ಜನಾರ್ದನ ರೆಡ್ಡಿ ತೆರೆ ಹಿಂದೆ ಕೆಲಸ ಮಾಡ್ತಿರೋದ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿಯ ಗಣಿದಣಿ ಅಂತಾನೇ ರಾಜ್ಯದಲ್ಲಿ ಅಬ್ಬರ ಸೃಷ್ಟಿಸಿದ್ದ ಜನಾರ್ದನ ರೆಡ್ಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ರು. 4 ವರ್ಷ ಜೈಲು ಜೀವನ ಕಳೆದ ಜನಾರ್ದನ ರೆಡ್ಡಿ ಇತ್ತೀಚಿಗೆ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಆದ್ರೆ ಬಳ್ಳಾರಿಗೆ ತೆರಳದಂತೆ ಕೋರ್ಟ್ ಸೂಚನೆ ಕೊಟ್ಟಿತ್ತು. ಹೀಗಾಗಿ ಜನಾರ್ದನ ರೆಡ್ಡಿ ಬಳ್ಳಾರಿಯಿಂದ ಹೊರಗೆ ಕಾಲ ಕಳೆಯುವಂತಾಗಿದೆ. ಬಳ್ಳಾರಿ ರಾಜಕಾರಣವನ್ನು ಮತ್ತೆ ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಹಾಗೂ ಗೆಳಯ ಶ್ರೀರಾಮುಲು ಮೂಲಕ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಇದೀಗ ಬಿಜೆಪಿಯಿಂದ ಜನಾರ್ದನ ರೆಡ್ಡಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮತ್ತಷ್ಟು ಆರ್ಭಟ ಜೋರು ಮಾಡಲಿದ್ದಾರೆ.

ಈಗಾಗಲೇ ಬಳ್ಳಾರಿ ಗಡಿಭಾಗವಾದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿರುವ ಜನಾರ್ದನ ರೆಡ್ಡಿ, ಅಲ್ಲಿಂದಲೇ ಕಾರ್ಯಚಟುವಟಿಕೆಗಳನ್ನು ನಡೆಸಲು ಅಣಿಯಾಗಿದ್ದಾರೆ. ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ, ಇನ್ನೂ ಕೂಡ ಆರೋಪ ಮುಕ್ತ ಆಗಿಲ್ಲವಾದ ಕಾರಣ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ಬಿಜೆಪಿ ತನ್ನ ಅಧಿಕೃತ ಕಾರ್ಯಕ್ರಮಗಳಿಂದ ಜನಾರ್ದನ ರೆಡ್ಡಿಯನ್ನು ದೂರ ಇಟ್ಟಿದೆ. ಬಿಜೆಪಿಗೆ ಜನಾರ್ದನ ರೆಡ್ಡಿ ಅವಶ್ಯಕತೆ ಇದ್ದರೂ, ಮುಂದೆ ಕಾಂಗ್ರೆಸ್ ನಿಂದ ಎದುರಾಗುವ ಟೀಕಾಸ್ತ್ರವನ್ನು ಗಮನದಲ್ಲಿ ಇಟ್ಟುಕೊಂಡು ಜನಾರ್ದನ ರೆಡ್ಡಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹಾಗಾಗಿ ಜಿಲ್ಲೆಯಿಂದ ದೂರವಿದ್ದುಕೊಂಡು ಮತ್ತೆ ಬಳ್ಳಾರಿಯಲ್ಲಿ ಪ್ರಾಬಲ್ಯ ಮೆರೆಯಲು ಹಣಿಯಾಗಿದ್ದಾರೆ. ಇದೀಗ ಬಿಜೆಪಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಬಿಜೆಪಿ ಆಂತರಿಕವಾಗಿ ತಿಳಿಸಿದ್ಯಂತೆ.

ಈ ಮಾತನ್ನು ಸ್ವತಃ ಗಾಲಿ ಜನಾರ್ದನ ರೆಡ್ಡಿ ಸಹೋದರ, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ. ಬಳ್ಳಾರಿಯ ಬಾಪೂಜಿ ನಗರದಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಸೋಮಶೇಖರ್ ರೆಡ್ಡಿ, ರೆಡ್ಡಿ ಸಮುದಾಯ ಪ್ರಬಲವಾಗಿರುವ ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಬಿಜೆಪಿ ನಾಯಕರು ಜನಾರ್ದನ ರೆಡ್ಡಿಗೆ ಸೂಚನೆ ಕೊಟ್ಟಿದ್ದಾರೆ. ಮೌಖಿಕ ಸೂಚನೆ ಬಂದಿರುವುದರಿಂದ ಬಳ್ಳಾರಿ, ಕೊಪ್ಪಳ, ಕೋಲಾರ, ಬೆಂಗಳೂರಿನ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಬಳ್ಳಾರಿ, ಕೊಪ್ಪಳ ಭಾಗದಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಚಿತ್ರದುರ್ಗ ಜಿಲ್ಲೆಯ ತಮ್ಮೇನಹಳ್ಳಿ, ಮತ್ತು ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ಮನೆ ಮಾಡಿದ್ದಾರೆ ಅಂತಾನೂ ಹೇಳಿದ್ದಾರೆ..

ಬಿಜೆಪಿ ಅಭ್ಯರ್ಥಿಗಳ ಪರವಾಗಿ ಜನಾರ್ದನ ರೆಡ್ಡಿ ಪ್ರಚಾರ ಮಾಡ್ತಾರೆ ಅನ್ನೋದಾದ್ರೆ, ಉಳಿದುಕೊಂಡಿದ್ದು ಏನು ಅನ್ನೋ ಪ್ರಶ್ನೆ ಎದುರಾಗ್ತಿದೆ. ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದವರು ಅನ್ನೋ ಕಾರಣಕ್ಕೆ ಪಕ್ಷದಿಂದ ಹೊರ ಇಟ್ಟಿದ್ದ ನಾಯಕರು ಪಕ್ಷದ ಫಂಡ್ ಗಾಗಿ ಹಿತ್ತಲು ಬಾಗಿಲು ತೆರೆಯುವ ಮೂಲಕ ಭ್ರಷ್ಟಾಚಾರ ಆರೋಪ ಬಂದಿದ್ದರೂ ಬಂದಿರಲಿ, ಚುನಾವಣೆಯಲ್ಲಿ ಸೋಲು ಗೆಲುವೇ ಮುಖ್ಯವಾದುದು ಅನ್ನೋ ತೀರ್ಮಾನಕ್ಕೆ ಬಂದಿರುವಂತಿದೆ. ಜನ ಯಾವ ತೀರ್ಮಾನ ಮಾಡ್ತಾರೆ ಅನ್ನೋದೆ ಉಳಿದಿರುವ ಉತ್ತರ.

Leave a Reply