ಅಂತಿಮವಾಯ್ತು ರಾಜ್ಯಸಭಾ ಅಭ್ಯರ್ಥಿಗಳ ಹೆಸರು, ಜೆಡಿಎಸ್ ಕೈಗೆಟುಕಲಿಲ್ಲ ಕೊನೆ ಸ್ಥಾನ

ಡಿಜಿಟಲ್ ಕನ್ನಡ ಟೀಮ್:

ತೀವ್ರ ರೋಚಕ ಪೈಪೋಟಿಯಿಂದ ಕೂಡಿದ್ದ ನಾಲ್ಕು ರಾಜ್ಯಸಭಾ ಸ್ಥಾನಗಳ ಅಭ್ಯರ್ಥಿ ಪಟ್ಟಿ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗ ಅಂತಿಮ ಕಂಡಿದೆ. ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಗೆ ಒಂದು ಹಾಗೂ ಕಾಂಗ್ರೆಸ್ ಗೆ ಎರಡು ಸ್ಥಾನ ಪಕ್ಕಾ ಆಗಿದ್ದವು. ಉಳಿದ ಮತ್ತೊಂದು ಸ್ಥಾನ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಚೌಕಾಸಿಗೆ ದಾರಿ ಮಾಡಿಕೊಟ್ಟಿತ್ತು.

ಇಲ್ಲಿ ಸ್ಥಾನಗಳು ಯಾವ ಪಕ್ಷಕ್ಕೆ ಲಭಿಸಲಿದೆ ಎಂಬುದು ಸ್ಪಷ್ಟವಾಗಿದ್ದರೂ ಆ ಸ್ಥಾನ ಅಲಂಕರಿಸಲು ಪಕ್ಷದೊಳಗಿನ ಆಂತರಿಕ ಪೈಪೋಟಿ ರೋಚಕತೆ ಸೃಷ್ಟಿಸಿತ್ತು. ಬಿಜೆಪಿಯಏಕೈಕ ಸ್ಥಾನಕ್ಕೆ ವಿಜಯ್ ಸಂಕೇಶ್ವರ್, ರುದ್ರೇಗೌಡ ಹಾಗೂ ರಾಜೀವ್ ಚಂದ್ರಶೇಖರ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ, ಕಾಂಗ್ರೆಸ್ ಒಳಗೆ ಆಂತರಿಕವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮೂರನೇ ಸ್ಥಾನಕ್ಕೆ ಹೊರ ರಾಜ್ಯದ ಅಭ್ಯರ್ಥಿಗೆ ನೀಡುವ ಬಗ್ಗೆ ಚರ್ಚೆಯಾಗಿತ್ತು. ಈ ಮಧ್ಯೆ ರೋಶನ್ ಬೇಗ್ ಅವರಿಂದ ಪ್ರಕಾಶ್ ರೈ ವರೆಗೂ ಅನೇಕರ ಹೆಸರೂ ಕೂಡ ತೇಲಿ ಬಂದಿತ್ತು. ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಯುವರೇ ಅಥವಾ ಜೆಡಿಎಸ್ ಅಭ್ಯರ್ಥಿಯೇ ಎಂಬುದು ಮತ್ತೊಂದು ಹಂತದ ಕುತೂಹಲಕ್ಕೆ ವೇದಿಕೆಯಾಗಿತ್ತು.

ಸೋಮವಾರ ನಾಮಪತ್ರ ಸಲ್ಲಿಸಲು ಕಡೇಯ ದಿನಾಂಕವಾಗಿರುವ ಬೆನ್ನಲ್ಲಿ ಭಾನುವಾರ ನಾಲ್ಕು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿ ಎಲ್ಲಾ ರೋಚಕತೆಗೆ ತೆರೆ ಬಿದ್ದಿದೆ.

ಬಿಜೆಪಿ ಈ ಹಿಂದೆ ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿದೆ. ಅದರೊಂದಿಗೆ ವಿಜಯ್ ಸಂಕೇಶ್ವರ್ ಹಾಗೂ ರುದ್ರೇಗೌಡರನ್ನು ನಿರೀಕ್ಷಿಸುತ್ತಿದ್ದವರಿಗೆ ನಿರಾಸೆಯಾಗಿದೆ. ಕಾಂಗ್ರೆಸ್‌ನಿಂದ ಮೊದಲ ಅಭ್ಯರ್ಥಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಹನುಮಂತಯ್ಯ, ಎರಡನೇ ಅಭ್ಯರ್ಥಿಯಾಗಿ ಎಐಸಿಸಿ ವಕ್ತಾರ ನಾಸಿರ್ ಹುಸೇನ್ ಹಾಗೂ ಮೂರನೇ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರ ಆಪ್ತ ಮಂಡ್ಯ ಮೂಲದ ಜಿ.ಸಿ ಚಂದ್ರಶೇಖರ್ ಅವರನ್ನು ಅಂತಿಮಗೊಳಿಸಲಾಗಿದೆ. ಈ ನಾಲ್ವರು ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಇತ್ತ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತಮ್ಮ ಪಕ್ಷದಿಂದ ಅಭ್ಯರ್ಥಿ ಆಯ್ಕೆ ಮಾಡುವ ಲೆಕ್ಕಚಾರ ಜೆಡಿಎಸ್ ಮಾಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಟ್ಟಿನಂತೆ ಕಾಂಗ್ರೆಸ್ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸಿರುವುದರಿಂದ ಜೆಡಿಎಸ್‌ಗಿದ್ದ ಕೊನೆ ಅವಕಾಶ ಕೈತಪ್ಪಿದೆ.

Leave a Reply