ಮೂರೂ ಮನೆಯಲ್ಲಿ ಬಿರುಕು!

ಡಿಜಿಟಲ್ ಕನ್ನಡ ಟೀಮ್:
ಒಂದು ಕಡೆ ಪಕ್ಷದ ನಾಯಕರು ಅನ್ಯ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಕರೆತಂದು ಅಪ್ಪಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಇದನ್ನು ವಿರೋಧಿಸಿ ಕಾರ್ಯಕರ್ತರು ಬೀದಿಗಿಳಿದು ಹೋರಾಟಗಳನ್ನು ನಡೆಸಲು ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷವನ್ನು ತಳಮಟ್ಟದಿಂದ ಕಟ್ಟಿದ ತಮ್ಮನ್ನು ಕಡೆಗಣಿಸಿ ಅನ್ಯ ಪಕ್ಷಗಳ ನಾಯಕರನ್ನು ಕರೆ ತರಲಾಗುತ್ತಿದೆ ಎಂಬ ಆರೋಪಗಳು ಪ್ರಮುಖವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಕೇಳಿಬರುತ್ತಿವೆ.
ವಿಜಯಪುರ, ಬಾಗಲಕೋಟೆ, ಬೀದರ್ ಮತ್ತು ಧಾರವಾಡದಲ್ಲಿನ ಜೆಡಿಎಸ್ ಪಕ್ಷದಲ್ಲಿ ಈ ಭಿನ್ನಮತ ತಾರಕಕ್ಕೇರಿದ್ದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೇನುಗೂಡಿಗೇ ಕೈ ಹಾಕಿದ್ದಾರೆ.
ಸಿದ್ದು ಜೇನುಗೂಡಿಗೆ ಎಚ್ಡಿಕೆ ಕೈ
ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ಮತ್ತು ಕಣಕ್ಕಿಳಿದಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಲಗ್ಗೆ ಇಟ್ಟಿರುವ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದ ಕೆಂಪೀರಯ್ಯ ಎಂಬುವರ ಕುಟುಂಬ ಸದಸ್ಯರು ಮತ್ತು ಅವರ ಬೆಂಬಲಿಗರನ್ನು ಜೆಡಿಎಸ್ ಪಕ್ಷಕ್ಕೆ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಈ ಮುಖಂಡರು ಸದ್ಯದಲ್ಲಿಯೇ ಜೆಡಿಎಸ್ ಪಕ್ಷವನ್ನು ಸೇರಲಿದ್ದಾರೆ. ಇದಲ್ಲದೇ, ಇನ್ನೂ ಹಲವು ಗ್ರಾಮಗಳ ಮುಖಂಡರನ್ನು ಸೇರಿಸಿಕೊಳ್ಳುವತ್ತ ಕುಮಾರಸ್ವಾಮಿ ಮತ್ತು ಕ್ಷೇತ್ರದ ಅಭ್ಯರ್ಥಿಯಾಗಿರುವ ಜಿ.ಟಿ.ದೇವೇಗೌಡ ಅವರು ಮಾತುಕತೆ ನಡೆಸಿದ್ದು ಇದೂ ಕೂಡ ಕಾರ್ಯರೂಪಕ್ಕೆ ಬರಲಿದೆ.
ಇಲ್ಲಿ ಸೇರ್ಪಡೆ, ಅಲ್ಲಿ ವಿರೋಧ
ಇನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ತಮ್ಮ ಒಂದು ಕಾಲದ ವಿರೋಧಿಯಾಗಿದ್ದ ಬಸನಗೌಡ ಯತ್ನಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ, ಯತ್ನಾಳ್ ಅವರನ್ನು ಸೇರಿಸಿಕೊಂಡಿದ್ದನ್ನು ವಿರೋಧಿಸಿ ಬಾಗಲಕೋಟೆಯಲ್ಲಿ ಮಾಜಿ ಶಾಸಕ ಅಪ್ಪುಪಟ್ಟಣ ಶೆಟ್ಟಿ ಅವರ ಬೆಂಬಲಿಗರು ರಸ್ತೆಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಕಾರ್ಯಕರ್ತನೋರ್ವ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಾನೆ.
ಖೂಬಾ ಸೇರ್ಪಡೆಗೆ ಆಕ್ರೋಶ
ಮತ್ತೊಂದೆಡೆ, ಜೆಡಿಎಸ್ ಶಾಸಕರಾಗಿದ್ದ ಬಸವ ಕಲ್ಯಾಣದ ಮಲ್ಲಿಕಾರ್ಜುನ ಖೂಬಾ ಅವರ ಸೇರ್ಪಡೆಗೆ ಸ್ಥಳೀಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಂದ ಕಳೆದ ಒಂದು ವಾರದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿತ್ತು. ಆದರೆ, ಇದನ್ನು ಲೆಕ್ಕಿಸದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಖೂಬಾ ಅವರನ್ನೂ ಪಕ್ಷಕ್ಕೆ ಕರೆತಂದು ತಬ್ಬಿಕೊಂಡಿದ್ದಾರೆ. ಇದಲ್ಲದೇ, ಬಿಜೆಪಿ ಕಚೇರಿವರೆಗೂ ಬಂದಿದ್ದ ಖೂಬಾ ಅವರ ಬೆಂಬಲಿಗರು ಯಾವುದೇ ಕಾರಣಕ್ಕೂ ನೀವು ಬಿಜೆಪಿ ಸೇರಬೇಡಿ ಎಂದು ಅಲವತ್ತುಕೊಂಡರಾದರೂ ಖೂಬಾ ಬಿಜೆಪಿ ಸೇರುವುದನ್ನು ಬಿಡಲಿಲ್ಲ.
ಅರಸೀಕೆರೆಯಲ್ಲಿ ಸೋಮಣ್ಣಗೆ ಟಿಕೆಟ್ ಕೊಡಿ
ಇನ್ನು ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಅವರ ನೂರಾರು ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಕಾರಿಗೆ ಮುತ್ತಿಗೆ ಹಾಕಿ ಸೋಮಣ್ಣ ಅವರಿಗೆ ಅರಸೀಕೆರೆಯಲ್ಲಿ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದರೂ ಬಿಎಸ್‌ವೈ ಮೌನವಹಿಸಿದ್ದರಿಂದ ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸಾದರು.
ಜೆಡಿಎಸ್‌ಗೂ ತಟ್ಟಿದ ಅಸಮಾಧಾನ
ಇನ್ನು ಧಾರವಾಡದಲ್ಲಿ ಜೆಡಿಎಸ್ ಪಕ್ಷದಲ್ಲೂ ಅಸಮಾಧಾನ ಭುಗಿಲೆದ್ದಿದೆ. ಧಾರವಾಡದಲ್ಲಿ ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಹೊರಟಿದ್ದಾರೆ ಎಂದು ಧಾರವಾಡ ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿಗಳಾದ ಶ್ರೀಕಾಂತ ಜಮನಾಳ, ಫರೀದಾ ರೋಣ, ರುದ್ರಪ್ಪ ಹೊಸೂರು ಸೇರಿದಂತೆ ಮತ್ತಿತರೆ ನಾಯಕರು ತಿರುಗಿಬಿದ್ದಿದ್ದಾರೆ. ಮತ್ತೊಂದೆಡೆ, ವಿಜಯಪುರದಲ್ಲಿ ಹಾಲಿ ಶಾಸಕ ಡಾ.ಮಕ್ಬೂಲ ಬಾಗವಾನಗೆ ಟಿಕೆಟ್ ನೀಡಬಾರದು ಎಂದು 21 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳು ಕಾಂಗ್ರೆಸ್ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ. ಪಕ್ಷದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿಯೂ ಪ್ರತಿಭಟನೆ ನಡೆಸಿದ್ದಾರೆ.

Leave a Reply