ರಾಜ್ಯದಲ್ಲಿ ಒಕ್ಕಲಿಗ- ಲಿಂಗಾಯತರಿಗಿಂತ ದಲಿತರು ಮುಸಲ್ಮಾನರೇ ಹೆಚ್ಚು? ಜಾತಿಗಣತಿಯಲ್ಲಿನ ರಹಸ್ಯವೇನು?

ಡಿಜಿಟಲ್ ಕನ್ನಡ ಟೀಮ್:

ತೀವ್ರ ವಿರೋಧದ ನಡುವೆಯೂ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಆ ಜಾತಿಗಣತಿಯ ಫಲಿತಾಂಶವನ್ನು ಬಹಿರಂಗಗೊಳಿಸಲು ರಾಜ್ಯ ಸರ್ಕಾರರ ಹಿಂದೇಟು ಹಾಕುತ್ತಿದ್ದು, ಇದು ರಾಜ್ಯದ ರಹಸ್ಯ ವಿಚಾರ ಎಂದು ಸಬೂಬು ಹೇಳುತ್ತಿದೆ.

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ಜಾತಿಗಣತಿ ಫಲಿತಾಂಶ ಬಿಡುಗಡೆಯಾದರೆ, ಇಡೀ ರಾಜ್ಯ ರಾಜಕಾರಣದ ಚಿತ್ರಣ ತಲೆಕೆಳಗಾಗಲಿದೆ. ತಾವು ತೋಡಿದ ಗುಂಡಿಗೆ ಬೀಳಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಸರ್ಕಾರ ಈ ಜಾತಿಗಣತಿಯ ಫಲಿತಾಂಶವನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಸದ್ಯ ಈ ಜಾತಿಗಣತಿಯಲ್ಲಿನ ಕೆಲವು ಅಂಶಗಳು ನ್ಯೂಸ್ 18 ಸುದ್ದಿ ಜಾಲತಾಣಕ್ಕೆ ಸಿಕ್ಕಿದ್ದು, ಅದರ ಪ್ರಕಾರ ರಾಜ್ಯದಲ್ಲಿ ಪ್ರಬಲ ಸಮುದಾಯ ಎಂದು ಗುರುತಿಸಿಕೊಂಡಿರುವ ಒಕ್ಕಲಿಗರು ಹಾಗೂ ಲಿಂಗಾಯತರಿಗಿಂತ ದಲಿತರು ಹಾಗೂ ಮುಸಲ್ಮಾನರೇ ಹೆಚ್ಚಾಗಿದ್ದಾರೆ.

ಜಾತಿಗಣತಿಯಲ್ಲಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರು ಶೇ.19ರಷ್ಟಿದ್ದು ಅಗ್ರಸ್ಥಾನದಲ್ಲಿದ್ದರೆ, ಮುಸಲ್ಮಾನರು ಶೇ.16ರಷ್ಟಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಲಿಂಗಾಯತರು ಹಾಗೂ ಒಕ್ಕಲಿಗರು ಕ್ರಮವಾಗಿ ಶೇ.14 ಮತ್ತು ಶೇ.11ರಷ್ಟಿದ್ದು, ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನು ಹಿಂದುಳಿದ ವರ್ಗಗಳು ಶೇ.20ರಷ್ಟಿದ್ದು, ಅದರಲ್ಲಿ ಕುರುಬ ಸಮುದಾಯವೇ ಶೇ.7ರಷ್ಟು ಪ್ರಬಲ್ಯಹೊಂದಿದೆ. ಎಸ್ಸಿ, ಎಸ್ಚಿ, ಮುಸಲ್ಮಾನರು ಹಾಗೂ ಕುರುಬರನ್ನು ಒಟ್ಟುಗೂಡಿಸಿದರೆ, ರಾಜ್ಯದ ಜನಸಂಖ್ಯೆಯಲ್ಲಿ ಶೇ.47.5ರಷ್ಟಾಗಲಿದೆ. ಈ ಸಮುದಾಯಗಳೇ ಸಿದ್ದರಾಮಯ್ಯ ಸರ್ಕಾರದ ಅಹಿಂದದ ಸಮುದಾಯವಾಗಿದ್ದು, ಒಕ್ಕಲಿಗರು ಹಾಗೂ ಲಿಂಗಾಯತರಿಗಿಂತ ಅಹಿಂದ ಪ್ರಾಬಲ್ಯ ರಾಜ್ಯದಲ್ಲಿ ಹೆಚ್ಚಾಗಿದೆ ಎಂಬುದು ಸಮೀಕ್ಷೆಯ ಅಂಕಿ ಅಂಶಗಳು ಸಾರುತ್ತಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿದ್ದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ಈಗ ಕುಸಿತ ಕಂಡಿರುವ ಅಂಶವನ್ನು ಬಹಿರಂಗಗೊಳಿಸಿದರೆ ಅದು ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ. ಈ ವರದಿಯಲ್ಲಿನ ಅಂಕಿ ಅಂಶಗಳು ಈ ಎರಡು ಸಮುದಾಯವನ್ನು ಸರ್ಕಾರದ ವಿರುದ್ಧ ನಿಲ್ಲುವಂತೆ ಮಾಡಿದರೆ ಚುನಾವಣೆ ಎದುರಿಸೋದು ಕಷ್ಟ ಎಂಬುದು ಕಾಂಗ್ರೆಸ್ ಸರ್ಕಾರದದ ಆತಂಕ ಹೀಗಾಗಿ ಈ ಸಮೀಕ್ಷೆಯ ಫಲಿತಾಂಶವನ್ನು ಸರ್ಕಾರದ  ರಹಸ್ಯ ವಿಷಯ ಎಂದು ಹೇಳಿ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ.

Leave a Reply