ತಲೆಯ ಮೇಲೆ ‘ಧರ್ಮದ ಬಂಡೆ’ ಎಳೆದುಕೊಂಡ ಸಿದ್ದರಾಮಯ್ಯ ಸರ್ಕಾರ

ಬಸವರಾಜ ಹಿರೇಮಠ

ಜಾತ್ಯತೀತರು ಎಂದು ಹೇಳಿಕೊಳ್ಳುವವರೆಲ್ಲ ಅತಿದೊಡ್ಡ ಜಾತಿವಾದಿಗಳಾಗಿರುತ್ತಾರೆ ಎನ್ನುವ ಮಾತೊಂದಿದೆ. ವೀರಶೈವರು ಮತ್ತು ಲಿಂಗಾಯತರು ಎಂದು ವಿಂಗಡಿಸುವ ಮುಖೇನ ಸಿದ್ದರಾಮಯ್ಯ ಆ ಮಾತಿಗೆ  ಪುನರ್‌ವ್ಯಾಖ್ಯಾನ ನೀಡಿದ್ದಾರೆ. ಇಂಥದ್ದೊಂದು ಪ್ರಯತ್ನಕ್ಕೆ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದ ವೀರೇಂದ್ರ ಪಾಟೀಲರು, ಎಸ್. ನಿಜಲಿಂಗಪ್ಪನವರು, ಜೆ.ಎಚ್. ಪಟೇಲರು ಮುಂದಾಗಿದ್ದರೆ ಒಂದು ಅರ್ಥ ಬರುತ್ತಿತ್ತು. ಅವರ ಮಾತನ್ನು ಕೇಳುವಷ್ಟು ವ್ಯವದಾನವೂ ಆ ಸಮುದಾಯಕ್ಕೆ ಇತ್ತು ಆದರೆ ಸಿದ್ದರಾಮಯ್ಯ ಮುಂದಾಗಿರುವುದನ್ನು ಗಮನಿಸಿದರೆ ಇದರಲ್ಲಿ ರಾಜಕಾರಣ ಬಿಟ್ಟು ಬೇರೇನೂ ಕಾಣುತ್ತಿಲ್ಲ. ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಇಂಥ ದುಸ್ಸಾಹಸಕ್ಕೆ ಸರಕಾರ ಮುಂದಾಗಿರುವುದು ವಿರಶೈವರು, ಲಿಂಗಾಯತರು ಇಬ್ಬರ ಕೆಂಗಣ್ಣಿಗೂ ಸರಕಾರ ಗುರಿಯಾದಂತಾಗಿದೆ.

ಸಿದ್ದರಾಮಯ್ಯ ಏನೇ ಪ್ರಯತ್ನ ಮಾಡಿದರೂ ತಮ್ಮ ನಾಯಕ ಎಂದು ಲಿಂಗಾಯತರು ಒಪ್ಪಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಒಪ್ಪಿಕೊಂಡರೆ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ, ಶರಣಪ್ರಕಾಶ ಪಾಟೀಲರು ಮಾತ್ರ. ಇದರ ಹಿಂದೆ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನ ಕೊಡುವ ಉದ್ದೇಶದ ಬದಲಿಗೆ, ಧರ್ಮವನ್ನು ಒಡೆಯುವುದಾಗಿದೆ. ಚುನಾವಣೆಯಲ್ಲಿ ಸಿದ್ದರಾಮಯ್ಯ ಪರ ಅನುಕಂಪಕ್ಕೆ ಬದಲಾಗಿ ‘ಧರ್ಮ ಒಡೆದ’ ಎನ್ನುವ ಸಿಟ್ಟು ಮಡುಗಟ್ಟುವ ಸಾಧ್ಯತೆಯೇ ಹೆಚ್ಚು ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು. ಆಂಧ್ರ ತೆಲಂಗಾಣ ರಾಜ್ಯ ಇಬ್ಬಾಗ ಮಾಡಿದಾಗ ಅಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಅದೇರೀತಿ ಕರ್ನಾಟಕದಲ್ಲಿ ಜಾತಿ ಒಡೆದಿರುವ ಪರಿಣಾಮವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ. ಇಷ್ಟಾಗಿಯೂ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಡುವೆ ಆಯ್ಕೆ ಬಂದರೆ ಆ ಸಮುದಾಯ  ಆಯ್ಕೆ ಮಾಡಿಕೊಳ್ಳುವುದು ಯಡಿಯೂರಪ್ಪನವರನ್ನೇ ಹೊರತು ಸಿದ್ದರಾಮಯ್ಯನವರನ್ನಲ್ಲ. ಅದರಲ್ಲೂ ಚುನಾವಣೆಯ ಸಮಯದಲ್ಲಿ ಇಂಥದ್ದೊಂದು ತೀರ್ಮಾನ ಸಿದ್ದು ಸರಕಾರಕ್ಕೆ ಅತ್ಯಂತ ದುಬಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಹಳ್ಳಿಗಾಡಿನ ಬಹಳಷ್ಟು ಜನರಿಗೆ ವೀರಶೈವ-ಲಿಂಗಾಯತದ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಎಲ್ಲರೂ ಲಿಂಗಪೂಜೆ ಮಾಡುತ್ತಾರೆ, ಎಲ್ಲರೂ ಬಸವಣ್ಣನನ್ನು ಆರಾಧಿಸುತ್ತಾರೆ. ಇಂಥ ಸಾಮಾಜಿಕ ವಾತಾವರಣದಲ್ಲಿ ಧರ್ಮದ ನಡುವೆ ಗೆರೆಕೊರೆಯುವಂಥ ಹುಂಬ ನಿರ್ಧಾರ ಒಪ್ಪಿತವಲ್ಲ. ಬಹಳಷ್ಟು ಕಡೆ ವೀರಶೈವರು-ಲಿಂಗಾಯತರನ್ನು, ಲಿಂಗಾಯತರು- ವೀರಶೈವರನ್ನು ಮದುವೆಯಾಗಿದ್ದಾರೆ. ಕೆಲವು ಕಡೆ ಗೊತ್ತಿದ್ದೂ ವಿವಾಹಗಳು ನಡೆದಿವೆ ಮತ್ತೆ ಕೆಲವು ಕಡೆ ಗೊತ್ತಿಲ್ಲದೆಯೂ ನಡೆದಿವೆ. ಈಗ ಅವರೆಲ್ಲ ಅತರ್ ಧರ್ಮೀಯರು ಎಂದು ಡಿವೋರ್ಸ್ ಕೊಡಲು ಸಾಧ್ಯವೆ?

ಒಂದು ಧರ್ಮದ ಉದಯ ಎನ್ನುವುದು ಯಾವುದೋ ಒಂದು ಕ್ಷಣದಲ್ಲಿ ದುತ್ತನೆ ಎದ್ದು ನಿಲ್ಲುವುದಿಲ್ಲ. ಅದಕ್ಕೆ ಕಾಲದ ಪ್ರತಿಸ್ಪಂದನ ಅತ್ಯಂತ ಮುಖ್ಯ. 12ನೇ ಶತಮಾನ ಮತ್ತು ಅದರ ಪೂರ್ವದಲ್ಲಿ ಕೆಳಸಮುದಾಯಗಳಿಗೆ ಧರ್ಮವೂ ಇರಲಿಲ್ಲ, ದೇವರೂ ಇರಲಿಲ್ಲ, ಸಮಾಜದಲ್ಲಿ ಗೌರವವೂ ಇರಲಿಲ್ಲ. ಚಾತುರ್ವರ್ಣ ಪದ್ಧತಿ ದೇಶವನ್ನು ಮುಕ್ಕುತ್ತಿತ್ತು. ಸಂಪ್ರದಾಯವಾದಿಗಳ ಕೈಯ್ಯಲ್ಲಿ ಮಾನವಕುಲ ನಲುಗುತ್ತಿತ್ತು. ಕೆಳವರ್ಗಗಳಿಗೆ ಮಾತನಾಡುವ, ಓದುವ, ನಡುರಸ್ತೆಯಲ್ಲಿ ಓಡಾಡುವ ಸ್ವಾತಂತ್ರ್ಯವೂ ಇಲ್ಲದ ಒಂದು ಕ್ರೂರ ವ್ಯವಸ್ಥೆ ಜಾರಿಯಲ್ಲಿತ್ತು. ಆಗ ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕವಾದ ಒಂದು ಧರ್ಮದ ಉದಯಕ್ಕೆ ಭಾರತದ ಭೂಮಿ ಹದವಾಗಿತ್ತು. ಅದನ್ನು ಅರಿತು ಬಸವಣ್ಣ  ವೈದಿಕ ಕಟ್ಟಳೆಗಳ ಸೋಂಕಿಲ್ಲದ ಸರ್ವಸಮ್ಮತವಾದ ಲಿಂಗಾಯತ ಧರ್ಮದ ಬೀಜವನ್ನು ಈ ಮಣ್ಣಿನಲ್ಲಿ ಊರಿದ. ಅದು ಇವತ್ತು ಹೆಮ್ಮರವಾಗಿ ಬೆಳೆದಿದೆ ಎನ್ನುವುದು ನಿರ್ವಿವಾದ. ಆದರೆ ಪ್ರಶ್ನೆ ಬರುವುದು ವೀರಶೈವರೆಲ್ಲ ಬಸವಣ್ಣನ ಆರಾಧನೆ ಬಿಡಬೇಕೆ? ಇಷ್ಟಲಿಂಗ ಪೂಜೆ ನಿಲ್ಲಿಸಿ ಸ್ಥಾವರ ಲಿಂಗದತ್ತ ಮುಖಮಾಡಬೇಕೆ? ಇಂಥ ಹತ್ತಾರು ಪ್ರಶ್ನೆಗಳು ಏಳುತ್ತವೆ.

ಸಮತಾವಾದ, ಸಮಾಜವಾದ, ಪ್ರಜಾಪ್ರಭುತ್ವದ ಸಮಾನತೆ ಸಾರಿದ ಲಿಂಗಾಯತ ಧರ್ಮ ಸಮಾಜದ ಹೃದಯದ ಅಸ್ಮಿತೆಯೊಳಗಿಂದ ಮೂಡಿ ಬಂದಿದ್ದರಿಂದ ಎಲ್ಲರೂ ಅದರಲ್ಲಿ ಸೇರಿದರು. ಆದರೆ ರಾಜಕಾರಣಕ್ಕಾಗಿ ಅದೇ ಇವತ್ತು ಜನತಂತ್ರ ವಿರೋಧಿಯಾಯಿತೆ?

ಬಸವ ಧರ್ಮವೇ ಇವತ್ತು ರಾಜಕಾರಣದ ಅಸ್ತ್ರವಾಗಿರುವುದಂತೂ ಸತ್ಯ. ಲಿಂಗಾಯತ ಧರ್ಮ ಪ್ರತ್ಯೇಕವಾಗಲೇಬೇಕಾದ ಅನಿವಾರ್ಯತೆ ಎದುರಾಗಿತ್ತೆ?  ಲಿಂಗಾಯತ ಹಿಂದೂ ಧರ್ಮದ ಒಂದು ಭಾಗ ಎಂದು ಹೇಳುವವರೂ ಇದ್ದಾರೆ. ಆದರೆ ಹಿಂದೂ ಒಂದು ಧರ್ಮವೇ ಅಲ್ಲ, ಅದಕ್ಕೊಂದು ಧರ್ಮಗ್ರಂಥವೂ ಇಲ್ಲ. ಅದು ಕೇವಲ ಸಂಸ್ಕೃತಿ, ಪರಂಪರೆಯನ್ನು ಒಳಗೊಂಡ ಆಚರಣೆ ಅಷ್ಟೇ. ಆದರೆ ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಕಟ್ಟಳೆಗಳಿವೆ, ಚೌಕಟ್ಟುಗಳಿವೆ ಬಹಳ ಮುಖ್ಯವಾಗಿ ಭಾರತದಂಥ ಬಹುಜಾತಿ, ವರ್ಣ ವ್ಯವಸ್ಥೆಯನ್ನು ಹೊಂದಿರುವ ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆದುಕೊಂಡು ಹೋಗಲು ಬೇಕಾದ, ಎಲ್ಲರೂ ಶಾಂತಿಯಿಂದ ಬಾಳಲು ಬೇಕಾದ ದಾರಿಗಳಿವೆ. ಆದರೆ ಅದು ಯಾರಿಂದ ಘೋಷಣೆಯಾಗುತ್ತದೆ? ಯಾವಕಾಲಘಟ್ಟದಲ್ಲಿ, ಸಾಮಾಜಿಕ ಸನ್ನಿವೇಶ ಅನ್ನುವಂಥದ್ದು ಬಹಳ ಮುಖ್ಯ. ಧರ್ಮದ ಘೋಷಣೆಗೆ ಸಮಕಾಲೀನ ಭಾರತದ ನೆಲ ಪಕ್ವವಾಗಿಲ್ಲ. ಅದರಲ್ಲೂ ಕರ್ನಾಟಕದ ಮಣ್ಣು ಅದನ್ನು ಒಪ್ಪುವ  ಸ್ಥಿತಿಯಲ್ಲೇ ಇಲ್ಲದಿದ್ದಾಗ ಕೇಂದ್ರ ಸರಕಾರಕ್ಕೆ ‘ಧರ್ಮದ ಪೋಸ್ಟ್’ ಮಾಡುವ ರಾಜ್ಯ ಸರಕಾರದ ನಿಲುವು ಸರಿಯಾಗಿರಲಿಲ್ಲ.

ಜನರ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ಅವರ ಆಶೋತ್ತರಗಳ ಅಭಿವ್ಯಕ್ತಿಯಾಗಿ ರೂಪುಗೊಂಡ ಧರ್ಮವೊಂದು ಜಗತ್ತಿನಲ್ಲಿದ್ದರೆ ಅದು ಲಿಂಗಾಯತ ಧರ್ಮ ಮಾತ್ರ. ಧರ್ಮದ ಆಚರಣೆ ಮನುಷ್ಯನಿಂದ ಆಗಬೇಕೆ ಹೊರತು ಮನುಷ್ಯ ಧರ್ಮದ ಗುಲಾಮನಾಗಬಾರದು ಎಂದು ಅತ್ಯಂತ ಸ್ಪಷ್ಟವಾಗಿ ಪ್ರತಿಪಾದಿಸಿದ ಶರಣ ಧರ್ಮವನ್ನೇ ರಾಜಕೀಯ ಗುಲಾಮಗಿರಿಗೆ ಒಳಪಡಿಸಿದಂತಾಗಲಿಲ್ಲವೆ? ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗಬಹುದು.

Leave a Reply