ಕಾಂಗ್ರೆಸ್ಸಿನ ಅನಿವಾರ್ಯ ಸತ್ವ, ಸವಾಲು ಈ ಸಿದ್ದರಾಮಯ್ಯ!

ಒಡೆದಾಳುವ ರಾಜನೀತಿಯಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ಒಂದು ಪಕ್ಷ, ಒಂದು ಪಕ್ಷದ ಮತಬ್ಯಾಂಕ್ ಅನ್ನು ಒಡೆಯುವಾಗ ಆ ತಂತ್ರಮಗ್ನನಿಗೆ ಲಾಭವಲ್ಲದೇ ಬೇರೇನೂ ಗೋಚರಿಸಿರುವುದಿಲ್ಲ. ಅಂದುಕೊಂಡದ್ದು ನಿಜವಾದರೆ ಆತನನ್ನು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಕೆಳಗೆ ಬಿದ್ದ ಆತನನ್ನು ನೋಡಲು ಯಾರೂ ಇರುವುದಿಲ್ಲ. ಇದು ರಾಜಕೀಯ ಒಡಲಲ್ಲಿ ಹುದುಗಿರುವ ಕಹಿಸತ್ಯ. ತಾವಿರುವ ತಾವು ಬಿಗಿ ಮಾಡಿಕೊಳ್ಳುತ್ತಲೇ, ಎದುರಾಳಿಗಳ ತಾವಿಗೆ ಹಾವು ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳಿನ ಚುನಾವಣೆಯಲ್ಲಿ ಆಗಬಹುದಾದ ‘ಸತ್ಯದರ್ಶನ’ಕ್ಕೆ ತಮ್ಮೆಲ್ಲ ರಾಜಕೀಯ ಅನುಭವವನ್ನು ಪಣಕ್ಕಿಟ್ಟಿದ್ದಾರೆ.

ರಾಜಕಾರಣದಲ್ಲಿ ಒಬ್ಬ ನಾಯಕನ ಶಕ್ತಿ, ಸಾಮರ್ಥ್ಯ ಎದುರಾಳಿಯ ತಾಕತ್ತಿನ ಜತೆ ಮಾಪನ ಮಾಡಿ ನೋಡಿದಾಗ ತೀರ್ಮಾನ ಆಗುತ್ತದೆ. ಇಬ್ಬರೂ ಸಮಾನ ಶಕ್ತಿಶಾಲಿಗಳಾದರೆ ಕದನ ಕೊನೆವರೆಗೂ ಕುತೂಹಲ ಕಾಯ್ದುಕೊಳ್ಳುತ್ತದೆ. ನಿರ್ದಿಷ್ಟ ನಿರ್ಣಯಕ್ಕೆ ಬರಲು ಇಬ್ಬರಿಗೂ ಆಗುವುದಿಲ್ಲ. ಆಗ ಒತ್ತಡದ್ದೇ ಪಾರುಪತ್ಯ. ಆ ಒತ್ತಡ ಕಡಿಮೆ ಆಗಬೇಕಾದರೆ ಒಬ್ಬರು ಮತ್ತೊಬ್ಬರನ್ನು ದುರ್ಬಲಗೊಳಿಸಬೇಕು. ಎದುರಾಳಿ ದುರ್ಬಲನಾದಷ್ಟು ಈತನ ಆತ್ಮವಿಶ್ವಾಸ ವೃದ್ಧಿಸುತ್ತಾ ಹೋಗುತ್ತದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ತಂತ್ರ ರಾಜಕಾರಣದ ಮೊರೆ ಹೋಗಿದ್ದಾರೆ. ಒಂದೆಡೆ ಹಿಂದೆ ತಾವು ತೊರದು ಬಂದ ಜಾತ್ಯತೀತ ಜನತಾ ದಳವನ್ನು ಒಡೆದು ಬಿಸಾಡಿದ್ದಾರೆ. ಇನ್ನೊಂದೆಡೆ ಭಾರತೀಯ ಜನತಾ ಪಕ್ಷದ ಮತಬ್ಯಾಂಕ್ ಎಂದೇ ಪರಿಗಣಿತವಾಗಿದ್ದ ಲಿಂಗಾಯತ ಸಮುದಾಯವನ್ನೂ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವಿಭಜಿಸಿದ್ದಾರೆ. ಮತ್ತೊಂದೆಡೆ ತಾವಿರುವ ಮನೆ ಕಾಂಗ್ರೆಸ್ಸಿನಲ್ಲೂ ಉಸಿರೆತ್ತದಂತೆ ಎಲ್ಲರ ಹೆಡೆಮುರಿಗೆ ಕಟ್ಟಿ ಮಲಗಿಸಿದ್ದಾರೆ. ಈ ಮೂರು ನಡೆಯ ಹಿಂದಿರುವುದು ಕಾಂಗ್ರೆಸ್ ಹಾಗೂ ತಮ್ಮ ನಾಯಕತ್ವವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವುದು.

ಮೂರು ದಶಕಗಳ ನಂತರ ಮುಖ್ಯಮಂತ್ರಿ ಪರಿಪೂರ್ಣ ಅವಧಿ ಕ್ರಮಿಸಿದ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿರುವುದರ ಹಿಂದಿರುವುದು ಮತ್ತದೇ ರಾಜಕೀಯ ಜಾಣ್ಮೆಯೇ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಇಂಬುಗೊಟ್ಟ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಪರಿಸ್ಥಿತಿ. ಕಳೆದ ಸಂಸತ್ ಚುನಾವಣೆ ಹಾಗೂ ನಂತರ ನಡೆದ ಸಾಲು-ಸಾಲು ವಿಧಾನಸಭೆ ಚುನಾವಣೆಗಳಲ್ಲಿ ದೇಶಾದ್ಯಂತ ಕಾಂಗ್ರೆಸ್ ಸೋತು ಸುಣ್ಣವಾಗಿದ್ದು, ಅದೇ ಕಾಲಕ್ಕೆ ಕರ್ನಾಟಕದಲ್ಲಿ ಪಕ್ಷದ ಮಾನ ಉಳಿಸಿದ್ದು ಸಿದ್ದರಾಮಯ್ಯ ನಾಯಕತ್ವಕ್ಕೆ ವರದಾನವಾಗಿ ಪರಿಣಮಿಸಿತ್ತು. ಆದರೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ಸಿದ್ದರಾಮಯ್ಯ ಇದೀಗ ಅವರೂದುವ ಪುಂಗಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರೂ ತಲೆದೂಗುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಅವರು ಮುಖ್ಯಮಂತ್ರಿಯಾದ 2013 ರಿಂದ ಈಗಿನವರೆಗೆ ಕ್ರಮಿಸಿದ ರಾಜಕೀಯ ಯಾನದಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ಹೇಳಿಕೊಳ್ಳುವಂಥ ದೃಢ ಅಡೆತಡೆಗಳು ತಲೆಎತ್ತದಿರುವಲ್ಲಿ ಅವರ ರಾಜಕೀಯ ಜಾಣ್ಮೆ ಜತೆಜತೆಗೆ ಅದೃಷ್ಟವೂ ಕೆಲಸ ಮಾಡಿದೆ. ಈ ಎರಡರ ಸಮ್ಮಿಶ್ರ ಫಲವಾಗಿ ಧಕ್ಕಿರುವ ಪ್ರಶ್ನಾತೀತ ನಾಯಕ ಪಟ್ಟವನ್ನು ಎದುರಾಳಿಗಳ ಸಾಮರ್ಥ್ಯ ನುಚ್ಚುನೂರು ಮಾಡುವ ರಾಜಕೀಯ ಒಳತಂತ್ರಗಳಿಗೆ ಮೀಸಲಿಟ್ಟು, ತಮ್ಮ ರಾಜಕೀಯ ಭವಿಷ್ಯವನ್ನು ಅದರಲ್ಲೇ ಮೀಯಿಸುತ್ತಿದ್ದಾರೆ.

ನಿಜ, ಇದೀಗ ಜೆಡಿಎಸ್‌ನ ಸಪ್ತ ಶಾಸಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವುದರ ಹಿಂದೆ ಕೆಲಸ ಮಾಡಿರುವುದು ಸಿದ್ದರಾಮಯ್ಯನವರ ಒಳತಂತ್ರವೇ. ಗೌಡರ ಕುಟುಂಬ ರಾಜಕೀಯಕ್ಕೆ, ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಅವರ ‘ಅನಿಶ್ಚಿತ’ ಮನಸ್ಥಿತಿಗೆ ಬೇಸತ್ತು, ಜೆಡಿಎಸ್ ಜತೆ ಸಂಬಂಧ ಕಡಿದುಕೊಳ್ಳಲು ಸೂಕ್ತ ಅವಕಾಶಕ್ಕಾಗಿ ತವಕಿಸುತ್ತಿದ್ದ ಈ ಏಳೂ ಮಂದಿಗೆ ‘ಆಶಾಕಿರಣ’ವಾಗಿ ಕಂಡದ್ದು ಎರಡು ವರ್ಷಗಳ ಹಿಂದೆ ನಡೆದ ರಾಜ್ಯಸಭೆ ಚುನಾವಣೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಫಲವಾಗಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಫಾರೂಕ್ ಬದಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಪರ ಅಡ್ಡಮತದಾನ ಮಾಡಿದ ಈ ಏಳೂ ಮಂದಿ ‘ತೆನೆ’ಗೇ ತರ್ಪಣ ನೀಡಿದ್ದರು. 2004 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡದೇ ಧರ್ಮಸಿಂಗ್ ಅವರನ್ನು ಆ ಸ್ಥಾನಕ್ಕೆ ತಂದ ದೇವೇಗೌಡರ ಕುಟುಂಬದ ವಿರುದ್ಧ ಮನದೊಳಗೇ ಹರಿಯುತ್ತಿದ್ದ ಲಾವಾರಸವನ್ನು ಈ ರೀತಿ ವಿಭಜನೆ ಮೂಲಕ ಜೆಡಿಎಸ್ ಪಕ್ಷಕ್ಕೇ ಹರಿಸಿರುವ ಸಿದ್ದರಾಮಯ್ಯನವರ ದಾವಾನಲ ಇನ್ನೂ ಆರಿಲ್ಲ. ಆ ಪಕ್ಷವನ್ನು, ಆ ಮೂಲಕ ಗೌಡರ ಕುಟುಂಬ ರಾಜಕೀಯವನ್ನೇ ಮೂಟೆ ಕಟ್ಟಿಡಬೇಕೆಂಬ ಸಂಕಲ್ಪದೊಂದಿಗೆ ಈ ಏಳೂ ಮಂದಿಯನ್ನು ಕಾಂಗ್ರೆಸ್ಸಿಗೆ ಹೊತ್ತೊಯ್ದಿದ್ದಾರೆ.

ಈಗ ಸಿದ್ದರಾಮಯ್ಯನವರಿಗೆ ಎರಡು ರೀತಿ ಅನುಕೂಲ. ಒಂದು ಪಕ್ಷ ಒಡೆದಂತೆಯೂ ಆಯಿತು. ಇನ್ನೊಂದು ಹೀಗೆ ಪಕ್ಷದಿಂದ ಹೊರಬಂದಿರುವವರು ದೇವೇಗೌಡರ ಕುಟುಂಬದ ವಿರುದ್ಧ ನಡೆಸುವ ವಾಗ್ದಾಳಿ. ಚುನಾವಣೆ ಪ್ರಚಾರದುದ್ಧಕ್ಕೂ ಅವರು ಈ ಕೆಲಸ ನೋಡಿಕೊಳ್ಳುವುದರಿಂದ ಗೌಡರ ಕುಟುಂಬದ ತಂಟೆಗೆ ಹೋಗುವ ಶ್ರಮ ಅಷ್ಟರಮಟ್ಟಿಗೆ ತಗ್ಗುತ್ತದೆ. ಈಗಾಗಲೇ ಸಪ್ತಶಾಸಕರಿಂದ ತರಾಟೆ ಶುರುವಾಗಿದೆ. ಅಣ್ಣನ ಮಗ ಪ್ರಜ್ವಲ್ ರೇವಣ್ಣನನ್ನೇ ಬೆಳೆಯಲು ಬಿಡದ ಕುಮಾರಸ್ವಾಮಿ ಇನ್ನೂ ತಮ್ಮನ್ನು ಬೆಳೆಯಗೊಡುತ್ತಾರೆಯೇ ಎಂದು ಇನಿಂಗ್ಸ್ ಆರಂಭಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಾಗಲಾಯಿತು, ಅದರ ಮೊದಲು, ನಂತರವಾಯಿತು, ಅವರಿಗೆ ಬಹಳ ಆಪ್ತರಾಗಿದ್ದ ಈ ಸಪ್ತಶಾಸಕರು ಸಾಕಷ್ಟು ರಾಜಕೀಯ, ರಾಜಕೀಯಯೇತರ ಒಳಗುಟ್ಟುಗಳನ್ನು ಬಲ್ಲರು. ಅದನ್ನೀಗ ಅವರು ಚೆಲ್ಲುತ್ತಾ ಹೋಗುತ್ತಾರೆ. ಅದಕ್ಕೆ ಉತ್ತರ ಕೊಡುವಲ್ಲಿ ಗೌಡರ ಕುಟುಂಬದವರೂ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ. ಈಗಾಗಲೇ ಕುಮಾರಸ್ವಾಮಿ ಅವರು, ‘ಪಕ್ಷ ಒಡೆದದ್ದು ಆಯಿತು, ಇನ್ನೂ ಮನೆ ಮುರಿಯಬೇಡಿ’ ಎಂದು ಸಪ್ತಶಾಸಕರಿಗೆ ತಿರುಗೇಟು ನೀಡಿದ್ದಾರೆ. ಅಷ್ಟರ ಮಟ್ಟಿಗೆ ಸಪ್ತಶಾಸಕರು ಕುಮಾರಸ್ವಾಮಿ ಅವರ ಮನಸ್ಸು ಕದಡಿದರು ಎಂದೇ ಅರ್ಥ. ಸಿದ್ದರಾಮಯ್ಯ ಅವರಿಗೆ ಬೇಕಾಗಿರುವುದೂ ಇದೇ!

ಈಗ ದೇವೇಗೌಡರ ಕುಟುಂಬವನ್ನು ಎರಡು ರೀತಿಯ ದ್ವೇಷಾಗ್ನಿ ಆವರಿಸಿಕೊಂಡಿದೆ. ಒಂದು ಕಡೆ ಪಕ್ಷವನ್ನು ಒಡೆದ ಸಿದ್ದರಾಮಯ್ಯ, ಮತ್ತೊಂದು ಕಡೆ ಚುನಾವಣೆ ಹೊಸ್ತಿಲಲ್ಲಿ ತಮ್ಮ ಕೈಗೆ ಮತಾಪು ಕಡ್ಡಿ ಕೊಟ್ಟು ಹೋಗಿರುವ ಸಪ್ತಶಾಸಕರು. ಇವರಿಬ್ಬರ ವಿರುದ್ಧವೂ ಸೇಡು ತೀರಿಸಿಕೊಳ್ಳಬೇಕೆಂಬ ಸಮಾನ ಹಪಾಹಪಿ. ಆದರೆ ಚುನಾವಣೆಗೆ ಉಳಿದಿರುವ ಸಮಯ ಅತ್ಯಲ್ಪ. ಈಗಾಗಲೇ ದೇವೇಗೌಡರು ಮತ್ತು ಕುಮಾರಸ್ವಾಮಿ ತಮ್ಮ ಕೈಗೆ ಕೊಟ್ಟಿರುವ ಮತಾಪು ಕಡ್ಡಿಯನ್ನೇ ಇಟ್ಟುಕೊಂಡು ಈ ಎಳೂ ಮಂದಿ ರಾಜಕೀಯ ಭವಿಷ್ಯಕ್ಕೆ ಬೆಂಕಿ ಹಚ್ಚಬೇಕೆಂದು, ಚುನಾವಣೆಯಲ್ಲಿ ಹೇಗಾದರೂ ಮಾಡಿ ಅವರನ್ನು ಸೋಲಿಸಬೇಕೆಂದು ಹಠ ತೊಟ್ಟು ನಿಂತಿದ್ದಾರೆ. ಆದರೆ ಈ ಸಂಕಲ್ಪದಲ್ಲಿ ಅವರು ಯಶಸ್ವಿ ಆಗುತ್ತಾರೋ, ಬಿಡುತ್ತಾರೋ ಅದು ಬೇರೆ ಪ್ರಶ್ನೆ. ಆದರೆ ಈ ಪ್ರಕ್ರಿಯೆ ಸಾಕಷ್ಟು ಸಮಯ, ಶ್ರಮ, ಗಮನ ಬೇಡುತ್ತದೆ. ಈ ರೀತಿ ಜೆಡಿಎಸ್ ನಾಯಕರ ಗಮನ ಬೇರೆಡೆಗೆ ಹರಿಸುವುದೇ ಸಿದ್ದರಾಮಯ್ಯನವರ ಚುನಾವಣೆ ತಂತ್ರದ ಒಂದು ಭಾಗ. ಆದರೆ ಇಂಥ ತಂತ್ರ, ಒಳತಂತ್ರಗಳಲ್ಲಿ ಪಿ.ಎಚ್‌ಡಿ ಪದವಿ ಪಡೆದಿರುವ ದೇವೇಗೌಡರು ಮತ್ತು ಕುಮಾರಸ್ವಾಮಿ ಎದುರಾಳಿಗಳ ಪಕ್ಷ ವಿಭಜನೆ ಕುತಂತ್ರವನ್ನೇ ತಮ್ಮ ಚುನಾವಣೆ ಪ್ರಚಾರದ ತಂತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಬೇರೆ ಮಾತು.

ಇನ್ನೂ ಬಿಜೆಪಿ ವಿಚಾರಕ್ಕೆ ಬರುವುದಾದರೆ ಸಿದ್ದರಾಮಯ್ಯನವರ ಸರಕಾರ ಈ ಬಾರಿ ಆ ಪಕ್ಷ ನೆಚ್ಚಿಕೊಂಡಿದ್ದ ಲಿಂಗಾಯತ ಸಮುದಾಯವನ್ನೇ ಪಲ್ಲಟ ಅಲ್ಲೋಲ-ಕಲ್ಲೋಲ ಮಾಡಿಟ್ಟಿದೆ. ಬಸವತತ್ವ ನಂಬಿ ಆರಾಧಿಸುವ ಲಿಂಗಾಯತ ಮತ್ತು ಲಿಂಗಾಯತ ವೀರಶೈವವನ್ನು ಸ್ವತಂತ್ರ್ಯ ಧರ್ಮ ಎಂದು ಘೋಷಿಸಿ, ಈ ಸಂಬಂಧ ಕೇಂದ್ರ ಸರಕಾರಕ್ಕೆ ಶಿಫಾರಸ್ಸನ್ನೂ ರವಾನಿಸಿದೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಿದ್ದು, ಆ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನವನ್ನೂ ಕೊಟ್ಟಿದೆ. ಅನುದಾನ, ನಾನಾ ಸೌಲಭ್ಯಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಮೀಸಲು ಸೌಲಭ್ಯ ಮಾತ್ರ ಕೇಂದ್ರ ಸರಕಾರ ಶಿಫಾರಸ್ಸು ಅಂಗೀಕರಿಸಿದ ಕ್ಷಣದಿಂದ ಜಾರಿಗೆ ಬರುತ್ತದೆ. ಆ ಸೌಲಭ್ಯ ನೀಡುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ. ಇಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ವಿಚಾರದಲ್ಲಿ ತನಗಿರುವ ಬದ್ಧತೆಯನ್ನು ಪ್ರತಿಪಾದಿಸುತ್ತಲೇ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಆಗದ ಕೇಂದ್ರ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿದೆ.

ರಾಜ್ಯ ಸರಕಾರದ ನಿರ್ಣಯ ಲಿಂಗಾಯತ ಸಮುದಾಯವನ್ನು ಇಬ್ಭಾಗ ಮಾಡಿಟ್ಟಿರುವುದು ಸುಳ್ಳಲ್ಲ. ವೀರಶೈವರು ಇದರ ವಿರುದ್ಧ ಸಿಡಿದು ನಿಂತಿದ್ದಾರೆ. ಲಿಂಗಾಯತರು ಪರವಾಗಿದ್ದಾರೆ. ಕೆಲವು ಲಿಂಗಾಯತ ಸ್ವಾಮೀಜಿಗಳು ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈವರೆಗೂ ಬಿಜೆಪಿ ಪರ ಕ್ರೋಡೀಕೃತವಾಗಿದ್ದ ಸಮುದಾಯದ ಮತಗಳನ್ನು ಕೆಲಮಟ್ಟಿಗಾದರೂ ವಿಭಜಿಸುವಲ್ಲಿ ಸಿದ್ದರಾಮಯ್ಯ ಸರಕಾರ ಯಶಸ್ವಿಯಾಗಿದೆ. ಏನೂ ಇಲ್ಲದ ಕಡೆ ಒಂದಷ್ಟು ಮತಗಳು ಕಾಂಗ್ರೆಸ್ಸಿಗೆ ಬರುತ್ತದೆ ಎಂಬುದೇ ಲಾಭದ ವಿಚಾರ. ಸರಕಾರದ ನಡೆ ಬಗ್ಗೆ ಸಮುದಾಯದಲ್ಲಿ ಮನೆ ಮಾಡಿರುವ ಭಾವನೆ ಎಂಥದ್ದು, ಇದರಿಂದ ಕಾಂಗ್ರೆಸ್ಸಿಗೆ ಎಷ್ಟು ಲಾಭವಾಗುತ್ತದೆ, ಎಷ್ಟು ನಷ್ಟವಾಗುತ್ತದೆ ಎಂಬುದು ಚುನಾವಣೆ ನಂತರವಷ್ಟೇ ಗೊತ್ತಾಗುತ್ತದೆ. ಆದರೆ ಇಂಥದ್ದೊಂದು ದಿಟ್ಟ ಹೆಜ್ಜೆ ಇಟ್ಟ ಸಿದ್ದರಾಮಯ್ಯನವರ ಧಾಷ್ಟ್ಯ ಕಡಿಮೆಯೇನಲ್ಲ. ಅದಕ್ಕೂ ಒಂದು ತಾಕತ್ತು ಬೇಕು. ಒಂದು ಸಮುದಾಯದ ಮತಗಳನ್ನು ಜರಡಿಯಾಡುವ ಇಂಥದ್ದೊಂದು ಧರ್ಮಸೂಕ್ಷ್ಮ ವಿಚಾರದಲ್ಲಿ ಕೈ ಹಾಕಲು ಆತ್ಮಸೈರ್ಯ ಬೇಕು. ಅದನ್ನು ಪ್ರದರ್ಶಿಸುವಲ್ಲಿ ಸಿದ್ದರಾಮಯ್ಯನವರು ಗಂಡುತನ ಮೆರೆದಿದ್ದಾರೆ. ಸಾಧಕ-ಬಾಧಕಗಳು ಏನೆಂಬುದು ಬೇರೆ ವಿಚಾರ.

ಇಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೊಂದಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಯು ಈ ಹಿಂದೆ ಚುನಾವಣೆ ಪ್ರಚಾರಾಂದೋಲನಕ್ಕೆ ಕೇಂಬ್ರಿಜ್ ಅನಲಿಟಿಕಾ ದತ್ತಾಂಶ ವಿಶ್ಲೇಷಣೆ ಕಂಪನಿ ಮೂಲಕ ಫೇಸ್‌ಬುಕ್ ಬಳಕೆದಾರರ ಮಾಹಿತಿ ಬಳಸಿಕೊಂಡಂತೆ ರಾಜ್ಯ ಸರಕಾರವೂ ತನ್ನದೇ ಆದ ಪ್ರತ್ಯೇಕ ಮಾರ್ಗವನ್ನು ತುಳಿದಿದೆ. ಕರ್ನಾಟಕ ಸರಕಾರ ಮಾಡಿಸಿರುವ ಜಾತಿಗಣತಿ ವರದಿ ಕಾರ್ಯ ಪೂರ್ಣಗೊಂಡಿದ್ದರೂ ಈವರೆಗೂ ಅದು ಬಿಡುಗಡೆ ಆಗಿಲ್ಲ. ಈ ವರದಿ ಕಳೆದ ವರ್ಷ ಅನಧಿಕೃತವಾಗಿ ಬಿಡುಗಡೆ ಆಯಿತಾದರೂ ರಾಜ್ಯ ಸರಕಾರ ಇದರ ಹೊಣೆ ಹೊತ್ತಿಲ್ಲ. ಅದು ಸತ್ಯವೋ ಅಥವಾ ಅನ್ಯಪಕ್ಷಗಳ ಹಾದಿ ತಪ್ಪಿಸಲು ಹೂಡಿರುವ ಆಟವೋ ಅದೂ ಗೊತ್ತಿಲ್ಲ. ಆದರೆ ಈಗ ರಾಜ್ಯ ಸರಕಾರದ ಬಳಿ ಕರ್ನಾಟಕದ ಜಾತೀವಾರು ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ಇದೆ. ಸಹಜವಾಗಿಯೇ ಇದು ಕಾಂಗ್ರೆಸ್ ಬಳಿಯೂ ಇದ್ದಂತಾಯಿತು. ಇದನ್ನು ಆಧರಿಸಿ ಚುನಾವಣೆ ತಂತ್ರಗಳನ್ನು ರಚಿಸಬಹುದು. ಜಾತಿ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ಕ್ಷೇತ್ರ ಮಟ್ಟದಲ್ಲಿ ತನಗೆ ಅನುಕೂಲವಾಗುವ ಹೆಜ್ಜೆ ಇಡಬಹುದು. ಸರಕಾರದ ಬಳಿ ಇರುವ ಜಾತೀವಾರು ಜನಗಣತಿ ಮಾಹಿತಿಯೇ ಲಿಂಗಾಯತ ಸ್ವತಂತ್ರ್ಯ ಧರ್ಮ ಅಧಿಸೂಚನೆ ಹೊರಡಿಸಲು ಪ್ರೇರಕ ಎಂಬ ಮಾತೂ ಇದೆ. ಅದೇ ಪ್ರಕಾರ ಎಲ್ಲೆಲ್ಲಿ ಯಾವ ಸಮುದಾಯ ಹೆಚ್ಚಿಗೆ ಇದೆ, ಯಾವ ಜಾತಿ ಅಭ್ಯರ್ಥಿಯನ್ನು ಅಲ್ಲಿ ಕಣಕ್ಕೆ ಇಳಿಸಿದರೆ ಅನುಕೂಲವಾಗುತ್ತದೆ ಎಂಬ ತಂತ್ರ ಹೆಣೆಯಲೂ ಇದು ಸಹಾಯಕ. ಸಿದ್ದರಾಮಯ್ಯ ಸರಕಾರದ ತಂತ್ರಗಾರಿಕೆ ಟೋಪಿಗೆ ಇದೂ ಒಂದು ಗರಿ!

ಇನ್ನೂ ಪಕ್ಷದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗಿರುವುದು ಸತ್ಯ. ರಾಹುಲ್ ಗಾಂಧಿ ರಾಜ್ಯದ ಬೇರೆ-ಬೇರೆ ನಾಯಕರ ಬಳಿ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಬರುವ ಸ್ಥಾನಗಳ ಬಗ್ಗೆ ವಿಚಾರಿಸಿದ್ದಾರೆ. ಬೇರೆ ಮುಖಂಡರು ಹೇಳಿರುವುದು ಬಹುಮತಕ್ಕೆ ಸ್ವಲ್ಪ ಕೊರತೆ ಬೀಳುತ್ತದೆ ಎಂದೇ. ಆದರೆ ಸಿದ್ದರಾಮಯ್ಯ ಅವರೊಬ್ಬರು ಮಾತ್ರ 128 ಕ್ಕೂ ಹೆಚ್ಚು ಸ್ಥಾನಗಳು ಲಭಿಸಿ, ಸ್ವಂತ ಬಲದ ಮೇಲೆ ಸರಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಬೇಕಾದ ಚುನಾವಣೆ ತಂತ್ರಗಳನ್ನು ಈಗಾಗಲೇ ಹೆಣೆದಿರುವುದಾಗಿ ತಿಳಿಸಿದ್ದಾರೆ. ಇದರಿಂದ ಪೂರ್ತಿ ಫಿದಾ ಆಗಿರುವ ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲೆಲ್ಲ ಸಿದ್ದರಾಮಯ್ಯನವರ ಜಪವನ್ನೇ ಮಾಡುತ್ತಿದ್ದಾರೆ. ಪಕ್ಷದ ಅನ್ಯನಾಯಕರ ಹೊಟ್ಟೆಯಲ್ಲಿ ಕಳ್ಳಿಹಾಲು ಸುರುವಿದಂತಾಗುವ ಮಟ್ಟಕ್ಕೆ ಅವರನ್ನು ಹೊಗಳುತ್ತಿದ್ದಾರೆ. ಪ್ರಧಾನಿ ಮೋದಿಯವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಳ್ಳುತ್ತಿರುವ ರೀತಿ ರಾಹುಲ್ ಅವರಲ್ಲಿ ಪುಳಕ ಸೃಷ್ಟಿಸಿದೆ. ಎಲ್ಲಿಂದಲೋ ಬಂದ ಸಿದ್ದರಾಮಯ್ಯ ಅವರಿಗೆ ಸಿಕ್ಕ ಪ್ರಾಮುಖ್ಯತೆ ತಮಗೆ ಸಿಗುತ್ತಿಲ್ಲವಲ್ಲ ಎಂದು ಮುಖ್ಯಮಂತ್ರಿ ಪದವಿ ಆಸೆ ಹೊತ್ತಿರುವ ರಾಜ್ಯದ ಕೆಲ ಮುಖಂಡರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಅವರೆಲ್ಲರ ಆಸೆ ಹತ್ತು ವರ್ಷ ಹಿಂದಕ್ಕೆ ಓಡುತ್ತದೆ. ಸಿದ್ದರಾಮಯ್ಯ ನಾಯಕತ್ವ ಇನ್ನೈದು ವರ್ಷ ಅಬಾಧಿತ.

ಆದರೆ ಒಂದು ಮಾತು ನಿಜ. ಅಧಿಕಾರ ನಶೆ ಇದ್ದಂತೆ. ಅದು ಕೈಯಲ್ಲಿರುವಾಗ ‘ಚಿರಂಜೀವಿ’ ಕಲ್ಪನೆ ಮೂಡಿಸುತ್ತದೆ. ಹೋದಾಗ ‘ಪಾಪಸು ಕಳ್ಳಿ’ಯಂತೆ ಗೋಚರಿಸುತ್ತದೆ. ಹಿಂದೆ ಆಳ್ವಿಕೆ ನಡೆಸಿದ ಎಲ್ಲರಿಗೂ ‘ಮತ್ತೊಮ್ಮೆ ನನ್ನದೇ’ ಎಂಬ ಆಸೆ ತೋರಿಸಿದೆ. ಇದರಲ್ಲಿ ಒಂದಿಬ್ಬರು ಯಶಸ್ವಿಯಾಗಿದ್ದಾರೆ. ಉಳಿದವರೆಲ್ಲ ಮುಗ್ಗರಿಸಿದ್ದಾರೆ. ಸಿದ್ದರಾಮಯ್ಯ ಯಾವ ಟೀಂ ಸೇರುತ್ತಾರೆ ಎಂಬುದಕ್ಕೆ ಎರಡು ತಿಂಗಳು ಮಾತ್ರ ಕಾಯಬೇಕಿದೆ.

ಲಗೋರಿ: ಬೀಳೋ ಮುಂಚೆ ಎಲ್ಲರೂ ನಿಂತಿರುತ್ತಾರೆ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply