ಕಾಂಗ್ರೆಸ್-ಜೆಡಿಎಸ್ ನಡುವೆ ಅಂಗಸಂಘ ಬಡಿವಾರ!

ಬೇಸಿಗೆಗೆ ಮೊದಲೇ ಠಳಾಯಿಸಿರುವ ಬಿಸಿಲ ಝಳಕ್ಕೆ ಜನರ ನೆತ್ತಿ ಉರಿಯೊಲೆ ಮೇಲಿನ ಕೆಂಪಂಚಾಗಿದೆ. ಮೇಲೆ ಉಜ್ಜಿದ ಪಾರಿವಾಳ ಮರದ ಬೀಜದಂತೆ ಕಾರುತ್ತಿರುವ ಕಾವಿಗೆ ಸೋತು ಬಸವಳಿದು ಹೋಗಿದ್ದಾರೆ. ಈಗಲೇ ಹಿಂಗೆ, ಇನ್ನೂ ಬೇಸಿಗೆ ಶುರುವಾದರೆ ಹೆಂಗೆ ಎಂಬ ಆತಂಕದ ಗೆರೆಗಳು ಬೋಳುಮರದ ರೆಂಬೆಗಳಂತೆ ಅವರ ಮುಖದ ಮೇಲೆ ಮೂಡಿವೆ. ಆದರೆ ಚುನಾವಣೆ ರಣಾಂಗಣದಲ್ಲಿರುವವರಿಗೆ ಇದ್ಯಾವುದರ ಪರಿವೆಯೂ ಇಲ್ಲ. ಅವರನ್ನು ಯಾವ ಬಿಸಿಲೂ ಕಾಡುತ್ತಿಲ್ಲ, ಬೇಗೆಯೂ ಹತ್ತಿರ ಸುಳಿಯುತ್ತಿಲ್ಲ. ರಾಜಕಾರಣಿಗಳ ವಾಗ್ಝರಿ, ಅವರ ಪ್ರಚಾರದ ವೈಖರಿಗೆ ಬಿರುಬೇಗೆಯೂ ನಾಚಿ ನೀರಾಗಿದೆ!

ನಿಜ, ಇದರಲ್ಲಿ ಯಾವುದೇ ಇಲ್ಲ. ಒಬ್ಬೊಬ್ಬ ನಾಯಕರ ವಾಗ್ಮಂತ್ರ, ವಾಗ್ತಂತ್ರ, ಎದುರಾಳಿಗಳ ಮೇಲೆ ಪ್ರಯೋಗಿಸುತ್ತಿರುವ ‘ಸೂರ್ಯಾಸ್ತ್ರ’ಗಳ ಪ್ರಖರತೆ ಮುಂದೆ ಬೇಸಿಗೆಯ ಬಿರುಬೇಗೆ ಏನೇನೂ ಅಲ್ಲ. ಅದೇನು ಮಾತು? ಅದೇನು ಮಾತಿನ ವೈಖರಿ? ಒಬ್ಬರ ವಾಗ್ಬಾಣಕ್ಕೆ ಮತ್ತೊಬ್ಬರ ತಿರುಗುಬಾಣವೇನು ಮಾತಿನಲ್ಲೇ ಒಬ್ಬರನ್ನು ಕಟ್ಟಿಹಾಕುವ ಪ್ರಯತ್ನವನ್ನೇ ಮತ್ತೊಬ್ಬರು ಬುಟ್ಟಿಯ ಹಾವು ಮಾಡಿಕೊಳ್ಳುವ ಜಾಣ್ಮೆಯೇನು? – ಅಂತೂ ಈ ಚುನಾವಣೆ ನಿಜ ಅರ್ಥದಲ್ಲಿ ಸರ್ವರ ಗಮನವನ್ನು ಬಂಧಿಸಿ, ತನ್ನತ್ತ ಸೆಳೆದಿದೆ.

ಇಷ್ಟೆಲ್ಲ ಪೀಠಿಕೆಯ ಯೋಗ್ಯಾದ್ಯತೆಗೆ ಪಾತ್ರವಾದ ಅನೇಕ ಅದರಲ್ಲಿ ಪ್ರಮುಖರ್ಹವಾದದ್ದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡುವೆ ನಡೆದ ಲೆಕ್ಕಾಚಾರಯುಕ್ತ ವಾಗ್ಯುದ್ಧ. ರಾಹುಲ್ ಗಾಂಧಿ ಅವರು ಜೆಡಿಎಸ್ ಅನ್ನು ಸಂಘ ಪರಿವಾರದ ಅಂಗ, ಬಿಜೆಪಿಯ ‘ಬಿ ಟೀಂ’ ಎಂದು ಜರಿದರು. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ ಎಂದೂ ದೂರಿದರು. ನಿಜಕ್ಕೂ ಇದು ರಾಹುಲ್ ಗಾಂಧಿ ಅವರ ಮಾತಲ್ಲ ಎಂಬುದನ್ನು ಹಿಂದೆ ಹತ್ತಾರು ಬಾರಿ ಅವರ ರಾಜಕೀಯ ಮುಗ್ಧತೆ ಅನೇಕ ಭಾಷಣಗಳು ನಿರೂಪಿಸಿವೆ. ಹೀಗಾಗಿ ಕರ್ನಾಟಕ ಕಾಂಗ್ರೆಸ್ಸಿನ ಮುಖಂಡರು ಇದನ್ನು ರಾಹುಲ್ ಗಾಂಧಿ ಅವರ ಬಾಯಲ್ಲಿ ಹೇಳಿಸಿದ್ದಾರೆ. ಅವರ ಮಾತಿಗೆ ರಾಹುಲ್ ಧ್ವನಿಯಾಗಿದ್ದಾರೆ ಅಷ್ಟೇ. ನೋಡಲು ಇದೊಂದು ಸಾಮಾನ್ಯ ಹೇಳಿಕೆಯಂತೆ ಕಂಡರೂ ಇದರ ಹಿಂದೆ ಜಾತಿ-ಧರ್ಮವಾರು ಮತ ಕ್ರೋಡೀಕರಣದ ಚಾಣಾಕ್ಷ್ಯ ನಡೆ ಇದೆ.

ಜಾತ್ಯತೀತ ಮತಗಳು ಹರಿದು ಹಂಚಿ ಹೋಗದೆ ಕಾಂಗ್ರೆಸ್ ಪರ ಒಗ್ಗೂಡಬೇಕೆಂಬ ಲೆಕ್ಕಾಚಾರ ಇದೆ. ಅಂದರೆ ಅಲ್ಪಸಂಖ್ಯಾತರಲ್ಲೇ ಬಹುಸಂಖ್ಯಾತರಾಗಿರುವ ಮುಸ್ಲಿಂ ಮತಗಳು ಈವರೆಗೂ ಕಾಂಗ್ರೆಸ್ ಮತ್ತು ನಡುವೆ ಹಂಚಿಕೆ ಆಗುತ್ತಿತ್ತು. ಈಗ ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸಿದೆ ಎಂದು ಹಬ್ಬಿಸಿಬಿಟ್ಟರೆ ಮುಸ್ಲಿಂ ಮತಗಳು ಕಾಂಗ್ರೆಸ್ ಬಿಟ್ಟು ಕದಲುವುದಿಲ್ಲ. ಕೋಮುವಾದಿ ಪಕ್ಷ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಮತ ಹಾಕಬಾರದೆಂಬ ತೀರ್ಮಾನಕ್ಕೆ ಮುಸ್ಲಿಮರು ಬರುತ್ತಾರೆ ಎಂಬ ನಂಬಿಕೆ ಅವರದು. ಹೀಗಾಗಿ ರಾಹುಲ್ ಗಾಂಧಿ ಬಾಯಲ್ಲಿ ಜೆಡಿಎಸ್-ಬಿಜೆಪಿ ಚುನಾವಣೆ ಪೂರ್ವ ರಹಸ್ಯ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿಸಿಬಿಟ್ಟರು.

ಇಲ್ಲಿ ಇನ್ನೂ ಒಂದು ವಿಚಾರವಿದೆ. ತಾವು ಪ್ರತಿಪಾದಿಸುತ್ತಿರುವ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ (ಅಹಿಂದ) ಮತಗಳು ಯಾವುದೇ ಕಾರಣಕ್ಕೂ ಅತ್ತಿತ್ತ ಸರಿಯಬಾರದೆಂಬ ಬಯಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರದು. ಮೊದಲಿಂದಲೂ ಈ ವರ್ಗ ಕಾಂಗ್ರೆಸ್ ಜತೆಗೆ ಹೆಚ್ಚು ಗುರುತಿಸಿಕೊಂಡಿತ್ತು. ಸಿದ್ದರಾಮಯ್ಯನವರು ಅದಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿದ್ದರು. ಆದರೆ ಈ ಮಧ್ಯೆ ಜೆಡಿಎಸ್ ಒಂದು ಕಿತಾಪತಿ ಮಾಡಿಟ್ಟಿದೆ. ಪರಿಶಿಷ್ಟರ ಮತಗಳನ್ನು ವಿಭಜಿಸುವ ಉದ್ದೇಶದಿಂದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಜತೆ ಚುನಾವಣೆಪೂರ್ವ ಹೊಂದಾಣಿಕೆ ಇಪ್ಪತ್ತು ಸ್ಥಾನಗಳನ್ನು ಬಿಎಸ್ಪಿಗೆ ಬಿಟ್ಟುಕೊಡುವುದಾಗಿ ಹೇಳಿದೆ. ಮಾಯಾವತಿ ಅವರೂ ಈಗಾಗಲೇ ಕರ್ನಾಟಕಕ್ಕೆ ಬಂದು ದೇವೇಗೌಡರು, ಕುಮಾರಸ್ವಾಮಿ ಜತೆ ಪ್ರಚಾರಸಭೆ ನಡೆಸಿ ಹೋಗಿದ್ದಾರೆ.

ಬಿಎಸ್ಪಿ ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಜೆಡಿಎಸ್‌ಗೆ ಎಷ್ಟು ಲಾಭವಾಗುತ್ತದೋ, ಬಿಎಸ್ಪಿ ಎಷ್ಟು ಸ್ಥಾನ ಗೆಲ್ಲುತ್ತದೋ ಬಿಡುತ್ತದೋ ಅದು ಬೇರೆ ಪ್ರಶ್ನೆ. ಆದರೆ ನಿಸ್ಸಂಶಯವಾಗಿ ಕಾಂಗ್ರೆಸ್ ಪರ ಇದ್ದ ಪರಿಶಿಷ್ಟರ ಮತಗಳನ್ನು ಒಡೆಯುತ್ತದೆ. ಇದರಿಂದ ಕಾಂಗ್ರೆಸ್ಸಿಗೆ ಸ್ವಲ್ಪ ಯಡವಟ್ಟಾಗುವುದಂತೂ ಸತ್ಯ. ಹಿಂದೆ ಎಸ್.ಎಂ. ಕೃಷ್ಣ ಸರಕಾರ ಆರು ಅವಧಿಗೆ ಮೊದಲೇ ಚುನಾವಣೆಗೆ ಹೋದಾಗ ಬಿಎಸ್ಪಿ ರಾಜ್ಯದ ಎಲ್ಲೆಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆಗ ಎಲ್ಲೂ ಬಿಎಸ್ಪಿ ಗೆಲ್ಲಲಿಲ್ಲವಾದರೂ, ಪರಿಶಿಷ್ಟರ ಮತಗಳು ಒಡೆದು ಹಂಚಿಕೆ ಆದ ಪರಿಣಾಮ ಕಾಂಗ್ರೆಸ್ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿತ್ತು. ಆಗ ಜೆಡಿಎಸ್ ಜತೆ ಮೈತ್ರಿ ಸರಕಾರ ಮಾಡುವುದು ಕಾಂಗ್ರೆಸ್‌ಗೆ ಅನಿವಾರ್ಯವಾಯಿತು. ಈಗ ದೇವೇಗೌಡರು ಕಾಂಗ್ರೆಸ್‌ಗೆ ಅನಾಹುತ ಮಾಡಲೆಂದೇ ಬಿಎಸ್ಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಗೌಡರ ಉದ್ದೇಶ ಸ್ವಲ್ಪಮಟ್ಟಿಗೆ ಈಡೇರುವುದರಲ್ಲಿ ಅನುಮಾನವಿಲ್ಲ.

ಇದಕ್ಕೆ ನೀಡಲೆಂದೇ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಅವರ ಬಾಯಲ್ಲಿ ಜೆಡಿಎಸ್ ಸಂಘ ಪರಿವಾರದ ರಂಗ, ಬಿಜೆಪಿಯ ‘ಬಿ ಟೀಂ’ ಎಂದು ಹೇಳಿಸಿದ್ದಾರೆ. ಈ ಹೇಳಿಕೆ ಅಲ್ಪಸಂಖ್ಯಾತರ ಅಂತರಂಗ ಅಲ್ಲಾಡಿಸುವುದು ಸತ್ಯ. ಮೊದಲೇ ಜಮೀರ್ ಅಹಮದ್‌ಖಾನ್, ಇಕ್ಬಾಲ್ ಅನ್ಸಾರಿ ಅವರಂಥವರು ದೇವೇಗೌಡರ ವಿರುದ್ಧ ಸೆಟೆದು ನಿಂತಿದ್ದಾರೆ. ಇಂಥ ಸನ್ನಿವೇಶದಲ್ಲಿ ರಾಹುಲ್‌ಗಾಂಧಿ ಹೇಳಿಕೆಯಿಂದ ಪಕ್ಷಕ್ಕೆ ಅನುಕೂಲ ಆಗಬಹುದು ಎಂಬ ನಂಬಿಕೆ ಕಾಂಗ್ರೆಸ್ ನಾಯಕರದು.

ಸಿದ್ದರಾಮಯ್ಯನವರ ಲೆಕ್ಕಾಚಾರ ಇಷ್ಟಿರುವಾಗ ಒಂದು ಕಾಲದಲ್ಲಿ ಅವರ ರಾಜಕೀಯ ದೇವೇಗೌಡರು ಇನ್ನೆಷ್ಟು ತಂತ್ರ ಮಾಡಬೇಡ ! ಅವರದೇ ಶೈಲಿಯಲ್ಲಿ ತಿರುಗೇಟು ನೀಡುವ ಮೊದಲು ಸಾಕಷ್ಟು ಅಳೆದು ತೂಗಿ ನೋಡಿದ್ದಾರೆ. ಇದು ರಾಜಕೀಯವಾಗಿ ಕೆಲಸಕ್ಕೆ ಬರುತ್ತದೆ ಎಂದು ನಿರ್ಣಯಿಸಿದ ಮೇಲೆ ಕಾಂಗ್ರೆಸ್ ಮೇಲೊಂದು ಬಾಂಬ್ ಬಿಸಾಡಿದ್ದಾರೆ. ಅವರಿವರು ಬರೆದುಕೊಟ್ಟ ಚೀಟಿ ಓದುವ ರಾಹುಲ್‌ಗಾಂಧಿ ಅವರು ರಾಜಕೀಯವಾಗಿ ಇನ್ನೂ ಬೆಳೆಯಬೇಕಾದ ಹುಡುಗ. ಈಗ ಕಾಂಗ್ರೆಸ್ ಜತೆಗೆ ಚುನಾವಣೆಪೂರ್ವ ಹೊಂದಾಣಿಕೆ ಮಾಡಿಕೊಡಲು ಜೆಡಿಎಸ್ ಸಿದ್ಧವಿದೆ. ಮುಂದಿನ ಚುನಾವಣೆಯಲ್ಲಿ ಎಷ್ಟು ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್‌ನವರು ಎಂದು ಪ್ರಶ್ನಿಸಿದ್ದಾರೆ. ತಮ್ಮ ಪಕ್ಷವನ್ನು ಸಂಘ ಪರಿವಾರದ ರಂಗ, ಬಿಜೆಪಿಯ ‘ಬಿ ಟೀಂ’ ಎಂದು ಬಿಂಬಿಸಲು ಹೊರಟಿದ್ದ ಕಾಂಗ್ರೆಸ್‌ನವರಿಗೆ ದೇವೇಗೌಡರ ಈ ವಾಗ್ಬಾಂಬ್ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.

ತಾವು ಪ್ರಯೋಗಿಸಿದ ಅಸ್ತ್ರವನ್ನೇ ತಮ್ಮತ್ತ ತಿರುಗಿಸಿದ ಗೌಡರ ರಾಜಕೀಯ ಕಲಾನೈಪುಣ್ಯಕ್ಕೆ ಬೆರಗಾಗಿ ಹೋದರು. ಈಗ ಗೌಡರು ಕೇಳಿರುವ ಪ್ರಶ್ನೆಗೆ ಉತ್ತರಿಸುವಂತೆಯೂ ಇಲ್ಲ ಅದೇ ರೀತಿ ಸುಮ್ಮನಿರುವಂತೆಯೂ ಇಲ್ಲ. ಉತ್ತರಿಸಿದರೆ ಸೀಟು ಬಿಟ್ಟುಕೊಡಬೇಕು, ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಸುಮ್ಮನಾದರೆ ಈ ಹಿಂದೆ ತಾವು ಸಂಘ ಪರಿವಾರ ರಂಗ ಎಂಬ ಆರೋಪ ಸುಳ್ಳು ಎಂದು ಒಪ್ಪಿಕೊಂಡಂತಾಗುತ್ತದೆ. ಅಷ್ಟರಮಟ್ಟಿಗೆ ಕಾಂಗ್ರೆಸ್‌ನ್ನು ಕಟ್ಟಿಹಾಕಿದ ಗೌಡರ ತಂತ್ರಗಾರಿಕೆ ಹಿಂದೆ ಆರು ದಶಕಗಳ ರಾಜಕೀಯ ಅನುಭವದ ಪಾಠವಿದೆ. ಇದಾದ ನಂತರ ಕಾಂಗ್ರೆಸ್‌ನವರು ಉಸಿರೆತ್ತಲು ಹೋಗಿಲ್ಲ ಎಂಬುದು ಬೇರೆ ಮಾತು !

ಇಲ್ಲೂ ಅಷ್ಟೇ ಗೌಡರು ಕಾಂಗ್ರೆಸ್ ಬಾಯಿ ಕಟ್ಟಿಹಾಕಲು ಸುಖಾಸುಮ್ಮನೆ ಈ ದಾಳ ಉರುಳಿದ್ದಾರೆ. ಒಂದೊಮ್ಮೆ ಕಾಂಗ್ರೆಸ್‌ನವರು ‘ಹ್ಞೂಂ’ ಹೊಂದಾಣಿಕೆಗೆ ಸಿದ್ಧವಿದ್ದೇವೆ ಎಂದಿದ್ದರೆ ದೇವೇಗೌಡರು ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುತ್ತಿದ್ದರು. ಆದರೆ ಹಾಗೆ ಎಂಬ ನಂಬಿಕೆ ಅವರಿಗೆ ಇದ್ದಿದ್ದರಿಂದಲೇ ಈ ಬಾಂಬ್ ಎಸೆದಿದ್ದರು. ಮಾಧ್ಯಮದವರು ಗೌಡರ ಮಾತಿಗೆ ಕುಮಾರಸ್ವಾಮಿ ಅವರ ಬಳಿ ಹೆಚ್ಚಿನ ವಿವರ ಬಯಸಿದಾಗ ‘ಅದೊಂದು ವ್ಯಂಗ್ಯದ ಮಾತು. ಹೋಗಿ, ಹೋಗಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದೇ? ಬಿಲ್‌ಕುಲ್ ಇಲ್ಲ’ ಎಂದರು. ನಂತರ ಗೌಡರೂ ಇದನ್ನು ಅನುಮೋದಿಸಿದರು. ಮೊದಲೇ ಇವರಿಬ್ಬರು ಮಾತಾಡಿಕೊಂಡೇ ಈ ‘ಭಿನ್ನರಾಗ’ ಹಾಡಿದ್ದಾರೆ. ಇದು ಎದುರಾಳಿಗಳನ್ನು ಸದೆಬಡಿವ ಗೌಡರ ಕುಟುಂಬದ ವಿಶೇಷ ಕಾರ್ಯಾಚರಣೆ!

ತಾವು ನಿಜವಾಗಿಯೂ ಜಾತ್ಯತೀತರು, ರಾಹುಲ್‌ಗಾಂಧಿ ಸಂಘ ಪರಿವಾರದ ಜತೆ ಯಾವುದೇ ಸಂಬಂಧ ಇಲ್ಲ. ಜಾತ್ಯತೀತರಾಗಿ ಉಳಿದಿರುವುದರಿಂದಲೇ ಕಾಂಗ್ರೆಸ್ ಜತೆ ಹೊಂದಾಣಿಕೆಗೆ ಮುಂದಾಗಿದ್ದಾಗಿ ತಂತ್ರಗಾರಿಕೆ ಸಂದೇಶ ರವಾನೆ ಮಾಡುವಲ್ಲಿ ಯಶಸ್ವಿ ಆಗಿರುವ ದೇವೇಗೌಡರು ಸಿದ್ದರಾಮಯ್ಯ ಸರಕಾರದ ಮೇಲ್ವರ್ಗ ವಿರೋಧಿ ನಿಲುವನ್ನೇ ತಮ್ಮ ಪಕ್ಷದ ಪರ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಜತೆಗೆ ಪರಿಶಿಷ್ಟರು ಹಾಗೂ ಮುಸ್ಲಿಂ ಸಮುದಾಯದ ಮತಗಳ ಕ್ರೋಡೀಕರಣಕ್ಕೂ ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸಿನಲ್ಲೇ ಇದ್ದು, ಇಲ್ಲದಂತಿರುವ ಕೇಂದ್ರದ ಮಾಜಿ ಸಚಿವ, ಒಂದು ಕಾಲದ ಆತ್ಮೀಯ ಸಿ.ಎಂ. ಅವರಂಥವರ ಒಳನೆರವಿಗೆ ಪ್ರಯತ್ನ ಮುಂದುವರಿಸಿದ್ದಾರೆ.

ಇದೆಲ್ಲ ಕಾಂಗ್ರೆಸ್ ನಾಯಕರಿಗೆ, ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಯದ ವಿಷಯವೇನಲ್ಲ. ಕಳೆದ ಚುನಾವಣೆಯಲ್ಲಿ ತಮ್ಮ ಕೈಹಿಡಿದು ಮುಖ್ಯಮಂತ್ರಿ ಗಾದಿಗೆ ತಂದು ನಿಲ್ಲಿಸಿದ ‘ಅಹಿಂದ’ ಮತಗಳು ಚದುರಿ ಹೋಗದಂತೆ, ಅವು ಮತ್ತಷ್ಟು ತಮ್ಮ ಪರ ಕ್ರೋಡೀಕರಣ ಆಗುವಂತೆ ಸರ್ವಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ದೇವೇಗೌಡರ ಕುಟುಂಬ ಸದಸ್ಯರನ್ನು ಬಹಿರಂಗವಾಗಿ ಟೀಕಿಸುವುದು, ಅವರ ಕುಟುಂಬವನ್ನು ಸೋಲಿಸಿ ಎಂದು ಕರೆ ನೀಡುವುದು, ಹಾಗೆ ಕರೆ ನೀಡಿದ್ದನ್ನು ನಡದೇ ಇದೆ. ಇದರ ಹಿಂದಿರುವುದು ಹಿಂದೆ ತಮ್ಮನ್ನು ಮುಖ್ಯಮಂತ್ರಿ ಮಾಡದ ದೇವೇಗೌಡರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಒಂದು ಕಡೆಯಾದರೆ, ‘ಅಹಿಂದ’ ಮತಗಳ ಕ್ರೋಡೀಕರಣಕ್ಕೆ ಒಕ್ಕಲಿಗ ವಿರೋಧಿ ನಿಲುವನ್ನೂ ಸೋಪಾನ ಮಾಡಿಕೊಳ್ಳುವುದು ಮತ್ತೊಂದು ಕಡೆ. ತಾವು ಹಿಂದೆಯೂ ಅಹಿಂದ ಪರ, ಈಗಲೂ ಅಹಿಂದ ಪರ. ಅಧಿಕಾರದುದ್ದಕ್ಕೂ ಅಹಿಂದ ಪರ. ಅದು ಯಾವುದೇ ಕಾರಣಕ್ಕೂ ಬದಲಾಗಿಲ್ಲ ಎಂಬ ಸಂದೇಶ ರವಾನೆ ಇದರ ಹಿಂದಿದೆ.

ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತು ಹೊರಡಿಸಿರುವುದರ ಹಿಂದಿರುವುದೂ ಇಂಥದ್ದೇ ತಂತ್ರಗಾರಿಕೆ. ಇಲ್ಲಿ ‘ತ್ರಿಕೋನ’ ಲಾಭದ ಲೆಕ್ಕಾಚಾರವಿದೆ. ಲಿಂಗಾಯತ ಸಮುದಾಯದವರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವುದರಿಂದ, ಆ ಸಮುದಾಯದ ಮುಖಂಡರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಸವಲತ್ತುಗಳು, ಅನುದಾನ ಲಭ್ಯವಾಗಲಿದೆ. ಇದರಿಂದ ಪಕ್ಷದ ಲಿಂಗಾಯತ ಮುಖಂಡರನ್ನು ಓಲೈಸಿದಂತೆಯೂ ಆಯಿತು. ಅದೇ ಕಾಲಕ್ಕೆ ಈವರೆಗೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ಲಿಂಗಾಯತ ಸಮುದಾಯವನ್ನು ವಿಭಜಿಸಿ, ಸ್ವಲ್ಪಮಟ್ಟಿಗಾದರೂ ಮತಗಳನ್ನು ಕಾಂಗ್ರೆಸ್ ಕಡೆ ತಿರುಗಿಸಿಕೊಳ್ಳಲು ಯತ್ನಿಸಿದಂತೆಯೂ ಆಯಿತು. ಏನೂ ಅನ್ನುವುದಕ್ಕಿಂಥ ಬಂದಷ್ಟೇ ಲಾಭ. ಅದೇ ಕಾಲಕ್ಕೆ ಲಿಂಗಾಯತ ಸಮುದಾಯ ವಿಭಜಿಸಿದ ಜಾಣ್ಮೆ ಮುಂದಿಟ್ಟು ‘ಅಹಿಂದ’ ಮತಗಳನ್ನು ಒತ್ತಟ್ಟಿಗೆ ಹಿಡಿದಿಟ್ಟುಕೊಳ್ಳುವುದೇ ಈ ‘ತ್ರಿಕೋನ ಲಾಭ’ ತಂತ್ರಗಾರಿಕೆ!

ಈ ಮಧ್ಯೆ ಕಾಂಗ್ರೆಸ್ ವಲಯದಿಂದ ಮತ್ತೊಂದು ಸುದ್ದಿ ಹಬ್ಬಿಸಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಚುನಾವಣೆಪೂರ್ವ ರಹಸ್ಯ ಒಪ್ಪಂದ ಏರ್ಪಟ್ಟಿದೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ವೆಚ್ಚಕ್ಕೆಂದು 300 ಕೋಟಿ ರುಪಾಯಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ಮಾಡುವುದು ಇದರ ಹಿಂದಿರುವ ಏಕೈಕ ಗುರಿ. ಜೆಡಿಎಸ್ ಗೆಲ್ಲುವ ಕಡೆ ಬಿಜೆಪಿ ಡಮ್ಮಿ ಅಭ್ಯರ್ಥಿಗಳನ್ನು ಹಾಕುವುದು. ಅದೇ ರೀತಿ ಬಿಜೆಪಿ ಗೆಲ್ಲುವ ಕಡೆ ಜೆಡಿಎಸ್ ಡಮ್ಮಿ ಅಭ್ಯರ್ಥಿಗಳನ್ನು ಹಾಕುವುದು. ಆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವುದು. ಚುನಾವಣೆ ನಂತರ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದ ಹುನ್ನಾರ ಇದರ ಹಿಂದಿದೆ ಎಂಬುದು ಈ ವದಂತಿಯ ತಿರುಳು.

ಚುನಾವಣೆ ರಣಾಂಗಣದಲ್ಲಿ ಇಂಥ ವದಂತಿ, ರಹಸ್ಯ ಕಾರ್ಯಾಚರಣೆ, ಶತ್ರುಗಳನ್ನು ಸದೆಬಡಿಯಲು ಮತ್ತೊಬ್ಬರು ಶತ್ರುಗಳು ಜೋಡಿಸುವುದು ಇವೆಲ್ಲ ಇದ್ದಿದ್ದೇ. ಹೀಗಾಗಿ ಇದೀಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲ ಪಕ್ಷಗಳೂ ತಮ್ಮ ಬತ್ತಳಿಕೆಯಲ್ಲಿರುವ ಸರ್ವಾಸ್ತ್ರಗಳನ್ನು ಪ್ರಯೋಗಿಸುತ್ತಿವೆ. ಇದರಿಂದ ಚುನಾವಣೆಗೆ ಎಲ್ಲಿಲ್ಲದ ಕಾವು ಬಂದಿದೆ. ಈ ಕಾವು ಬಿಸಿಲ ಬೇಗೆಯನ್ನು ಹಿಂದಿಕ್ಕಿದೆ!

Leave a Reply