ಮೂರೂ ಅಭ್ಯರ್ಥಿ ಗೆಲ್ಲಿಸಿಕೊಳ್ಳುವಲ್ಲಿ ಸಿದ್ದು ಸಫಲ, ಗೌಡ್ರ ತಂತ್ರ ವಿಫಲ

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಣ ಪೈಪೋಟಿಗೆ ವೇದಿಕೆಯಾಗಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಡಾ.ಎಲ್.ಹನುಮಂತಯ್ಯ, ಡಾ.ಸಯ್ಯದ್ ನಾಸಿರ್ ಹುಸೇನ್, ಜಿ.ಸಿ. ಚಂದ್ರಶೇಖರ್ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಜೆಡಿಎಸ್ ಅಭ್ಯರ್ಥಿ ಫಾರೂಕ್ ಮತ್ತೆ ಸೋಲನುಭವಿಸುವ ಮೂಲಕ ಜೆಡಿಎಸ್ ಗೆ ತೀವ್ರ ಹಿನ್ನಡೆಯಾಗಿದೆ.

4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೂವರು ಹಾಗೂ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಹನುಮಂತಯ್ಯ 44, ನಾಸಿರ್ ಹುಸೇನ್ 42, ಚಂದ್ರಶೇಖರ್ 46 ಹಾಗೂ ರಾಜೀವ್ ಚಂದ್ರಶೇಖರ್ 50 ಮತ ಪಡೆದರು. ಅದರೊಂದಿಗೆ ಈವರೆಗೂ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ರಾಜೀವ್ ಚಂದ್ರಶೇಖರ್ ಈ ಬಾರಿ ಹಚ್ಚು ಮತ ಪಡೆದಿದ್ದಾರೆ.

ನಾಲ್ಕನೇ ಅಬ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಏರ್ಪಟ್ಟಿದ್ದ ಹೋರಾಟ ಬೆಳಿಗ್ಗೆಯಿಂದ ರಾತ್ರಿವರೆಗೂ ಅನೇಕ ನಾಟಕೀಯ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿತು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಮತಪತ್ರದಲ್ಲಿ ತಪ್ಪಾಗಿ ಗುರುತು ಮಾಡಿ ನಂತರ ಬೇರೆ ಮತಪತ್ರಗಳನ್ನು ಪಡೆದಿದ್ದು ಗೊಂದಲ ಉಂಟುಮಾಡಿ ಕೊನೆಗೆ ಇದು ಜೆಡಿಎಸ್ ಚುನಾವಣೆ ಬಹಿಷ್ಕಾರಕ್ಕೂ ಕಾರಣವಾಯಿತು.

224 ಸದಸ್ಯಬಲದ ವಿಧಾನಸಭೆಯಲ್ಲಿ ಮೂವರು ಶಾಸಕರು ನಿಧನರಾಗಿದ್ದು, ನಾಲ್ವರು ರಾಜೀನಾಮೆ ನೀಡಿದ್ದರಿಂದ 217 ಮತಗಳಿದ್ದವು. ಎಚ್.ಡಿ. ರೇವಣ್ಣ, ಸಾ.ರಾ. ಮಹೇಶ್ ಹೊರತುಪಡಿಸಿ ಜೆಡಿಎಸ್‌ನ ಉಳಿದ 28 ಶಾಸಕರು ಮತದಾನ ಬಹಿಷ್ಕರಿಸಿದ್ದರಿಂದ 188 ಮತಗಳಷ್ಟೇ ಚಲಾವಣೆಯಾಗಿದ್ದವು. ಇದರಲ್ಲಿ ಕಾಗೋಡು ತಿಮ್ಮಪ್ಪ, ಬಾಬುರಾವ್ ಚಿಂಚನಸೂರ್ ಮತಗಳನ್ನು ಅಸಿಂಧು ಎಂದು ಪರಿಗಣಿಸಿ ಎಣಿಕೆಯಿಂದ ಕೈಬಿಡಲಾಯಿತು. 2 ಮತ ತಿರಸ್ಕೃತವಾಗಿದ್ದು, ಗೆಲುವಿನ ಮತಗಳು 44 ರಿಂದ 38 ಕ್ಕೆ ಇಳಿಯಿತು.

Leave a Reply