ತೆನೆ ಬಿಸಾಕಿ ಕೈ ಹಿಡಿಯಲು ಸಿದ್ಧರಾದ್ರು ಸಪ್ತ ಶಾಸಕರು, ಇವರಿಗೆ ಹಿರಿಯ ನಾಯಕ ನಾಣಯ್ಯ ಸಾಥ್!

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಅಮಾನತುಗೊಂಡಿದ್ದ ಏಳು ಜೆಡಿಎಸ್‌ ಶಾಸಕರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಭಾನುವಾರ ಕಾಂಗ್ರೆಸ್ ಗೂಡಿಗೆ ಸೇರಿಕೊಳ್ಳುತ್ತಿದ್ದಾರೆ.

ಈ ನಾಯಕರು ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಎಂಟ್ರಿ ಕೊಡಲಿದ್ದಾರೆ. ಜೆಡಿಎಸ್ ಹಿರಿಯ ಮುಖಂಡರಾದ ಎಂ.ಸಿ.ನಾಣಯ್ಯ, ಸರೋವರ್ ಶ್ರೀನಿವಾಸ್ ಸಹ ಸಿದ್ದರಾಮಯ್ಯನವರ ಹೆಗಲ ಮೇಲೆ ಕೈ ಹಾಕಿದ್ದು, ಜೆಡಿಎಸ್ ಹೇಗೆ ಇದನ್ನು ಜೀರ್ಣಿಸಿಕೊಳ್ಳಲಿದೆ ಎಂಬುದು ಸದ್ಯದ ಪ್ರಶ್ನೆ. ಶುಕ್ರವಾರ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆದ ಬೆನ್ನಲ್ಲೇ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ.

ರಾಜೀನಾಮೆ ನೀಡುತ್ತಿದ್ದಂತೆ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಬಂಡಾಯ ಶಾಸಕರಲ್ಲಿ ಒಬ್ಬರಾದ ಜಮೀರ್ ಅಹ್ಮದ್, ‘ಸಹೋದರನ ಪುತ್ರ ಪ್ರಜ್ವಲ್ ರೇವಣ್ಣ ಒಳ್ಳೆಯ ವ್ಯಕ್ತಿ. ಅವರನ್ನೇ ಬೆಳೆಯಲು ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ ಬಿಡುತ್ತಿಲ್ಲ. ಇನ್ನು ಕುಮಾರಸ್ವಾಮಿಗೆ ನಾವೆಲ್ಲ ಯಾವ ಲೆಕ್ಕ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಒಬ್ಬರೇ ನಾಯಕರಾಗಿರ ಬೇಕು ಎಂದು ಕೊಂಡಿದ್ದಾರೆ. ಬೇರೆಯವರನ್ನು ಬೆಳೆಯಲು ಅವರು ಬಿಡುವುದಿಲ್ಲ. ತಂದೆ ದೇವೇಗೌಡರ ಮಾತನ್ನೇ ಕುಮಾರಸ್ವಾಮಿ ಕೇಳುತ್ತಿಲ್ಲ’ ಎಂದರು.

ಜಮೀರ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ಹೆಚ್ಡಿಕೆ ಹೇಳಿದಿಷ್ಟು… ‘ಪಕ್ಷ ಒಡೆದಾಯಿತು ಈಗ ಮನೆಯನ್ನೂ ಒಡೆಯಲು ಬರಬೇಡಿ ನಮ್ಮ ಪಕ್ಷ, ಚಿಹ್ನೆಯಿಂದ ಸ್ಪರ್ಧಿಸಿ ಇದೀಗ ದ್ರೋಹ ಬಗೆದಿದ್ದೀರಿ. ರಾಜಕಾರಣಿಗಳಿಗೆ ಪಕ್ಷವೇ ತಾಯಿ. ಆದರೆ ಇವರು ತಾಯಿಯನ್ನೇ ಕಡೆಗಣಿಸಿದರು. ಇವರಿಂದ ಯುವ ಪೀಳಿಗೆಗೆ ಸಿಕ್ಕ ಸಂದೇಶ ವಾದರೂ ಏನು? ಬಂಡೆದ್ದವರು, ನಮ್ಮ ಪಕ್ಷವನ್ನು ಒಡೆದವರು, ಒಡೆಯಲೆತ್ನಿಸುತ್ತಿರುವವರನ್ನು ನಾನು ಚುನಾವಣಾ ಕಣದಲ್ಲಿ ಸಂಧಿಸುತ್ತೇನೆ. ಆ  ಶಕ್ತಿಯನ್ನು ನಾಡಿನ ಜನತೆ ನನಗೆ ನೀಡಿದ್ದಾರೆ.’

Leave a Reply