ಕೂಟ ದಾಖಲೆಯೊಂದಿಗೆ ಭಾರತಕ್ಕೆ ಎರಡನೇ ಚಿನ್ನ ತಂದುಕೊಟ್ಟ ಸಂಜಿತಾ ಚಾನು

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಮೀರಾಭಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರೆ, ಇಂದು ಸಂಜಿತಾ ಚಾನು ಎರಡನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅದರೊಂದಿಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನ ಮುಂದುವರಿದಿದೆ.

ಕ್ರೀಡಾಕೂಟದ ಎರಡನೇ ದಿನವಾದ ಶುಕ್ರವಾರ ನಡೆದ ಮಹಿಳೆಯರ 53 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಸಂಜಿತಾ ಅವರು ಕ್ರೀಡಾಕೂಟ ದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸಂಜಿತಾ ಒಟ್ಟು 192 ಕೆ.ಜಿ ಎತ್ತಿದರು. ಸ್ನ್ಯಾಚ್ ವಿಭಾಗದ ಮೊದಲ ಪ್ರಯತ್ನದಲ್ಲಿ 81 ಕೆ.ಜಿ ಎತ್ತಿದ ಸಂಜಿತಾ ನಂತರ ಎರಡನೇ ಪ್ರಯತ್ನದಲ್ಲಿ 83 ಕೆ.ಜಿ ಎತ್ತಿ ಕೂಟ ದಾಖಲೆ ಸಮ ಮಾಡಿದರು. ಅಂತಿಮ ಪ್ರಯತ್ನದಲ್ಲಿ 84 ಕೆ.ಜಿ ಎತ್ತಿದ ಚಾನು ಹೊಸ ದಾಖಲೆ ಬರೆಯುವುದರ ಜತೆಗೆ ಕ್ಲೀನ್ ಮತ್ತು ಜೆರ್ಕ್ ವಿಭಾಗಕ್ಕೆ ತಮ್ಮ ಪ್ರತಿಸ್ಪರ್ಧಿಗಿಂತ 3 ಕೆ.ಜಿ ಮುನ್ನಡೆ ಪಡೆದುಕೊಂಡರು. 2014ರಲ್ಲಿ ಭಾರತದ ಸ್ವಾರ್ಥಿ ಸಿಂಗ್ 83 ಕೆ.ಜಿ ಎತ್ತಿ ಕೂಟ ದಾಖಲೆ ಬರೆದಿದ್ದರು ಈಗ ಅದನ್ನು ಚಾನು ಮುರಿದಿದ್ದಾರೆ.

ಕ್ಲೀನ್ ಹಾಗೂ ಜೆರ್ಕ್ ವಿಭಾಗದಲ್ಲೂ  ಅತ್ಯುತ್ತಮ ಆರಂಭ ಪಡೆದ ಸಂಜಿತಾ ಮೊದಲ ಪ್ರಯತ್ನದಲ್ಲೇ 104 ಕೆ.ಜಿ ಎತ್ತಿ ಚಿನ್ನದ ಪದಕಕ್ಕೆ ಮುದ್ರೆ ಒತ್ತಿದರು. ಎರಡನೇ ಪ್ರಯತ್ನದಲ್ಲಿ 108 ಕೆ.ಜಿ ಎತ್ತಿದ ಚಾನು ತಮ್ಮ ಮುನ್ನಡೆ ಹೆಚ್ಚಿಸಿಕೊಂಡರು. ಅಂತಿಮ ಪ್ರಯತ್ನದಲ್ಲಿ ತಮ್ಮ ನಿಯಂತ್ರಣ ಕಳೆದುಕೊಂಡರೂ ಚಾನು ಸ್ವರ್ಣವನ್ನು ತಮ್ಮದಾಗಿಸಿಕೊಂಡಿದ್ದರು.

2014ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 48 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದ ಸಂಜಿತಾ ಚಾನು, ನಂತರ 53 ಕೆ.ಜಿ ವಿಭಾಗಕ್ಕೆ ಕಾಲಿಟ್ಟಿದ್ದರು. ಕಠಿಣ ಪರಿಶ್ರಮದ ಫಲವಾಗಿ ಚಾನು ಈ ವಿಭಾಗದಲ್ಲೂ ಚಿನ್ನ ಗೆದ್ದುಕೊಂಡಿದ್ದಾರೆ.

Leave a Reply