ಈ ‘ಪ್ರಾಣಬಾಕ’ ಮಂದಿಗೆ ಬದುಕಿರುವವರನ್ನು ಸಾಯಿಸುವುದರಲ್ಲಿ ಅದೇನು ವಿಘ್ನಸಂತೋಷವೋ ಕಾಣೆ!

ಡಿಜಿಟಲ್ ಕನ್ನಡ ಟೀಮ್:

ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹಿರಿಯ ನಟಿ ಜಯಂತಿ ಅವರನ್ನು ತಮ್ಮ ವಿಕೃತ ಆನಂದಕ್ಕೆ ವಸ್ತು ಮಾಡಿಕೊಂಡಿದ್ದಾರೆ.

ಯಾರಾದರೂ ಗಣ್ಯರು ಆಸ್ಪತ್ರೆಗೆ ಅಡ್ಮಿಟ್ ಆಗುವಂತಿಲ್ಲ, ಈ ವಿಕೃತರ ಜೀವಹರಣ ವಾಂಛೆ ರೊಚ್ಚಿಗೇಳುತ್ತದೆ. ಅನ್ಯರ ಧೃತಿಗೆಡಿಸಲು ಹಪಾಹಪಿಸುತ್ತದೆ. ಸುದ್ದಿ ಸತ್ಯಾಸತ್ಯತೆ, ಸಾಧಕ-ಬಾಧಕಗಳು ಈ ಭಾವಗೇಡಿಗಳನ್ನು ಒಂದಿನಿತೂ ಕಾಡುವುದಿಲ್ಲ.
ಹೀಗಾಗಿಯೇ ಈ ಮತಿಭ್ರಾಂತರ ಹುಸಿ ಮರಣಮೃದಂಗ ಯಾದಿಗೆ ಅನೇಕರು ಹಾದಿಯಾಗಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ನಟ ಅಂಬರೀಷ್, ಸಿದ್ದಗಂಗಾ ಶ್ರೀಗಳು, ಇದೀಗ ನಟಿ ಜಯಂತಿ ಈ ವಿಕೃತ ಪಟ್ಟಿಯನ್ನು ಅನೇಕ ಬಾರಿ ದಾಟಿ ನಮ್ಮ-ನಿಮ್ಮ ನಡುವೆ ಇದ್ದಾರೆ. ಅವರು ನೂರ್ಕಾಲ ಬಾಳಲಿ. ಅವರ ಜೀವದೊಡನೆ ಸರಸವಾಡುವ ವಿಕಲ್ಪ ಅಳಿಯಲಿ.
ಎಲ್ಲಕ್ಕಿಂತ ಮಿಗಿಲಾಗಿ ಅನ್ಯರ ಭಾವಚಿತ್ರಕ್ಕೆ ವಿನಾಕಾರಣ ‘ಫ್ರೇಮ್’ ಹಾಕುವ ಮೊದಲು ಆ ಜಾಗದಲ್ಲಿ ತಮ್ಮನ್ನೋ, ತಮ್ಮ ಕುಟುಂಬ ಸದಸ್ಯರನ್ನೋ ಒಮ್ಮೆ ಕಲ್ಪಿಸಿಕೊಂಡು ನೋಡಲಿ. ಆಗಲೂ ಇವರ ಅಂತರಂಗ ಕಲಕದಿದ್ದರೆ ಇವರು ಮನುಷ್ಯರೇ ಅಲ್ಲ…

Leave a Reply