ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತಕ್ಕೆ ಅಗ್ರಸ್ಥಾನ! ಇದು ಭಾರತಕ್ಕೆ ವರವೋ ಶಾಪವೋ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಭಾರತ ತನ್ನ ಸೇನೆಯನ್ನು ಬಲಪಡಿಸಲು ವಿದೇಶಗಳೊಂದಿಗೆ ಅನೇಕ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಮುಂದಾಗಿದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷದಲ್ಲಿ ಭಾರತ ಹೆಚ್ಚಿನ ಪ್ರಮಾಣದಲ್ಲಿ ಶಸ್ತಾಸ್ತ್ರ ಖರೀದಿಸಿ, ಚೀನಾಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ವಿಶ್ವದಲ್ಲಿ ಶಸ್ತ್ರಾಸ್ತ್ರ ಆಮದು ವಿಚಾರವಾಗಿ ಸ್ಟಾಕ್ಲೊಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ ಟಿಟ್ಯೂಷನ್ (ಎಸ್ಐಆರ್ ಪಿಐ) ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಇದರಲ್ಲಿ  ಭಾರತ ಅಗ್ರ ಸ್ಥಾನ ಪಡೆದಿದೆ.

ಕಳೆದ ಕೆಲವು ವರ್ಷಗಳಲ್ಲಿ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಶಸ್ತ್ರಾಸ್ತ್ರ ಆಮದು ಪ್ರಮಾಣಗಲ್ಲಿ ಗಣನೀಯ ಕುಸಿತ ಕಂಡಿರುವ ಬೆನ್ನಲ್ಲೇ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿರುವುದು ಗಮನಾರ್ಹ. ಇದಕ್ಕೆ ಕಾರಣ ಏನು ಎಂಬುದನ್ನು ವರದಿಯಲ್ಲಿ ವಿವರಿಸಿರೋದು ಹೀಗೆ… ‘ಒಂದೆಡೆ ಚೀನಾ ಮತ್ತೊಂದೆಡೆ ಪಾಕಿಸ್ತಾನ ಭಾರತದ ಗಡಿಯಲ್ಲಿ ಒತ್ತಡ ಹಾಕುತ್ತಿದೆ. ಈ ಎರಡು ರಾಷ್ಟ್ರಗಳು ಭಾರತ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರ ಖರೀದಿಸುವಂತೆ ಮಾಡಿದೆ. ಚೀನಾ ಶಸ್ತ್ರಾಸ್ತ್ರ ಇಳಿಕೆಯಾಗಿರೋದಕ್ಕೆ ಪ್ರಮುಖಖ ಕಾರಣ, ಚೀನಾ ತನಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ತಾನೇ ಉತ್ಪಾದಿಸಿಕೊಳ್ಳುತ್ತಿದೆ. ಅಲ್ಲದೆ ಪಾಕಿಸ್ತಾನ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳಿಗೆ ಶಸ್ತ್ರಾಸ್ತ್ರ ಪೂರೈಸಿ ಆ ರಾಷ್ಟ್ರಗಳ ಜತೆಗೆ  ಸಂಬಂಧ ಗಟ್ಟಿ ಮಾಡೊಂಡಿದೆ.’

ಶಸ್ತ್ರಾಸ್ತ್ರ ಆಮದಿನ ಬಗ್ಗೆ ವರದಿಯಲ್ಲಿರುವ ಪ್ರಮುಖ ಅಂಶಗಳು…

  • ಕಳೆದ 10 ವರ್ಷದಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ.24 ರಷ್ಟು ಹೆಚ್ಚಳ.
  • ವಿಶ್ವದ ಶಸ್ತ್ರಾಸ್ತ್ರ ವರ್ಗಾವಣೆಯ ಶೇ.12ರಷ್ಟು ಭಾಗವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.
  • 2008-12 ಹಾಗೂ 2013-17ರ ಅವಧಿಯಲ್ಲಿ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ.36ರಷ್ಟು ಇಳಿಕೆ.
  • 2008-12 ಹಾಗೂ 2013-17ರ ಅವಧಿಯಲ್ಲಿ ಚೀನಾದ ಶಸ್ತ್ರಾಸ್ತ್ರ ಆಮದು ಪ್ರಮಾಣ ಶೇ.19ರಷ್ಟು ಕುಸಿತ.
  • ಭಾರತ ಆಮದು ಮಾಡಿಕೊಳ್ಳುವ ಶಸ್ತ್ರಾಸ್ತ್ರಗಳಲ್ಲಿ ಶೇ.62ರಷ್ಟು ರಷ್ಯಾದಿಂದ ಬರುತ್ತದೆ. ಇದರೊಂದಿಗೆ ರಷ್ಯಾ ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ.
  • ಆದರೆ 2008-12 ಹಾಗೂ 2013-17ರ ಅವಧಿಯಲ್ಲಿ ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವ ಶಸ್ತ್ರಾಸ್ತ್ರ ಪ್ರಮಾಣ ಶೇ.557ರಷ್ಟು ಜಿಗಿತಕಂಡಿದೆ.
  • ಜಾಗತಿಕ ಮಟ್ಟದಲ್ಲಿ ಅಮೆರಿಕ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಕೆ ರಾಷ್ಟ್ರವಾಗಿದೆ. ವಿಶ್ವದ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಶೇ. 34ರಷ್ಟು ಪಾಲು ಹೊಂದಿದೆ.
  • 2008-12 ಹಾಗೂ 2013-17ರ ಅವಧಿಯಲ್ಲಿ ಅಮೆರಿಕ ಶಸ್ತ್ರಾಸ್ತ್ರ ಪೂರೈಕೆ ಪ್ರಮಾಣದಲ್ಲಿ ಶೇ.25ರಷ್ಟು ಏರಿಕೆ.

ಈ ಎಲ್ಲ ಅಂಶಗಳನ್ನು ಗಮನಿಸಿದ ಮೇಲೆ ನಮಗೆ ಅನೇಕ ಅಂಶಗಳು ತಿಳಿದುಬರುತ್ತವೆ. ಒಂದೆಡೆ ನಮ್ಮ ಸೇನೆಯ ಬಲ ಹೆಚ್ಚುತ್ತಿದೆ ಎಂಬುದು ಸಮಾಧಾನ ತಂದರೂ ಭಾರತ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ವಿದೇಶಗಳನ್ನು ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿರುವುದು ಸ್ಪಷ್ಟವಾಗುತ್ತದೆ. ಇದರಿಂದ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಬೇಕಾಗಿದೆ. ಇನ್ನು ಅಂತಾರಾಷ್ಟ್ರೀಯ ಸಂಬಂಧದಲ್ಲಿ ಈ ಶಸ್ತ್ರಾಸ್ತ್ರ ವ್ಯಾಪಾರದ ಮೂಲಕವೇ ಭಾರತ ಅಮೆರಿಕ ಹಾಗೂ ರಷ್ಯಾದಂತಹ ಪ್ರಬಲ ರಾಷ್ಟ್ರಗಳೊಡನೆ ಉತ್ತಮ ಸಂಬಂಧ ಹೊಂದಿರುವುದಕ್ಕೆ ನೆರವಾಗಿದೆ. ಒಟ್ಟಿನಲ್ಲಿ ಈ ವರದಿಯಲ್ಲಿನ ಅಂಶಗಳು ಭಾರತದ ಸಕಾರಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ತೆರೆದಿಟ್ಟಿದ್ದು, ಮುಂದಿನ ದಿನಗಳಲ್ಲಿ ಭಾರತ ತನಗೆಬೇಕಿರುವ ಶಸ್ತ್ರಾಸ್ತ್ರವನ್ನು ತಾನೇ ಉತ್ಪಾದಿಸಿಕೊಳ್ಳುವ ಮಟ್ಟಕ್ಕೆ ತಲುಪಬೇಕಿದೆ ಎಂಬ ಸಂದೇಶ ರವಾನಿಸಿದೆ.

Leave a Reply