಕ್ತರ ಮೇಲೆ ಹಲ್ಲೆ ಪ್ರಕರಣದ ಹಿಂದೆ ಗಮನಿಸಬೇಕಾದ ಎರಡು ಅಂಶಗಳಿವೆ. ಒಂದು ಭದ್ರತಾ ಲೋಪದ್ದಾದರೆ ಮತ್ತೊಂದು ವ್ಯವಸ್ಥೆಯ ವಿರುದ್ಧ ಸ್ಫೋಟಗೊಂಡಿರುವ ಹತಾಶೆ. ಈ ಹತಾಶೆ ಅಭಿವ್ಯಕ್ತಿಗೆ ತೇಜ್‌ರಾಜ್ ಆರಿಸಿಕೊಂಡಿರುವ ಮಾರ್ಗ ತಪ್ಪು ಮತ್ತು ಅಕ್ಷಮ್ಯ, ಯಾರೂ ಒಪ್ಪುವಂಥದ್ದಲ್ಲ ಎಂಬುದು ಸರಿಯೇ ಆಗಿದ್ದರೂ ಈ ಪ್ರಕರಣದ ಹಿಂದೆ ಸಂಕೇತ ಮತ್ತು ಪ್ರತಿಮೆಯಾಗಿ ಪ್ರತಿಬಿಂಬಿತವಾಗಿರುವ ಜಡ್ಡುಗಟ್ಟಿದ ವ್ಯವಸ್ಥೆ, ಅದು ತಂದ ನೋವು, ನಿರಾಸೆಯನ್ನು ಉಪೇಕ್ಷಿಸುವಂತಿಲ್ಲ. ತೇಜ್‌ರಾಜ್ ಕ್ರಿಯೆ ಒಂದು ವ್ಯವಸ್ಥೆ ವಿರುದ್ಧ ಮಡುಗಟ್ಟಿರುವ ಸಾರ್ವಜನಿಕ ಆಕ್ರೋಶದ ಪ್ರಾತಿನಿಧ್ಯದಂತಿದೆ. ಗಣಿ, ಡಿನೋಟಿಫಿಕೇಷನ್ ಹಗರಣದಲ್ಲಿ ಮುಖ್ಯಮಂತ್ರಿಯಿಂದಿಡಿದು, ಮಂತ್ರಿ-ಮಹೋದಯರವರೆಗೂ ಸರತಿ ಸಾಲಿನಲ್ಲಿ ಅನೇಕರನ್ನು ಜೈಲುಗಟ್ಟಿದ, ಮತ್ತವರು ಪ್ರತಿನಿಧಿಸುತ್ತಿದ್ದ ರಾಜಕೀಯ ಪಕ್ಷದ ಭವಿಷ್ಯವನ್ನು ಬಾಣಲೆಯಲ್ಲಿ ಹಾಕಿ ಹುರಿದ, ಭ್ರಷ್ಟ ರಾಜಕಾರಣಿಗಳು-ಅಧಿಕಾರಿಗಳ ಚಲ್ಲಣವನ್ನು ಒದ್ದೆ ಮಾಡಿದ ಲೋಕಾಯುಕ್ತ ಸಂಸ್ಥೆ ಒಂದು ಕಾಲದಲ್ಲಿ ಜನರ ಆರಾಧ್ಯ ದೈವದಂತಾಗಿತ್ತು. ಎಲ್ಲೂ ನ್ಯಾಯ ಸಿಗದಿದ್ದರೆ ಲೋಕಾಯುಕ್ತದಲ್ಲಂತೂ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯನ್ನು ಲೋಕಾಯುಕ್ತ ಹುದ್ದೆಯನ್ನಲಂಕರಿಸಿದ್ದ ನ್ಯಾ. ಎನ್. ವೆಂಕಟಾಚಲ, ಸಂತೋಷ್ ಹೆಗ್ಡೆ ಅವರಂಥವರೂ ಮೂಡಿಸಿದ್ದರು. ದಂಡಿಸುವ ಅಧಿಕಾರ ಇಲ್ಲದಿದ್ದರೂ ಸತ್ಯಶೋಧನೆ, ವರದಿ ಮಂಡನೆ ಅವಕಾಶ ವ್ಯಾಪ್ತಿಯಲ್ಲೇ ಭ್ರಷ್ಟರನ್ನು ಬಗ್ಗು ಬಡಿದಿದ್ದರು. ಲೋಕಾಯುಕ್ತ ತಾಕತ್ತು ಎಂಥದ್ದು ಎಂಬುದನ್ನು ತೋರಿಸಿಕೊಟ್ಟಿದ್ದರು. ಆಗ ಲೋಕಾಯುಕ್ತ ವ್ಯವಸ್ಥೆ ಬಗ್ಗೆ ಜನರಲ್ಲಿ ಆಶಾಭಾವ ಮೂಡಿತ್ತು. ತೇಜ್‌ರಾಜ್ ಭ್ರಷ್ಟ ಅಧಿಕಾರಿಗಳ ವಿರುದ್ಧ ಹದಿನೆಂಟು ದೂರುಗಳನ್ನು ದಾಖಲಿಸಿದ್ದರ ಹಿಂದೆ ಇಂತಹುದೇ ವಿಶ್ವಾಸ ಕೆಲಸ ಮಾಡಿದೆ. ಆದರೆ ಆತ ದಾಖಲಿಸಿದ್ದ ಬಹುತೇಕ ಪ್ರಕರಣಗಳು ಮುಚ್ಚಿ ಹೋಗಿದ್ದು ಆತನಲ್ಲಿ ಹತಾಶೆ, ಕುದಿಮೌನ, ಆಕ್ರೋಶ ಮಡುಗಟ್ಟುವಂತೆ ಮಾಡಿದೆ. ಒತ್ತಿಟ್ಟ ಕೋಪ ಒಂದು ದಿನ ಸ್ಫೋಟಗೊಂಡಿದೆ. ಸಲ್ಲದ ಸ್ವರೂಪದಲ್ಲಿ!

ತೇಜ್‌ರಾಜ್ ಮಾಡಿದ್ದು ತಪ್ಪೇ ಆದರೂ, ಅದಕ್ಕೆ ಕಾರಣವಾದ ನ್ಯಾಯ ನಿರಾಕರಣೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಒಂದೊಮ್ಮೆ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ಆಗಿದಿದ್ದರೆ ತೇಜ್‌ರಾಜ್ ಈ ಕೃತ್ಯ ಎಸಗುತ್ತಿರಲಿಲ್ಲವೇನೋ. ಏಕೆಂದರೆ ರಾಜಸ್ಥಾನದಿಂದ ಬಂದು ತುಮಕೂರಿನ ತಿಪಟೂರಿನಲ್ಲಿ ಹಲವು ವರ್ಷಗಳಿಂದ ನೆಲೆ ಕಂಡುಕೊಂಡ ಕುಟುಂಬಕ್ಕೆ ಸೇರಿದ ತೇಜ್‌ರಾಜ್ ತುಮಕೂರಿನಲ್ಲಿ ಪೀಠೋಪಕರಣ ಅಂಗಡಿ ನಡೆಸುತ್ತಿದ್ದ. ಸರಕಾರಿ ಕಚೇರಿಗಳಿಗೆ ಪೀಠೋಪಕರಣ ಸರಬರಾಜು ಮಾಡುವ ಗುತ್ತಿಗೆ ಕೆಲಸ ಮಾಡುತ್ತಿದ್ದ. ತನ್ನ ವೃತ್ತಿಗೆ ಕಂಟಕವಾಗಿ ಪರಿಣಮಿಸಿದ್ದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿದ್ದ ತೇಜ್‌ರಾಜ್ ಸರಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಅನೇಕ ದೂರುಗಳನ್ನು ಸಲ್ಲಿಸಿದ್ದ. ಹೀಗೆ ದೂರು ಸಲ್ಲಿಸುತ್ತಾ, ಸಲ್ಲಿಸುತ್ತಲೇ ಆರ್‌ಟಿಐ ಕಾರ್ಯಕರ್ತನಾಗಿ ಪರಿವರ್ತಿತನಾಗಿದ್ದ. ಆದರೆ ತಾನು ಸಲ್ಲಿಸಿದ್ದ ದೂರುಗಳ ಪೈಕಿ ಅನೇಕವೂ ಅಧಿಕಾರಿಗಳಿಗೆ ಶಿಕ್ಷೆ ಇಲ್ಲದೆ ಪರಿಸಮಾಪ್ತಿಯಾಗಿದ್ದು ಈತನಲ್ಲಿ ಕ್ರೋಧ ಕೆರಳಲು ಕಾರಣವಾಗಿತ್ತು. ನ್ಯಾಯ ನಿರಾಕರಣೆ ಜನ ಸಾಮಾನ್ಯರನ್ನು ಹತಾಶೆ, ಖಿನ್ನತೆಗೆ ದೂಡುತ್ತದೆ. ಇವುಗಳಿಗೆ ಶರಣಾದ ವ್ಯಕ್ತಿ ಯಾವಾಗ, ಹೇಗೆ ವರ್ತಿಸುತ್ತಾನೆ ಎಂಬುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಎಲ್ಲಿಯೂ ನ್ಯಾಯ ಸಿಗದೇ ಹೋದಾಗ ಜನ ಹುಚ್ಚು, ಹುಚ್ಚಾಗಿ ವರ್ತಿಸುತ್ತಾರೆ. ಇಲ್ಲಿ ಅದು ಲೋಕಾಯುಕ್ತ ವ್ಯವಸ್ಥೆ ಮುಖ್ಯಸ್ಥರ ಮೇಲೆ ಹಲ್ಲೆ ಸ್ವರೂಪದಲ್ಲಿ ವ್ಯಕ್ತವಾಗಿದೆ.

ವ್ಯವಸ್ಥೆ ಕೊಡುಗೆ ಹತಾಶೆ, ಖಿನ್ನತೆಯನ್ನು ಕಾನೂನು ಕೈಗೆತ್ತಿಕೊಳ್ಳಲಾಗಲಿ, ಕೊಲೆ ಮಾಡಲಾಗಲಿ, ಕೊಲೆಗೆ ಯತ್ನಿಸಲಾಗಲಿ ಪರವಾನಗಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಪರಾಧ ಅಪರಾಧವೇ. ಆರೋಪಿ ಆರೋಪಿಯೇ. ಆದರೆ ತೇಜ್‌ರಾಜ್ ಹಿನ್ನೆಲೆ ನೋಡಿದಾಗ ಆತ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದ ಬಗ್ಗೆ ದಾಖಲೆಗಳಿಲ್ಲ. ಮಾಹಿತಿ ಹಕ್ಕು ಕಾರ್ಯಾಚರಣೆಯನ್ನು ವಸೂಲಿ ದಂಧೆಗೆ ಬಳಸಿಕೊಂಡ ಇತಿಹಾಸವೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅನೇಕ ಜನಪರ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟಗಳಲ್ಲಿ ಭಾಗಿಯಾಗಿದ್ದ ತೇಜ್‌ರಾಜ್‌ಗೆ ಲೋಕಾಯುಕ್ತರ ಕೊಲೆಗೆ ಯತ್ನಿಸಿದರೆ ತನಗೇನಾಗುತ್ತದೆ ಎಂಬುದರ ಕಲ್ಪನೆ ಇರದಿರುವುದಿಲ್ಲ. ಹಾಡಹಗಲೇ ರಾಜಾರೋಷವಾಗಿ ಈ ಕೃತ್ಯ ಎಸಗಿರುವ ಆತನಿಗೆ ತಾನು ಪೊಲೀಸರಿಗೆ ಸಿಕ್ಕಿಬೀಳುತ್ತೇನೆ, ಕಾನೂನು ಕ್ರಮಕ್ಕೆ ಒಳಗಾಗುತ್ತೇನೆ, ಜೈಲು ಪಾಲಾಗುತ್ತೇನೆ, ಶಿಕ್ಷೆಯಾಗುತ್ತದೆ ಎಂಬುದರ ಸ್ಪಷ್ಟ ಅರಿವು ಇದ್ದೇ ಇದೆ. ಹಾಗಿದ್ದೂ ಈ ಕೃತ್ಯ ಎಸಗಿದ್ದಾನೆ ಎಂದರೆ ಹಳ್ಳಹಿಡಿದಿರುವ ವ್ಯವಸ್ಥೆ ಬಗ್ಗೆ ಆತನೆಷ್ಟು ಕುದ್ದು ಹೋಗಿದ್ದ ಎಂಬುದು ಇಲ್ಲಿ ವೇದ್ಯವಾಗುತ್ತದೆ.

ಇನ್ನೊಂದು ಕಡೆ ಲೋಕಾಯುಕ್ತ ಸಂಸ್ಥೆ ಹಿಂದಿನಂತೆ ತನ್ನ ಗೌರವ, ಘನತೆಯನ್ನು ಉಳಿಸಿಕೊಂಡಿದೆಯೇ, ಅದರ ವರ್ಚಸ್ಸು ಹಾಗೇ ಮುಂದುವರಿದಿದೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಸಕಾರಾತ್ಮಾಕ ಉತ್ತರ ಸಿಗುವುದಿಲ್ಲ. ಒಂದು ಕಡೆ ಸರಕಾರ ಅದರ ಕೈಕಾಲು ಮುರಿದು, ಹಲ್ಲು-ನಾಲಿಗೆ ಕಿತ್ತು ತೆವಳಾಗಲಿ, ಕಚ್ಚಲಾಗಲಿ, ಮಾತಾಡಲಾಗಲಿ ಆಗದಂತೆ ಮಾಡಿಟ್ಟಿದೆ. ಲೋಕಾಯುಕ್ತ ಪೊಲೀಸರಿಗೆ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸುವ ಹಾಗೂ ಬಂಧಿಸುವ ಅಧಿಕಾರವೇ ಇಲ್ಲ. ಅಧಿಕಾರಸ್ಥರು, ಅಧಿಕಾರಿಗಳು ತಪ್ಪು ಮಾಡಿದ್ದರೂ ಶಿಕ್ಷೆ ನೀಡುವಂತಿಲ್ಲ. ವಿಷದ ಹಾವು ಅಲ್ಲಿದೆ ಎಂದು ಗೊತ್ತಿದ್ದರೂ ಕೂಗುವಂತೆಯೂ ಇಲ್ಲ, ಬಡಿಯುವಂತೆಯೂ ಇಲ್ಲ. ಬರೀ ಷೋಕಿಗಷ್ಟೇ ಹುದ್ದೆ ಎಂಬಂತಾಗಿದೆ. ಇನ್ನೊಂದೆಡೆ ಹಿಂದಿನ ಲೋಕಾಯುಕ್ತ ನ್ಯಾ. ಭಾಸ್ಕರರಾವ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಸಂಸ್ಥೆ ಬಗ್ಗೆ ಜನರಲ್ಲಿದ್ದ ವಿಶ್ವಾಸಸೌಧವನ್ನು ಕೆಡವಿ, ನಿರಾಸೆ ಕಾರ್ಮೋಡವನ್ನು ಕವಿಸಿದೆ. ಭ್ರಷ್ಟಾಚಾರದ ಬಗ್ಗೆ ಹೋರಾಡಬೇಕಿದ್ದ ಸಂಸ್ಥೆಯೇ ಲಂಚಗುಳಿತನದ ಲಗಾಮು ಹಿಡಿದು ಕೂತರೆ, ಸಂಸ್ಥೆಯ ಮುಖ್ಯಸ್ಥರೇ ವ್ಯಾಪಾರಕ್ಕೆ ಇಳಿದರೆ ವ್ಯವಸ್ಥೆಗೆ ಉಳಿಗಾಲವೆಲ್ಲಿ? ನ್ಯಾ. ಭಾಸ್ಕರರಾವ್ ಅವಧಿಯಲ್ಲಿ ಹೋದ ಸಂಸ್ಥೆಯ ಮಾನ ಇವತ್ತಿಗೂ ಮರಳಿ ಬಂದಿಲ್ಲ. ಹಾಗೆಂದು ಈಗ ಇರುವವರೂ ವ್ಯಾಪಾರ ಮಾಡಿಕೊಂಡು ಕೂತಿದ್ದಾರೆ ಎಂದು ಅರ್ಥವಲ್ಲ. ಆದರೆ ಸಂಸ್ಥೆಯೊಳಗೆ ಒಂದಷ್ಟು ಹುಳುಕುಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ ಎಂದು ಹೇಳಬಹುದು. ತೇಜ್‌ರಾಜ್ ಕ್ರಿಯೆ ಹಿಂದೆ ಆ ಹುಳುಕುಗಳನ್ನು ಹುಡುಕಬಹುದು. ಆದರೆ ನ್ಯಾ. ವಿಶ್ವನಾಥಶೆಟ್ಟಿ ಅವರ ಮೇಲಿನ ಹಲ್ಲೆ, ಅವರ ಕೊಲೆ ಯತ್ನ ಖಂಡಿತವಾಗಿಯೂ ಇದಕ್ಕೆ ಉತ್ತರವೂ ಅಲ್ಲ, ಪರಿಹಾರವೂ ಅಲ್ಲ. ತೇಜ್‌ರಾಜ್ ಹತಾಶೆ ಅಸ್ತ್ರಕ್ಕೆ ಅವರೊಂದು ವಸ್ತುವಾದದ್ದು ಮಾತ್ರ ಸಂಸ್ಥೆಯೊಳಗೇ ಎಲ್ಲವೂ ಸರಿ ಇಲ್ಲ ಎಂಬುದರ ಸಂಕೇತದಂತೆ ಹೊರಹೊಮ್ಮಿದೆ.

ನಿಜ, ಸಿದ್ದರಾಮಯ್ಯನವರ ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಲು ನ್ಯಾ. ಭಾಸ್ಕರರಾವ್ ಪ್ರಕರಣ ಒಂದು ಅಸ್ತ್ರವಾಗಿ ಸಿಕ್ಕಿತ್ತು. ಈ ಸಂದರ್ಭ ಸಾಧಿಸಿ ರಾಜ್ಯ ಸರಕಾರದ ಅಧೀನದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಲಾಗಿದೆ. ಇದರ ಹಿಂದಿರುವುದು ನ್ಯಾ. ವೆಂಕಟಾಚಲ, ನ್ಯಾ. ಸಂತೋಷ್ ಹೆಗ್ಡೆ ಅವರ ಅವಧಿಯಲ್ಲಾದಂತೆ ಲೋಕಾಯುಕ್ತ ಅಪ್ಪಿತಪ್ಪಿ ರಾಜ್ಯ ಸರಕಾರದ ಅಸ್ತಿತ್ವವನ್ನು ಆಪೋಶನ ತೆಗೆದುಕೊಳ್ಳಬಾರದು ಎಂಬ ಮುನ್ನೆಚ್ಚರಿಕೆ. ಲೋಕಾಯುಕ್ತ ಸಂಸ್ಥೆಗೆ ಪರ್ಯಾಯವಾಗಿ ರಚನೆ ಆಗಿರುವ ಎಸಿಬಿ ಸಾಕಷ್ಟು ದಾಳಿಗಳನ್ನು ನಡೆಸಿದೆ. ಕೇಂದ್ರ ಸರಕಾರದ ಅಧೀನ ಸಂಸ್ಥೆೆಗಳು ರಾಜ್ಯ ಸರಕಾರದ ಪ್ರತಿನಿಧಿಗಳ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪರ್ಯಾಯವಾಗಿ ಕೇಂದ್ರ ಸರಕಾರ ಪ್ರತಿನಿಧಿಸುತ್ತಿರುವ ರಾಜ್ಯದ ಅಧಿಕೃತ ಪ್ರತಿಪಕ್ಷ ಬಿಜೆಪಿ ಮುಖಂಡರ ವಿರುದ್ಧ ಒಂದಷ್ಟು ಪ್ರಕರಣಗಳನ್ನು ಝಳಪಿಸುವ ಅಸ್ತ್ರವಾಗಿಯೂ ಎಸಿಬಿ ಪರಿಣಮಿಸಿದೆ. ಇದಕ್ಕೆ ಪ್ರತಿಯಾಗಿ ಮಂತ್ರಿ-ಮಹೋದಯರು ಸೇರಿದಂತೆ ರಾಜ್ಯದ ಆಡಳಿತಾರೂಢ ಗಣ್ಯರ ವಿರುದ್ಧ ಅನೇಕ ದೂರುಗಳೂ ದಾಖಲಾಗಿವೆ. ಸೇಡಿಗೆ ಸೇಡು, ಏಟಿಗೆ ಏದಿರೇಟು ಎಂಬಲ್ಲಿಗೆ ಈ ಸಂಸ್ಥೆಗಳು ಬಂದು ನಿಂತಿವೆ. ಒಂದೆಡೆ ಲೋಕಾಯುಕ್ತ ತುಂಡು ಮಾಡಿ ಬೆಂಕಿಪೊಟ್ಟಣದಲ್ಲಿ ಮುಚ್ಚಿಟ್ಟ ಎರೆಹುಳುವಿನಂತಾಗಿದ್ದರೆ ಎಸಿಬಿ ಎಂಬುದು ಗುರಿ ತೋರಿದೆಡೆ ನುಗ್ಗಿ ಬಡಿಯುವ ರಾಜ್ಯ ಸರಕಾರದ ಪುಂಡಾಳು. ಇಂಥ ವೈರುಧ್ಯಗಳ ನಡುವೆ ಸಿಕ್ಕಿ ವ್ಯವಸ್ಥೆ ನಜ್ಜುಗುಜ್ಜಾಗುತ್ತಿದೆ. ಹಾಗೆ ನಜ್ಜುಗುಜ್ಜಾಗುತ್ತಿರುವ ವ್ಯವಸ್ಥೆಯಲ್ಲಿ ಸಿಗದ ದಾರಿ ಹುಡುಕಲು ಹೋದ ತೇಜ್‌ರಾಜ್ ಕಳೆದು ಹೋಗಿದ್ದಾನೆ. ಆತನನ್ನು ನೋಡಿ ಮತ್ತದೇ ವ್ಯವಸ್ಥೆ ಗಹಿಗಹಿಸಿ ನಗುತ್ತಿದೆ!

ಲಗೋರಿ : ನಂಬಿಕೆ ಇಲ್ಲದ ಕಡೆ ನಂಬಿಕೆ ಇಟ್ಟರೆ ಅದು ನಂಬಿದವನ ತಪ್ಪು!

Leave a Reply