ಕಾಂಗ್ರೆಸ್ ಕುಸಿಯುತ್ತಿರುವುದಕ್ಕೆ ಕುಮಾರಸ್ವಾಮಿ ಕೊಟ್ಟ ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ಸಂಘಪರಿವಾರದ ಒಂದು ಭಾಗ ಎಂದು ಟೀಕೆ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಬಹುಸಂಖ್ಯಾತರನ್ನು ಕಡೆಗಣಿಸಿದ್ದಕ್ಕಾಗಿಯೇ ಇಂದು ಕಾಂಗ್ರೆಸ್ ಕುಸಿತದತ್ತ ಸಾಗಿದೆ. ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನವೇ ಇಲ್ಲ’ ಎಂದಿದ್ದಾರೆ. ಇನ್ನು ರಾಹುಲ್ ಹೇಳಿಕೆಗೆ ದೇವೇಗೌಡರು ಪ್ರತಿಕ್ರಿಯಿಸಿದ್ದು, ‘ರಾಹುಲ್ ಒಬ್ಬ ಅಜ್ಞಾನಿ’ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿಗೆ ಈ ಇಬ್ಬರು ನಾಯಕರು ಬಿಸಿ ಮುಟ್ಟಿಸಿದ್ದು ಹೀಗೆ….

ಕುಮಾರಸ್ವಾಮಿ: ‘ಜೆಡಿಎಸ್ ಜಾತ್ಯತೀತ ಪಕ್ಷವಲ್ಲ ಎನ್ನುತ್ತಿರುವ ರಾಹುಲ್ ಗಾಂಧಿ ಅವರು ಮೊದಲು ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ. ತನ್ನ ಧರ್ಮದ ಬಗ್ಗೆ ಆಳವಾದ ನಂಬಿಕೆ, ಅಪಾರ ಗೌರವ ಹೊಂದಿದ್ದರೂ ಇತರರ ಧರ್ಮದ ಬಗ್ಗೆ ಗೌರವ ಹೊಂದಿರುವುದು, ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುವುದು ನಮ್ಮ ಪಕ್ಷದ ಜಾತ್ಯತೀತತೆ. ಆದರೆ ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತ, ಬಹುಸಂಖ್ಯಾತರು ತಮ್ಮ ಕಿಸೆಯಲ್ಲಿದ್ದಾರೆಂದು ಭಾವಿಸಿಕೊಂಡು ಶತಶತಮಾನಗಳಿಂದಲೂ ಅವರನ್ನು ಕಡೆಗಣಿಸಿಕೊಂಡು ಬಂದಿರುವುದು ಕಾಂಗ್ರೆಸ್ ನಂಬಿರುವ ಜಾತ್ಯತೀತತೆ.

ಬಹುಸಂಖ್ಯಾತರನ್ನು ಕಡೆಗಣಿಸಿದ ನಿಮ್ಮ ನಡುವಳಿಕೆಯಿಂದಾಗಿಯೇ ನಿಮ್ಮ ಪಕ್ಷ ಅಳಿವಿನ ಅಂಚಿನಲ್ಲಿದೆ. ಮುಳುಗುವಾಗ ನಿಮ್ಮ ಪಕ್ಷಕ್ಕೆ ಸಮರ್ಥ, ಜಾತ್ಯತೀತ ನಾಯಕನ ಅಗತ್ಯವಿತ್ತು. ಆದರೆ, ಭಾರತದ ಸಾಮಾಜಿಕ, ರಾಜಕೀಯ ವಾಸ್ತವವನ್ನು ಅರಿಯದ ನಿಮ್ಮಂಥ ಅಪ್ರಬುದ್ಧರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.’

ದೇವೇಗೌಡರು: ‘ರಾಹುಲ್ ಗಾಂಧಿ ಇನ್ನೂ ಬೆಳೆಯಬೇಕಾದ ನಾಯಕ. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮಾತನಾಡಬೇಕೇ ಹೊರತು ಬೇರೊಬ್ಬರು ಹೇಳಿಕೊಟ್ಟದ್ದನ್ನು ಹಿಂದುಮುಂದು ನೋಡದೆ ಮಾತನಾಡಬಾರದು. ಪರಿಪೂರ್ಣವಾಗಿ ರಾಜಕೀಯ ಜ್ಞಾನವಿಲ್ಲದ ಕಾರಣ ರಾಹುಲ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.’

Leave a Reply