ಡಿಕೆಶಿಗೆ ಜಾಮೀನು; ಐಟಿ ಕಚೇರಿ ಮೇಲೆ ಕಾಂಗ್ರೆಸ್ ದಾಳಿ!

ಡಿಜಿಟಲ್ ಕನ್ನಡ ಟೀಮ್:
ಐಟಿ ದಾಳಿ ಸಂದರ್ಭ ಸಾಕ್ಷ್ಯ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಅಪರಾಧ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಅವರು ಬಂಧನ ಭೀತಿಯಿಂತ ಪಾರಾಗಿದ್ದಾರೆ.
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ ಸಂದರ್ಭದಲ್ಲಿ ಶಿವಕುಮಾರ್ ಮತ್ತವರ ಆಪ್ತರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಹರಿದು ಹಾಕಿ, ಸಾಕ್ಷ್ಯ. ನಾಶಪಡಿಸಿದ ಆರೋಪದ ಮೇಲೆ ಐಟಿ ಇಲಾಖೆ ದಾವೆ ಹೂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಎಂ.ಎಸ್. ಆಳ್ವಾ ಅವರು ಗುರುವಾರ ಜಾಮೀನು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಐಟಿ ಇಲಾಖೆ ಕೇಂದ್ರ ಸರಕಾರದ ಕೈಗೊಂಬೆಯಾಗಿ ಕಾಂಗ್ರೆಸ್ ನಾಯಕರ ಮನೆ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಇದೇ ಸಂದರ್ಭ ಕೆಲವು ಕಾರ್ಯಕರ್ತರು ಐಟಿ ಕಚೇರಿ ಮೇಲೆ ದಾಳಿ ಮಾಡಿ, ನಾಮಫಲಕಕ್ಕೆ ಮಸಿ ಬಳಿದರು. ಐಟಿ ಅಧಿಕಾರಿಗಳು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಹಾಕಿದರು.

ನಂತರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ-ಗೋವಾ ಐಟಿ ಇಲಾಖೆ ಆಯುಕ್ತ ರಜನೀಶ್ ಕುಮಾರ್, ಇಲಾಖೆ ದಾಳಿಗಳ ಹಿಂದೆ ಯಾವುದೇ ದುರುದ್ದೇಶವಾಗಲಿ, ಪೂರ್ವಾಗ್ರಹವಾಗಲಿ ಇಲ್ಲ. ನಿಸ್ಪಕ್ಷಪಾತ ದಾಳಿ, ತನಿಖೆ ನಡೆಸಲಾಗಿದೆ, ನಡೆಸಲಾಗುತ್ತಿದೆ. ಈ ಬಗ್ಗೆ ಯಾರಿಗಾದರೂ ಅನುಮಾನವಿದ್ದಲ್ಲಿ ಹೈಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿದರು.

Leave a Reply