ನಟ ಸುದೀಪ್ ರನ್ನು ರಾಜಕೀಯಕ್ಕೆ ಕರೆತಂದು ಹಾಳು ಮಾಡಲಾರೆ!

ಡಿಜಿಟಲ್ ಕನ್ನಡ ಟೀಮ್:

ಸೋಮವಾರ ನಟ ಸುದೀಪ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜೆ.ಪಿ ನಗರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ರು. ಮಾತುಕತೆ ನಡೆಸಿರುವ ಫೋಟೋ ಹಾಗು ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸುದೀಪ್ ರನ್ನು ಪ್ರಚಾರಕ್ಕೆ ಬಳಸಿಕೊಂಡು ಹೆಚ್ಚು ಸ್ಥಾನಗಳನ್ನು ಗೆಲ್ಲಲು ಜೆಡಿಎಸ್ ಪ್ಲಾನ್ ಮಾಡಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ನಾಯಕ ಕುಟುಂಬಗಳು ಹೆಚ್ಚಾಗಿವೆ, ಜೊತೆಗೆ ನಟ ಸುದೀಪ್ ಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ, ಅವರನ್ನು ಜೆಡಿಎಸ್ ಪಕ್ಷಕ್ಕೆ‌ ಸೆಳೆದರೆ ಜೆಡಿಎಸ್ ಗೆಲುವಿನ ಸಂಖ್ಯೆ ಹೆಚ್ಚಾಗಲಿದೆ. ಸುದೀಪ್ ಗೆ ಪರಿಷತ್ ಸದಸ್ಯ ಸ್ಥಾನದ ಭರವಸೆ ನೀಡಿದ್ದಾರೆ ಅಂತೆಲ್ಲಾ ಮಾತುಗಳೂ‌ ಕೇಳಿ ಬಂದಿದ್ವು.

ನನ್ನನ್ನು ಸುದೀಪ್ ಅವರು ಭೇಟಿಯಾಗಿದ್ದು ನನ್ನ ಮಗನ ಸಿನಿಮಾ ಬಗ್ಗೆ ಚರ್ಚೆ ಮಾಡಲು ಮಾತ್ರ. ಈ ವೇಳೆ ನಾವು ರಾಜಕೀಯದ ಬಗ್ಗೆಯೂ ಮಾತನಾಡಿದೆವು. ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ನನ್ನಲ್ಲಿ ಚರ್ಚೆ ನಡೆಸಿದ್ರು. ರಾಜಕೀಯಕ್ಕೆ ಸುದೀಪ್ ಕರೆದುಕೊಂಡು ಬಂದು ಅವರ ಭವಿಷ್ಯವನ್ನು ನಾನು ಹಾಳು ಮಾಡಲು ಬಯಸುವುದಿಲ್ಲ. ಆದರೆ ರಾಜಕಾರಣಕ್ಕೆ ಬರುವುದು ಬಿಡುವುದು ನೀವೇ ನಿರ್ಧಾರ ಮಾಡಿ ಎಂದು ತಿಳಿಸಿದ್ದೇನೆ. ಜೆಡಿಎಸ್ ಪಕ್ಷ ಸೇರುವ ಬಗ್ಗೆ ಅವರೇ ನಿರ್ಧಾರ ಮಾಡಲಿದ್ದಾರೆ ಎಂದಿದ್ದಾರೆ. ಸಿನಿಮಾ ನಟನನ್ನು ಬಳಸಿಕೊಳ್ಳುವ ಬಗ್ಗೆ ಯಾವುದೇ ಮಾಹಿತಿ ನೀಡದ ಕುಮಾರಸ್ವಾಮಿ, ರಾಜಕೀಯಕ್ಕೆ ಕರೆದು ತಂದರೆ ಸಿನಿಮಾ ಕೆರಿಯರ್ ಹಾಳಾಗುತ್ತದೆ ಅನ್ನೋ ಆಲೋಚನೆಯನ್ನೂ ಮಾಡಿದ್ದಾರೆ.

ಚಿತ್ರರಂಗದಲ್ಲಿ ಹಚ್ಚಿದ ಬಣ್ಣ ಹೊಳಪು ಕಳೆದುಕೊಳ್ಳುವ ತನಕ ನಾಯಕ, ನಾಯಕಿಯರು.. ಆ ಬಳಿಕ ನಾಯಕ, ನಾಯಕಿ ಬೆಲೆ ಇಲ್ಲದ ವಸ್ತು ರೀತಿ ಮನೆ, ಬ್ಯುಸಿನೆಸ್ ಅಂತ ಕಾಲ ಕಳೆಯಬೇಕಾಗುತ್ತೆ. ಆ ವೇಳೆಯಲ್ಲಿ ಸಿನಿಮಾ ಸ್ಟಾರ್ಸ್ ಆಯ್ಕೆ ರಾಜಕೀಯ.. ಹೀಗಾಗಿ ಇಂದು ಸಂಭಾವನೆಯ ಉತ್ತುಂಗದಲ್ಲಿರುವ ಸುದೀಪ್ ರಾಜಕೀಯಕ್ಕೆ ಬಾರದೆ ಇರಬಹುದು, ಆದರೆ ಒಂದಲ್ಲ ಒಂದು ದಿನ ಕೊನೆಯ ಸ್ಟಾಪ್ ಆಗಿರುವ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆ. ಆದ್ರೆ ಕುಮಾರಸ್ವಾಮಿ ಹಾಗು ಆ ಪಕ್ಷದ ಮೇಲಿನ ಪ್ರೀತಿ ಇದೇ ಇದ್ರೆ ಜೆಡಿಎಸ್ ಪಕ್ಣವನ್ನು ಸೇರ್ಪಡೆ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನೋದು ಅಭಿಮಾನಿ ದೇವರ ಆಸೆ.

Leave a Reply