ಚುನಾವಣಾ ಆಯೋಗಕ್ಕೆ ನನ್ನದೊಂದು ಮನವಿ

ಡಿಜಿಟಲ್ ಕನ್ನಡ ಟೀಮ್:

ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ಘೋಷಣೆ ಆದ ಬಳಿಕ ನೀತಿ ಸಂಹಿತೆ ಜಾರಿ ಆಗುತ್ತದೆ. ಚುನಾವಣೆ ಘೋಷಣೆ ಆದ ಬಳಿಕ ರಾಜಕೀಯ ಪಕ್ಷದ ಮುಖಂಡರು ಜನರನ್ನು ತಮ್ಮತ್ತ ಸೆಳೆಯಲು ನಾನಾ ಕಸರತ್ತು ಮಾಡುತ್ತವೆ. ಆ ವೇಳೆ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ಮಾಡಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಬೆಂಬಲಿಗರು ಒಡ್ಡುತ್ತಿರುವ ಆಮೀಷವನ್ನು ತಡೆದು ವಶಕ್ಕೆ ಪಡೆಯುವ ಕೆಲಸ ಮಾಡುತ್ತಾರೆ. ಆದರೆ ಚುನಾವಣೆ ಕಳೆದ ಬಳಿಕ ವಶಕ್ಕೆ ಪಡೆದ ವಸ್ತುಗಳು, ಲಕ್ಷಾಂತರ ರೂಪಾಯಿ ಹಣ ಏನಾಯ್ತು..? ಎಲ್ಲಿಗೆ ಹೋಯ್ತು ಅನ್ನೋ ಮಾಹಿತಿ ಮಾತ್ರ ಯಾರಿಗೂ ಸಿಗುವುದಿಲ್ಲ. ಜನಸಾಮಾನ್ಯರಿಗೆ ಕೊನೆಗೆ ಗೊತ್ತಾಗುವುದು ಒಂದೆರಡು ಕೋರ್ಟ್​ ಕೇಸ್​ಗಳು ಮಾತ್ರ.. ಕೋರ್ಟ್​ ಕೇಸ್​ ಇದ್ದಾಗ ಚುನಾವಣೆ ವೇಳೆ ನಡೆದಿದ್ದ ಅಕ್ರಮದ ಕೇಸ್​ ಎಂದಾಗ ಅಷ್ಟೇ ಗೊತ್ತಾಗುತ್ತದೆ.. ಆದರೆ ರಾಜಕೀಯ ಪಕ್ಷಗಳು ತಯಾರಿಸಿದ ಅಡುಗೆ ಪದಾರ್ಥಗಳು ಮಾತ್ರ ಚರಂಡಿ ಪಾಲಾಗುತ್ತದೆ.

ಅಭ್ಯರ್ಥಿಗಳು ತನ್ನತ್ತ ಮತದಾರರನ್ನು ಸೆಳೆಯಲು ಮಾಂಸದೂಟ ಸೇರಿದಂತೆ ಬಗೆ ಬಗೆಯ ಖಾದ್ಯವನ್ನು ತಯಾರಿಸುತ್ತಾರೆ. ಇದರ ಮಾಹಿತಿ ಕಲೆ ಹಾಕುವ ಅಧಿಕಾರಿಗಳು, ಆ ಪ್ರದೇಶದ ಮೇಲೆ ದಾಳಿ ಮಾಡಿ ಅಡುಗೆ ಸಮೇತ ಜಪ್ತಿ ಮಾಡಿ ಪ್ರಕರಣ ದಾಖಲಿಸುತ್ತಾರೆ. ಆಹಾರ, ಹಣ, ಹೆಂಡ ಕೊಟ್ಟು ಮತದಾರರ ಓಲೈಕೆ ಮಾಡುವುದು ಕಾನೂನು ಬಾಹಿರ ಹಾಗು ನೀತಿ ಸಂಹಿತೆ ಉಲ್ಲಂಘನೆ ಸರಿ. ಆದರೆ ಕಾನೂನಿನ ನೆಪದಲ್ಲಿ ತಯಾರಿ ಮಾಡಿದ್ದ ಅಡುಗೆಯನ್ನು ಅಧಿಕಾರಿಗಳು ಚರಂಡಿಗೆ ಸುರಿಯುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಯಾಕಂದ್ರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಆಹಾರ ಪದಾರ್ಥ ತಯಾರಿ ಮಾಡಿಸಿರುತ್ತಾರೆ. ಏಕಾಏಕಿ ದಾಳಿ ಮಾಡಿ ಚರಂಡಿಗೆ ಸುರಿದರೆ ಹಣವೂ ಪೋಲು ಅದರ ಜೊತೆ ಜನರ ಹೊಟ್ಟೆ ಸೇರಬೇಕಿದ್ದ ಆಹಾರವೂ ಪೋಲಾಗುತ್ತದೆ. ಆಹಾರ ಫ್ಯಾಕ್ಟರಿಯಲ್ಲಿ ತಯಾರಿ ಮಾಡುವುದಲ್ಲ. ಬದಲಿಗೆ ರೈತರು ಬೆವರು ಸುರಿಸಿ ಫಸಲನ್ನು ಬೆಳೆಯಬೇಕಿದೆ. ಹೀಗಾಗಿ ಅಭ್ಯರ್ಥಿಗಳು ತಯಾರಿಸಿದ ಆಹಾರವನ್ನು ಚರಂಡಿಗೆ ಸುರಿಯುವ ಬದಲು, ಸದುಪಯೋಗ ಮಾಡಿಕೊಳ್ಳುವತ್ತ ಅನ್ಯ ಮಾರ್ಗವನ್ನು ಅನುಸರಿಸಬೇಕಿದೆ..

ಬೆಂಗಳೂರು ನಗರ ಸೇರಿದಂತೆ ಹಲವು ನಗರಗಳಲ್ಲಿ ಭಿಕ್ಷುಕರ ಕಾಲೋನಿಗಳಿವೆ, ಅನೇಕ ಜನರು ನಿರಾಶ್ರಿತರು, ಕೂಲಿ ಕಾರ್ಮಿಕರು ಕೆಲಸ ಮಾಡ್ತಾರೆ. ಸಾಕಷ್ಟು ಜನರು ಊಟ ಮಾಡಲು ಸಾಧ್ಯವಾಗದೆ ಪರದಾಡುವ ಸ್ಥಿತಿಯಿದೆ. ಈ ರೀತಿ ಊಟ ಮಾಡಲು ಸಾಧ್ಯವಾಗದ ಜನರಿಗಾಗಿಯೇ ಕೆಲವೊಂದು ಎನ್ ಜಿ ಒಗಳು ಕೆಲಸ ಮಾಡ್ತಿದ್ದು, ಮದುವೆ ಸಮಾರಂಭ ಸೇರಿದಂತೆ ಅಲ್ಲಿ ಜನರು ಊಟ ಮಾಡಿದ ಬಳಿಕ ಅಳಿದುಳಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಹಂಚುವ ಕೆಲಸ ಮಾಡ್ತಿದ್ದಾರೆ. ಯಾವುದೇ ಹಣದಾಸೆಗಾಗಿ ಕೆಲಸ ಮಾಡದ ಇವರು, ಕೇವಲ ಆಹಾರ ವ್ಯರ್ಥ ಆಗಬಾರದು ಜೊತೆಗೆ ಊಟ ಸಿಗದೆ ಕೆಲವರು ಹಸಿವಿನಿಂದ ಬಳಲಬಾರದು ಅನ್ನೋ ಸದುದ್ದೇಶ ಇಟ್ಟುಕೊಂಡಿದ್ದಾರೆ. ಅಧಿಕಾರಿಗಳು ಸಂಗ್ರಹಿಸುವ ಆಹಾರ ಮಾಹಿತಿಯನ್ನು ಈ ಎನ್ ಜಿ ಒ ಗಳಿಗೆ ತಿಳಿಸಿದ್ರೆ, ಖಂಡಿದ ಅದೇ ಸ್ಥಳದಿಂದ ಆಹಾರ ಸಂಗ್ರಹಿಸಿಕೊಂಡು ಹೋಗಿ ಹಂಚುವ ಕೆಲಸ ಮಾಡಲಿದ್ದಾರೆ. ಅಥವಾ ಸರ್ಕಾರವೇ ಹಣ ವೆಚ್ಚ ಮಾಡುವ ಸರ್ಕಾರಿ ಹಾಸ್ಟೆಲ್ ಗಳು, ಭಿಕ್ಷುಕರ ಕಾಲೋನಿ, ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜನರಿಗೆ ಕೂಡ ಈ ಆಹಾರವನ್ನು ಹಂಚಲು ವ್ಯವಸ್ಥೆ ಮಾಡಬಹುದು. ಆಹಾರ ವ್ಯರ್ಥವಾಗಿ ನಾಶ ಆಗುವುದನ್ನು ತಪ್ಪಿಸಲೇ ಬೇಕಿದೆ. ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.

Leave a Reply