ಅಂಬಿ ರಾಜಕೀಯಕ್ಕೆ ಮುಳ್ಳಾಗಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್:
ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ಎಷ್ಟು ಖದರ್ ಉಳಿಸಿಕೊಂಡಿದ್ದಾರೋ ಅಷ್ಟೇ ಖದರ್ ರಾಜಕಾರಣದಲ್ಲೂ ಕಾಪಾಡಿಕೊಂಡಿದ್ದಾರೆ. ಈ ಬಾತಿ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕುವ ಬಗ್ಗೆ ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು, ಶನಿವಾರ ಕೆಂಗೇರಿ ಬಳಿಯ ಮಾವಿನ ತೋಪಲ್ಲಿ‌ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಏಪ್ರಿಲ್ 2 ರಂದು ಸಿಎಂ ಜೊತೆಗೆ ಅಂತಿಮವಾಗಿ ಮಾತನಾಡಿ ಚುನಾವಣೆಗೆ ನಿಲ್ಲುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದರು. ಆದರೆ ಮಾಧ್ಯಮಗಳಿಗೆ ಒಂದು ಆಡಿಯೋ ಸಿಕ್ಕಿದ್ದು, ಅಂಬರೀಶ್ ತನ್ನ ರೆಬೆಲ್ ಸ್ಟೈಲ್ ನಲ್ಲೇ ಸಿದ್ದರಾಮಯ್ಯ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಳ್ಳುವ ಮೂಲಕ ನಾನು ಯಾವಾಗಲೂ ರೆಬೆಲ್ ಅನ್ನೋದನ್ನು ಸಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಅಂಬರೀಶ್ ಹಳೆಯ ಸ್ನೇಹಿತರಾಗಿದ್ದು, ತಾವಿಬ್ಬರೇ ಇದ್ದಾಗ ಏಕವಚನದಲ್ಲಿ ಮಾತನಾಡುವುದು ಸಾಮಾನ್ಯ. ಅದರಂತೆ ಸಿಎಂ ಸಿದ್ದರಾಮಯ್ಯ ಏನಯ್ಯ ದೊಡ್ ಮನುಷ್ಯ ಅಂದ್ರೆ ಅಂಬರೀಶ್ ನಾನಲ್ಲ ಕಣಯ್ಯ ದೊಡ್ ಮನುಷ್ಯ ನೀನು ಎಂದು ತಿರುಗೇಟು ಕೊಟ್ಟಿದ್ದಾರೆ. ಬಾರಯ್ಯ ಟಿಕೆಟ್ ಕೊಡೋಣ ಅಂದ್ರೆ ಏನು ನಾನು ಬರ್ಬೇಕಾ..!? ಆರತಿ ಮಾಡಿ ಟಿಕೆಟ್ ಕೇಳೋಕೆ. ಬೇಕಾದ್ರೆ ನೀನೆ ಬಾರಯ್ಯ, ನನ್ ಮನೆಗೆ ಬಂದು ಕೊಟ್ಟು ಹೋಗು ಎಂದಿದ್ದಾರೆ. ಏನ್ ಆ ಹುಡುಗಿ ಮಾತ್ ಕೇಳ್ಕೊಂಡು ನಂಗೆನಾ ಅಂತ ನೇರವಾಗಿ ಕುಟುಕಿದ್ದಾರೆ. ಇದರಿಂದ ವಿಚಲಿತರಾಗದ ಸಿಎಂ ಸಿದ್ದರಾಮಯ್ಯ ಕೂಡ, ಇಲ್ಲಾ ಬುಡಪ್ಪ, ಅವರು ದೆಹಲಿ ಸೇರುವ ಹಾಗೆ ಮಾಡೋಣ, ನಿಂಗ್ಯಾಕೆ ನಾನು ಮಾಡ್ತೀನಿ ಬಿಡು ಅಂತ ಭರವಸೆ ಕೊಟ್ಟಿದ್ದಾರೆ. ನಿಮ್ ಮನೆಗೆ ನಾನೆ ಬರ್ತೀನಿ ಅಂತ ಸಿಎಂ ಹೇಳಿದ್ರು, ನೋಡನ ಅದೇನ್ ಮಾಡ್ತೀಯಾ, ಮಂಡ್ಯದಲ್ಲಿ ನಾನಿದ್ರೆ ಕಾಂಗ್ರೆಸ್, ಇಲ್ಲಾಂದ್ರೆ ಇಲ್ಲ ಎಂದಿರುವ ಅಂಬಿ, ನೋಡ್ತೀಯಾ ನಾನೆ ಮುಖ್ಯಮಂತ್ರಿ ಆಗ್ತೀನಿ ಅಂತ ಸವಾಲು ಹಾಕಿದ್ದಾರೆ. ಅಂಬರೀಶ್ ಖಡಕ್ ಮಾತುಗಳಿಗೆ ತುಂಬಾ ಕೂಲಾಗಿ ಉತ್ತರಿಸಿರುವ ಸಿಎಂ ನೀನು ಮುಖ್ಯಮಂತ್ರಿ ಆದ್ರು ಖುಷಿ ಕಣ್ತೆ ಬಿಡಯ್ಯ ಎಂದಿದ್ದಾರೆ. ಸಿಎಂ ಟಿಕೆಟ್ ಬಗ್ಗೆ ಇಂದು ನಾಳೆ ಅಂಬರೀಶ್ ಜೊತೆ ಮಾತನಾಡಿದ ಬಳಿಕ ಫೈನಲ್ ಆಗಲಿದೆ.
ಮಂಡ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಅಂಬರೀಶ್ ಜೊತೆ ಪೈಪೋಟಿಗೆ ಇಳಿದಿದ್ದು ಯಾರು ಅನ್ನೋ ಪ್ರಶ್ನೆ ಜೊತೆಗೆ ನಿಮಗೆ ಉತ್ತರವೂ ಸಿಕ್ಕಿದೆ. ಅದೇ ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಮಂಡ್ಯದ ಮಾಜಿ ಸಂಸದೆ ನಟಿ ರಮ್ಯಾ.. ಅಂಬರೀಶ್ ಅವರನ್ನು ಅಂಕಲ್ ಅಂಕಲ್ ಎಂದುಕೊಂಡು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ, ಸಂಸದೆಯಾಗಿ ಆಯ್ಕೆಯಾದ ಬಳಿಕ ದೆಹಲಿ ಸಂಪರ್ಕ ಸಾಧಿಸಿದ್ರು. ಆ ಬಳಿಕ ಮಂಡ್ಯ ರಾಜಕಾರಣದಲ್ಲಿ ಮೂಗು ತೂರಿಸಲು ಶುರು ಮಾಡಿದ್ರು, ಅದರಲ್ಲೂ ಅಂಬರೀಶ್ ಅವರನ್ನು ಬಿಟ್ಟು ರಾಜಕೀಯ ಮಾಡಲು ಶುರು ಮಾಡಿದ್ರಿಂದ ಅಂಬಿ ತಾವಾಗೆ ದೂರ ಉಳಿದಿದ್ರು. ಇದು ಸೇಡಾಗಿ ಉಳಿದುಕೊಂಡಿದ್ದು ಅಂಬಿ – ರಮ್ಯಾ ಹಾವು ಮುಂಗುಸಿ ಅಂತೆ ಆಗಿದ್ದಾರೆ. ಅಂಬರೀಶ್ ರಮ್ಯಾ ಹೆಸರೇಳದೆ ಅವಳು ಕುಣಿದಂತೆ ಕುಣಿಯುತ್ತಿದ್ದೀರಿ, ರಾಹುಲ್ ಜೊತೆ ಓಡಾಡುತ್ತ ದೊಡ್ಡವರಾಗಿದ್ದೀರಿ ಎಂದು ಕಿಡಿಕಾರಿದ್ದಾರೆ. ಅಂಬರೀಶ್ ಅವರಿಗೆ ರಾಜಕೀಯ ಬೇಕಿಲ್ಲ ಆದರೂ ರಮ್ಯಾ ಮೇಲೆ ಸೆಡ್ಡು ಹೊಡೆಯಲಾದರೂ ಟಿಕೆಟ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಸ್ನೇಹಿತನ ಕೈ ಹಿಡಿತಾರಾ ಕಾದು ನೋಡ್ಬೇಕು..

Leave a Reply