ಎರಡನೇ ಬ್ರಾಡ್ಮನ್ ಆಗಬೇಕಿದ್ದ ಸ್ಮಿತ್ ಆಸ್ಟ್ರೇಲಿಯಾದ ಮಾನ ಹರಾಜು ಹಾಕಿದ!

ಡಿಜಿಟಲ್ ಕನ್ನಡ ವಿಶೇಷ:

ಸದ್ಯ ಜಾಗತಿಕ ಕ್ರಿಕೆಟ್ ನಲ್ಲಿ ಕ್ರೀಡೆಗಿಂತ ಚೆಂಡು ವಿರೂಪ ಪ್ರಕರಣವೇ ಹೆಚ್ಚು ಸುದ್ದಿಯಾಗುತ್ತಿದೆ. ಚೆಂಡು ವಿರೂಪ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಅನೇಕ ತಂಡದ ಬೌಲರ್, ಫೀಲ್ಡರ್ ಹಾಗೂ ನಾಯಕರು ಈ ಪ್ರಕರಣದಲ್ಲಿ ಸಿಲುಕಿ ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ, ಸದ್ಯ ಉದ್ಭವಿಸಿರುವ ಆಸ್ಟ್ರೇಲಿಯಾ ತಂಡದ ಚೆಂಡು ವಿರೂಪ ಪ್ರಕರಣ ದೊಡ್ಡದಾಗಿ ಬಿಂಬಿತವಾಗಿದೆ. ಅದಕ್ಕೆ ಕಾರಣಗಳು ಹೀಗಿವೆ…

ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಜಾಗತಿಕ ಕ್ರಿಕೆಟ್ ನಲ್ಲಿ ತನ್ನದೇ ಆದ ಘನತೆ ಜತೆಗೆ ಅಹಂ ಅನ್ನು ಹೊಂದಿದೆ. ಸ್ಲೆಡ್ಜಿಂಗ್ ಪದ್ಧತಿಯನ್ನು ಆಸ್ಟ್ರೇಲಿಯನ್ನರೇ ಆರಂಭಿಸಿದರೂ ಅದನ್ನು ತಮಗೆ ಬೇಕಾದ ರೀತಿಯಲ್ಲಿ ಸಮರ್ಥಿಸಿಕೊಂಡಿದೆ. ಬೇರೆ ತಂಡಗಳ ಹಾಗೂ ಆಟಗಾರರ ತಪ್ಪನ್ನು ಕಟುವಾಗಿ ಟೀಕಿಸುತ್ತಾ ತಾನು ಸಾಚ ಎಂದು ವರ್ತಿಸುತ್ತಿದ್ದ ಆಸ್ಟ್ರೇಲಿಯಾ ತಂಡವೇ ಈಗ ಚೆಂಡು ವಿರೂಪ ಪ್ರಕರಣದಿಂದ ಮಣ್ಣು ತಿನ್ನುವ ಕೆಲಸ ಮಾಡಿದೆ.

ಆಸ್ಟ್ರೇಲಿಯಾ ತಂಡದಲ್ಲಿ ನಾಯಕನಿಗೆ ವಿಶೇಷ ಸ್ಥಾನ  ಹಾಗೂ ಅಧಿಕಾರವಿದೆ. ಚೆಂಡು ವಿರೂಪ ಪ್ರಕರಣ ಪ್ರಸಾರವಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಮಿತ್, ಉದ್ದೇಶ ಪೂರ್ವಕವಾಗಿಯೇ ಚೆಂಡು ವಿರೂಪಗೊಳಿಸಿದ್ದು, ಇದು ಸಾಮೂಹಿಕ ನಾಯಕತ್ವದ ನಿರ್ಧಾರ. ತಂಡದ ಹಿರಿಯ ಆಟಗಾರರ ನಿರ್ದೇಶನದಂತೆ ಕಿರಿಯ ಆಟಗಾರ ಬ್ಯಾಂಕ್ರಫ್ಟ್ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ತಪ್ಪೊಪ್ಪಿಕೊಂಡಾಗ ಕೇವಲ ನಾಯಕ ಹಾಗೂ ತಂಡದ ಆಟಗಾರರು ತಲೆ ತಗ್ಗಿಸಲಿಲ್ಲ. ಇಡೀ ಆಸ್ಟ್ರೇಲಿಯಾ ದೇಶವೇ ತಲೆತಗ್ಗಿಸಿತ್ತು.

ಆಸ್ಟ್ರೇಲಿಯಾ ತಂಡದ ನಾಯಕ ಇಡೀ ದೇಶದ ಪ್ರತಿನಿಧಿಯಾಗಿರುತ್ತಾನೆ. ಅದರಲ್ಲೂ ಇತ್ತೀಚೆಗೆ ಸ್ಟೀವನ್ ಸ್ಮಿತ್ ವರ್ಷದ ಆಸ್ಟ್ರೇಲಿಯಾ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. ಆಸ್ಟ್ರೇಲಿಯಾದ ಎರಡನೇ ಬ್ರಾಡ್ಮನ್ ಎಂದೇ ಬಿಂಬಿತವಾಗಿದ್ದ ಸ್ಮಿತ್ ಈಗ ಅಪರಾಧಿಯಾಗಿ ನಿಂತಿರುವುದು ಆಸ್ಟ್ರೇಲಿಯಾ ಕ್ರೀಡಾ ಕ್ಷೇತ್ರಕ್ಕೆ ಒಂದು ಕಪ್ಪು ಚುಕ್ಕಿ.

ಈ ಪ್ರಕರಣದಲ್ಲಿ ಐಸಿಸಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಾಯಕ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ಗೆ ಒಂದು ಪಂದ್ಯ ನಿಷೇಧ ಹಾಗೂ ಬ್ಯಾಂಕ್ರಫ್ಟ್ ಗೆ ಪಂದ್ಯದ ಸಂಭಾವನೆಯ ಶೇ.75ರಷ್ಟು ದಂಡ ವಿಧಿಸಿದೆ. ಈಗ ಎಲ್ಲರ ಗಮನ ನೆಟ್ಟಿರೋದು ಕ್ರಿಕೆಟ್ ಆಸ್ಟ್ರೇಲಿಯಾ ಈ ಆಟಗಾರರಿಗೆ ಯಾವ ಶಿಕ್ಷೆ ವಿಧಿಸಲಿದೆ ಎಂಬುದು. ಬೇರೆಯವರ ತಪ್ಪನ್ನು ಪ್ರಶ್ನಿಸುತ್ತಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ಈಗ ತನ್ನ ನೈತಿಕತೆಯನ್ನು ಉಳಿಸಿಕೊಳ್ಳಬೇಕಿದೆ. ತನಗಂಟಿಕೊಂಡಿರುವ ಮಸಿಯನ್ನು ತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರಾಥಮಿಕ ತನಿಖೆಯಲ್ಲಿ ಈ ಮೂವರು ತಪ್ಪು ಮಾಡಿದ್ದಾರೆ ಎಂದು ನಿರ್ಧರಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಬದಲಿ ಮೂವರು ಆಟಗಾರರನ್ನು ಪ್ರಕಟಿಸಿದೆ. ಈ ಮೂವರ ವಿರುದ್ಧದ ಶಿಕ್ಷೆ ಪ್ರವಾಣವವನ್ನು ಮುಂದಿನ 24 ಗಂಟೆಯಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.

ಸದ್ಯ ವಿಶ್ಲೇಷಕರ ಪ್ರಕಾರ ಸ್ಮಿತ್ ಮತ್ತೆ ಕಾಂಗರೂ ಪಡೆಯ ನಾಯಕ ಜವಾಬ್ದಾರಿ ಹೊತ್ತುಕೊಳ್ಳುವುವುದು ಬಹುತೇಕ ಅನುಮಾನವಾಗಿದ್ದು, ಒಂದು ವರ್ಷದ ನಿಷೇಧ ಏರುವ ಸಾಧ್ಯತೆ ಇದೆ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದ ನಂತರವೇ ಈ ಕುರಿತ ಸ್ಪಷ್ಟ ಚಿತ್ರಣ ಸಿಗಲಿದೆ.

Leave a Reply