ಬಿಎಸ್ ವೈ ಸಿಎಂ ಆಗೋದು ತಪ್ಪಿಸಲು ಕಾಂಗ್ರೆಸ್ ಲಿಂಗಾಯತ ಪ್ರತ್ಯೇಕ ಧರ್ಮದ ಅಸ್ತ್ರ ಪ್ರಯೋಗ: ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್:

‘ಬಿ.ಎಸ್. ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಾರದು ಎಂಬ ಕಾರಣಕ್ಕೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನಗಳ ರಾಜ್ಯ ಪ್ರವಾಸ ಆರಂಭಿಸಿರುವ ಅಮಿತ್ ಶಾ, ಸೋಮವಾರ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ಟೀಕಿಸುತ್ತಾ, ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ಸಮಾವೇಶದಲ್ಲಿ ಅಮಿತ್ ಶಾ ಅವರು ಹೇಳಿದ ಪ್ರಮುಖ ಅಂಶಗಳು ಹೀಗಿವೆ…

  • ಸಿದ್ದರಾಮಯ್ಯ ಸರ್ಕಾರ ಲಿಂಗಾಯತರ ಮೇಲಿನ ಪ್ರೀತಿಯಿಂದ ಪ್ರತ್ಯೇಕ ಧರ್ಮಕ್ಕೆ ಒಪ್ಪಿಕೊಂಡಿಲ್ಲ. ಬದಲಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸದಂತೆ ನೋಡಿಕೊಳ್ಳಲು ಈ ತಂತ್ರಗಾರಿಕೆ ಪ್ರಯೋಗಿಸಿದ್ದಾರೆ.
  • ಬಿಜೆಪಿ ಗೆದ್ದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಕರ್ನಾಟಕದ ಜನರಿಗೆ ಭರವಸೆ ನೀಡುತ್ತೇನೆ.
  • ಕಾಂಗ್ರೆಸ್ ನದ್ದು ಬ್ರಿಟೀಷರಂತೆ ಒಡೆದು ಆಳುವ ನೀತಿ. ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು. ಹೀಗಾಗಿ ತನ್ನ ಕಡೇಯ ಪ್ರಯತ್ನವಾಗಿ ಸಮಾಜ ಹೊಡೆಯುವ ಕೆಲಸ ಮಾಡುತ್ತಿದೆ.
  • ಸಿದ್ದರಾಮಯ್ಯನವರಿಗೆ ಲಿಂಗಾಯತರ ಮೇಲೆ ನಿಜವಾದ ಪ್ರೀತಿ ಇದ್ದಿದ್ದರೆ, ಈ ಕೆಲಸವನ್ನು ಚುನಾವಣೆ ಸಂದರ್ಭದಲ್ಲಿ ಬಿಟ್ಟು ಈ ಹಿಂದೆಯೇ ಮಾಡಬಹುದಿತ್ತು.
  • ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 3781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗಳಿಗೆ ಜವಾಬ್ದಾರರು ಯಾರು.
  • ಬಿಜೆಪಿ ಆಡಳಿತ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆ ಇದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ.
  • ಯಡಿಯೂರಪ್ಪನವರ ನೇತೃತ್ವದಲ್ಲಿ ರೈತರಿಗೆ ಅನುಕೂಲಕರ ವಾತಾವರಣ ಕಲ್ಪಿಸಲು ಕೇಂದ್ರ ಸರಕಾರ ಬದ್ಧವಿದೆ. ಅಡಿಕೆ ಒಟ್ಟಾರೆ ಬೆಳೆಯ ಶೇ.50 ಪಾಲು ಭಾರತದ್ದೇ ಆಗಿದೆ. ಅದರಲ್ಲೂ ದೇಶದ ಅಡಿಕೆ ಬೆಳೆಯ ಅರ್ಧದಷ್ಟು ಕರ್ನಾಟಕದ್ದೇ ಆಗಿದೆ. ಅಡಿಕೆಯ ಗುಣಮಟ್ಟ ಸಂಶೋಧನೆ ನಡೆಸಿ ಜಾಗತಿಕ ಮಾರುಕಟ್ಟೆ ಒದಗಿಸಲು ಕೇಂದ್ರ ಪ್ರಯತ್ನಿಸಲಿದೆ.
  •  500 ಕೋಟಿ ವೆಚ್ಚದಲ್ಲಿ ಅಡಿಕೆ ಸಂಶೋಧನಾ ಸಂಸ್ಥೆ ನಿರ್ಮಾಣ ಮಾಡಲು ಕೇಂದ್ರ ಸಿದ್ಧವಿದೆ.
  • ಅಡಿಕೆಯಲ್ಲಿ ಹಾನಿಕಾರಕ ಅಂಶವಿಲ್ಲ. ಊಟದ ನಂತರ ನಾನೂ ಎಲೆ ಅಡಿಕೆ ಹಾಕಿದ್ದೇನೆ. ಅಡಿಕೆಯಲ್ಲಿ ಹಾನಿಕಾರಕ ಅಂಶವಿದ್ದಿದ್ದರೆ ನಾನದನ್ನು ಸೇವಸುತ್ತಿರಲಿಲ್ಲ.

Leave a Reply