ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಚಿವ ಸಂಪುಟ ಅಸ್ತು

ಡಿಜಿಟಲ್ ಕನ್ನಡ ಟೀಮ್:
ವೀರಶೈವ-ಲಿಂಗಾಯತ ಧರ್ಮ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿರುವ ಸರ್ಕಾರ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಿ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಹೇಳಿದಿಷ್ಟು…
‘ವೀರಶೈವ-ಲಿಂಗಾಯತ ಧರ್ಮ ಬೇರೆ ಬೇರೆ. ಹೀಗಾಗಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ನೀಡಿ, ಅಲ್ಪಸಂಖ್ಯಾತರು ಎಂದು ಪರಿಗಣಿಸುವಂತೆ  ಕೇಂದ್ರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ. ಬಸವಣ್ಣನವರನ್ನು ಧರ್ಮಗುರು ಎಂದು, ವಚನಗಳನ್ನು ಧರ್ಮಗ್ರಂಥಗಳು ಎಂದು ಪರಿಗಣಿಸಿ, ಇಷ್ಟಲಿಂಗಧಾರಣೆಯನುಸಾರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವವರಿಗೆ ಲಿಂಗಾಯತರು ಎಂದು ಪರಿಗಣಿಸಲಾಗಿದೆ. ಇದನ್ನು ಒಪ್ಪುವ ವೀರಶೈವರನ್ನೂ ಲಿಂಗಾಯತರು ಎಂದು ಪರಿಗಣಿಸುವ ತೀರ್ಮಾನಕ್ಕೆ ಸಚಿವ ಸಂಪುಟ ಸರ್ವ ಸಮ್ಮತವಾಗಿ ಒಪ್ಪಿದೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪರಿಗಣಿಸಿ, ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕಿರುವುದು ಕೇಂದ್ರ ಸರ್ಕಾರ.ಹೀಗಾಗಿ ಕೇಂದ್ರ ಸರ್ಕಾರ ತನ್ನ ನಿಯಮಾವಳಿಗಳಡಿ ಕ್ರಮ ಕೈಗೊಳ್ಳುವುದಕ್ಕೆೆ ಪೂರಕವಾಗಿ ರಾಜ್ಯದ ಅಧಿಸೂಚನೆ ಜಾರಿಯಲ್ಲಿರುತ್ತದೆ. ವೀರಶೈವ-ಲಿಂಗಾಯತ ಬೇರೆ ಬೇರೆ. ಹೀಗಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪರಿಗಣಿಸಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ರಾಜ್ಯದ ಅಲ್ಪಸಂಖ್ಯಾತ ಆಯೋಗ ಶಿಫಾರಸು ಮಾಡಿತ್ತು.ಅದು ನೇಮಕ ಮಾಡಿದ ಜಸ್ಟೀಸ್ ನಾಗಮೋಹನ್‌ದಾಸ್ ನೇತೃತ್ವದ ಸಮಿತಿಯೂ ಇದೇ ಶಿಫಾರಸು ಮಾಡಿತ್ತು. ನಾಗಮೋಹನ್‌ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ಶಿಫಾರಸು, ರಾಜ್ಯ ಅಲ್ಪಸಂಖ್ಯಾತರ ಆಯೋಗ ನೀಡಿರುವ ಶಿಫಾರಸನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.’
ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮ ಅನುಮೋದನೆ ನೀಡಿದರೂ, ಅಲ್ಪಸಂಖ್ಯಾತರ ವ್ಯಾಪ್ತಿಯಲ್ಲಿ ಬರುವ ಮೀಸಲಾತಿ ಇವರಿಗೆ ಧಕ್ಕುವುದಿಲ್ಲ. ಆದರೆ ಇವರ ಸಮುದಾಯದ ಶಿಕ್ಷಣ ಸಂಸ್ಥೆ ಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆ ಸಂಗಳು ಆರ್‌ಟಿಇನಿಂದ ಹೊರಗುಳಿಯಲಿವೆ. ಕೇಂದ್ರ ಸರ್ಕಾರ ಈ ಸಮುದಾಯಕ್ಕೆ ಅನುಮೋದನೆ ನೀಡಿದರೆ, ವೀರಶೈವ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳು ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುವುದಲ್ಲದೆ, ಅವರಿಗೆ ಅಲ್ಪಸಂಖ್ಯಾತರ ಕೋಟಾದಡಿ ಧಕ್ಕಬಹುದಾದ ಎಲ್ಲಾ ಸವಲತ್ತುಗಳು ದೊರೆಯಲಿವೆ.

Leave a Reply